ಇದು ಕಚ್ಚಾ ಚಿತ್ರಗಳ ಕಾಲ. ಎಲ್ಲದರಲ್ಲೂ ಪ್ರೇಮಿಗಳಿರಬೇಕು ಎಂಬುದು ಪ್ರಜ್ಞಾಪೂರ್ವಕ ನಿಲುವು. ಇದೇ ಜಾಡಿನದ್ದೇ ಆದರೂ ತಾಂತ್ರಿಕವಾಗಿ ಗಮನ ಸೆಳೆಯುವ ಚಿತ್ರವನ್ನು ಎಸ್.ದಿನೇಶ್ ನಿರ್ದೇಶಿಸಿದ್ದಾರೆ. ಸಣ್ಣ ಸಣ್ಣ ಸಂಗತಿಗಳ ಕಡೆಗೆ ಲಕ್ಷ್ಯ ಕೊಡುತ್ತಾ ಕೊನೆಗೆ ಸಂದೇಶದ ಉದ್ದೇಶವನ್ನು ಹೊರಗೆಡುವ ‘ಉಯ್ಯಾಲೆ’ ಕಾಡುವ ಕೆಲವು ಸಂಗತಿಗಳನ್ನು ಅಡಗಿಸಿಟ್ಟುಕೊಂಡಿದೆ.

ಚಿತ್ರದ ನಿಜವಾದ ನಾಯಕ ಸಂಗೀತ ಸಂಯೋಜಕ ರಿಕ್ಕಿ. ಹಿನ್ನೆಲೆ ಸಂಗೀತವು ಚಿತ್ರದ ಎಷ್ಟೋ ಸಂಗತಿಗಳ ಪರಿಣಾಮವನ್ನು ಹೆಚ್ಚಿಸುವಂತೆ ಅವರು ನಿಗಾ ವಹಿಸಿದ್ದಾರೆ. ಕಥೆಗಳನ್ನು ದಾಟಿಸುವ ಕೆಲವು ಹಾಡುಗಳೂ ಚಿತ್ರದಲ್ಲಿವೆ.ಜಾತ್ರೆ ಕುರಿತ ಹಾಡೊಂದರಲ್ಲಿ ಕಾಣುವ ಹಳ್ಳಿಚಿತ್ರಗಳು ಆಪ್ತ ಎನ್ನಿಸುವುದು ಇದಕ್ಕೆ ಒಂದು ಉದಾಹರಣೆ. ರಿಕ್ಕಿ ಕೊಟ್ಟ ಸಂಗೀತದ ಹಾಡುಗಳು ತೆರೆಮೇಲೆ ಅರ್ಥಪೂರ್ಣವಾಗಿ ಮೂಡಬೇಕೆಂಬ ಎಚ್ಚರಿಕೆ ದಿನೇಶ್ ಅವರಿಗೆ ಇದೆ.
ಮಾಮೂಲಿ ಚಿತ್ರಗಳಂತೆ ನಾಯಕನನ್ನು ಅಟ್ಟಕ್ಕೇರಿಸುವ ಯಾವ ಅಂಶಗಳೂ ಚಿತ್ರದಲ್ಲಿ ಇಲ್ಲದಿರುವುದು ದಿನೇಶ್ ಹೊಸಹಾದಿಯ ಹುಡುಕಾಟದಲ್ಲಿದ್ದಾರೆಂಬುದಕ್ಕೆ ಪುಷ್ಟಿ ಕೊಡುತ್ತದೆ. ಆದರೆ, ಕಥೆಯ ಹಂದರದ ವಿಷಯದಲ್ಲಿ ಮಾತ್ರ ಅವರು ಹೊಸತನದ ಗೊಡವೆಗೆ ಹೋಗಿಲ್ಲ. ಬಾಲ್ಯದ ಸಂಗತಿಗಳನ್ನೇ ಮುಕ್ಕಾಲು ತಾಸು ಹೇಳುವ ಅವರಲ್ಲಿ ತಾಳ್ಮೆ ಇದೆ. ಅಂದುಕೊಂಡದ್ದು ದೃಶ್ಯದ ಮೇಲೆ ಪರಿಣಾಮಕಾರಿಯಾಗಿ ಮೂಡಬೇಕು ಎಂಬ ಸಾವಧಾನವೂ ಇದೆ. ಕೊರತೆ ಇರುವುದು ಚಿತ್ರಕಥೆಯ ಒಟ್ಟಾರೆ ಕಸುಬುದಾರಿಕೆಯಲ್ಲಿ.

ಖಾಲಿ ಬಾಟಲಿ ಮಾರುವ ಅಪ್ಪ ಮಗನನ್ನು ವಿದ್ಯಾವಂತನನ್ನಾಗಿ ಮಾಡಲು ಬದುಕಿನುದ್ದಕ್ಕೂ ಬೆವರು ಹರಿಸುವ ಕಥೆಯನ್ನು ದಿನೇಶ್ ಎತ್ತಿಕೊಂಡಿದ್ದಾರೆ. ಅಪ್ಪನ ಕಕ್ಕುಲತೆ, ಮಗನ ಉಡಾಫೆ, ಸಂಸಾರದ ತಾಪತ್ರಯಗಳು, ರಿಯಲ್ ಎಸ್ಟೇಟ್ ದಂಧೆಕೋರರ ನಡುವೆ ಪಟ್ಟಣವಾಗುವ ಹಳ್ಳಿ... ಇಂಥ ಗಮನಾರ್ಹ ಸಂಗತಿಗಳು ಚಿತ್ರದಲ್ಲಿವೆ.

ಆದರೆ, ಎಲ್ಲವುಗಳ ಬಿಂದು ನಾಯಕ-ನಾಯಕಿಯ ಪ್ರೀತಿಯೇ ಆಗಿಬಿಡುವುದು ಚಿತ್ರದ ಮಿತಿಯಾಗಿದೆ. ಹಳ್ಳಿಯೊಂದು ಪಟ್ಟಣವಾಗುವ ಪರಿಕಲ್ಪನೆಯನ್ನು ಇನ್ನಷ್ಟು ಗಾಢವಾಗಿ ತೋರಿಸುವ ಸಾಧ್ಯತೆ ಇತ್ತು. ಅದನ್ನು ಮೇಲ್ಪಟ್ಟದಲ್ಲಿ ತೋರಿಸುವ ನಿರ್ದೇಶಕರು ನಾಯಕ-ನಾಯಕಿಯ ಪ್ರೀತಿಯ ಹೂರಣದ ಕಡೆಗೇ ವಾಲಿದ್ದಾರೆ. ಕ್ಲೈಮ್ಯಾಕ್ಸ್ ಹತ್ತಿರವಾಗುತ್ತಿದ್ದಂತೆ ಚಿತ್ರದಲ್ಲಿ ಸಣ್ಣದೊಂದು ನಾಟಕೀಯತೆ ಸೃಷ್ಟಿಸುವ ಜರೂರಿಗೂ ಒಳಪಟ್ಟಿದ್ದಾರೆ.

ನಾಯಕನ ತಂದೆಯ ಸಾವು ಅವರ ಆ ಅಗತ್ಯವನ್ನು ಪೂರೈಸುವ ಬಲವಂತದ ಚಿಂತನೆಯಾಗಿ ಕಾಣುತ್ತದೆ. ಚಿತ್ರದ ಕಥಾಹಂದರ ಹಳೆಯ ಜಾಡಿನಲ್ಲೇ ಇದ್ದರೂ ನಿರೂಪಣೆಯಲ್ಲಿ ದಾರಿ ಮೀರುವ ಬಯಕೆಯನ್ನು ನಿರ್ದೇಶಕರು ತೋರಿಸಿದ್ದಾರೆ. ಅವರು ನಾಯಕನ ಕೈಗೆ ಒತ್ತಡದ ಪರಿಸ್ಥಿತಿಯಲ್ಲೂ ಲಾಂಗು-ಮಚ್ಚು ಕೊಡುವುದಿಲ್ಲ. ನಾಯಕಿಯ ಸೌಂದರ್ಯದ ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಅನಗತ್ಯ ಹಾಸ್ಯ ಪ್ರಸಂಗಗಳನ್ನು ನಡುವೆ ತೂರಿಸುವುದಿಲ್ಲ.

