ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಖರೀದಿ, ರೆಡ್ಡಿ ವ್ಯವಹಾರ ವಿವರ ಕೊಡಿ: ರಾಜ್ಯಪಾಲರ ಚಾಟಿ

Last Updated 17 ಡಿಸೆಂಬರ್ 2010, 6:45 IST
ಅಕ್ಷರ ಗಾತ್ರ
ಭೂಖರೀದಿ, ರೆಡ್ಡಿ ವ್ಯವಹಾರ ವಿವರ ಕೊಡಿ: ರಾಜ್ಯಪಾಲರ ಚಾಟಿ
ADVERTISEMENT

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದ ಸದಸ್ಯರು ಅಕ್ರಮವಾಗಿ ಕೃಷಿ ಭೂಮಿ ಖರೀದಿಸಿರುವುದು ಮತ್ತು ಬಳ್ಳಾರಿಯ ಮೂವರು ಸಚಿವರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಬುಧವಾರ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಸಚಿವರಾದ ಜಿ.ಜನಾರ್ದನ ರೆಡ್ಡಿ, ಜಿ.ಕರುಣಾಕರ ರೆಡ್ಡಿ ಮತ್ತು ಬಿ.ಶ್ರೀರಾಮುಲು ಅವರ ಎಲ್ಲ ವ್ಯವಹಾರಗಳ ಕುರಿತು ವಿವರವಾದ ಮಾಹಿತಿ ನೀಡುವಂತೆ ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ. ಜನಾರ್ದನ ರೆಡ್ಡಿ ಅವರು ಸಿಂಗಪುರದಲ್ಲಿ ಕಂಪೆನಿಯೊಂದನ್ನು ಆರಂಭಿಸಿ, ಅದನ್ನು ಗಣಿಗಾರಿಕೆ ವ್ಯವಹಾರದಲ್ಲಿ ತೆರಿಗೆ ವಂಚನೆಗೆ ಬಳಸಿಕೊಂಡಿದ್ದಾರೆ ಎಂಬುದು ಇತ್ತೀಚೆಗೆ ನಡೆದ ಆದಾಯ ತೆರಿಗೆ ದಾಳಿಯಲ್ಲಿ ಪತ್ತೆಯಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಮಾಹಿತಿ ಬಯಸಿರುವುದಾಗಿ ತಿಳಿಸಿದ್ದಾರೆ.

‘ಬಳ್ಳಾರಿಯಲ್ಲಿ ಮೂವರು ಸಚಿವರಿಂದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ದೂರುಗಳು ಬಹಳ ಹಿಂದೆಯೇ ನನಗೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಮೂವರೂ ಸಚಿವರ ಆರ್ಥಿಕ ವ್ಯವಹಾರಗಳ ಕುರಿತು ಮಾಹಿತಿ ಒದಗಿಸುವಂತೆ 2010ರ ಫೆಬ್ರುವರಿ ಮತ್ತು ಏಪ್ರಿಲ್‌ನಲ್ಲಿ ಎರಡು ಪತ್ರಗಳನ್ನು ಬರೆದಿದ್ದೆ. ಆದರೆ ನಿಮ್ಮ ಕಡೆಯಿಂದ ಈವರೆಗೂ ಪ್ರತಿಕ್ರಿಯೆ ಬಂದಿಲ್ಲ’ ಎಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಧಿಕಾರದಲ್ಲಿ ಇರಬಹುದೇ?: ‘ಸಚಿವ ಜನಾರ್ದನ ರೆಡ್ಡಿ ಅವರು ತೆರಿಗೆ ವಂಚನೆಯಲ್ಲಿ ಭಾಗಿಯಾಗಿರುವುದು ಆದಾಯ ತೆರಿಗೆ ಇಲಾಖೆ ಪರಿಶೀಲನೆಯಲ್ಲಿ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ದೇಶದ ಕಾನೂನು ಜಾರಿ ಸಂಸ್ಥೆಗಳಿಂದಲೇ ಇಂತಹ ಗಂಭೀರ ಆರೋಪ ಎದುರಿಸುತ್ತಿರುವ ವ್ಯಕ್ತಿ ರಾಜ್ಯದ ಸಚಿವ ಸಂಪುಟದಲ್ಲಿ ಮುಂದುವರಿಯಬಹುದೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ’ ಎಂದೂ ಭಾರದ್ವಾಜ್ ಹೇಳಿದ್ದಾರೆ.

ಭೂ ಹಗರಣದ ವಿವರ: ಮುಖ್ಯಮಂತ್ರಿಯೂ ಸೇರಿದಂತೆ ಸರ್ಕಾರದಲ್ಲಿ ಇರುವವರು ಅಧಿಕಾರ ದುರ್ಬಳಕೆ ಮತ್ತು ಸ್ವಜನ ಪಕ್ಷಪಾತ ನಡೆಸಿರುವ ಬಗ್ಗೆ ಆರೋಪಗಳು ಪದೇಪದೇ ಕೇಳಿಬರುತ್ತಿವೆ. ಸರ್ಕಾರದಲ್ಲಿ ನಡೆದಿರುವ ಭೂಹಗರಣಗಳ ಬಗ್ಗೆ ಮಾಧ್ಯಮಗಳು ದಿನನಿತ್ಯ ವರದಿ ಪ್ರಕಟಿಸುತ್ತಿವೆ. ಈ ಬಗ್ಗೆಯೂ ಸಮಗ್ರ ಮಾಹಿತಿ ಒದಗಿಸಬೇಕು ಎಂದು ಯಡಿಯೂರಪ್ಪ ಅವರಿಗೆ ಪತ್ರದಲ್ಲಿ ಸೂಚಿಸಿದ್ದಾರೆ.

‘ಅಧಿಕಾರ ದುರ್ಬಳಕೆ ಮತ್ತು ಸ್ವಜನ ಪಕ್ಷಪಾತ ನಡೆಸಿ ಭೂ ಕಬಳಿಕೆ ಮಾಡಿರುವ ಆರೋಪ ಮುಖ್ಯಮಂತ್ರಿಯವರ ಮೇಲೆಯೇ ಇದೆ. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಖಾತೆಯ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ವಿರುದ್ಧವೂ ಇದೇ ಆರೋಪಗಳಿವೆ. ಈಗ ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಸದಸ್ಯರು ಅಕ್ರಮವಾಗಿ ಕೃಷಿ ಭೂಮಿ ಖರೀದಿಸಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆಯೂ ವಿವರಣೆ ನೀಡಬೇಕು’ ಎಂದು ತಿಳಿಸಿದ್ದಾರೆ.

‘ಈ ವಿಷಯಗಳು ರಾಜ್ಯದ ಎಲ್ಲ ಜನತೆಗೂ ಸಂಬಂಧಿಸಿವೆ. ಆದ್ದರಿಂದ ಒಂದು ವಾಸ್ತವಿಕ ವರದಿಯನ್ನು ನನಗೆ ಕಳುಹಿಸಿಕೊಡಿ’ ಎಂದು ರಾಜ್ಯಪಾಲರು ಪತ್ರದಲ್ಲಿ ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT