ಸೋಮವಾರ, ಮೇ 16, 2022
29 °C

ಭಾರತೀಯರ ಸೃಜನಶೀಲತೆ ನಿದ್ರಾವಸ್ಥೆಯಲ್ಲಿ:ಮುರ್ಡೋಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಮುಂಬೈ  (ಐಎಎನ್‌ಎಸ್): ‘ಭಾರತೀಯರ ಬುದ್ಧಿಮತ್ತೆ ವಿಶ್ವಕ್ಕೆ ಅದ್ಭುತಕಾಣಿಕೆಗಳನ್ನು ನೀಡಿದೆ. ಹಲವು ಕ್ಷೇತ್ರದಲ್ಲಿ ಭಾರತೀಯರು ಪರಿಣತರು. ಆದರೆ, ಅವರು ತಮ್ಮ ಪ್ರತಿಭೆಯನ್ನು ಯನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಂಡಿಲ್ಲ, ಅವರ ಸೃಜನಶೀಲತೆ ನಿದ್ರಾವಸ್ಥೆಯಲ್ಲಿದೆ ಎಂದು ನ್ಯೂಸ್ ಕಾರ್ಪೊರೇಷನ್‌ನ ಮುಖ್ಯಸ್ಥ ಹಾಗೂ  ಮಾಧ್ಯಮ ದೊರೆ ಜೇಮ್ಸ್ ಮುರ್ಡೋಶ್ ಹೇಳಿದ್ದಾರೆ. ಮಾನವ ಕೌಶಲ್ಯದ ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ಅಲ್ಲಿ ಭಾರತೀಯರ ಕೊಡುಗೆ ಇದ್ದೇ ಇರುತ್ತದೆ.  ಜೀವರಕ್ಷಕ ಔಷಧಿಗಳನ್ನು ತಯಾರಿಸುವರು ಭಾರತೀಯರು.  ಪ್ರಪಂಚದ ಪ್ರಖ್ಯಾತ ವಿಜ್ಞಾನಿಗಳು, ಎಂಜಿನಿಯರ್‌ಗಳು, ಉಪನ್ಯಾಸಕರು ಇಲ್ಲಿನವರೇ. ಜಾಗತಿಕ ಮಟ್ಟದಲ್ಲಿ ಭಾರತ ಗುರುತಿಸಿಕೊಂಡಿದೆ. ಆದರೆ, ಇನ್ನೂ ಭಾರತೀಯರು ತಮ್ಮ ಸಂಪೂರ್ಣ ಪ್ರತಿಭೆಯನ್ನು ಸದ್ಬಳಕೆ ಮಾಡಿಕೊಂಡಿಲ್ಲ. ಅದಿನ್ನೂ ನಿದ್ರಾವಸ್ಥೆಯಲ್ಲಿದೆ ಎಂದು ಮುರ್ಡೋಶ್ ಇಲ್ಲಿ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಫಿಕ್ಕಿ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು. ಭಾರತೀಯರ ಬಳಿ ಗರಿಷ್ಠ ಸಾಮರ್ಥ್ಯವಿದೆ.  ಆರ್ಥಿಕ ವೃದ್ಧಿ ದರ ಹೆಚ್ಚುತ್ತಿರುವುದು ಇದಕ್ಕೆ ಉದಾಹರಣೆ. ಇಲ್ಲಿನ ಸೃಜನಶೀಲತೆ ಕ್ಷೇತ್ರ 15 ದಶಲಕ್ಷ ಡಾಲರ್‌ಗಳಿಂದ 120 ದಶಲಕ್ಷ ಡಾಲರ್‌ಗಳಿಗೆ ಏರಿಕೆಯಾಗಿದೆ. ದೊಡ್ಡ ದೊಡ್ಡ ಉದ್ಯಮ ಅವಕಾಶಗಳು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಈ ನೆಲದ ಜನರು ತಮ್ಮ ಸಂಪೂರ್ಣ ಪ್ರತಿಭೆಯನ್ನು ಬಳಸಿಕೊಂಡು ಮುನ್ನುಗ್ಗಬೇಕು ಎಂದು ರೂಪರ್ಟ್ ಮುರ್ಡೋಶ್‌ನ ಪುತ್ರ ಹಾಗೂ ಉತ್ತರಾಧಿಕಾರಿಯಾದ ಜೇಮ್ಸ್ ಮುರ್ಡೋಶ್ ಆಶಯ ವ್ಯಕ್ತಪಡಿಸಿದ್ದಾರೆ.  ಭಾರತೀಯರ ಸೃಜನಶೀಲತೆಯನ್ನು ನಿದ್ರಿಸುತ್ತಿರುವ ಹುಲಿಗೆ ಹೋಲಿಸಿರುವ ಮುರ್ಡೋಶ್, ಹುಲಿ ಮಲಗಿದ್ದರೂ, ಉಳಿದ ಪ್ರಾಣಿಗಳು ಅದಕ್ಕೆ ಗೌರವ ಕೊಡುತ್ತವೆ. ಆದರೆ, ಹುಲಿ ಮೈಕೊಡವಿ ಎದ್ದು ನಿಂತಾಗಲೇ ಅದರ ನಿಜವಾದ ಶಕ್ತಿ ತಿಳಿಯುತ್ತದೆ, ಈ ರೀತಿ ಭಾರತೀಯರು ಎಲ್ಲ ಕ್ಷೇತ್ರಗಳಲ್ಲಿ ಮುನ್ನುಗ್ಗಬೇಕು ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.