ಬುಧವಾರ, ಜನವರಿ 29, 2020
27 °C
ಕ್ರಿಕೆಟ್‌: ಪ್ಲೇಸಿಸ್‌, ಡಿವಿಲಿಯರ್ಸ್‌ ಶತಕದ ಅಬ್ಬರ, ವಿಶ್ವದಾಖಲೆ ಹೊಸ್ತಿಲಲ್ಲಿ ಎಡವಿದ ಆತಿಥೇಯರು

ಭಾರತಕ್ಕೆ ಡ್ರಾ ಸಾಧಿಸಿದ ಸಂತೃಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಗೆಲುವಿನ ಸವಿ ಕಾಣಬೇಕೆನ್ನುವ ಆಸೆ ಕಂಡಿದ್ದ ಭಾರತಕ್ಕೆ ಎದುರಾಗಿದ್ದು ನಿರಾಸೆ. ಆದರೆ, ಸೋಲು ತಪ್ಪಿಸಿಕೊಂಡ ಸಂತೃಪ್ತಿ ಮಾತ್ರ ಲಭಿಸಿತು. ವಾಂಡರರ್ಸ್‌ ಕ್ರೀಡಾಂಗಣದಲ್ಲಿ ನಡೆದ ಎರಡು ಟೆಸ್ಟ್‌ ಪಂದ್ಯಗಳ ಸರಣಿಯ ಮೊದಲ ಪಂದ್ಯವು ರೋಚಕವಾಗಿ ಡ್ರಾ ದಲ್ಲಿ ಅಂತ್ಯಕಂಡಿತು. ಫಾಫ್‌ ಡು ಪ್ಲೇಸಿಸ್‌ ಮತ್ತು ಎ.ಬಿ. ಡಿವಿಲಿಯರ್ಸ್‌ ಶತಕ ಗಳಿಸಿ ಭಾರತದ ಬೌಲರ್‌ಗಳನ್ನು ಕಾಡಿದ ಕಾರಣ ಪ್ರವಾಸಿ ತಂಡ ಗೆಲುವಿನ ಆಸೆ ಕೈ ಬಿಟ್ಟಿತು.ಗೆಲುವು ಪಡೆಯಲು ಆತಿಥೇಯರು ಎರಡನೇ ಇನಿಂಗ್ಸ್‌ ನಲ್ಲಿ 458 ರನ್‌ ಕಲೆ ಹಾಕಬೇಕಿತ್ತು. ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಾ ಸಾಗಿದ ಪಂದ್ಯಕ್ಕೆ ಕೊನೆಯ ಓವರ್‌ಗಳಲ್ಲಿ ಮಹತ್ವದ ತಿರುವು ಲಭಿಸಿತು. ಇದಕ್ಕೆ ಕಾರಣವಾಗಿದ್ದು ಜಹೀರ್‌ ಖಾನ್‌ ಮತ್ತು ಮೊಹಮ್ಮದ್‌ ಶಮಿ. ಕೊನೆಯ ದಿನದಾಟದ ಅಂತ್ಯಕ್ಕೆ ಆತಿಥೇಯರು 136 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 450 ರನ್‌ ಕಲೆ ಹಾಕಿದರು.ತಿರುವು ನೀಡಿದ ಡಿವಿಲಿಯರ್ಸ್‌–ಪ್ಲೇಸಿಸ್‌: ಎರಡನೇ ಇನಿಂಗ್ಸ್‌ನಲ್ಲಿ ಶನಿವಾರ ಎರಡು ವಿಕೆಟ್‌ ನಷ್ಟಕ್ಕೆ 138 ರನ್‌ ಕಲೆ ಹಾಕಿದ್ದ ದಕ್ಷಿಣ ಆಫ್ರಿಕಾ ಭಾನುವಾರ ಅಬ್ಬರದ ಆಟ ತೋರಿತು. ಅಲ್ವಿರೊ ಪೀಟರಸನ್‌ ಮತ್ತು ಪ್ಲೇಸಿಸ್‌ ನಾಲ್ಕನೇ ದಿನದಾಟದ ಅಂತ್ಯಕ್ಕೆ ಕ್ರೀಸ್‌ನಲ್ಲಿದ್ದರು. ಪೀಟರಸನ್‌ ಭಾನುವಾರ ಒಂದೂ ರನ್‌ ಕಲೆ ಹಾಕದೇ ರನ್‌ ಔಟ್‌ ಆದರು. ನಂತರ ಬಂದ ಜಾಕ್ ಕಾಲಿಸ್‌ (34) ಎಡಗೈ ವೇಗಿ ಜಹೀರ್‌ ಖಾನ್‌ ಎಸೆತದಲ್ಲಿ ಎಲ್‌ಬಿ ಬಲೆಯಲ್ಲಿ ಬಂದಿಯಾದರು. ಆಗ ತಂಡದ ಮೊತ್ತ 60.4 ಓವರ್‌ಗಳಲ್ಲಿ 197ಕ್ಕೆ4.ನಂತರ ವಿಕೆಟ್‌ ಬೀಳದಂತೆ ಎಚ್ಚರಿಕೆಯ ಆಟವಾಡಿದ   ಡಿವಿಲಿಯರ್ಸ್‌ ಹಾಗೂ ಪ್ಲೇಸಿಸ್‌ ಸೊಗಸಾದ ಇನಿಂಗ್ಸ್‌ ಕಟ್ಟಿದರು. ಈ ಜೋಡಿ  ಐದನೇ ವಿಕೆಟ್‌ ಜೊತೆಯಾಟದಲ್ಲಿ 205 ರನ್‌ ಕಲೆ ಹಾಕಿ ಪಂದ್ಯಕ್ಕೆ ಮಹತ್ವದ ತಿರುವು ನೀಡಿತು. 395 ನಿಮಿಷ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತ ಪ್ಲೇಸಿಸ್‌ 309 ಎಸೆತಗಳಲ್ಲಿ 15 ಬೌಂಡರಿ ಸೇರಿದಂತೆ 134 ರನ್ ಗಳಿಸಿದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಈ ಬಲಗೈ ಬ್ಯಾಟ್ಸ್‌ಮನ್‌ ಗಳಿಸಿದ ಮೂರನೇ ಶತಕ ಇದಾಗಿದೆ.ನಾಲ್ಕು ಗಂಟೆ ಕ್ರೀಸ್‌ನಲ್ಲಿದ್ದ ಡಿವಿಲಿಯರ್ಸ್‌ 12 ಬೌಂಡರಿ ಸೇರಿದಂತೆ 103 ರನ್‌ ಕಲೆ ಹಾಕಿದರು. ಟೆಸ್ಟ್‌ನಲ್ಲಿ ಈ ಬ್ಯಾಟ್ಸ್‌ಮನ್ ಗಳಿಸಿದ 18ನೇ ಶತಕ ಇದು. ಇದರಿಂದ ಆತಿಥೇಯರ ಜಯದ ಕನಸು ಚಿಗುರಿತು.

