ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಬಾಂಗ್ಲಾ ಭೂಗಡಿ ಅತಂತ್ರದಲ್ಲಿ ಸ್ಥಳೀಯರು

ವಿದೇಶ ವಿದ್ಯಮಾನ
Last Updated 7 ಜೂನ್ 2015, 19:30 IST
ಅಕ್ಷರ ಗಾತ್ರ

ಭಾರತ–ಬಾಂಗ್ಲಾದೇಶ ನಡುವಿನ ಬಹುಕಾಲದ ಗಡಿ ವಿವಾದ ಕೊನೆಗೂ ಅಂತ್ಯವಾಗಿದೆ. ನಾಲ್ಕು ದಶಕಗಳಿಂದ ನನೆಗುದಿಯಲ್ಲಿದ್ದ ಭೂ ಗಡಿ ಒಪ್ಪಂದಕ್ಕೆ ( Land Boundary Agreement-LBA) ಶನಿವಾರ ಢಾಕಾದಲ್ಲಿ ಅಧಿಕೃತವಾಗಿ ಸಹಿ ಬಿದ್ದಿದೆ.

ಪ್ರಧಾನಿ ನರೇಂದ್ರ ಮೋದಿ, ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಅವರು 41 ವರ್ಷಗಳ ಹಿಂದಿನ ಎಲ್‌ಬಿಎ ಒಪ್ಪಂದ ಪತ್ರದ ವಿನಿಯಮಕ್ಕೆ ಸಾಕ್ಷಿಯಾಗಿದ್ದಾರೆ.

1974ರಲ್ಲಿ ನಡೆದಿದ್ದ ‘ಎಲ್‌ಬಿಎ ಒಪ್ಪಂದ’ ಜಾರಿಗೆ ಕಳೆದ ತಿಂಗಳಷ್ಟೇ ಸಂಸತ್ತಿನಲ್ಲಿ ಅವಿರೋಧ  ಒಪ್ಪಿಗೆ ಸಿಕ್ಕಿತ್ತು.  ಅಲ್ಲದೆ, 2011ರಲ್ಲಿ ಒಪ್ಪಂದ ಜಾರಿಗೆ ಮಹತ್ವದ ಮಾತುಕತೆಯೂ ನಡೆದು, ಔಪಚಾರಿಕ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಈಗ ಈ ಒಪ್ಪಂದವನ್ನು ಸಂಪೂರ್ಣ ಜಾರಿ ಮಾಡಲು ಹಸಿರು ನಿಶಾನೆ ಲಭಿಸಿದೆ.

ಈ ಒಪ್ಪಂದ ಪ್ರಕಾರ, ಭಾರತದಲ್ಲಿದ್ದ 17,161 ಎಕರೆ ವಿಸ್ತೀರ್ಣದ ಬಾಂಗ್ಲಾದೇಶದ ಭೂ ಪ್ರದೇಶ ಸುತ್ತುವರೆದಿರುವ 111 ಪ್ರದೇಶಗಳು (enclave) ಬಾಂಗ್ಲಾದೇಶಕ್ಕೆ ಮತ್ತು ಬಾಂಗ್ಲಾದೇಶದಲ್ಲಿದ್ದ 7,110 ಎಕರೆ ವಿಸ್ತೀರ್ಣದ ಭಾರತದ ಭೂ ಪ್ರದೇಶ ಸುತ್ತುವರೆದಿರುವ 51   ಪ್ರದೇಶಗಳು (ಎನ್‌ಕ್ಲೇವ್‌) ಭಾರತಕ್ಕೆ ಹಸ್ತಾಂತರವಾಗಲಿವೆ.

‘ಎಲ್‌ಬಿಎ ಒಪ್ಪಂದ’ ಜಾರಿಯಿಂದ ಎರಡೂ ದೇಶಗಳ ಸುಮಾರು 150 ‘ಎನ್‌ಕ್ಲೇವ್‌ ಪ್ರದೇಶ’ಗಳಲ್ಲಿ ವಾಸವಿರುವ 50 ಸಾವಿರಕ್ಕೂ ಹೆಚ್ಚು ಜನರಿಗೆ ಅನುಕೂಲ ಆಗಲಿದೆ. ಈಗ ಅವರು ಭಾರತ ಅಥವಾ ಬಾಂಗ್ಲಾದ ಪೌರತ್ವಪಡೆಯುವ ಅರ್ಹತೆ ಹೊಂದಿದ್ದಾರೆ.
1947ರ ಭಾರತ–ಪಾಕಿಸ್ತಾನ ವಿಭಜನೆ ಸಮಯದಲ್ಲಿ ನಡೆದಿದ್ದ ರಕ್ತಪಾತ ಅಥವಾ ಕೋಮು ಗಲಭೆಯ ಒತ್ತಡ ಇಲ್ಲದೇ ತಮ್ಮ ತಾಯ್ನಾಡನ್ನು ಆಯ್ದು ಕೊಳ್ಳುವ ಅವಕಾಶ ಈ ಜನರಿಗೆ ಲಭಿಸಿದೆ.

