ಭಾನುವಾರ, ಜುಲೈ 25, 2021
20 °C

ಭಾರತಕ್ಕೆ ಪರಮಾಪ್ತ ರಾಷ್ಟ್ರ ಸ್ಥಾನ: ಕಾಶ್ಮೀರ ಸಮಸ್ಯೆ ಇತ್ಯರ್ಥ ಷರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್, (ಪಿಟಿಐ): ‘ಕಾಶ್ಮೀರ ಸಮಸ್ಯೆ’ಯನ್ನು ಇತ್ಯರ್ಥಗೊಳಿಸುವ ಪೂರ್ವ ಷರತ್ತಿನ ಮೇಲೆ ಭಾರತಕ್ಕೆ ‘ಪರಮಾಪ್ತ ರಾಷ್ಟ್ರ’ದ ಸ್ಥಾನಮಾನ ನೀಡಬೇಕು ಎಂದು ಪಾಕಿಸ್ತಾನದ ಪ್ರತಿಪಕ್ಷ ಸಂಸದರ ಗುಂಪು ನಿರ್ಣಯ ಅಂಗೀಕರಿಸಿದೆ.

ಪ್ರತಿಪಕ್ಷಗಳಾದ ಪಿಎಂಎಲ್‌ಕ್ಯೂ ಮತ್ತು ಪಿಎಂಎಲ್-ಎನ್ ಹತ್ತು ಸಂಸದರು ಸಹಿ ಮಾಡಿದ ನಿರ್ಣಯವನ್ನು ಶನಿವಾರ ಸಂಸತ್ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ. ಭಾರತದ ಕಟು ಟೀಕಾಕಾರರಾದ ಪಿಎಂಎಲ್‌ಕ್ಯೂನ ಮಾರ್ವಿ ಮೆಮನ್ ನಿರ್ಣಯದ ಪ್ರತಿಯನ್ನು ಸಲ್ಲಿಸಿದರು.

‘ಭಾರತಕ್ಕೆ ಪರಮಾಪ್ತ ಸ್ಥಾನಮಾನ ನೀಡುವುದಕ್ಕೂ ಮೊದಲು ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಷರತ್ತು ವಿಧಿಸಬೇಕು. ಇಲ್ಲದಿದ್ದರೆ ಕಾಶ್ಮೀರ ವಿಷಯಕ್ಕೆ ಮಾರಣಾಂತಿಕ ಪೆಟ್ಟು ನೀಡಿದಂತೆ’ ಎಂದು ಎಚ್ಚರಿಸಲಾಗಿದೆ.

ವಾಣಿಜ್ಯ ಕಾರ್ಯದರ್ಶಿಗಳ ಮಾತುಕತೆ ಮುಗಿದ ನಂತರ ಮಾಧ್ಯಮದ ಜತೆ ಮಾತನಾಡಿದ ಪಾಕ್ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ಜಾಫರ್ ಮಹಮ್ಮೂದ್, ‘ಕಾಶ್ಮೀರ ಸಮಸ್ಯೆ ಅಥವಾ ರಾಜಕೀಯ ವಿಷಯಗಳ ಮೇಲಿನ ಇಂತಹ ಠರಾವು ಭಾರತಕ್ಕೆ ಪರಮಾಪ್ತ ರಾಷ್ಟ್ರ ಸ್ಥಾನ ನೀಡಲು ಅಡ್ಡಿಯಾಗಲಾರದು. ಈ ಎರಡೂ ವಿಷಯಗಳಿಗೆ ಯಾವುದೇ ರೀತಿಯ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂಬಯಿ ಮೇಲಿನ ದಾಳಿಯ ನಂತರ ಸಂಪೂರ್ಣ ಹದಗೆಟ್ಟಿದ್ದ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ಕಾರ್ಯದರ್ಶಿಗಳ ಮಟ್ಟದ ಮಾತುಕತೆಗೆ ಚಾಲನೆ ನೀಡಲಾಗಿದೆ.

ಪರಸ್ಪರ ವ್ಯಾಪಾರ, ವಹಿವಾಟು ಪುನರಾರಂಭಿಸುವ ಉದ್ದೇಶದಿಂದ ಪಾಕ್ ಈ ಹೆಜ್ಜೆ ಇಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.