ಸೋಮವಾರ, ಜೂನ್ 14, 2021
26 °C
ಸರ್ವೆ ನಂ. 4ರ 7.20 ಎಕರೆ ಭೂಮಿ

ಭೂಮಿ ದಾನ: ತನಿಖೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು:  ಸಾಕಷ್ಟು ವಿವಾದ ಸೃಷ್ಟಿ­ಸಿದ್ದ ಕುರುಬಾರಹಳ್ಳಿ ಸರ್ವೆ ನಂ. 4 ಈಗ ಮತ್ತೆ ಸುದ್ದಿಯಾಗಿದೆ. ಸರ್ವೆ ನಂ. 4ರ ಭೂಮಿ ಸರ್ಕಾರಿ ಭೂಮಿ ಎಂದು ಘೋಷಿಸಿದ್ದರೂ ಇದೇ ಸರ್ವೆ ನಂಬರ್‌­ನಲ್ಲಿ 7.20 ಎಕರೆ ಭೂಮಿಯನ್ನು ಖಾಸಗಿ ವ್ಯಕ್ತಿಯೊಬ್ಬರು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರಿಂದ ದಾನವಾಗಿ ಪಡೆದಿರುವುದು ಬೆಳಕಿಗೆ ಬಂದಿದೆ.‘ಲಲಿತ್‌ ಮಹಲ್‌ ಪ್ಯಾಲೇಸ್‌ ಪಕ್ಕ ಇರುವ ಹೆಲಿಪ್ಯಾಡ್‌ ಸೇರಿದಂತೆ ಒಟ್ಟು 7.20 ಎಕರೆ ಪ್ರದೇಶವನ್ನು ಬೆಂಗ­ಳೂರಿನ ಬಾಪೂಜಿನಗರ ನಿವಾಸಿ ವಿ.ಸಿ. ವೆಂಕಟೇಶ್‌ ಎಂಬುವರು  ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರಿಂದ 2013ರ ಏಪ್ರಿಲ್‌ 25ರಂದು ದಾನವಾಗಿ ಪಡೆದಿದ್ದಾರೆ. ಇದು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಆಗಿದೆ. ಅಲ್ಲದೆ, ಇದು ಪಾಲಿಕೆಯಲ್ಲಿ ಖಾತೆ ಸಹ ಆಗಿದೆ.ಸರ್ವೆ ನಂ. 4 ಸರ್ಕಾರಿ ಭೂಮಿ ಎಂದು ಸರ್ಕಾರ ಘೋಷಿಸಿದೆ. ಅಂದ ಮೇಲೆ ಸರ್ಕಾರಿ ಭೂಮಿಯನ್ನು ಹೇಗೆ ದಾನವಾಗಿ ಬರೆಸಿಕೊಳ್ಳಲಾಗಿದೆ. ಮೇಲ್ನೋಟಕ್ಕೆ ಇದು ನಕಲಿ ಎಂಬಂತೆ ಕಂಡು ಬರುತ್ತಿದೆ. ಈ ಕುರಿತು ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಬೇಕು’ ಎಂದು ಪಾಲಿಕೆ ಸದಸ್ಯ ಸಂದೇಶ್‌ ಸ್ವಾಮಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.‘ಕುರುಬಾರಹಳ್ಳಿ ವ್ಯಾಪ್ತಿಗೆ ಬರುವ ಸರ್ವೆ ನಂ. 4ರ ಭೂಮಿಯ ಮಾರಾಟ, ಪ್ಲಾನ್‌, ಖಾತೆ ಎಲ್ಲವನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿದೆ. ಇದು ಸರ್ಕಾರಿ ಭೂಮಿಯಾಗಿದ್ದು, ಯಾರಿಗೂ ಮಾರಾಟ ಮಾಡು­ವಂತಿಲ್ಲ. ಆದರೆ, ಒಡೆಯರ್‌ ಅವರಿಂದ ವೆಂಕ­ಟೇಶ್‌ ಅವರು ದಾನ ಪಡೆ­ದಿದ್ದಾರೆ. ಅಲ್ಲದೆ, ಒಡೆಯರ್‌ ಅವರ ಸಹಿ ನಕಲಿಯಂತೆ ಕಾಣುತ್ತದೆ. ಇದೀಗ ಭೂಮಿಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಸಿದ್ಧತೆ ನಡೆ­ಯುತ್ತಿದೆ.