ಶುಕ್ರವಾರ, ಜೂನ್ 25, 2021
24 °C
ಮಲೇಷ್ಯಾ ವಿಮಾನ ವಿಯೆಟ್ನಾಂ ದ್ವೀಪದ ಸಮೀಪ ಪತನ

ಭಾರತೀಯರು ಸೇರಿ 239 ಜನ ಕಣ್ಮರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್‌/ ಕ್ವಾಲಾಲಂಪುರ (ಪಿಟಿಐ): ಚೀನಾದ ಬೀಜಿಂಗ್‌ಗೆ ತೆರಳುತ್ತಿದ್ದ ಮಲೇಷ್ಯಾ ವಿಮಾನ­ಯಾನ ಸಂಸ್ಥೆಗೆ ಸೇರಿದ್ದ   ವಿಮಾನವು ಶನಿವಾರ  ವಿಯೆಟ್ನಾಂನ  ದಕ್ಷಿಣ ಭಾಗದ ಫು ಕೋ ದ್ವೀಪ­ದಿಂದ 250 ಕಿ.ಮೀ. ದೂರದಲ್ಲಿ ಪತನಗೊಂಡಿದ್ದು, ಐವರು ಭಾರತೀಯರು ಸೇರಿದಂತೆ ಒಟ್ಟು 239 ಮಂದಿ ಕಣ್ಮರೆಯಾಗಿದ್ದಾರೆ.ಬೋಯಿಂಗ್ ಎಮ್‌ಎಚ್‌ 370 ವಿಮಾನದಲ್ಲಿ 227 ಪ್ರಯಾಣಿಕರು ಹಾಗೂ 12 ಸಿಬ್ಬಂದಿ ಇದ್ದರು. ವಿಮಾನದಲ್ಲಿದ್ದ ಭಾರತೀಯರನ್ನು   ವಿನೋದ್‌ ಕೋಳೆಕರ್‌(೫೯), ಚೇತನಾ ಕೋಳೆಕರ್‌(೫೫), ಸ್ವಾನಂತ ಕೋಳೆಕರ್‌ (೨೩), ಚೆನ್ನೈ ಮೂಲದ ಚಂದ್ರಿಕಾ ಶರ್ಮಾ (೫೧) ಮತ್ತು ಪ್ರಹ್ಲಾದ್‌ ಶಿರ್ಸತ್‌ (೪೪) ಎಂದು ಗುರುತಿಸಲಾಗಿದೆ. ಭಾರತೀಯ ಮೂಲದ ಕೆನಡಾ ಪ್ರಜೆ  ಮುಕ್ತೇಶ್‌ ಮುಖರ್ಜಿ ಸಹ ವಿಮಾನದಲ್ಲಿದ್ದರು. ಈ ಮಾಹಿತಿಯನ್ನು ಬೀಜಿಂಗ್‌ನಲ್ಲಿನ ಭಾರತದ ರಾಯಭಾರಿ ಸಹ ಪುಷ್ಟೀಕರಿಸಿದ್ದಾರೆ.ವಿಮಾನ ದಕ್ಷಿಣ ಚೀನಾದ ಸಮುದ್ರಕ್ಕೆ ಬಿದ್ದಿರುವ ವರದಿಯನ್ನು ಚೀನಾ ಮಾಧ್ಯಮಗಳು ಸ್ಪಷ್ಟಪಡಿಸಿದೆ. ಮಲೇಷ್ಯಾ ಕಾಲಮಾನ ಮಧ್ಯರಾತ್ರಿ 12.41ಕ್ಕೆ ಪ್ರಯಾಣ ಆರಂಭಿಸಿದ್ದ ವಿಮಾನ ಕ್ವಾಲಾಲಂಪುರದ ಸುಬಾಂಗ್‌ ವಿಮಾನ ನಿಲ್ದಾಣದ ನಿಯಂತ್ರಣ ಕೇಂದ್ರದಿಂದ  2.40 ರ ಸುಮಾರಿಗೆ ಸಂಪರ್ಕ ಕಳೆದುಕೊಂಡಿತ್ತು ಎಂದು ವಿಮಾನಯಾನ ಸಂಸ್ಥೆ ಹೇಳಿದೆ. ದಕ್ಷಿಣ ಚೀನಾದ ಸಮುದ್ರದಲ್ಲಿ ರಾತ್ರಿ ಹಾರಾಟ ನಡೆಸುತ್ತಿದ್ದ ವೇಳೆ ವಿಮಾನ ಪತನಗೊಂಡಿರ­ಬಹುದು ಎನ್ನ­ಲಾಗುತ್ತಿದೆ. ಪತನ ವೇಳೆ ವಿಮಾನ 36,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು.ಪರಿಹಾರ ಕಾರ್ಯಾಚರಣೆ ಚುರುಕು: ವಿಮಾನ ಪತನಗೊಂಡ ಸ್ಥಳದಲ್ಲಿ ನಾಕಾಪಡೆಯ ದೋಣಿ­ಗಳು ಇರಲಿಲ್ಲ. ಆದರೆ ಆನಂತರ ಪರಿಹಾರ ಕಾರ್ಯಾ­ಚರಣೆಯನ್ನು ಚುರುಕುಗೊಳಿಸಲಾ­ಯಿತು ಎಂದು ನೌಕಾಪಡೆ ಅಧಿಕಾರಿಗಳು ಹೇಳಿ ದ್ದಾರೆ.ವಿಯೆಟ್ನಾಂ, ಮಲೇಷ್ಯಾ ಹಾಗೂ ಸಿಂಗಪುರದ ರಕ್ಷಣಾ ತಂಡಗಳು ಸಹ ಕಾರ್ಯಾಚರಣೆಯಲ್ಲಿ ಭಾಗಿ­ಯಾಗಿವೆ. ಫಿಲಿಪ್ಪೀನ್ಸ್‌ನಿಂದ ಮೂರು ನೌಕಾಪಡೆಯ ಗಸ್ತು ದೋಣಿ ಮತ್ತು ಕಣ್ಗಾವಲು ವಿಮಾನ ಸಹ ಕಳುಹಿಸ­ಲಾಗಿದೆ. ಚೀನಾ ಎರಡು ಹಡಗನ್ನು ರವಾನಿಸಿದೆ.ಯಾವ ದೇಶದ ಎಷ್ಟು ಪ್ರಯಾಣಿಕರು: ಚೀನಾ–152, ಮಲೇಷ್ಯಾ–38, ಭಾರತ– 5, ಇಂಡೋನೇಷ್ಯಾ– 7, ಆಸ್ಟ್ರೇಲಿಯಾ– 6, ಫ್ರೆಂಚ್‌– 3,ಅಮೆರಿಕ– 4 (ಒಂದು ಮಗು ಸೇರಿ), ನ್ಯೂಜಿಲೆಂಡ್‌ – 2, ಉಕ್ರೇನ್‌– 2, ಕೆನಡಾ – 2,ರಷ್ಯಾ, ತೈವಾನ್‌, ಇಟಲಿ, ನೆದರ್‌ಲೆಂಡ್‌ ಹಾಗೂ ಅಸ್ಟ್ರೀಯಾದ ತಲಾ ಒಬ್ಬರು. ಒಟ್ಟು 14 ದೇಶಗಳ ಪ್ರಯಾಣಿಕರು ವಿಮಾನದಲ್ಲಿದ್ದರು.ಪೈಲಟ್‌ ಯಾರು? : ಪತನಗೊಂಡಿರುವ ವಿಮಾನ ಚಾಲನೆ ಮಾಡುತ್ತಿದ್ದ ಪೈಲಟ್‌ ಕ್ಯಾ.ಜಹಾರಿ ಅಹಮದ್‌ ಷಾ ಎಂದು ಗುರುತಿಸಲಾಗಿದೆ. ಇವರಿಗೆ 18,365 ಗಂಟೆಗಳಷ್ಟು ವಿಮಾನ ಚಾಲನೆ ಮಾಡಿದ ಅನುಭವವಿದೆ. ವಿಮಾನಯಾನ ಸಂಸ್ಥೆಗೆ ಇವರು 1981 ರಲ್ಲಿ ಸೇರಿದ್ದರು.ಮಡುಗಟ್ಟಿದ ಸಂಬಂಧಿಕರ ದುಃಖ

