ಮಂಗಳವಾರ, ಮೇ 24, 2022
30 °C

ಭಾರತ ತೀವ್ರ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರ್ತ್ (ಪಿಟಿಐ): ಭಾರತ ಪ್ರವಾಸ ಕೈಗೊಳ್ಳುವ ತನ್ನ ದೇಶದ ಪ್ರಜೆಗಳಿಗೆ ಪ್ರವಾಸಿ ಸಲಹೆಯನ್ನು ನೀಡುವ ಆಸ್ಟ್ರೇಲಿಯಾದ ಕ್ರಮವನ್ನು ವಿದೇಶಾಂಗ ವ್ಯವಹಾರ ಸಚಿವ ಎಸ್.ಎಂ.ಕೃಷ್ಣ ತೀವ್ರವಾಗಿ ಖಂಡಿಸಿದ್ದಾರೆ. ಇದು ಸದ್ಯದ ಪ್ರವಾಸಿ ಧೋರಣೆಗೆ ವ್ಯತಿರಿಕ್ತವಾಗಿದ್ದು, ಕೂಡಲೇ ಇದನ್ನು ವಾಪಸ್ ಪಡೆಯಬೇಕೆಂದು ಅವರು ಆಸ್ಟ್ರೇಲಿಯಾವನ್ನು ಆಗ್ರಹಿಸಿದ್ದಾರೆ.ಕಾಮನ್‌ವೆಲ್ತ್ ದೇಶಗಳ ವಿದೇಶಾಂಗ ಸಚಿವರ ಸಭೆಯಲ್ಲಿ (ಸಿಎಚ್‌ಒಜಿಎಂ) ಭಾಗವಹಿಸಲು ಪರ್ತ್‌ಗೆ ಆಗಮಿಸಿರುವ ಕೃಷ್ಣ, ಈ ಸಂಬಂಧ ಆಸ್ಟ್ರೇಲಿಯಾ ವಿದೇಶಾಂಗ ಸಚಿವ ಕೆವಿನ್ ರುಡ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಅಧಿಕೃತ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.`ಪ್ರವಾಸಿ ಸಲಹೆಗಳಲ್ಲಿ ಬಳಸುವ ಭಾಷೆ ಅಸಮಂಜಸವಾಗಿದೆ ಮತ್ತು ಸದ್ಯದ ಪ್ರವಾಸಿ ಧೋರಣೆಗೆ ಇದು ವಿರುದ್ಧವಾಗಿದೆ. ಆದ ಕಾರಣ ಇದನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕು~ ಎಂದು ಕೃಷ್ಣ, ರುಡ್ ಅವರನ್ನು ಕೋರಿದ್ದಾರೆ.ಕೃಷ್ಣ ಅವರ ಕೋರಿಗೆ ಪ್ರತಿಕ್ರಿಯಿಸಿರುವ ರುಡ್, ` ಇವು ಎಂದಿನ ಸಲಹೆಗಳು ಅಷ್ಟೆ. ನಾವು ಆತಂಕದಿಂದ ಕೂಡಿದ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಇದರಲ್ಲಿ ನೀಡಿಲ್ಲ~ ಎಂದು ಸ್ಪಷ್ಟಪಡಿಸಿದ್ದಾರೆ.ಅಮೆರಿಕ ಹಾಗೂ ಆಷ್ಟ್ರೇಲಿಯಾ ಸೇರಿದಂತೆ ಅನೇಕ ರಾಷ್ಟ್ರಗಳು ತಮ್ಮ ಪ್ರಜೆಗಳಿಗೆ ಪ್ರವಾಸಿ ಸಲಹೆ ನೀಡಿರುವ ಕ್ರಮವನ್ನು ಭಾರತವು ಗಂಭೀರವಾಗಿ ಪರಿಗಣಿಸಿದೆ. ಇಂಥ ಸಲಹೆಗಳು ವಸ್ತುಸ್ಥಿತಿಗೆ ದೂರವಾಗಿದ್ದು, ದೇಶದ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದೆ. ನ್ಯೂಜಿಲೆಂಡ್ ವಿದೇಶಾಂಗ ಸಚಿವ ಮರೆ ಮೈಕಲಿ ಅವರೊಂದಿಗೂ ಕೃಷ್ಣ ಈ ವಿಷಯವನ್ನು ಚರ್ಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.