ಮಂಗಳವಾರ, ಜೂನ್ 22, 2021
22 °C

ಭಾರತಕ್ಕೆ ಅನಿಲದ ಬದಲು ವಿದ್ಯುತ್ ನೀಡಲು ಸಿದ್ಧ - ಇರಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ (ಪಿಟಿಐ): ಭಾರತಕ್ಕೆ ಅನಿಲದ ಬದಲಾಗಿ ನೇರವಾಗಿ ವಿದ್ಯುತ್ತನ್ನೇ ರಫ್ತು ಮಾಡುವ ಸಾಧ್ಯತೆ ಬಗ್ಗೆ ಪರಿಶೀಲಿಸಿಲು ತಾನು ಸಿದ್ಧ ಎಂದು ಇರಾನ್ ಹೇಳಿದೆ.ಭಾರತ-ಪಾಕಿಸ್ತಾನ-ಇರಾನ್‌ಗಳನ್ನು ಒಳಗೊಂಡ ತ್ರಿಪಕ್ಷೀಯ ಕೊಳವೆ ಮಾರ್ಗ ಯೋಜನೆಯ ಬಗ್ಗೆ ಭಾರತದ ಅನಿಶ್ಚಿತತೆ ಮುಂದುವರಿದಿರುವ ಸಂದರ್ಭದಲ್ಲೇ ಇರಾನ್‌ನಿಂದ ಈ ಹೇಳಿಕೆ ಹೊರಬಿದ್ದಿದೆ.ಇರಾನ್ ಇಂಧನ ಸಚಿವ ಮಜೀದ್ ನಮ್‌ಜೌ ಮಾತನಾಡಿ, ತಮ್ಮ ರಾಷ್ಟ್ರವು ಭಾರತಕ್ಕೆ ನೇರವಾಗಿ ವಿದ್ಯುತ್ತನ್ನೇ ರಫ್ತು ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ.ಭಾರತವು ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಆ ರಾಷ್ಟ್ರದೊಂದಿಗೆ ಒಪ್ಪಂದದ ಷರತ್ತುಗಳ ಕುರಿತು ಸಮಾಲೋಚಿಸುವುದು ತಮ್ಮ ಇಲಾಖೆಯ ಕಾರ್ಯಸೂಚಿಯಲ್ಲಿ ಸೇರಿದೆ ಎಂದು ತಿಳಿಸಿದರು.ಪ್ರಸ್ತುತ, ನೈಸರ್ಗಿಕ ಅನಿಲವನ್ನು ವಿದ್ಯುತ್ ಆಗಿ ಪರಿವರ್ತಿಸಿ ರಫ್ತು ಮಾಡುವ ಸಾಧ್ಯತೆ ಇಂಧನ ರಫ್ತಿನ ಹೊಸ ಮಾರ್ಗೋಪಾಯಗಳಲ್ಲಿ ಒಂದಾಗಿದೆ. ಅನಿಲ ಸಾಗಣೆಗೆ ಹೋಲಿಸಿದರೆ ವಿದ್ಯುತ್ ರವಾನೆ ಅಗ್ಗವೂ ಹೌದು ಎಂದರು.ಬರಿದಾಗದ ಶಕ್ತಿ ಮೂಲಗಳ ಆವಿಷ್ಕಾರದಲ್ಲಿ ಭಾರತ ಮುಂಚೂಣಿ ರಾಷ್ಟ್ರವಾಗಿದ್ದು, ಅದರ ಸಹಕಾರದಿಂದ ತಮ್ಮ ರಾಷ್ಟ್ರದಲ್ಲಿ ಹೊಸ ಹೊಸ ಇಂಧನಗಳ ಅಭಿವೃದ್ಧಿಪಡಿಸಲು ವೇದಿಕೆ ಸಿದ್ಧಪಡಿಸಲಾಗುವುದು ಎಂದು ಹೇಳಿದರು.ಭಾರತದಲ್ಲಿ ಬರಿದಾಗದ ಶಕ್ತಿ ಮೂಲಗಳನ್ನು ಆಧರಿಸಿ 17,000 ಮೆ.ವಾ. ವಿದ್ಯುತ್ ಉತ್ಪಾದಿಸಬಲ್ಲ ವಿವಿಧ ಘಟಕಗಳು ಇವೆ. ಇವನ್ನು ಅಧ್ಯಯನ ಮಾಡಿ ತಮ್ಮ ರಾಷ್ಟ್ರದಲ್ಲೂ ಮಲಿನಕಾರಕವಲ್ಲದ ವಿದ್ಯುತ್ ತಯಾರಿಸಲು ಆದ್ಯತೆ ನೀಡಲಾಗುವುದು ಎಂದರು.ಇರಾನ್‌ನಲ್ಲಿ ಪಾಕಿಸ್ತಾನ ಗಡಿ ಭಾಗಕ್ಕೆ ಹೊಂದಿಕೊಂಡ  ಭಾಗದಲ್ಲಿ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ  ನಡೆಯುತ್ತಿದೆ ಎಂದು ಮಜೀದ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.