ಭಾನುವಾರ, ಮೇ 22, 2022
21 °C

ಭ್ರಷ್ಟಾಚಾರ ಅಟ್ಟಲು ಹೋರಾಟ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡರಗಿ: ‘ಬ್ರಿಟಿಷರನ್ನು ದೇಶದಿಂದ ಹೊರಹಾಕಲು ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳವಳಿ ಪ್ರಾರಂಭಿಸಿದಂತೆ ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ, ಅನ್ಯಾಯ, ಅಕ್ರಮ, ರಾಜಕೀಯ ಒಳಜಗಳಗಳನ್ನು ಹೊರಹಾಕಲು ಭಾರತೀಯರೆಲ್ಲ ಒಂದಾಗಿ ಪುನಃ ಹೋರಾಡಬೇಕಿದೆ’ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಹೇಳಿದರು. ಸ್ಥಳೀಯ ಜಗದ್ಗುರು ಅನ್ನದಾನೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಶ್ರಿಮಠದಲ್ಲಿ ಏರ್ಪಡಿಸಿದ್ದ ಜಿಲ್ಲಾ ತೃತೀಯ ಚುಟುಕು ಸಾಹಿತ್ಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಜಗತ್ತಿನೆಲ್ಲಡೆ ಅಗಾಧವಾಗಿ ಬೆಳೆಯುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜಗದ ಒಳಿತಿಗೆ ಬಳಸಿಕೊಳ್ಳಬೇಕು. ಇಲ್ಲದಿದ್ದರೆ ಮನುಕುಲದ ಉದ್ಧಾರಕ್ಕಾಗಿ ಆವಿಷ್ಕಾರಗೊಂಡಿರುವ ವಿಜ್ಞಾನವು ಮನಕುಲವನ್ನು ಸರ್ವನಾಶ ಮಾಡುವ ಸಾಧ್ಯತೆ ಇದೆ’ ಎಂದು ಅವರು ಎಚ್ಚರಿಸಿದರು.‘ಪತ್ರಿಕೆಗಳ ಖಾಲಿ ಸ್ಥಳವನ್ನು ತುಂಬಲು ಮಾತ್ರ ಸೀಮಿತವಾಗಿದ್ದ ಚುಟುಕು ಸಾಹಿತ್ಯ ಇಂದು ಅಗಾಧವಾಗಿ ಬೆಳೆದಿದ್ದು, ಸಾಹಿತ್ಯದಲ್ಲಿ ಒಂದು ಭದ್ರಸ್ಥಾನ ಪಡೆದುಕೊಂಡಿದೆ. ಜಗತ್ತಿನ ಶ್ರೇಷ್ಠ ಸಾಹಿತಿಗಳೆಲ್ಲ ಚುಟುಕು ಸಾಹಿತ್ಯದಲ್ಲಿ ಕೃಷಿ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ’ ಎಂದು ಚುಟುಕು ಸಾಹಿತ್ಯ ಪರಿಷತ್  ಕೇಂದ್ರ ಸಮಿತಿಯ ಪ್ರಧಾನ ಸಂಚಾಲಕ ಡಾ.ಎಂ.ಜಿ.ಆರ್. ಅರಸು ತಿಳಿಸಿದರು. ಡಾ.ಅನ್ನದಾನೀಶ್ವರ ಸ್ವಾಮಿಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಚುಸಾಪ ಜಿಲ್ಲಾ ಅಧ್ಯಕ್ಷ ಡಿ.ವಿ. ಬಡಿಗೇರ ಮತ್ತಿತರರು ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾ.ಅನ್ನದಾನೀಶ್ವರ ಸ್ವಾಮಿಜಿಯವರ ‘ಆಯ್ದ ಚುಟುಕುಗಳು’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರಿಗೆ ‘ಚುಟುಕು ಸಾಹಿತ್ಯ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.ವೇದಿಕೆಯ ಮೇಲೆ ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ, ವಿರಕ್ತ ಮಠದ ಚನ್ನವೀರ ದೇವರು, ಎಂ.ಚಂದ್ರಶೇಖರ, ರತ್ನಾ ಹಾಲಪ್ಪಗೌಡರ, ಚುಸಾಪ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎಸ್.ಹಿಂಡಿ, ಕಾರ್ಯದರ್ಶಿ ಗುಲಾಬಸಿಂಗ್, ಅಮೃತೇಶ ಹೊಸಳ್ಳಿ, ವೈ.ವೈ.ಅಂಬಿಗೇರ, ಪಾಂಡುರಂಗ ಓಸೇಕರ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಆರ್.ಎಲ್. ಪೋಲೀಸಪಾಟೀಲ ಸರ್ವರನ್ನು ಸ್ವಾಗತಿಸಿದರು. ರತ್ನಾ ಅಂಗಡಿ ಕಾರ್ಯಕ್ರಮ ನಿರೂಪಿಸಿದರು. ನಂತರ ಜಿಲ್ಲಾ ