ಶನಿವಾರ, ಮಾರ್ಚ್ 6, 2021
32 °C

ಭರತನಾಟ್ಯ ಸಾಧಕ

ಉಮಾ ಅನಂತ್ Updated:

ಅಕ್ಷರ ಗಾತ್ರ : | |

ಭರತನಾಟ್ಯ ಸಾಧಕ

ಭರತನಾಟ್ಯ, ಕಥಕ್‌, ಕೂಚಿಪುಡಿ ಸೇರಿದಂತೆ ಶಾಸ್ತ್ರೀಯ ನೃತ್ಯ ಪ್ರಕಾರಗಳು ಹೆಣ್ಣು ಮಕ್ಕಳಿಗೆ ಚಂದ ಎಂಬ ಮಾತು ಸಾಮಾನ್ಯ. ಆದರೆ ಇಂದು ಪುರುಷರೂ ‘ನಾಟ್ಯ ಸರಸ್ವತಿ’ಗಳಾಗುತ್ತಿದ್ದಾರೆ.ನಾಟ್ಯಾರಾಧಕರಾಗಿ, ನೃತ್ಯ ಪ್ರವೀಣರಾಗಿ, ಭರತನಾಟ್ಯ ಪಟುಗಳಾಗಿ ದಿಟ್ಟ ಹೆಜ್ಜೆಯಿಡುತ್ತಾ ಯಶಸ್ಸಿನ ಒಂದೊಂದೇ ಮೆಟ್ಟಿಲೇರಿ ಸಾಧನೆಯ ಶಿಖರದತ್ತ ಮುಖ ಮಾಡುತ್ತಿದ್ದಾರೆ.ಯುವ ಕಲಾವಿದ ಎಚ್‌.ಎನ್‌.ಗುರುರಾಜ್‌ ಅಂಥವರಲ್ಲಿ ಒಬ್ಬರು. ನೃತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಾ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಈ ಕಲಾವಿದ ಸತತ ಪರಿಶ್ರಮದ ಫಲವಾಗಿ ಭರವಸೆಯ ನೃತ್ಯಪಟುವಾಗಿ ರೂಪುಗೊಂಡಿರುವುದು ಹೆಮ್ಮೆಯ ಸಂಗತಿ.ಗುರುರಾಜ್‌ ವೃತ್ತಿಯಲ್ಲಿ ಎಂಜಿನಿಯರ್‌. ನೃತ್ಯ ಅವರ ಪ್ರವೃತ್ತಿ. ವೃತ್ತಿ–ಪ್ರವೃತ್ತಿ ಎರಡರಲ್ಲೂ ಬೊಟ್ಟು ಮಾಡಿ ತೋರಿಸುವಂಥ ಪ್ರತಿಭೆ. ಚಿಕ್ಕ ವಯಸ್ಸಿನಲ್ಲೇ ಗೆಜ್ಜೆಯ ರಿಂಗಣದತ್ತ ಮನಸ್ಸು ವಾಲಿ ತಾನೂ ಗೆಜ್ಜೆ ಕಟ್ಟಿ, ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಗುರುವಿಗೆ ತಕ್ಕ ಶಿಷ್ಯನಾಗಿ ಬೆಳೆದರು ಗುರುರಾಜ್‌.ಸುಮಾ– ನಾಗೇಂದ್ರ ಅವರ ಪುತ್ರನಾದ ಗುರುರಾಜ್‌ ಭರತನಾಟ್ಯದಲ್ಲಿ ಈಗಾಗಲೇ ಪಳಗಿದ ಪ್ರತಿಭೆ. ರಾಜ್ಯ, ಹೊರರಾಜ್ಯಗಳ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಗುರುರಾಜ್‌ ನೀಡಿದ ಭರತನಾಟ್ಯ ಕಾರ್ಯಕ್ರಮಗಳು ಅವರ  ಪ್ರತಿಭೆಯನ್ನು ಸಾರಿ ಹೇಳಿವೆ. ಶ್ರದ್ಧೆ, ಸತತ ಪರಿಶ್ರಮ, ಕಲಾಕೌಶಲ, ನೃತ್ಯದಲ್ಲಿ ನಯಗಾರಿಕೆ, ತಾಂತ್ರಿಕ ಅಂಶಗಳನ್ನು ಪ್ರಸ್ತುತಪಡಿಸುವ ರೀತಿಯಿಂದಾಗಿ ಗುರುರಾಜ್‌ ನೃತ್ಯ ಕಲಾ ರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ.ವಿದುಷಿ ಶ್ರೀರಂಜಿನಿ ಉಮೇಶ್, ವಿದುಷಿ ತನುಜಾ ರಾಜ್, ವಿದುಷಿ ಸೀತಾ ಅವರ ಬಳಿ ಭರತನಾಟ್ಯದ ಅಭ್ಯಾಸ ಮಾಡಿದ ಗುರುಪ್ರಸಾದ್ ಪ್ರಸ್ತುತ ಕರ್ನಾಟಕ ಕಲಾಶ್ರೀ ವಿದುಷಿ ಕೆ.