ಭಾನುವಾರ, ಏಪ್ರಿಲ್ 18, 2021
23 °C

ಭಾರತದ ಮಹಿಳಾ ಉದ್ಯಮಿಗಳು

ಪುನರ್ವಸು Updated:

ಅಕ್ಷರ ಗಾತ್ರ : | |

ಮರಿಯಮ್ ಮ್ಯಾಥ್ಯೂ

ಮರಿಯಮ್ ಮ್ಯಾಥ್ಯೂ ಅವರು ಮಲಯಾಳ ಮನೋರಮಾ ಸಮೂಹದ ಆನ್‌ಲೈನ್ ಪೋರ್ಟಲ್ ಆಗಿರುವ `ಮನೋರಮಾ ಆನ್‌ಲೈನ್~ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ. ಸ್ವಲ್ಪ ದಿನಗಳ ಮುನ್ನ ನ್ಯೂಯಾರ್ಕ್‌ನ `ಜೆ.ಪಿ ಮೊರ್ಗನ್ ಚೇಸ್~ ಉಪಾಧ್ಯಕ್ಷೆ ಆಗಿದ್ದ ಅವರು ಇ-ವ್ಯವಹಾರಕ್ಕೆ ಸಂಬಂಧಿಸಿದ ನಿರ್ವಹಣೆಯಲ್ಲಿ ವಿಶೇಷ ಪರಿಣತಿ ಪಡೆದಿದ್ದರು.

 

ಅದಕ್ಕಿಂತ ಮುಂಚೆ ನ್ಯೂಯಾರ್ಕ್‌ನ ಚೇಸ್ ಮ್ಯಾನ್‌ಹಟನ್ ಬ್ಯಾಂಕ್‌ನ `ವ್ಯವಸ್ಥಾಪನಾ ಸಲಹಾ ಕೇಂದ್ರ~ದ ಹಿರಿಯ ಸಲಹೆಗಾರರಾಗಿದ್ದರು. ಬ್ಯಾಂಕ್‌ನ ಹೊಸ ಯೋಜನೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಪೀಟ್ಸ್‌ಬರ್ಗ್‌ನ ಕಾರ್ನೆಗಿ ಮೆಲ್ಲಾನ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿರುವ ಮರಿಯಮ್ ಅವರು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆದಿದ್ದಾರೆ. ಮರಿಯಮ್ ಅವರ ಪತಿ ಮಲಯಾಳ ಮನೋರಮಾದ ನಿರ್ದೇಶಕ ಹಾಗೂ ಸಹಾಯಕ ಸಂಪಾದಕರಾಗಿರುವ ಜಯಂತ್ ಮಾಮೆನ್ ಮ್ಯಾಥ್ಯೂ.`ನೂರು ವರ್ಷಗಳಷ್ಟು ಹಳೆಯದಾದ `ಮಲಯಾಳ ಮನೋರಮಾ~ ಪತ್ರಿಕೆ ಹತ್ತು ವರ್ಷಗಳ ಹಿಂದೆ ಡಿಜಿಟಲ್ ಆವೃತ್ತಿ ಆರಂಭಿಸಲು ಹೊರಟಾಗ ಅನುಮಾನದಿಂದ ನೋಡಿದವರೇ ಹೆಚ್ಚು.ಆದರೆ, ವ್ಯವಹಾರ ಕೌಶಲ್ಯ ಮತ್ತು ಆದಾಯ ತರುವ ಮಾರ್ಗಗಳನ್ನು ಕಂಡುಕೊಂಡದ್ದರಿಂದ ಆನ್‌ಲೈನ್‌ಮಾರುಕಟ್ಟೆಯಲ್ಲಿ ಮುಂಚೂಣಿಯ ಹಂತ ತಲುಪುವುದು ಸಾಧ್ಯವಾಯಿತು ಎನ್ನುತ್ತಾರೆ ಮರಿಯಮ್. ಸತತ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸು ಖಂಡಿತ ಸಾಧ್ಯ ಎನ್ನುವ ಮರಿಯಮ್ ಯುವಕ-ಯುವತಿಯರಿಗೆ ಮಾದರಿಯಾಗಿದ್ದಾರೆ.

