ಗುರುವಾರ , ಏಪ್ರಿಲ್ 22, 2021
31 °C

ಭದ್ರತಾ ಠೇವಣಿ ವಾಪಸ್‌ಗೆ ಒತ್ತಾಯಿಸಿ ಅಧ್ಯಕ್ಷರಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ನಗರದ ಸಾಗರ್ ಹೋಟೆಲ್ ವೃತ್ತದಲ್ಲಿ ನಗರಸಭೆ ನಿರ್ಮಿಸಿರುವ ವಾಣಿಜ್ಯ ಮಳಿಗೆ ಮರು ಹರಾಜು ಮುನ್ನ ಈ ಮೊದಲು ಹರಾಜಿನಲ್ಲಿ ಮಳಿಗೆ ಹಿಡಿದಿರುವ ವ್ಯಾಪಾರಸ್ಥರಿಗೆ ಭದ್ರತಾ ಠೇವಣಿ ಹಣ ವಾಪಸ್ ಮಾಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಪದಾಧಿಕಾರಿಗಳು ವ್ಯಾಪಾರಸ್ಥರೊಂದಿಗೆ ಮಂಗಳವಾರ ನಗರಸಭೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.ಐಯುಡಿಪಿ ಯೋಜನೆ ಅಡಿ ನಗರಸಭೆ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳ ಸಂಕೀರ್ಣದಲ್ಲಿ ಮಳಿಗೆಗಳನ್ನು ಹರಾಜು ಮಾಡಿದ ನಂತರ ಅದನ್ನು ಆರಂಭಿಸಲು ಅಗತ್ಯವಿರುವ ಮೂಲಸೌಕರ್ಯಗಳನ್ನು ನಗರಸಭೆ ಒದಗಿಸಿಲ್ಲ. ಈಗ ಈ ಹಿಂದೆ ಮಳಿಗೆ ಹಿಡಿದವರು ಪೂರ್ತಿ ಹಣ ಪಾವತಿಸಿಲ್ಲ ಎನ್ನುವ ಕಾರಣಕ್ಕೆ ನಗರಸಭೆ ಮರುಹರಾಜು ಮಾಡಲು ಹೊರಟಿರುವುದು ಸರಿಯಲ್ಲ ಎಂದು ವ್ಯಾಪಾರಸ್ಥರು ಪ್ರತಿಪಾದಿಸಿದರು.ಒಂದು ವೇಳೆ ನಗರಸಭೆ ಮಳಿಗೆ ಆರಂಭಿಸಲು ಅಗತ್ಯವಿರುವ ವಿದ್ಯುತ್, ನೀರು, ಶೌಚಾಲಯ ಇವೆ ಮೊದಲಾದ ಸೌಲಭ್ಯಗಳನ್ನು ವಾಣಿಜ್ಯ ಸಂಕೀರ್ಣಕ್ಕೆ ಒದಗಿಸಿದ್ದಲ್ಲಿ ಖಂಡಿತಾ ನಾವು ಬಾಕಿ ಹಣ ಪಾವತಿಸಿ ಮಳಿಗೆ ಆರಂಭಿಸುತ್ತಿದ್ದೆವು ಎಂದು ತಮ್ಮ ಅಹವಾಲು ಮಂಡಿಸಿದರು.ಮಳಿಗೆಗಳ ಮರು ಹರಾಜು ಮಾಡಲೇಬೇಕು ಎಂದು ನಗರಸಭೆ ತೀರ್ಮಾನಿಸಿದರೆ ಈಗಾಗಲೇ ನಾವು ಪಾವತಿಸಿರುವ ಭದ್ರತಾ ಠೇವಣಿ ಹಣವನ್ನೇ ಮುಂಗಡ ಎಂದು ಪರಿಗಣಿಸಿ ನಮಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕೊಡಬೇಕು ಅಥವಾ ನಾವು ಪಾವತಿಸಿರುವ ಹಣವನ್ನು ನಮಗೆ ವಾಪಸ್ ಮಾಡಬೇಕು ಎಂದು  ಒತ್ತಾಯಿಸಿದರು.ಕಾಂಗ್ರೆಸ್ ಮಹಿಳಾ ಘಟಕದ ನಗರ ಅಧ್ಯಕ್ಷೆ ಲಲಿತಮ್ಮ, ಯುವ ಕಾಂಗ್ರೆಸ್‌ನ ತಾರಾಮೂರ್ತಿ, ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆಯ ಪುರುಷೋತ್ತಮ, ಶಿವಕುಮಾರ್, ಚಂದ್ರಶೇಖರ್, ಸುರೇಶ, ಗಣಾಧೀಶ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.