ಐಟಂ ಹಾಡಿನ ಹಂಗಂತೂ ಇಲ್ಲವೇ ಇಲ್ಲ. ಚಿತ್ರದ ಅಂತ್ಯದಲ್ಲಿ ನಾಟಕೀಯ ಪ್ರಸಂಗ ಇದ್ದರೂ ಅದನ್ನು ಉತ್ಪ್ರೇಕ್ಷೆ ಮಾಡಿ ತೋರಿಸುವುದಿಲ್ಲ. ಹಾಗಾಗಿ ದಿನೇಶ್ ಬಗ್ಗೆ ಮುಂದಿನ ಚಿತ್ರಗಳಲ್ಲಿ ಭರವಸೆ ಇಟ್ಟುಕೊಳ್ಳಬಹುದು. ದೃಶ್ಯದ ಮಟ್ಟಿಗೆ ಚಿತ್ರದ ಗುಣಮಟ್ಟವನ್ನು ಸಾಕಷ್ಟು ಮೇಲಕ್ಕೆತ್ತಿರುವುದು ಎಂ.ಆರ್.ಸೀನು ಕ್ಯಾಮೆರಾ ಕಸುಬುದಾರಿಕೆ. ನಾಯಕನ ಮಿತಿ, ನಾಯಕಿಯ ಸಾಮರ್ಥ್ಯ, ಭಾವನೆಗಳ ಗಾಢಾರ್ಥ ಎಲ್ಲವನ್ನೂ ಅರಿತೇ ಸೀನು ಕೆಲಸ ಮಾಡಿದ್ದಾರೆ. ಹಾಡುಗಳಲ್ಲಿ ಮಾತ್ರ ಅವರು ಸೌಂದರ್ಯೋಪಾಸಕರಾಗಿದ್ದಾರೆ.

ದೀರ್ಘ ಕಾಲದ ನಂತರ ರಮೇಶ್ ಭಟ್ ಇಡೀ ಚಿತ್ರವನ್ನು ಆವರಿಸಿಕೊಳ್ಳುವ ಪಾತ್ರ ನಿಭಾಯಿಸಿದ್ದಾರೆ. ಅವರ ನಟನೆ ಹದವರಿತದ್ದು. ನಾಯಕಿ ಶಿಲ್ಪಾ ಕೂಡ ನಾಯಕಿಯಾಗುವ ಲಕ್ಷಣ ತಮಗಿದೆ ಎಂಬುದರ ಸುಳಿವು ಉಳಿಸಿದ್ದಾರೆ. ಆಂಗಿಕ ಅಭಿನಯದಲ್ಲೂ ಅವರು ಪರವಾಗಿಲ್ಲ. ನಾಯಕ ಪ್ರಭು ತಮ್ಮ ಮಿತಿಯ ಅರಿವಿಟ್ಟುಕೊಂಡೇ ನಟಿಸಿದ್ದರೂ ಚಹರೆಯ ಮೇಲೆ ಭಾವದ ಗೆರೆ ಮೂಡಿಸುವುದು ಅವರಿಗೆ ಸಾಧ್ಯವಾಗಿಲ್ಲ. ಸಣ್ಣ ಪಾತ್ರವೇ ಆದರೂ ದೊಡ್ಡಣ್ಣ ತಮ್ಮ ಫಾರ್ಮ್ ಮುಂದುವರಿಸಿದ್ದಾರೆ. ನಾಯಕನ ತಾಯಿಯ ಪಾತ್ರದಲ್ಲಿ ಪದ್ಮಜಾ ರಾವ್ ಹಾಗೂ ತಂಗಿಯ ಪಾತ್ರದಲ್ಲಿ ರೂಪಿಕಾ ನೆನಪಿನಲ್ಲಿ ಉಳಿಯುತ್ತಾರೆ.

ಜಾಡು ಮೀರುವ ಬಯಕೆಯ ಯುವಕರು ಕನ್ನಡ ಚಿತ್ರರಂಗದಲ್ಲಿ ಆಗಿಂದಾಗ್ಗೆ ಕಾಣುತ್ತಲೇ ಇದ್ದಾರೆ. ಆ ಸಾಲಿಗೀಗ ದಿನೇಶ್ ಹೊಸ ಸೇರ್ಪಡೆ ಎಂದು ನಿಸ್ಸಂಶಯವಾಗಿ ಹೇಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.