............ಇಷಿತಾ ಸ್ವರೂಪ್
ದೆಹಲಿ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಮತ್ತು ಗಾಜಿಯಾಬಾದ್‌ನ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಟೆಕ್ನಾಲಜಿ ಸಂಸ್ಥೆಯಿಂದ ಎಂಬಿಎ ಪದವಿ ಪಡೆದಿರುವ ಇಷಿತಾ ಸ್ವರೂಪ್ ಅವರು ತಮ್ಮ ವೃತ್ತಿ ಜೀವನ ಆರಂಭಿಸಿದ್ದು ಕ್ಯಾಡ್‌ಬರೀಸ್ ಸಂಸ್ಥೆಯಲ್ಲಿ.

 

`99 ಲೇಬಲ್ಸ್~ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ಇಷಿತಾ ಅವರು ಭಾರತದ ಐಟಿಇಎಸ್ (ಮಾಹಿತಿ ತಂತ್ರಜ್ಞಾನ ಸಂಬಂಧಿ ಸೇವೆಗಳು)ವಲಯದಲ್ಲಿ ತಮ್ಮ ವಿಭಿನ್ನ- ವಿಶಿಷ್ಟ ಕೆಲಸಗಳ ಮೂಲಕ ಹೆಸರುವಾಸಿಯಾಗಿದ್ದಾರೆ.ನಗರದ ಮಹಿಳೆಯರಿಗೆ ತೊಂದರೆರಹಿತ ಮತ್ತು ಸುಖಕರವಾದ ಪ್ರಯಾಣದ ಅನುಭವ ಕಲ್ಪಿಸುವ ಸಖಾ ಕನ್ಸ್‌ಲ್ಟಿಂಗ್ ವಿಂಗ್ಸ್ ಪ್ರೈ ಲಿಮಿಟೆಡ್ ಆರಂಭಿಸಿ ಅದರ ಯಶಸ್ಸಿಗೆ ಕಾರಣರಾದರು.

 

99 ಲೇಬಲ್ಸ್ ಸಂಸ್ಥೆಯ ಸಿಇಓ ಆಗಿ ಹೊಸ ಸಾಧ್ಯತೆಗಳ ಹುಡುಕಾಟದಲ್ಲಿ ತೊಡಗಿಸಿಕೊಂಡಿರುವ ಇಷಿತಾ ಅವರು  ಮನರಂಜನೆಯ ಜೊತೆಯಲ್ಲಿ ಶಾಪಿಂಗ್ ಮಾಡುವ ವಿನೂತನ ಮಾದರಿ ಆರಂಭಿಸಲು ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ಅವರದೇ ಸಂಸ್ಥೆಯಲ್ಲಿ ಇರುವ ಯುವಪಡೆಯ ಬೆಂಬಲ ಜೊತೆಗಿದೆ.

 ...............ಪರ್ಲ್ ಉಪ್ಪಲ್
ಭಾರತದಲ್ಲಿ ಅಂತರ್ಜಾಲ (ಇಂಟರ್‌ನೆಟ್) ಉದ್ಯಮ ರೂಪುಗೊಳ್ಳುವ ಹಂತದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಪರ್ಲ್ ಉಪ್ಪಲ್ ಅವರು ಡಿಜಿಟಲ್ ಜಾಹೀರಾತು ಕ್ಷೇತ್ರ ವಿಕಾಸಗೊಳ್ಳಲು ಕಾರಣರಾದವರು. ಯಾಹೂ ಮತ್ತು ರೆಡಿಫ್ ಡಾಟ್ ಕಾಮ್‌ನಂತಹ ಪ್ರಮುಖ ಕಂಪೆನಿಗಳ ಜೊತೆಗಿನ ಪರ್ಲ್ ಅವರ ಒಡನಾಟವು ಜಾಹೀರಾತು ಕ್ಷೇತ್ರದ ವ್ಯಾಪಕ ಬೆಳವಣಿಗೆಗೆ ಕಾರಣವಾಯಿತು.

ಅವರು 2012ರ `ವೃತ್ತಿಪರ ವಾಣಿಜ್ಯೋದ್ಯಮಿ~ ಪ್ರಶಸ್ತಿ ಪಡೆದಿದ್ದಾರೆ. ಭಾರತದ ಪ್ರಮುಖ ಫ್ಯಾಷನ್, ವೈಭವಯುತ ಜೀವನ ಶೈಲಿಯ ಖಾಸಗಿ ಮಾರಾಟ ಕ್ಲಬ್ ಆಗಿರುವ `ಫ್ಯಾಷನ್ ಅಂಡ್ ಯು ಡಾಟ್‌ಕಾಮ್~ನ ಸಂಸ್ಥಾಪಕರಲ್ಲಿ ಒಬ್ಬರಾದ ಪರ್ಲ್ ಅವರು ಕಾರ್ಯನಿರ್ವಾಹಕ ಅಧಿಕಾರಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.

 

`ಫ್ಯಾಷನ್ ಅಂಡ್ ಯು ಡಾಟ್‌ಕಾಮ್~ಗಿಂತ ಮೊದಲು ಪರ್ಲ್ ಅವರು `ಯಾಹೂ ಇಂಡಿಯಾ~ ಸಂಸ್ಥೆಯ ಆರ್ಥಿಕ ಸಬಲತೆಗಾಗಿ ಪ್ರಯತ್ನಿಸಿದರು. ಯಾಹೂ ಸಂಸ್ಥೆಯು ಜಾಹೀರಾತು ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುವಂತಾಗಲು ಪರ್ಲ್ ಕಾರಣರಾಗಿದ್ದರು.

 

ಅದಕ್ಕಾಗಿಯೇ ಜಾಗತಿಕ ಮಟ್ಟದ `ಸೂಪರ್‌ಸ್ಟಾರ್ ಪ್ರಶಸ್ತಿ~ಗೆ ಭಾಜನರಾಗಿದ್ದರು. ಪರ್ಲ್‌ಗೆ ಈ ಪ್ರಶಸ್ತಿ ಪಡೆಯುವುದರೊಂದಿಗೆ  ಮೊದಲ ಬಾರಿಗೆ ಏಷ್ಯ ಖಂಡಕ್ಕೆ ಸೇರಿದವರಿಗೆ ಗೌರವ ಪ್ರಾಪ್ತವಾದಂತಾಯಿತು. ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿದ್ದ  ಪರ್ಲ್ `ತಂತ್ರಜ್ಞಾನ ನಿರ್ವಹಣೆ~ಯಲ್ಲಿ ಸ್ನಾತಕೋತ್ತರ ಪದವಿ (ಎಂಬಿಎ) ಪಡೆದರು. ಅದಕ್ಕೂ ಮುನ್ನ ದೆಹಲಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ವಿದ್ಯಾರ್ಥಿಯಾಗಿ ಬಿಇ ಪದವಿ ಪಡೆದಿದ್ದರು.

...........ಅನಿಷಾ ಸಿಂಗ್
ಮೈದಾಲ ಡಾಟ್ ಕಾಮ್‌ನ (mydala.com) ಸಂಸ್ಥಾಪಕಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿಯೂ ಆಗಿರುವ ಅನಿಷಾಸಿಂಗ್ ಅದಕ್ಕೂ ಮುನ್ನ ಕಿನಿಸ್ ಎಂಬ ಸಾಫ್ಟ್‌ವೇರ್ ಕಂಪೆನಿಯನ್ನು ಆರಂಭಿಸಿ ಅದರ ಸಿಇಓ ಆಗಿದ್ದರು. ಕಿನಿಸ್ ಸಂಸ್ಥೆಯು ಅಮೆರಿಕಾ ಮತ್ತು ಭಾರತದಲ್ಲಿ ಇ-ಕಲಿಕೆಗೆ ಸಂಬಂಧಿಸಿದಂತೆ ತಿಳವಳಿಕೆ, ಮಾಹಿತಿ ಒದಗಿಸುತ್ತಿತ್ತು. ಅನಿಷಾ ವೃತ್ತಿಜೀವನ ಆರಂಭವಾದದ್ದು ವಾಷಿಂಗ್ಟನ್ ಡಿಸಿಯಲ್ಲಿ ಇರುವ ಕ್ಯಾಪಿಟಲ್ ಹಿಲ್‌ನಲ್ಲಿ.ಅಲ್ಲಿನ ನ್ಯಾಷನಲ್ ವುಮೆನ್ಸ್ ಬ್ಯುಸಿನೆಸ್ ಅಸೋಸಿಯೇಷನ್ ಜೊತೆಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅನಿಷಾ ಅವರು ನಂತರ ಬೋಸ್ಟನ್‌ನಲ್ಲಿ ಇರುವ ಸೆನ್ರಾ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಸದ್ಯ `ಇಂಡಸ್ ಮಹಿಳಾ ಉದ್ಯಮಶೀಲರು~ ಎಂಬ ಸಂಸ್ಥೆಯ ಮೂಲಕ ಅಮೆರಿಕಾದಲ್ಲಿ ಇರುವ ಏಷ್ಯ ಮೂಲದ ವಹಿವಾಟುದಾರರಿಗೆ ವೇದಿಕೆ ಕಲ್ಪಿಸುತ್ತಿದ್ದಾರೆ.ಮೈದಾಲ ಡಾಟ್‌ಕಾಮ್‌ನ ಯಶಸ್ವಿನ ನಂತರ ಅಮೆರಿಕ ಮತ್ತುಭಾರತದಲ್ಲಿ ನಡೆದ ಹಲವು ವಿಚಾರಸಂಕಿರಣಗಳಲ್ಲಿ ಭಾಗವಹಿಸಿ ತಮ್ಮ ಯಶಸ್ಸನ್ನು ಕುರಿತು ಉಪನ್ಯಾಸ ನೀಡಿದ್ದಾರೆ. ಇ-ಲರ್ನಿಂಗ್ ಕ್ಷೇತ್ರದಲ್ಲಿ ಅನಿಷಾ ಸಿಂಗ್ ಅವರ ಕೊಡುಗೆ ಗಣನೀಯವಾದದ್ದು.