ಬೀಜಿಂಗ್‌ (ಐಎಎನ್‌ಎಸ್‌): ವಿ
ಮಾನ ಪತನದ ಸುದ್ದಿ ತಿಳಿದು ಪ್ರಯಾಣಿಕರ ಬಂಧುಗಳು ಬೀಜಿಂಗ್‌ನ ಹೋಟೆಲ್‌ ಒಂದರಲ್ಲಿ ಮಾಹಿತಿ ಪಡೆಯಲು ಸೇರಿದ್ದರಿಂದ ದುಃಖ ಮಡುಗಟ್ಟಿದ ವಾತಾವರಣ ನಿರ್ಮಾಣವಾಗಿತ್ತು.40 ವರ್ಷದ ಮಗ ಮರಳಿ ಬರಬಹುದೇನೋ ಎಂದು ಕಾಯುತ್ತಿದ್ದ ತಾಯಿ ತನ್ನ ಸ್ನೇಹಿತೆಯನ್ನು ಅಪ್ಪಿ ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು. ‘ನನ್ನ ಮಗು ಅವರ ತಂದೆಯನ್ನು ಬಿಟ್ಟು ಹೇಗೆ ಇರುತ್ತಾನೆ’ ಎಂದು ಮಹಿಳೆಯೊಬ್ಬರು ಪತಿಯನ್ನು ನೆನೆದು ಜೋರಾಗಿ ಅಳುತ್ತಿದ್ದರು. ಈ ನಡುವೆ ಕೆಲವು ಪ್ರಯಾಣಿಕರು ವಿಮಾನ ಪತನದ ವಿಷಯ ತಿಳಿದು ಹೋಟೆಲ್‌ನಿಂದ ಮಲೇಷ್ಯಾ ವಿಮಾನ ಯಾನ ಕಚೇರಿಗೆ ದೌಡಾಯಿಸಿ  ಮಾಹಿತಿ ಪಡೆಯಲು ಮುಂದಾದರು.ಚೆನ್ನೈ ಮಹಿಳೆ ಕಣ್ಮರೆ

ಚೆನ್ನೈ (ಪಿಟಿಐ):
ವಿಯೆಟ್ನಾಂ ಕರಾವಳಿ­ಯಲ್ಲಿ ದುರಂತ­ಕ್ಕೀಡಾದ ಮಲೇಷಿಯಾದ ನತದೃಷ್ಟ ವಿಮಾನ­ದಲ್ಲಿ ಚೆನ್ನೈನ ಎನ್‌ಜಿಒ ಕಾರ್ಯ­ಕರ್ತೆ­ಯೊಬ್ಬರು ಮೃತ­ಪಟ್ಟಿದ್ದಾರೆ.ದುರ್ದೈವಿಯನ್ನು ಚಂದ್ರಿಕಾ ಶರ್ಮಾ (51) ಎಂದು ಗುರುತಿಸಿದ್ದು, ಅವರು ‘ಮೀನು­ಗಾರರ ಬೆಂಬಲದ ಅಂತರರಾಷ್ಟ್ರೀಯ ಒಕ್ಕೂಟ’ದ ಪ್ರತಿ­ನಿಧಿಯಾಗಿ ಆಹಾರ ಮತ್ತು ಕೃಷಿ ಸಂಸ್ಥೆ ಮಂಗೋ­ಲಿ­ಯಾ­ದಲ್ಲಿ ಆಯೋಜಿ­ಸಿದ್ದ ಸಮ್ಮೇ­ಳ­­ನ­­ವೊಂದರಲ್ಲಿ ಭಾಗವಹಿ­ಸಲು ತೆರಳಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.