ಭಾನುವಾರ, ಜನವರಿ 19, 2020
28 °C

ಭಾರತ– ಅಮೆರಿಕ: ಭದ್ರತೆ ಸವಾಲು ಕುರಿತು ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಯೋತ್ಪಾದನೆ, ಸೈಬರ್‌ ಅಪರಾಧ ಸೇರಿದಂತೆ ದೇಶದ ಭದ್ರತೆ ಕುರಿತ ಹಲವು ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮಾರ್ಗೋ­ಪಾಯ­ಗಳ ಬಗ್ಗೆ ಭಾರತ ಮತ್ತು ಅಮೆರಿಕದ ಉನ್ನತ ಭದ್ರತಾ ಅಧಿಕಾರಿ­ಗಳು ಬುಧವಾರ ಇಲ್ಲಿ ಚರ್ಚಿಸಿದರು. ಎರಡು ದಿನಗಳ ಉಭಯ ರಾಷ್ಟ್ರಗಳ ಪೊಲೀಸ್ ಮುಖ್ಯಸ್ಥರ ಶೃಂಗಸಭೆಯನ್ನು  ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಉದ್ಘಾಟಿಸಿದರು.ಭಯೋತ್ಪಾದನೆ, ಮಾದಕ ವಸ್ತುಗಳ ಕಳ್ಳ ಸಾಗಣೆ, ರಾಷ್ಟ್ರಗಳ ಗಡಿ ಮೀರಿದ ಅಪರಾಧ ಚಟುವಟಿಕೆಗಳು ಸೇರಿ­ದಂತೆ ಭದ್ರತೆಗೆ ಬೆದರಿಕೆ ಒಡ್ಡುವ ಕೃತ್ಯಗಳನ್ನು ಪರಿಣಾಮ­ಕಾರಿಯಾಗಿ ನಿಯಂತ್ರಿ ಸಲು ಜಾಗತಿಕ ಮಟ್ಟದಲ್ಲಿ ಪರಸ್ಪರ ಸಂಪರ್ಕ ಸಾಧಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.ಶೃಂಗಸಭೆಯನ್ನು ಉದ್ದೇಶಿಸಿ ಮಾತ ನಾಡಿದ ಶಿಂಧೆ, ‘ಅಮೆರಿಕ­ದೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿ­ಸುವ ನಿಟ್ಟಿನಲ್ಲಿ ಈ ಸಭೆ ಮಹತ್ವವಾದುದು. ಆಂತರಿಕ ಭದ್ರತೆಗೆ ಇನ್ನಷ್ಟು ಒತ್ತು ನೀಡುವ ವಿಷಯ­ದಲ್ಲಿ ಪಾಲುದಾರ ರಾಷ್ಟ್ರ­ಗಳಾಗಿ ನಾವು ಹೆಚ್ಚು ಕೆಲಸಗಳನ್ನು ಮಾಡಿದರೆ, ನಮ್ಮ ಬಾಂಧವ್ಯ ಹೆಚ್ಚು ಅರ್ಥಪೂರ್ಣ­ವಾಗುತ್ತದೆ’ ಎಂದು ಹೇಳಿದರು.ತಮ್ಮ ಭಾಷಣದಲ್ಲಿ ನ್ಯೂಯಾರ್ಕ್‌ ಮೇಲೆ ನಡೆದ 9/11 ಮತ್ತು ಮುಂಬೈ ಮೇಲಿನ 26/11 ದಾಳಿಗಳನ್ನು ಉಲ್ಲೇಖಿ­ಸಿದ ಶಿಂಧೆ, ‘ಹೆಚ್ಚಿನ ಹಾನಿ ಮಾಡುವ ಉದ್ದೇಶದಿಂದ ದೊಡ್ಡ ಮತ್ತು ಹೆಚ್ಚು ಜನ ಸಾಂಧ್ರತೆ ಇರುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡೇ ಭಯೋತ್ಪಾದನಾ ದಾಳಿಗಳನ್ನು ನಡೆಸ­ಲಾಗುತ್ತದೆ’ ಎಂದು ಹೇಳಿದರು.ಭಯೋತ್ಪಾದನಾ ಚಟುವಟಿಕೆಗಳ ಪತ್ತೆ, ಅವುಗಳ ತಡೆ, ದಾಳಿಯ ಸಂದರ್ಭ­­ದಲ್ಲಿ ಸಂತ್ರಸ್ತರ ರಕ್ಷಣೆ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಗೃಹ ಇಲಾಖೆ ಕಾರ್ಯದರ್ಶಿ ಅನಿಲ್‌ ಗೋಸ್ವಾಮಿ ಹೇಳಿದರು. ಪರಸ್ಪರ ಸಹಕಾರದ ಬಗ್ಗೆ ಇದೇ ಮೊದಲ ಬಾರಿಗೆ ಎರಡೂ ರಾಷ್ಟ್ರಗಳ ಭದ್ರತಾ ಅಧಿಕಾರಿಗಳು ಚರ್ಚಿಸು­ತ್ತಿದ್ದಾರೆ ಎಂದು ಅಮೆರಿಕದ ಆಂತರಿಕ ಭದ್ರತಾ ಇಲಾಖೆಯ ಸಹಾಯಕ ಕಾರ್ಯದರ್ಶಿ ಡೇವಿಡ್‌ ಹೇಮನ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)