ಸೋಮವಾರ, ಮೇ 23, 2022
24 °C

ಭೂ ಸ್ವಾಧೀನ ಪ್ರಕ್ರಿಯೆಗೆ ರೈತರ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ರಾಷ್ಟ್ರೀಯ ಹೆದ್ದಾರಿ-209 ನಿರ್ಮಾಣಕ್ಕಾಗಿ ಸಣ್ಣ ಹಿಡುವಳಿದಾರರ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ರೈತರ ಜೊತೆ ಸಮಾಲೋಚನೆ ನಡೆಸಿದ ನಂತರ ಮಾತ್ರ ಮುಂದುವರಿಸಬೇಕು ಎಂದು ಬಿ.ಎಸ್.ಪಿ. ಮುಖಂಡ ಎನ್. ಮಹೇಶ್ ಒತ್ತಾಯಿಸಿದರು.ಪಟ್ಟಣದಲ್ಲಿ ರೈತರು, ದಲಿತಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ತಾಲ್ಲೂಕು ಕಚೇರಿ ಮುಂಭಾಗ ಮಂಗಳವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.ಸತ್ತೇಗಾಲದಿಂದ ಚಾಮರಾಜನಗರದವರೆಗೆ ಸುಮಾರು 4 ಸಾವಿರಕ್ಕೂ ಹೆಚ್ಚು ಸಣ್ಣ ಹಿಡುವಳಿದಾರರ ಜಮೀನನ್ನು ಅವರ ಗಮನಕ್ಕೂ ತರದೆ, ಸ್ವಾಧೀನಕ್ಕೆ ಮುಂದಾಗಿರುವುದು ಅಮಾನವೀಯ ಹಾಗೂ ರೈತ ವಿರೋಧಿ ಕ್ರಮ ಎಂದು ದೂರಿದರು.ರಾಷ್ಟ್ರಿಯ ಹೆದ್ದಾರಿ 209ಕ್ಕೆ ಈ ಹಿಂದೆ ಕೈಗೊಂಡ 3 ಹಂತದ ನಿರ್ಣಯಗಳನ್ನು ಕೈಬಿಟ್ಟಿರುವುದು ಏಕೆ? ಎಂದು ಪ್ರಶ್ನಿಸಿದರು. ಸರ್ಕಾರ ಸಣ್ಣ ಹಿಡುವಳಿದಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಜಮೀನು ಸ್ವಾಧೀನ ಕಾರ್ಯಕ್ರಮ ಮುಂದಾಗಿರುವುದು ಮಾನವ ಹಕ್ಕು ಉಲ್ಲಂಘನೆ ಎಂದು ಟೀಕಿಸಿದರು.ಜಿಲ್ಲಾಧಿಕಾರಿಗಳು ಮತ್ತು ಅಧಿಕಾರಿಗಳು ಭೂಮಿ ಕಳೆದುಕೊಳ್ಳುತ್ತಿರುವ ರೈತರ ಸಮ್ಮುಖದಲ್ಲಿ ದಿನಾಂಕ ನಿಗದಿಪಡಿಸಿ ಸಮಸ್ಯೆಗಳನ್ನು ಕೇಳಬೇಕು. ರೈತರನ್ನು ಕಡೆಗಣಿಸಿ ಜಮೀನು ಸ್ವಾಧೀನಕ್ಕೆ ಮುಂದಾದಲ್ಲಿ ಮುಂದೆ ಉಂಟಾಗುವ ಎಲ್ಲ ಅನಾಹುತಗಳಿಗೂ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.ಉಪವಿಭಾಗಾಧಿಕಾರಿ ಎಚ್.ಎಸ್.  ಸತೀಶ್‌ಬಾಬು ಅವರಿಗೆ ಮನವಿ ಸಲ್ಲಿಸಿ ಸರ್ಕಾರ ಗಮನ ಸೆಳೆಯುವಂತೆ ಮನವಿ ಮಾಡಿದರು.

ಮೆರವಣಿಗೆ:  ಪಟ್ಟಣದ ಬಸ್‌ನಿಲ್ದಾಣದ ಗಣಪತಿ ದೇವಾಲಯದಿಂದ ರೈತರು ಮತ್ತು ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಹೆದ್ದಾರಿ ಭೂ ಸ್ವಾಧೀನ ಪ್ರಕ್ರಿಯೆ ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.ಡಾ.ರಾಜ್‌ಕುಮಾರ್‌ರಸ್ತೆ, ಡಾ. ಅಂಬೇಡ್ಕರ್ ರಸ್ತೆ ಸೇರಿದಂತೆ ಇತರೆ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿ ತಾಲ್ಲೂಕು ಕಚೇರಿ ತಲುಪಿದರು.ಪ್ರತಿಭಟನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ಸಂಸದರು, ಶಾಸಕರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.ರೈತಮುಂಖಂಡ ಅಣಗಳ್ಳಿ ಬಸವರಾಜು, ಬಿಎಸ್‌ಪಿ ಮುಖಂಡ ಶಿವಮಲ್ಲು, ಜಗದೀಶ್, ದೊಡ್ಡಿಂದುವಾಡಿ ಸಿದ್ದರಾಜು, ನಗರಸಭೆ ಸದಸ್ಯ ರಾಮಕೃಷ್ಣ, ರಂಗಸ್ವಾಮಿ, ಮಂಟಯ್ಯ, ಪ್ರಭಾ, ಸಿದ್ದರಾಜನಾಯಕ, ಹರೀಶ, ಲಕ್ಷ್ಮಣಸ್ವಾಮಿ, ಶಿವನಂಜಪ್ಪ, ನೀಲಯ್ಯ, ನಿಂಗರಾಜು, ಬಸಂತ್, ಸೋಮಣ್ಣ, ನರೀಪುರ ಸಿದ್ದರಾಜು, ಇತರರು ಇದ್ದರು.ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನದ ಬಗ್ಗೆ ರೈತರ ಸಭೆಯನ್ನು ಪಟ್ಟಣದಲ್ಲಿ ಶೀಘ್ರ ನಡೆಸಿ ಅವರ ಸಮಸ್ಯೆಗಳನ್ನು ಆಲಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಸುರೇಶ್‌ಕುಮಾರ್ ತಿಳಿಸ್ದ್ದಿದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.