ಶನಿವಾರ, ಜೂನ್ 19, 2021
23 °C

ಭಾವಪೂರ್ಣ ಹಾಡುಗಾರಿಕೆ ಉತ್ತಮ ಯುಗಳ ಗಾಯನ

ಪ್ರೊ. ಮೈಸೂರು ವಿ. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಬೆಂಗಳೂರು ಲಲಿತಕಲಾ ಪರಿಷತ್‌ನಲ್ಲಿ ಹಾಡಿದ ವಸುಧಾ ಕೇಶವ್ ಈಗ ಚೆನ್ನೈ ವಾಸಿಯಾದರೂ ಮೂಲತಃ ಮೈಸೂರಿನವರು. ಎಚ್. ಎಸ್. ಮಹಾಲಕ್ಷ್ಮಿ ಅವರಿಂದ ಪ್ರಾರಂಭಿಕ ಶಿಕ್ಷಣ ಪಡೆದು, ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ಕೆಲ ಕಾಲದಿಂದ ಪಿ.ಎಸ್. ನಾರಾಯಣಸ್ವಾಮಿ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ.ಆಕಾಶವಾಣಿ ರಾಷ್ಟ್ರೀಯ ಸಂಗೀತ ಸ್ಪರ್ಧೆ, ಬೆಂಗಳೂರು ಗಾಯನ ಸಮಾಜ, ಕರ್ನಾಟಕ ಗಾನಕಲಾ ಪರಿಷತ್ ಮುಂತಾದ ಸಂಸ್ಥೆಗಳಿಂದ ಬಹುಮಾನಗಳನ್ನು ಗಳಿಸಿರುವರಲ್ಲದೆ ದೇಶ-ವಿದೇಶಗಳಲ್ಲಿ ತಮ್ಮ ಗಾನಸುಧೆ ಹರಿಸಿದ್ದಾರೆ. ಬೋಧಕಿಯಾಗಿಯೂ ಹೆಸರು ಮಾಡುತ್ತಿದ್ದಾರೆ.ಡಾ. ಎಚ್. ನರಸಿಂಹಯ್ಯ ಕಲಾಕ್ಷೇತ್ರದಲ್ಲಿ ಕಳೆದ ಶುಕ್ರವಾರ ಹಾಡಿದ ವಸುಧಾ ಕೇಶವ್, ತಮ್ಮ ಕಛೇರಿಯನ್ನು ನಾಟ ರಾಗದ ವ್ಯಾಸರಾಜರ ಕೃತಿ `ಗಜಮುಖನೆ ಸಿದ್ಧಿದಾಯಕ~ದೊಂದಿಗೆ ಪ್ರಾರಂಭಿಸಿದರು. ಗಣೇಶನ ಮೇಲಿನ ಚರ್ವಿತ ರಚನೆಗಳಿಗಿಂತ ಭಿನ್ನವಾದ ಈ ದೇವರನಾಮ ಸ್ವಾಗತಾರ್ಹವಾಗಿತ್ತು.

 

ನಾಯಕಿ ರಾಗದ ಉತ್ತಮ ರಚನೆಗಳಲ್ಲಿ ಒಂದಾದ `ರಂಗನಾಯಕಂ ಭಾವಯೇ~ ಹಸನಾಗಿ ಮೂಡಿತು. `ನಮಾಮಿ ನಾರಾಯಣ~ವನ್ನು ಅನಿಬಿದ್ದವಾಗಿ ಹಾಡಿ, ಪುರಂದರ ದಾಸರ ಪ್ರಸಿದ್ಧ ಪದ `ನಾರಾಯಣ ನಿನ್ನ ನಾಮದ ಸ್ಮರಣೆಯ~ ತೆಗೆದುಕೊಂಡಾಗ ಸಭೆಯಲ್ಲಿ ಸಂತೋಷದ ವಾತಾವರಣ ಪಸರಿಸಿತು.ಶುದ್ಧ ಧನ್ಯಾಸಿ ರಾಗದಲ್ಲಿ ದೇವರನಾಮವನ್ನು ಹಾಡಿ, ನೆರವಲ್ (ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ)ನಿಂದ ವಿಸ್ತರಿಸಿದರು... `ಶ್ರಿಮಾತೃ ಭೂತಂ~ಗೆ ಹಾಕಿದ ರಾಗ- ಸ್ವರ ಮಿತವಾಗಿದ್ದರೂ ಪ್ರಭಾವಕಾರಿಯಾಗಿತ್ತು.ವಿಸ್ತಾರಕ್ಕೆ ವಸುಧಾ ಕೇಶವ್ ಮಧ್ಯಮಾವತಿ ರಾಗವನ್ನು ಆಯ್ದರು. ಸ್ವರದಿಂದ ಸ್ವರಕ್ಕೆ ಗಾಢ ಸಂಗತಿಗಳಿಂದ ಏರುತ್ತಾ ರಾಗದ ವರ್ಣರಂಜಿತ ಚಿತ್ರ ಬಿಡಿಸಿದರು. ಸಂತ ತ್ಯಾಗರಾಜರ ಒಂದು ಘನವಾದ ಕೀರ್ತನೆ `ರಾಮಕಥಾಸುಧಾ~ವನ್ನು ನೆರವಲ್‌ನೊಂದಿಗೆ (ಭಾಮಾಮಣಿ ಜಾನಕಿ ಸೌಮಿತ್ರಿ) ಅರಳಿಸಿದರು.ಈ ಕೃತಿಯಲ್ಲಿ ತ್ಯಾಗರಾಜರು ಶ್ರವಣಭಕ್ತಿಯ ಮಹಿಮೆಯನ್ನು ವರ್ಣಿಸಿದ್ದಾರೆ. ರಾಮಕಥೆಯು ಸರ್ವ ಕಾಲಕ್ಕೂ ಆದರ್ಶಪ್ರಾಯ ಎಂದು ಹೇಳಿ, `ರಾಮಕಥಾಮೃತವನ್ನು ಸೇವಿಸಿ ಮೋಕ್ಷ ಹೊಂದಿರಿ~ ಎಂದು ಸಾರುವ ಈ ಕೀರ್ತನೆಯು ಸಂಗೀತಗಾರರು, ಶ್ರೋತೃಗಳಿಬ್ಬರಿಗೂ ಪ್ರಿಯವಾದುದು.ವಸುಧಾ ತಮ್ಮ ಉತ್ತಮ ಕಂಠದಿಂದ ಸದಭಿರುಚಿಯ ಸಂಗತಿಗಳಿಂದ ಕೀರ್ತನೆಯು ಪ್ರಕಾಶಿಸುವಂತೆ ಮಾಡಿದರು. ಕೃತಿ ಮುಗಿಯುತ್ತಿದ್ದಂತೆಯೇ ಲಯವಾದ್ಯಗಾರರು (ಬಿ.ಎಸ್. ಆನಂದ್ ಮತ್ತು ದಯಾನಂದ್ ಮೋಹಿತೆ) ತನಿಯಲ್ಲಿ ತಮ್ಮ ಕೈಚಳಕ ತೋರಿದರು. ರಾಗಮಾಲಿಕೆಯ ಪದ (ವಡವರಯೈ) ಸಹ ರಂಜನೀಯವಾಗಿತ್ತು. ಹಿರಿಯರಾದ ಟಿ.ಟಿ. ಶ್ರಿನಿವಾಸನ್ ಪಿಟೀಲಿನಲ್ಲಿ ನೆರವಾದರು.ನಾದ ಮಂಥನ

ಡಾ. ಮೀನಾಕ್ಷಿ ರವಿ ಅವರು ಸಂಗೀತ ಮತ್ತು ವಿಜ್ಞಾನಗಳ ಅಪರೂಪ ಸಂಗಮ. ಸಂಗೀತ, ಮನೋವಿಜ್ಞಾನಗಳಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಸಮಾಜ ಸೇವೆ ಹಾಗೂ ಕೌನ್ಸೆಲಿಂಗ್‌ಗಳಲ್ಲಿ ಪರಿಣತಿ ಗಳಿಸಿದ್ದಾರೆ.ಸಂಗೀತವನ್ನು ಒಂದು ಚಿಕಿತ್ಸಕ ವಾಹಕವಾಗಿ ಬಳಸುತ್ತಾ ತಮ್ಮ `ಮೀರಾ ಸೆಂಟರ್ ಫಾರ್ ಮ್ಯೂಸಿಕ್ ತೆರಪಿ~ (ಮನೋಲ್ಲಾಸಿನಿ ಟ್ರಸ್ಟ್) ಮೂಲಕ ಸಂಶೋಧನೆ, ಚಿಕಿತ್ಸೆಗಳೆರಡನ್ನೂ ಮಾಡುತ್ತಿದ್ದಾರೆ. ಇದೀಗ ಅವರು ಬರೆದಿರುವ `ನಾದ ಮಂಥನ~ ಪುಸ್ತಕವನ್ನು (ಇಂಗ್ಲಿಷ್ ಮತ್ತು ಕನ್ನಡ ಆವೃತ್ತಿಗಳೆರಡರಲ್ಲೂ) ಅನಾವರಣಗೊಳಿಸಲಾಯಿತು.ನಂತರ ನಡೆದ ಸಂಗೀತ ಕಾರ್ಯಕ್ರಮ ವೃಂದಗಾನದೊಂದಿಗೆ ಪ್ರಾರಂಭವಾಯಿತು. ತೀರಾ ಎಳೆಯ 25 ಮಕ್ಕಳು ಡಾ. ಮೀನಾಕ್ಷಿ ರವಿ ಅವರ `ಸಪ್ತಸ್ವರಗಳ ಸಂಗಮ~ವನ್ನು ಮುದ್ದು ಮುದ್ದಾಗಿ ಹಾಡಿದರು. ಅದನ್ನು ಮುಂದುವರೆಸಿ `ಶರಣು ಶರಣು~ವನ್ನು ಸರಳವಾಗಿ ನಿರೂಪಿಸಿದರು. ಈ ಮಕ್ಕಳ ಬೆಳವಣಿಗೆ ಕುತೂಹಲಕಾರಿ ಆಗಿದೆ.ನಂತರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಶ್ಯಾಮಾಶಾಸ್ತ್ರಿಗಳ ರಚನೆಗಳ ಗಾಯನ ನಡೆಯಿತು. ಕರ್ನಾಟಕ ಸಂಗೀತದ ತ್ರಿಮೂರ್ತಿಗಳು ಶ್ಯಾಮಾಶಾಸ್ತ್ರಿ, ಮುತ್ತುಸ್ವಾಮಿ ದೀಕ್ಷಿತರು ಮತ್ತು ತ್ಯಾಗರಾಜರು.ಇವರಲ್ಲಿ ಹಿರಿಯರೇ ಶ್ಯಾಮಾಶಾಸ್ತ್ರಿಗಳು (1762-1827). ಬಂಗಾರು ಕಾಮಾಕ್ಷಿಯ ಆರಾಧಕರು. ಸಂಸ್ಕೃತ, ತೆಲುಗು ಮತ್ತು ತಮಿಳಿನಲ್ಲಿ ಉತ್ಕೃಷ್ಟವಾದ ರಚನೆಗಳನ್ನು ಮಾಡಿದ್ದಾರೆ. ರಾಗಭಾವ ಸಹಜ ಬೆಳವಣಿಗೆ ಇರುವ ರಚನೆ ಕರುಣಾ ರಸ ಪ್ರಧಾನವಾಗಿವೆ. ಪಾಂಡಿತ್ಯ ಮತ್ತು ಭಕ್ತಿಭಾವ ಎರಡೂ ಇವರ ಕೃತಿಗಳಲ್ಲಿ ಮೇಳೈಸಿವೆ.ಇವರ ಕೃತಿಗಳಲ್ಲಿ ಪಂಚ ನಡೆಗಳ ಸೊಬಗನ್ನು ಕಾಣಬಹುದು. ಅವರು ಸುಮಾರು 300 ಕೃತಿಗಳನ್ನು ರಚಿಸಿದ್ದರು ಎಂದು ತಿಳಿದು ಬರುವುದಾದರೂ ಲಭ್ಯವಿರುವುದು ಕೆಲವೇ ಕೃತಿಗಳು! ಅವುಗಳಲ್ಲಿ ಆಯ್ದ ಕೆಲವನ್ನು ಮಧು ಕಶ್ಯಪ್ ಮತ್ತು ಎಚ್.ಜಿ. ಕೃತಿ ಹಾಡಿದರು.

 

ಯುವ ದಂಪತಿ ಮಧು ಮತ್ತು ಕೃತಿ ಪ್ರಖ್ಯಾತ ಭೈರವಿ ಸ್ವರಜತಿಯೊಂದಿಗೆ ಗಾಯನ ಪ್ರಾರಂಭಿಸಿದರು. ಆದಪಯ್ಯನವರ ಪ್ರಭಾವವೂ ಇರುವ ಈ ಸ್ವರಜತಿಯಲ್ಲಿ ರಾಗಭಾವ ಮಡುಗಟ್ಟಿದೆ.ಆನಂದಭೈರವಿಯ ಕೃತಿ ಮೆಲುಕು ಹಾಕುವಂಥದು. ಕೀರವಾಣಿಯ ರಾಗಾಲಾಪನೆ ಕಿರಿದಾಗಿದ್ದರೂ ಲಾಲಿತ್ಯಪೂರ್ಣ ಸಂಗತಿಗಳಿಂದ ಬೆಳಗಿತು. ನೆರವಲ್, ಸ್ವರಪ್ರಸ್ತಾರಗಳಿಂದ `ಬಂಗಾರು ಕಾಮಾಕ್ಷಿ ` ಭಾವಪೂರ್ಣವಾಗಿ ಬೆಳೆಸಿದ ಬಗೆಯೇ ಶ್ಲಾಘನೀಯ. ಮಧು ಕಶ್ಯಪ್ ಮತ್ತು ಕೃತಿ ಅವರ ಭವಿಷ್ಯ ಆಶಾದಾಯಕ.ಪಿಟೀಲಿನಲ್ಲಿ ಸಂಧ್ಯಾ ಶ್ರಿನಾಥ್, ಮೃದಂಗದಲ್ಲಿ ಎನ್. ಜಿ. ರವಿ ಹಾಗೂ ಮೋರ್ಚಿಂಗ್‌ನಲ್ಲಿ ಎಂ. ಗುರುರಾಜ್ ಉತ್ತಮ ಸಹಕಾರ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.