ಮಂಗಳವಾರ, ಏಪ್ರಿಲ್ 13, 2021
32 °C

ಭಟ್ಟಂಗಿಯಂತೆ ಕಾಣುವ ವಾಗ್ಮಿ

ಎನ್. ಉದಯಕುಮಾರ್ Updated:

ಅಕ್ಷರ ಗಾತ್ರ : | |

ದೂರ ಸಂಪರ್ಕ ಸಚಿವ ಕಪಿಲ್ ಸಿಬಲ್ ಪ್ರಚಂಡ ವಾಗ್ಮಿ. ತಮ್ಮ ಈ ವಾಗ್ಬಲವನ್ನು ತಾವು ಪ್ರತಿನಿಧಿಸುವ ಪಕ್ಷಕ್ಕೆ ‘ರಕ್ಷಾಕವಚ’ವಾಗಿ ಸಂಸತ್ತಿನ ಒಳಗೂ ಮತ್ತು ಹೊರಗೂ ಅವಕಾಶ ದೊರೆತಾಗಲೆಲ್ಲ ಬಳಸಿದವರು. ತಮಗೆ ವಹಿಸಿದ ಖಾತೆಗಳನ್ನು ದಕ್ಷತೆಯಿಂದ ನಿರ್ವಹಿಸುತ್ತಿರುವ ಕಪಿಲ್ ಭರವಸೆ ಮೂಡಿಸಿರುವ ರಾಜಕಾರಣಿ.ಆದರೆ, ಎದುರಾಳಿಗಳನ್ನು ಮಣಿಸುವ ‘ಅಸ್ತ್ರ’ವಾಗಿದ್ದ ಅವರ ಮಾತುಗಾರಿಕೆ ಇತ್ತೀಚೆಗೆ ಅವರಿಗೇ ತಿರುಗುಬಾಣವಾಗಿದೆ. ಎಲ್ಲವನ್ನೂ ಸಮರ್ಥಿಸಿಕೊಳ್ಳುವ ಭರಾಟೆಯಲ್ಲೋ ಅಥವಾ ಔಚಿತ್ಯಪ್ರಜ್ಞೆ ಮರೆತೋ ಆಡಿದ ಮಾತುಗಳು ಸಿಬಲ್ ಅವರ ವ್ಯಕ್ತಿತ್ವದ ಘನತೆಗೆ ಕುಂದು ತರುತ್ತಿವೆ ಎಂಬ ಭಾವನೆ ಬೆಳೆಯುತ್ತಿದೆ.ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಸಂಸತ್ತಿನಲ್ಲಿ ತೊಂದರೆಗೆ ಸಿಕ್ಕಿಬಿದ್ದಾಗಲೆಲ್ಲ ಅದರ ರಕ್ಷಣೆಗೆ  ಪ್ರಣವ್ ಮುಖರ್ಜಿ, ಪಿ.ಚಿದಂಬರಂ, ಕಪಿಲ್ ಸಿಬಲ್ ಧಾವಿಸುತ್ತಾರೆ. ಅವರ ವಾಕ್ಚಾತುರ್ಯ, ಅನುಭವ, ಚಾಣಾಕ್ಷತನಗಳು ಅನೇಕ ಸಂದರ್ಭದಲ್ಲಿ ಸರ್ಕಾರವನ್ನು ಇಕ್ಕಟ್ಟಿನಿಂದ ಪಾರು ಮಾಡಿವೆ. ಪ್ರಣವ್ ಹಾಗೂ ಚಿದಂಬರಂ ಅವರು ಸರ್ಕಾರದ ಪರವಾಗಿ  ಸಮರ್ಥನೆಗೆ ನಿಂತರೂ ತಾವೇ ಹಾಕಿಕೊಂಡ ಗೆರೆ ದಾಟುವುದಿಲ್ಲ.ಆದರೆ ಈ ವಿಷಯದಲ್ಲಿ ಸಿಬಲ್ ಹಾಗಲ್ಲ.  ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಅವರು ಏನು ಮಾತನಾಡುತ್ತಾರೆ ಎಂಬ ಅರಿವಿಲ್ಲದೆ, ಬಾಯಿಂದ ಜಾರಿ ಬಂದ ಮಾತುಗಳಿಗಾಗಿ ವಿರೋಧ ಪಕ್ಷಗಳ ಕಟು ಟೀಕೆಗೆ ಗುರಿಯಾಗುತ್ತಾರೆ.