...............ಅಂಜಲಿ ಹೆಡ್ಗೆ
ರಿಪ್ರೈಸ್ ಮೀಡಿಯಾ ಪ್ರೈವೆಟ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ಅಂಜಲಿ ಹೆಡ್ಗೆ ಅವರು ಜಮ್ನಾಲಾಲ್ ಬಜಾಜ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್ ಸಂಸ್ಥೆಯ ವಿದ್ಯಾರ್ಥಿಯಾಗಿದ್ದವರು. 1988ರಲ್ಲಿ ಎಂಎಂಎಸ್ (ಮಾಸ್ಟರ್ ಇನ್ ಮ್ಯಾನೇಜ್‌ಮೆಂಟ್ ಸ್ಟಡೀಸ್) ಪದವಿ ಪಡೆದ ಅಂಜಲಿ ಅವರು ಅದಕ್ಕಿಂತ ಮುನ್ನ ಬರೋಡಾದ ಎಂ.ಎಸ್. ವಿಶ್ವವಿದ್ಯಾಲಯದಿಂದ ವಾಣಿಜ್ಯ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.23 ವರ್ಷಗಳ ವೃತ್ತಿ ಅನುಭವ ಇರುವ ಅಂಜಲಿ ಅವರು  ಮಾಧ್ಯಮ ಮತ್ತು ಜಾಹೀರಾತು ಉದ್ಯಮದ ಬಗ್ಗೆ ಆಳವಾದ ಅರಿವು- ಅನುಭವ ಇರುವವರು. ಅಂಜಲಿ ಅವರಿಗೆ ಬೆನ್ನೆಟ್ ಕೋಲ್‌ಮನ್ ಸಂಸ್ಥೆಯಲ್ಲಿ ಏಳು ವರ್ಷ ಮತ್ತು ಈಗ ಕನೆಕ್ಟ್ ಟರ್ಫ್ ಆಗಿರುವ ಮೀಡಿಯಾ ಟರ್ಫ್ ಸಂಸ್ಥೆಯಲ್ಲಿ ಆರು ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ.

 

ಕೋಕಾಕೋಲಾ ಇಂಡಿಯಾ, ಸೋನಿ ಇಂಡಿಯಾ, ಎಚ್‌ಸಿಎಲ್, ಅಮೆರಿಕನ್ ಎಕ್ಸ್‌ಪ್ರೆಸ್, ಟೊಯೊಟಾ, ಬ್ರಿಟಾನಿಯಾ, ಐಟಿಸಿ ಫುಡ್, ಆದಿತ್ಯ ಬಿರ್ಲಾ ಫೈನಾನ್ಸಿಯಲ್ ಸರ್ವೀಸಸ್ ಗ್ರೂಪ್, ಎನ್‌ಐಐಟಿ ಮತ್ತು ಇಎಸ್‌ಪಿಎನ್ ಸಂಸ್ಥೆಗಳ ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಮಹತ್ವದ ಕಾರ್ಯ ನಿರ್ವಹಿಸಿದ್ದಾರೆ. ದೆಹಲಿ ನಿವಾಸಿ ಆಗಿರುವ ಅಂಜಲಿ ಅವರಿಗೆ ರಂಗಭೂಮಿ ಮತ್ತು ಪುಸ್ತಕಗಳೆಂದರೆ ತುಂಬ ಇಷ್ಟ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.