 ಎಡವಿದ ಆತಿಥೇಯರು: ತಂಡವನ್ನು ಗೆಲುವಿನ ಹಾದಿಯಲ್ಲಿ ಕೊಂಡೊಯ್ದಿದ್ದ ಡಿವಿಲಿಯರ್ಸ್‌ 124ನೇ ಓವರ್‌ನಲ್ಲಿ ಇಶಾಂತ್ ಶರ್ಮ ಎಸೆತದಲ್ಲಿ ಬೌಲ್ಡ್‌ ಆದರು. 133ನೇ ಓವರ್‌ನಲ್ಲಿ ಪ್ಲೇಸಿಸ್‌ ರನ್‌ ಔಟ್‌ ಬಲೆಯಲ್ಲಿ ಬಂದಿಯಾದರು. ಈ ಎರಡು ವಿಕೆಟ್‌ಗಳು ಪತನವಾಗಿದ್ದು ಪಂದ್ಯದ ದಿಕ್ಕು ಬದಲಿಸಿತು. ಇಲ್ಲವಾದರೆ, ದೋನಿ ಪಡೆ ಸೋಲಿನ ಸಂಕಷ್ಟ ಎದುರಿಸಬೇಕಾಗುತ್ತಿತ್ತು.ಮೊದಲ ಇನಿಂಗ್ಸ್‌ನಲ್ಲಿ ಮೆರೆದಾಡಿದ್ದ ಭಾರತದ ವೇಗಿಗಳು ದ್ವಿತೀಯ ಇನಿಂಗ್ಸ್‌ನಲ್ಲಿಯೂ ಆತಿಥೇಯ ತಂಡವನ್ನು ಬೇಗನೆ ಕಟ್ಟಿಹಾಕುತ್ತಾರೆ ಎನ್ನುವ ನಿರೀಕ್ಷೆ ಹುಸಿಯಾಯಿತು. ಆದರೆ, ದಕ್ಷಿಣ ಆಫ್ರಿಕಾ ವಿಶ್ವ ದಾಖಲೆ ಮಾಡುವ ಅವಕಾಶವನ್ನು ತಪ್ಪಿಸಿಕೊಂಡಿತು. 

458 ರನ್‌ಗಳ ಸವಾಲಿನ ಗುರಿಯನ್ನು ಇದುವರೆಗೂ ಯಾವ ತಂಡವನ್ನು ಬೆನ್ನು ಹತ್ತಿ ಗೆಲುವು ಪಡೆದಿಲ್ಲ. 2003ರಲ್ಲಿ ವೆಸ್ಟ್‌ ಇಂಡೀಸ್‌ ಆಸ್ಟ್ರೇಲಿಯಾದ ವಿರುದ್ಧ 418 ರನ್‌ ಗಳಿಸಿ ಗೆಲುವು ಪಡೆದಿದ್ದು ಇದುವರೆಗಿನ ದಾಖಲೆ ಎನಿಸಿದೆ. ಈ ದಾಖಲೆ ಅಳಿಸಿ ಹಾಕಿ ವಿಶ್ವ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿದ್ದ ಹರಿಣಗಳ ನಾಡಿನವರು ಎಡವಿದರು.ರಕ್ಷಣಾತ್ಮಕ ಆಟ: ಗೆಲುವಿನ ಆಸೆ ಕಂಡಿದ್ದ ದಕ್ಷಿಣ ಆಫ್ರಿಕಾ ಕೊನೆಯಲ್ಲಿ ಮೇಲಿಂದ ಮೇಲೆ ವಿಕೆಟ್‌ಗಳನ್ನು ಕಳೆದುಕೊಂಡ ಕಾರಣ ಅಪಾಯಕ್ಕೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಿತು. ಆದ್ದರಿಂದ ರಕ್ಷಣಾತ್ಮಕ ಆಟದ ಮೊರೆ ಹೋಗಿ ಡ್ರಾ ಮಾಡಿಕೊಳ್ಳುವಲ್ಲಿ ಸಫಲವಾಯಿತು. ಏಕದಿನ ಸರಣಿಯಲ್ಲಿ ಮುಖಭಂಗ ಅನುಭವಿಸಿರುವ ಭಾರತ ಟೆಸ್ಟ್‌ ಸರಣಿಯನ್ನಾದರೂ ಗೆದ್ದು ಏಕದಿನ ಸರಣಿ ಸೋಲಿಗೆ ತಿರುಗೇಟು ನೀಡುವ ಲೆಕ್ಕಾಚಾರದಲ್ಲಿದೆ.

ಆದರೆ, ಮೊದಲ ಟೆಸ್ಟ್‌ ಪಂದ್ಯದಲ್ಲಿ ಸಾಧ್ಯವಾಗಲಿಲ್ಲ. ಡಿಸೆಂಬರ್‌ 26ರಿಂದ 30ರ ವರೆಗೆ ಎರಡನೇ ಹಾಗೂ ಕೊನೆಯ ಟೆಸ್ಟ್‌ ನಡೆಯಲಿದೆ. ಆ ಪಂದ್ಯದಲ್ಲಿಯಾದರೂ ಗೆಲುವು ಪಡೆಯುವ ಹೆಗ್ಗುರಿ ದೋನಿ ಬಳಗದ ಮುಂದಿದೆ. ಹರಿಣಗಳ ನಾಡಿನಲ್ಲಿ ಭಾರತ 21 ವರ್ಷಗಳ ಅವಧಿಯಲ್ಲಿ ಜಯ ಪಡೆದಿದ್ದು ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ. ಸರಣಿ ಗೆಲ್ಲುವ ಕನಸಂತೂ ನನಸಾಗಿಲ್ಲ.

ಪ್ರತಿಕ್ರಿಯಿಸಿ (+)