ಈ ಬಗ್ಗೆ ತನಿಖೆ ಮಾಡಲಾ­ಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದರು. ಆದರೆ, ಇದು­ವರೆಗೂ ಯಾವುದೇ ತನಿಖೆ ಆಗಿಲ್ಲ. ಜಿಲ್ಲಾ­ಡಳಿತ ಎಚ್ಚೆತ್ತುಕೊಳ್ಳದೇ ಇದ್ದರೆ ಅರಮನೆಯನ್ನೇ ನೋಂದಣಿ ಮಾಡ­ಬೇಕಾಗುತ್ತದೆ. ಕೂಡಲೇ ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.ಕರಪಾವತಿ ನೋಂದಣಿ, ರಹದಾರಿ ರದ್ದು: ‘ಸಿದ್ಧಾರ್ಥನಗರ ವಿನಯ ಮಾರ್ಗ 9ನೇ ಮುಖ್ಯರಸ್ತೆ, 2ನೇ ಅಡ್ಡ­ರಸ್ತೆ ನಿವಾಸಿ, ಪ್ರಕಾಶ್‌ ಎಂಬುವರು ಹಳೆ­ಮನೆ ನೆಲಸಮ ಮಾಡಿ, ಹೊಸ­­ದಾಗಿ ಮನೆ ಕಟ್ಟಲು ಪ್ಲಾನ್‌ ಮಂಜೂರಿಗೆ ಅರ್ಜಿ ಸಲ್ಲಿಸಿದ್ದರು. ಅದೆ ಸರ್ವೆ ನಂ. 4ರ ಜಮೀನುಗಳಿಗೆ ಸಂಬಂಧಿಸಿದ ಯಾವುದೇ ಕರಪಾವತಿ ನೋಂದಣಿ/ವರ್ಗಾವಣೆ ಮತ್ತು ರಹದಾರಿಯನ್ನು ಮುಂದಿನ ಆದೇಶದವರೆಗೆ ಮಾಡದಂತೆ ಪಾಲಿಕೆ ಆಯುಕ್ತರು ಸೂಚಿಸಿದ್ದಾರೆ.ಇದರಿಂದ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ನಿರ್ಬಂಧವನ್ನು ಕೂಡಲೇ ತೆಗೆದುಹಾಕಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪರಿಶೀಲಿಸಿ ಕ್ರಮ

ಕುರುಬಾರಹಳ್ಳಿ ಸರ್ವೆ ನಂ. 4ರ ವಿವಾದಿತ ಭೂಮಿಯನ್ನು ಸರ್ಕಾರ ತನಿಖೆಗೆ ಈಗಾಗಲೇ ಆದೇಶಿಸಿದೆ. ನಿವೃತ್ತ ಐಎಎಸ್‌ ಅಧಿಕಾರಿ ನಾರಾಯಣಸ್ವಾಮಿ ತನಿಖೆ ನಡೆಸುತ್ತಿದ್ದಾರೆ. ಇದೇ ಸರ್ವೆ ನಂಬರ್ ವ್ಯಾಪ್ತಿಗೆ ಬರುವ 7.20 ಎಕರೆ ಭೂಮಿಯನ್ನು ಖಾಸಗಿ ವ್ಯಕ್ತಿಯೊಬ್ಬರು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರಿಂದ  ದಾನವಾಗಿ ಪಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ದಾಖಲೆಗಳಿದ್ದರೆ ಅದನ್ನು ಪರಿಶೀಲಿಸಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.

–ಸಿ. ಶಿಖಾ, ಜಿಲ್ಲಾಧಿಕಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.