ಸಾರ್ವಜನಿಕರ ಕಣ್ಣಲ್ಲಿ ಭಟ್ಟಂಗಿಯಂತೆ ಕಾಣಿಸುತ್ತಾರೆ. ಇಂತಹ ಮಾತು ಹಾಗೂ ವರ್ತನೆಗೆ ಅವರು ಒಂದೆರಡು ಸಲ ಕೋರ್ಟಿನ ಛೀಮಾರಿಗೂ ಒಳಗಾಗಿದ್ದಾರೆ.ಎರಡನೇ ತಲೆಮಾರಿನ (2ಜಿ ಸ್ಪೆಕ್ಟ್ರಂ) ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಹಗರಣ ದೂರ ಸಂಪರ್ಕ ಸಚಿವ ಎ. ರಾಜಾ ಅವರ ತಲೆದಂಡವನ್ನು ಪಡೆಯಿತು.ಬಳಿಕ ಆ ಖಾತೆ ಸಿಬಲ್‌ರ ತೆಕ್ಕೆಗೆ ಬಂದಿತು. ದೇಶ ಇದುವರೆಗೆ ಕಂಡ    ಬಹುದೊಡ್ಡ ಹಗರಣ ಇದು. ಈ ಅವ್ಯವಹಾರದ ಪರಿಣಾಮವಾಗಿ ಸರ್ಕಾರದ ಬೊಕ್ಕಸಕ್ಕೆ ರೂ 1.76 ಲಕ್ಷ ಕೋಟಿ ನಷ್ಟ ಸಂಭವಿಸಿದೆ ಎಂಬ ಆಡಿಟರ್ ಜನರಲ್‌ರ ವರದಿಯನ್ನು ಅಲ್ಲಗಳೆಯಲು ಯತ್ನಿಸಿ ಸಿಬಲ್ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡರು.ಈ ಹಗರಣದಿಂದ ಕೇಂದ್ರ ಸರ್ಕಾರದ ವರ್ಚಸ್ಸಿಗೆ ನಿಜವಾಗಿಯೂ ದೊಡ್ಡ ಪೆಟ್ಟು ಬಿದ್ದಿತು. ವರ್ಚಸ್ಸು ಹೆಚ್ಚಿಸಲು ಪ್ರಯತ್ನಿಸುವ ಬದಲು ‘2ಜಿ’ ಹಗರಣದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿಲ್ಲ ಎನ್ನುವ ವಾದಸರಣಿ ಮುಂದಿಟ್ಟ ಸಿಬಲ್ ಅವರ ವ್ಯಕ್ತಿತ್ವಕ್ಕೆ ಮಸಿ ಅಂಟಿಕೊಂಡಿತು.ಊಹೆಗೆ ನಿಲುಕದ ಈ ಬಹುಕೋಟಿ ಹಗರಣ ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದಾಗ ಅಂಥದ್ದೇನೂ ಆಗಿಯೇ ಇಲ್ಲ ಎಂಬಂತಹ ಹೇಳಿಕೆಯನ್ನು ಅವರು ನೀಡಿದ್ದೇಕೆ? ಸರ್ಕಾರವನ್ನು ರಕ್ಷಿಸಲೋ ಇಲ್ಲವೇ ವರಿಷ್ಠರನ್ನು ಮೆಚ್ಚಿಸಲೋ? ಏನೋ, ಎಂತೋ ದೂಷಣೆಗೆ ಒಳಗಾಗಿದ್ದು ಮಾತ್ರ ಸಿಬಲ್.ಇದರ ಬೆನ್ನಿಗೇ ಹೊರಬಿದ್ದ ಜನಲೋಕಪಾಲ್ ಮಸೂದೆ ಕುರಿತಾದ ಹೇಳಿಕೆ ಅವರ ಘನತೆಗೆ ಮತ್ತಷ್ಟು ಭಂಗ ತಂದಿತು. ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೊಗೆಯಬೇಕು ಎಂಬ ಅಣ್ಣಾ ಹಜಾರೆ ಆಶಯವು ಇಡೀ ನಾಗರಿಕ ಸಮಾಜದ ಸಾಕ್ಷಿ ಪ್ರಜ್ಞೆಯನ್ನೇ ಬಡಿದೆಬ್ಬಿಸಿದೆ.ಇಂತಹ ಸಂದರ್ಭದಲ್ಲಿ ಜನಲೋಕಪಾಲ್ ಮಸೂದೆಯಿಂದ ಸಾಮಾನ್ಯ ಪ್ರಜೆಗೆ ಏನು ಪ್ರಯೋಜನ ಎಂಬರ್ಥದ ಉಡಾಫೆ ಮಾತುಗಳನ್ನಾಡಿ ಸಿಬಲ್ ಎಲ್ಲರಿಂದ ‘ಇಕ್ಕಿಸಿ’ಕೊಂಡರು. ಮಸೂದೆ ಕರಡು ಸಿದ್ಧಪಡಿಸಲು ರಚಿಸಲಾಗಿರುವ ಸಮಿತಿಯ ಸದಸ್ಯರಾಗಿದ್ದೂ ಈ ರೀತಿ ಅಸಹನೆ ವ್ಯಕ್ತಪಡಿಸಿದ್ದು ಸ್ವತಃ ಹಜಾರೆ ಅವರನ್ನೇ ಕೆರಳಿಸಿತು.ಜನಲೋಕಪಾಲ್ ಮಸೂದೆ ಜಾರಿಗೆ ಒತ್ತಾಯಿಸಿ ದೆಹಲಿಯಲ್ಲಿ ಉಪವಾಸ ಕುಳಿತಿದ್ದ ಹಜಾರೆ ಅವರೊಂದಿಗೆ ಮಾತುಕತೆಗೆ ನಿಯೋಜನೆಗೊಂಡವರು ಇದೇ ಸಿಬಲ್. ಆಗ ಅತ್ಯಂತ ಸಂಯಮದಿಂದ ನಡೆದುಕೊಂಡರು. ಅವರ ಮನವೊಲಿಸುವ ಕೆಲಸ ಮಾಡಿದರು. ಎಲ್ಲವೂ ಇತ್ಯರ್ಥವಾಯಿತು ಎನ್ನುವಾಗ ಮಸೂದೆಯ ಮಹತ್ವವನ್ನು ಹೀಗಳೆಯುವ ಉಡಾಫೆ ಮಾತುಗಳನ್ನಾಡಿ ದೇಶದ ಜನರಿಗೆ ವಿದೂಷಕನಂತೆ ಕಾಣಿಸಿದರು.    1948ರಲ್ಲಿ ಪಂಜಾಬಿನ ಜಲಂಧರ್‌ನಲ್ಲಿ ಜನಿಸಿದ ಕಪಿಲ್ ಅವರದು ಶ್ರೀಮಂತ ಮನೆತನ. ತಂದೆ ಹೀರಾಲಾಲ್ ಸಿಬಲ್ ಅವರೂ ಪ್ರಸಿದ್ಧ ವಕೀಲರು. ಪದ್ಮಭೂಷಣ ಪುರಸ್ಕೃತರು. ಪ್ರೌಢಶಾಲೆ ಯವರೆಗೂ ಚಂಡಿಗಡದಲ್ಲಿ ಓದಿದ ಕಪಿಲ್ ನಂತರ ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ದೆಹಲಿ ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಬಿ ಪದವಿ ಪಡೆದರು.ಹಾರ್ವರ್ಡ್ ಲಾ ಸ್ಕೂಲ್‌ನಲ್ಲಿ ಕಾನೂನು ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ದೆಹಲಿಯಲ್ಲೇ ವಕೀಲಿ ವೃತ್ತಿಯನ್ನು ಆರಂಭಿಸಿದರು. ವಕೀಲಿಕೆ ಆರಂಭಿಸಿದ ಮರುವರ್ಷವೇ ಐ.ಎ.ಎಸ್.ನಲ್ಲಿ ಉತ್ತೀರ್ಣರಾದರೂ ಸರ್ಕಾರಿ ಕೆಲಸಕ್ಕೆ ಸೇರದೆ, ವಕೀಲಿ ಮುಂದುವರಿಸಿದರು. ಬಳಿಕ ಅಡಿಷನಲ್ ಸಾಲಿಸಿಟರ್ ಜನರಲ್ ಆಗಿದ್ದರು. ಸುಪ್ರೀಂ ಕೋರ್ಟ್‌ನ ವಕೀಲರ ಸಂಘದ ಅಧ್ಯಕ್ಷರಾಗಿಯೂ ಮೂರು ಅವಧಿಗೆ ಸೇವೆ ಸಲ್ಲಿಸಿದ್ದಾರೆ.ಕಪಿಲ್ ಅವರಿಗೆ ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಅವರು ಕವಿಯೂ ಹೌದು.ರಾಜಕೀಯದ ನಡುವೆ ಬಿಡುವು ಸಿಕ್ಕಾಗ  ಕವಿತೆ ಬರೆಯುತ್ತಾರೆ. ‘ಐ ವಿಟ್ನೆಸ್’ ಹೆಸರಿನಲ್ಲಿ ತಮ್ಮ ಕವನಗಳನ್ನು ಸಂಕಲನ ರೂಪದಲ್ಲಿ ಹೊರತಂದಿದ್ದಾರೆ.ಭಯೋತ್ಪಾದನೆ, ಆಂತರಿಕ ಭದ್ರತೆ ಮುಂತಾದ ಗಂಭೀರ ವಿಷಯಗಳ ಬಗ್ಗೆ ವೃತ್ತಪತ್ತಿಕೆ, ನಿಯತಕಾಲಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದಿದ್ದಾರೆ.ಹಲವಾರು ಅಂತರರಾಷ್ಟ್ರೀಯ ಸಮಿತಿ ಮತ್ತು ನಿಯೋಗಗಳ ಸದಸ್ಯರಾಗಿ ಅವರು ಭಾರತವನ್ನು ಪ್ರತಿನಿಧಿಸಿದ್ದಾರೆ.ಕಪಿಲ್ ಮೊದಲ ಪತ್ನಿ ನೈನಾ ವಿದೇಶಾಂಗ ಸಚಿವಾಲಯದಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ಅವರು ಕೂಡಾ ಲೇಖಕಿ. ಮೂರ್ನಾಲ್ಕು ಕೃತಿಗಳನ್ನು ರಚಿಸಿದ್ದಾರೆ. ನೈನಾ ನಿಧನದ ನಂತರ ಕಪಿಲ್ ಇನ್ನೊಂದು ಮುದುವೆಯಾಗಿದ್ದಾರೆ.ಅವರಿಗೆ ಅಮಿತ್ ಮತ್ತು ಅಖಿಲ್ ಹೆಸರಿನ ಇಬ್ಬರು ಪುತ್ರರಿದ್ದಾರೆ. ವಿದೇಶಗಳಲ್ಲಿ ವ್ಯಾಸಂಗ ಮಾಡಿದರೂ ಇಬ್ಬರೂ ದೆಹಲಿಯಲ್ಲೇ ವಕೀಲಿ ವೃತ್ತಿ ನಡೆಸುತ್ತಿದ್ದಾರೆ.ಬಿಹಾರದಿಂದ ರಾಜ್ಯಸಭೆಗೆ ಆಯ್ಕೆಯಾಗುವ (1988) ಮೂಲಕ ಸಿಬಲ್‌ರ ಸಂಸದೀಯ ಜೀವನ ಆರಂಭ.  ನಂತರ ಅವರು ಆರಿಸಿಕೊಂಡಿದ್ದು ದೆಹಲಿಯ ಚಾಂದನಿ ಚೌಕ್ ಕ್ಷೇತ್ರವನ್ನು. ಅಲ್ಲಿಂದ ಎರಡು ಬಾರಿ ಗೆದ್ದಿದ್ದಾರೆ. ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ಸಚಿವರಾಗಿ ಗಮನಾರ್ಹ ಕೆಲಸವನ್ನೇ ಮಾಡಿದ್ದಾರೆ.ಸರ್ ಎಂ. ವಿಶ್ವೇಶ್ವರಯ್ಯನವರ ಹುಟ್ಟೂರಾದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೇಂದ್ರ ಆರಂಭಕ್ಕೆ ಅನುಮತಿ ದೊರಕಿಸಿಕೊಟ್ಟಿದ್ದಾರೆ. ಶಿಕ್ಷಣದಲ್ಲಿ ಕೆಲವೊಂದು ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ಬಗ್ಗೆ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. ಇವರ ಪ್ರಯತ್ನದ ಫಲವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಅಗ್ಗದ ಬೆಲೆಯಲ್ಲಿ ಲ್ಯಾಪ್‌ಟಾಪ್ ತಯಾರಿಸುವ ಯೋಜನೆಯೊಂದು ಒಡಮೂಡಿದೆ.ಸಿಬಲ್ ಅವರದು ಆಕರ್ಷಕ ವ್ಯಕ್ತಿತ್ವ. ಸದಾ ಕ್ರಿಯಾಶೀಲ. ಉನ್ನತ ಶಿಕ್ಷಣ. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಿದ್ದಾರೆ. ಯಾವುದೇ ವಿಷಯವನ್ನು ಆಳವಾಗಿ ಅಭ್ಯಸಿಸಿ ಸ್ಪಷ್ಟವಾಗಿ ನಿರೂಪಿಸುವ ವಾಗ್ಮಿ. ಟಿ.ವಿ ವಾಹಿನಿಗಳ ಚರ್ಚಾ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಪರವಾಗಿ ಹೆಚ್ಚಿಗೆ ಇವರ ಮುಖವೇ ಗೋಚರಿಸಲು ಈ ಅಂಶಗಳೂ ಕಾರಣ.ಆದರೆ ಇಡೀ ದೇಶ ಗಂಭೀರವಾಗಿ ಚಿಂತಿಸುವ ವಿಷಯಗಳ ಬಗ್ಗೆ ಲಘು ಧಾಟಿಯಲ್ಲಿ ಮಾತನಾಡುವುದು ಕಪಿಲ್ ಅವರ ದೌರ್ಬಲ್ಯ. ತರ್ಕಕ್ಕೆ ಸಿಲುಕದ ಹೇಳಿಕೆಗಳು, ದುಡುಕಿನ ಮಾತುಗಳು ಸಚಿವರಾಗಿ ಮಾಡಿರುವ ಸಾಧನೆಗಳನ್ನೆಲ್ಲ ತೆರೆಮರೆಗೆ ಸರಿಸುವ ಅಪಾಯ ಇದೆ. ಕಾಂಗ್ರೆಸ್‌ನಲ್ಲಿ ‘ಭಟ್ಟಂಗಿ ಸಂಸ್ಕೃತಿ’ ತುಸು ಹೆಚ್ಚು ಎಂಬುದು ಬಹಿರಂಗ ಸತ್ಯ. ಅದರ ತೆಕ್ಕೆಗೆ ಬೀಳದೆ ನಿಷ್ಠುರವಾಗಿ ನಡೆದುಕೊಳ್ಳುವುದು, ವ್ಯಕ್ತಿತ್ವ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಸಿಬಲ್ ಮನಸ್ಸು ಮಾಡಿದರೆ ಅದು ಕಷ್ಟದ ಕೆಲಸವೇನೂ ಅಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.