ಭಾರತದಲ್ಲಿರುವ  ಬಾಂಗ್ಲಾದೇಶದ ಭೂ ಪ್ರದೇಶದ ಸುತ್ತುವರೆದಿರುವ  51 ಪ್ರದೇಶಗಳಲ್ಲಿ ವಾಸವಿರುವ ಎಲ್ಲ 14,215 ಜನರು ಭಾರತೀಯ ನಾಗರಿಕರಾಗಿ ಉಳಿಯಲು ನಿರ್ಧರಿಸಿದ್ದಾರೆ. ಹಾಗೆಯೇ ಬಾಂಗ್ಲಾದೇಶದಲ್ಲಿರುವ  ಭಾರತದ ಭೂ ಪ್ರದೇಶ ಸುತ್ತುವರೆದಿರುವ 111 ಪ್ರದೇಶಗಳಲ್ಲಿ ನೆಲೆಸಿರುವ 37,369 ಜನರಲ್ಲಿ 743 ಮಂದಿ ಮಾತ್ರ ಭಾರತಕ್ಕೆ ವಲಸೆ ಬರಲು ಬಯಸಿದ್ದಾರೆ.

ಎರಡೂ ದೇಶಗಳ ಮಧ್ಯೆ ‘ಎನ್‌ಕ್ಲೇವ್‌ ಪ್ರದೇಶ’ಗಳನ್ನು ವಿನಿಮಯ ಮಾಡುವ ಒಪ್ಪಂದ ಜಾರಿಗೆ ಸಮನ್ವಯತೆಯ ಕೆಲಸ ಮಾಡಿರುವ ಸರ್ಕಾರೇತರ ಸಂಸ್ಥೆ ‘ಭಾರತ–ಬಾಂಗ್ಲಾದೇಶ ಚಿತ್‌ಮಹಲ್‌ ಸಮನ್ವಯ್‌ ಸಮಿತಿ (ಬಿಬಿಸಿಎಸ್‌ಸಿ)’ ಕೈಗೊಂಡ ಸಮೀಕ್ಷೆಯಲ್ಲಿ ಈ ಜನರು ಮನದಾಳದ ಇಂಗಿತ ವ್ಯಕ್ತಪಡಿಸಿದ್ದಾರೆ.

ಬಿಬಿಸಿಎಸ್‌ಸಿ ಮುಖ್ಯ ಸಂಯೋಜಕ ದೀಪ್ತಿಮನ್‌ ಸೇನ್‌ಗುಪ್ತ ಅವರ ಪ್ರಕಾರ, 2011ರಲ್ಲಿ ಎರಡೂ ದೇಶಗಳು ನಡೆಸಿದ ಜಂಟಿ ಜನಗಣತಿ ಪ್ರಕಾರ, ಪಶ್ಚಿಮ ಬಂಗಾಳ ಗಡಿಗೆ ಹೊಂದಿಕೊಂಡಿರುವ ಭಾರತ–ಬಾಂಗ್ಲಾ ಗಡಿಯಲ್ಲಿನ ‘ಎನ್‌ಕ್ಲೇವ್‌ ಪ್ರದೇಶ’ಗಳಲ್ಲಿ 51,584 ಜನರು ವಾಸ ಮಾಡುತ್ತಿದ್ದಾರೆ.  ಉಭಯ ದೇಶಗಳ ಪೈಕಿ ಒಂದರಲ್ಲಿ ಅಪರಾಧ ಪ್ರಕರಣಗಳನ್ನು ಹೊಂದಿರುವ, ಮತದಾರರ ಪಟ್ಟಿಯಲ್ಲಿರುವ ಜನರಿಗೆ ವಲಸೆಗೆ ಅವಕಾಶವಿಲ್ಲ. ಜೊತೆಗೆ ವಲಸೆಯ ಸಂದರ್ಭದಲ್ಲಿ ಭೂಮಿ ಕಳೆದುಕೊಳ್ಳುವ ಜನರಿಗೆ ಯಾವುದೇ ಆರ್ಥಿಕ ಅಥವಾ ಭೂ ಪರಿಹಾರವನ್ನೂ ನೀಡಲಾಗುವುದಿಲ್ಲ.

