ಭಾನುವಾರ, ಮೇ 16, 2021
27 °C

ಭಾನುವಾರ, 4-9-1961

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾನುವಾರ, 4-9-1961ಉಭಯ ಜರ್ಮನಿಗಳ ನಡುವೆ ಒಪ್ಪಂದ ಆದಲ್ಲಿ ಮಾತ್ರ ಜರ್ಮನ್ ಏಕೀಕರಣ ಸಾಧ್ಯ

ಬೆಲ್ಗ್ರೇಡ್, ಸೆ. 3 - ಎರಡು ಜರ್ಮನಿಗಳಲ್ಲಿ ಅಸ್ತಿತ್ವವನ್ನು ಒಪ್ಪಿಕೊಳ್ಳುವುದರಿಂದ ಅವುಗಳಿಗೆ ರಾಜತಾಂತ್ರಿಕ ಮನ್ನಣೆಯನ್ನು ನೀಡಿದಂತಾಗಲಿಲ್ಲವೆಂದು ಭಾರತದ ಪ್ರಧಾನ ಮಂತ್ರಿ ನೆಹರೂ ಅವರು ನಿನ್ನೆ ರಾತ್ರಿ ಇಲ್ಲಿ ತಿಳಿಸಿದರು.ಭಾರತದ ಪತ್ರಿಕೋದ್ಯೋಗಿಗಳನ್ನುದ್ದೇಶಿಸಿ ಮಾತನಾಡುತ್ತ ಅವರು ತಟಸ್ಥ ರಾಷ್ಟ್ರಗಳ ಶೃಂಗಸಮ್ಮೇಳನದ ಪೂರ್ಣಾಧಿವೇಶನದಲ್ಲಿ ತಾವು ಮಾಡಿದ ಭಾಷಣವನ್ನು ವಿಶದಿಕರಿಸಿದರು. `ಎರಡು ಜರ್ಮನಿಗಳಿರುವ ವಾಸ್ತವ ಸಂಗತಿಯನ್ನು ಮನಗಾಣದೆ ನಾವು ಬರ್ಲಿನ್ ಸಮಸ್ಯೆಯನ್ನು ಬಗೆಹರಿಸುವಂತಿಲ್ಲ~ ಎಂದು ಅವರು ಹೇಳಿದರು.ಮಾದಕ ವಸ್ತು ಸೇವನೆ ನಿಷೇಧಕ್ಕೆ ಕರೆ

ನವದೆಹಲಿ, ಸೆ. 3
- ಮಾದಕ ಪದಾರ್ಥಗಳ ಸೇವನೆಯನ್ನು ಶಾಸನ ಮಾಡುವುದರ ಮೂಲಕ ನಿಷೇಧಿಸುವಂತೆ ಕೇಂದ್ರ ಅರ್ಥಮಂತ್ರಿ ಶ್ರೀ ಮೊರಾರ‌್ಜಿ ದೇಸಾಯಿ ಅವರು ರಾಜ್ಯ ಸರ್ಕಾರಗಳಿಗೆ ಒತ್ತಾಯ ಪಡಿಸಿದರು.ವಿಜ್ಞಾನ ಭವನದಲ್ಲಿ ಅಖಿಲ ಭಾರತ ಪಾನನಿರೋಧ ಕಾರ್ಯಕರ್ತರ ಪ್ರಥಮ ಅಧಿವೇಶನವನ್ನು ಶ್ರೀ ದೇಸಾಯಿ ಅವರು ಉದ್ಘಾಟಿಸುತ್ತಾ, `ಪಾನನಿರೋಧ ಜಾರಿಗೆ ತಂದಿರುವುದರಿಂದ ಆದಾಯ ಕಡಿಮೆಯಾಗಿ ತೊಂದರೆಗೊಳಗಾಗಿರುವ ರಾಜ್ಯಗಳಲ್ಲಿ ಐದು ವರ್ಷಗಳ ಕಾಲ ನಷ್ಟದಲ್ಲಿ ಪಾಲುಗೊಳ್ಳಲು ಕೇಂದ್ರ ಸರ್ಕಾರ ಸಿದ್ಧವಿದೆ~ ಎಂಬುದಾಗಿ ತಿಳಿಸಿದರು.ತಾರಾಸಿಂಗ್‌ರಿಗೆ ಅತೀವ ನಿಶ್ಯಕ್ತಿ

ಅಮೃತಸರ, ಸೆ. 3
- ಪಂಜಾಬಿ ಸುಬಾ ರಚನೆಗಾಗಿ ಒತ್ತಾಯ ಮಾಡಲು ಉಪವಾಸ ಮಾಡುತ್ತಿರುವ ತಾರಾಸಿಂಗರ ತೂಕ ಈ ವರೆಗೆ ಒಟ್ಟು 22 ಪೌಂಡ್ ಕಡಿಮೆಯಾಗಿದೆ. ಅವರ ತೂಕ ಈಗ 150 ಪೌಂಡ್, ಉಪವಾಸ ಆರಂಭಿಸಿ ಇಂದಿಗೆ 20 ದಿನವಾಯಿತು.ಅವರು ನಿನ್ನೆ ರಾತ್ರಿ ಸುಖವಾಗಿ ನಿದ್ರಿಸಿಲ್ಲವೆಂದು ವೈದ್ಯರು ಇಂದು ಸಂಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈವರೆಗೆ ಅವರ ಪಾದಗಳಿಗೆ ಜೋಮು ಹಿಡಿಯುತ್ತಿತ್ತು. ಈಗ ಮೊಣಕಾಲಿನವರೆಗೂ ಜೋಮು ಹಿಡಿಯುತ್ತಿದೆ. ಅವರು ಬಹಳ ನಿಶ್ಯಕ್ತರಾಗಿದ್ದಾರೆ.ಕೋಮು ಆಧಾರದ ಮೇಲೆ ಮತವೀಯಬೇಡಿ

ಜೆಂಷೆಡ್‌ಪುರ, ಸೆ. 3
- ಸ್ಪರ್ಧಿಯು ಯಾವ ಪಕ್ಷಕ್ಕೆ ಸೇರಿದವನೆಂಬುದನ್ನು ಪರಿಗಣಿಸಿ ಮತವೀಯಬೇಕೆಂದೂ ಮತ ಅಥವಾ ಕೋಮು ಆಧಾರದ ಮೇಲೆ ಕೊಡಕೂಡದೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎನ್. ಸಂಜೀವರೆಡ್ಡಿಯವರು ಮತದಾರರಿಗೆ ಮನವಿ ಮಾಡಿದರು.ನಗರಕ್ಕೆ ಒಂದು ದಿನದ ಭೇಟಿಗಾಗಿ ನಿನ್ನೆ ಇಲ್ಲಿಗೆ ಆಗಮಿಸಿದ ಶ್ರೀ ರೆಡ್ಡಿಯವರು ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.