ಭಾನುವಾರ, ಮೇ 9, 2021
19 °C

ಭಾರಿ ಮಳೆಗೆ ತತ್ತರಿಸಿದ ಮುಂಬೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಐಎಎನ್‌ಎಸ್): ಮುಂಬೈನಲ್ಲಿ ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಹೊರವಲಯದ ರೈಲುಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ಭಾನುವಾರ  ಅಧಿಕಾರಿಗಳು ತಿಳಿಸಿದ್ದಾರೆ.ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅನೇಕ ತಗ್ಗು ಪ್ರದೇಶದಲ್ಲಿರುವ ನಗರಗಳು ಹಾಗೂ ಹೊರವಲಯ ಪ್ರವಾಹಪೀಡಿತವಾಗಿದ್ದು, ಮಹಾನಗರದಲ್ಲಿ ತೀವ್ರ ಹಾನಿಗೆ ಕಾರಣವಾಗಿವೆ.ಅನೇಕ ಪ್ರದೇಶಗಳಲ್ಲಿ ಕನಿಷ್ಠ  ಮೂರು ಅಡಿ ನೀರು ತುಂಬಿವೆ ಹಾಗೂ ಇನ್ನೂ ಕೆಲವು ಪ್ರದೇಶಗಳಲ್ಲಿ ನೀರಿನ ಮಟ್ಟ ಇದಕ್ಕಿಂತಲೂ ಹೆಚ್ಚಿದೆ ಎಂದು ವಿಪತ್ತು ನಿಯಂತ್ರಣ ಘಟಕ ಮಾಹಿತಿ ನೀಡಿದೆ.  ರೈಲ್ವೆ ಹಳಿಗಳು ಜಲಾವೃತವಾಗಿರುವ ಕಾರಣ ಕೇಂದ್ರ ರೈಲ್ವೆಯು ದಾದರ್ ಛತ್ರಪತಿ ಶಿವಾಜಿ ಟರ್ಮಿನಸ್ ಹಾಗೂ ಕುರ್ಲಾ ಛತ್ರಪತಿ ಶಿವಾಜಿ ಟರ್ಮಿನಸ್ ನಡುವಿನ ರೈಲು ಸಂಚಾರವನ್ನು ನಿಲ್ಲಿಸಿದೆ. ದೂರ ಮಾರ್ಗದ ಅನೇಕ ರೈಲುಗಳ ವೇಳಾಪಟ್ಟಿಯು ಮೂರರಿಂದ ಆರು ಗಂಟೆಗಳ ಕಾಲ ತಡವಾಗಿದೆ.ಭಾನುವಾರ ಮಧ್ಯಾಹ್ನ 2ಗಂಟೆವರೆಗೂ 10.5 ಸೆಂ.ಮೀ. ಮಳೆಯಾಗಿರುವುದು ದಾಖಲಾಗಿದೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.

ಮುಂದಿನ ಎರಡು ದಿನಗಳಲ್ಲಿ ಇದಕ್ಕಿಂತಲೂ ಹೆಚ್ಚು ಮಳೆಯಾಗುವ ಸಾಧ್ಯತೆಗಳಿದ್ದು, ಗಂಟೆಗೆ 50 ಕಿ.ಮೀಗಳಷ್ಟು ಮಳೆಯ ಬಿರುಸು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಮಹಾರಾಷ್ಟ್ರ ವರದಿ (ಐಎಎನ್‌ಎಸ್): ಮಹಾರಾಷ್ಟ್ರ ರಾಜ್ಯದಾದ್ಯಂತ ಅತಿ ಹೆಚ್ಚು ಮಳೆಯಾಗಿದೆ. ಈ ಬಾರಿ ಮುಂಗಾರು ಮಳೆಯಿಂದಾಗಿ ರೈತರ ಮುಖದಲ್ಲಿ ಹರ್ಷ ಮೂಡಿದೆ.ಭಾರಿ ಮಳೆಯಿಂದಾಗಿ ಚಿಕ್ಕ ಮಧ್ಯಮ ಗಾತ್ರದ  ಅಣೆಕಟ್ಟೆಗಳು  ಮಿತಿಮೀರಿ ಭರ್ತಿಯಾಗಿದ್ದು, ಜಲ್ನಾ ಹಾಗೂ ರತ್ನಗಿರಿ ಜಲಾಶಯಗಳಿಂದ ನೀರನ್ನು ಹೊರಬಿಡಲಾಗುತ್ತಿದೆ. ಆದರೆ ನಗರದಲ್ಲಿ ಯಾವುದೇ ಆಸ್ತಿ - ಪಾಸ್ತಿ ಹಾನಿಯ ಕುರಿತು ವರದಿಯಾಗಿಲ್ಲ.ಮಹಾರಾಷ್ಟ್ರದಲ್ಲಿ ಹೊಸ ಜಲ ನೀತಿ? ಮುಂಬೈ (ಪಿಟಿಐ): ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಮುಂಗಾರು ಮಳೆಗೂ ಮುನ್ನ ತೀವ್ರ ಬರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ರಾಷ್ಟ್ರೀಯ ಜಲ ನೀತಿಯ ಮಾದರಿಯಲ್ಲೇ ಹೊಸ ಜಲ ನೀತಿಯೊಂದನ್ನು ರೂಪಿಸುತ್ತಿದೆ.ರಾಷ್ಟ್ರೀಯ ಜಲ ನೀತಿ (ಎನ್‌ಡಬ್ಲ್ಯುಪಿ)ಯು ತಾನು ಪ್ರಕಟಿಸಿರುವ ಮಾರ್ಗಸೂಚಿಯಂತೆಯೇ ರಾಜ್ಯದ ಜಲ ನೀತಿಗಳನ್ನು ರೂಪಿಸಲು/ಪರಿಷ್ಕರಿಸಲು ನಿಬಂಧನೆಗಳನ್ನು ವಿಧಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಸರ್ಕಾರವು ರಾಜ್ಯದಲ್ಲಿ 2003ರಿಂದ ಜಾರಿಯಲ್ಲಿರುವ ಜಲ ನೀತಿಯನ್ನು ಪರಿಷ್ಕರಿಸಿ ಹೊಸ ಜಲ ನೀತಿ ರೂಪಿಸಲು ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಸಂಘ-ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು (ಎನ್‌ಜಿಓಗಳು) ಹಾಗೂ ಇತರ ನೀರು ಬಳಕೆದಾರರಿಂದ ಪ್ರತಿಕ್ರಿಯೆ, ಸಲಹೆಗಳನ್ನು ಆಹ್ವಾನಿಸಿದೆ ಎಂದು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.