ಬೃಂದಾ ಅವರ ಬಳಿ ಉನ್ನತ ಅಭ್ಯಾಸ ನಡೆಸುತ್ತಿದ್ದಾರೆ.ಕರ್ನಾಟಕ ಸರ್ಕಾರ ನಡೆಸಿದ ಭರತನಾಟ್ಯ ವಿದ್ವತ್ ಮತ್ತು ಸೆಂಟ್ರಲ್ ಬೋರ್ಡ್‌ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಆಗಿ ಅಕಡೆಮಿಕ್‌ ಆಗಿಯೂ ಮಿಂಚಿದ್ದಾರೆ.ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಭರತನಾಟ್ಯ ಕ್ಷೇತ್ರದಲ್ಲಿ 2015ನೇ ಸಾಲಿನ ಶಿಷ್ಯವೇತನ ಪಡೆದಿರುವ ಇವರು ದೂರದರ್ಶನದ ಬಿ ಶ್ರೇಣಿ ಕಲಾವಿದರೂ ಹೌದು. ಸುವರ್ಣ ವಾಹಿನಿ, ಶ್ರೀ ಶಂಕರ, ವಾಹಿನಿಗಳೂ ಇವರ ಭರತನಾಟ್ಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿವೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿ ಬುಧವಾರ ನಡೆಸುವ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಯುವ ಸೌರಭ ಸೇರಿದಂತೆ ಹಲವು ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ.ಇವರ ಸಾಧನೆ ಗುರುತಿಸಿ ಹಲವು ಸಂಘ ಸಂಸ್ಥೆಗಳು ಸನ್ಮಾನ ಮಾಡಿವೆ. ಪುರಸ್ಕರಿಸಿ ಗೌರವಿಸಿವೆ. ಆರ್ಯಭಟ ಪ್ರಶಸ್ತಿ, ಕಲಾ ಕಣ್ಮಣಿ ಪ್ರಶಸ್ತಿ, ‘ಬಾಲ್ಯರತ್ನ’ ಪುರಸ್ಕಾರ, ಜವಾಹರಲಾಲ್‌ ನೆಹರು ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ಡಾ.ರಾಜ್‌ಕುಮಾರ್‌ ಸುವರ್ಣ ಕರ್ನಾಟಕ ರತ್ನ ಪ್ರಶಸ್ತಿ, ಡಾ. ಅಂಬೇಡ್ಕರ್ ಪ್ರಶಸ್ತಿ, ಡಾ. ಶಿವರಾಮ ಕಾರಂತ ಸದ್ಭಾವನಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳೂ ಸಂದಿವೆ. ಪ್ರಸ್ತುತ ಇವರು ‘ಸುಧೀಂದ್ರ ನೃತ್ಯ ಕಲಾನಿಕೇತನ’ ಸ್ಥಾಪಿಸಿ ಆಸಕ್ತರಿಗೆ ನೃತ್ಯ ಹೇಳಿಕೊಡುತ್ತಿದ್ದಾರೆ.ಭರತನಾಟ್ಯ  ರಂಗಪ್ರವೇಶ

ವಿದ್ವಾನ್‌ ಗುರುರಾಜ್‌ ಅವರ ಭರತನಾಟ್ಯ ರಂಗಪ್ರವೇಶ ಭಾನುವಾರ (ಆ.7) ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಕತ್ರಿಗುಪ್ಪೆಯ ಅನನ್ಯ ಕಲಾನಿಕೇತನ ನಾಟ್ಯಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ಭಾಗವಹಿಸಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.