ಸದ್ಯಕ್ಕೆ ಭಾರತದಲ್ಲಿ ನೆಲೆಸಿರುವ  ಬಾಂಗ್ಲಾ  ‘ಎನ್‌ಕ್ಲೇವ್‌ ಪ್ರದೇಶ’ದ ಜನರ ಪೈಕಿ ಶೇ 86ರಷ್ಟು ಮುಸ್ಲಿಮರು ಇದ್ದು, ಈಗಿರುವಲ್ಲೇ ವಾಸಿಸಲು ಬಯಸಿದ್ದಾರೆ.  ಅವರು ಅಲ್ಲಿ ಅಪಾರ ಪ್ರಮಾಣದ ಭೂಮಿ ಹೊಂದಿರುವುದರಿಂದ ಮತ್ತು ಭಾರತದಲ್ಲಿ ತಮ್ಮ ಜೀವನ ಮಟ್ಟ ಸುಧಾರಣೆ ಆಗುತ್ತದೆ ಎಂಬ ಭರವಸೆಯಿಂದ ಇಲ್ಲೇ ಉಳಿಯಲು ನಿರ್ಧರಿಸಿದ್ದಾರೆ.

ಬಾಂಗ್ಲಾದಲ್ಲಿ ನೆಲೆಸಿರುವ 37,369 ಭಾರತದ ‘ಎನ್‌ಕ್ಲೇವ್‌ ಪ್ರದೇಶ’ದ ಜನರಲ್ಲಿ ಕೇವಲ 743 ಮಂದಿ ಭಾರತಕ್ಕೆ ಬರಲು ಬಯಸಿರುವುದಕ್ಕೆ ಅಲ್ಲಿ ಉಳಿದ ನಿವಾಸಿಗಳು ಅಪಾರ ಪ್ರಮಾಣದ ಭೂಮಿ ಹೊಂದಿರುವುದೇ ಮುಖ್ಯ ಕಾರಣವಾಗಿದೆ. ಜೊತೆಗೆ ಬಾಂಗ್ಲಾದಲ್ಲೇ ಉಳಿಯಲು ಬಯಸಿರುವವರಲ್ಲಿ ಶೇ 92ರಷ್ಟು ಮುಸ್ಲಿಮರಾಗಿದ್ದಾರೆ.  ಕೆಲವು ಹಿಂದೂಗಳು ಕೂಡ ಬಾಂಗ್ಲಾದಲ್ಲೇ ಉಳಿಯಲು ನಿರ್ಧರಿಸಿದ್ದಾರೆ. ಅಲ್ಲಿ ಅವರು ಅಪಾರ ಪ್ರಮಾಣದ ಭೂಮಿ ಹೊಂದಿರುವುದೇ  ಇದಕ್ಕೆ ಕಾರಣ.

ಭಾರತಕ್ಕೆ ವಲಸೆ ಬರಲು ಬಯಸಿದ ಜನರಲ್ಲಿ ಹೆಚ್ಚಿನವರು ಕೃಷಿ ಕಾರ್ಮಿಕರು, ರಿಕ್ಷಾ ತಳ್ಳುವವರು ಹಾಗೂ ಇತರ ಕೂಲಿ ಕೆಲಸಗಾರರು. ಭಾರತದಲ್ಲಿ ಹೆಚ್ಚಿನ ಸಂಬಳ ಅಥವಾ ಸಂಪಾದನೆ ಮಾಡಬಹುದು ಎಂದು ಅವರು ಭಾವಿಸಿದ್ದಾರೆ. ಭೂ ಒಡೆತನ ಹೊಂದಿದ ಬಹುತೇಕ ಮಂದಿ ಆಯಾ ಪ್ರದೇಶದಲ್ಲೇ ಉಳಿಯಲು ತೀರ್ಮಾನಿಸಿದ್ದಾರೆ. ಭೂಮಿ ಜತೆಗಿನ ಮೂರು ತಲೆಮಾರಿನ ಬಾಂಧವ್ಯ ಮತ್ತು ಇತರ ಸಂಬಂಧಗಳು ಸಹ ಹಲವರು ಆಯಾ ಪ್ರದೇಶದಲ್ಲೇ ಉಳಿಯಲು ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT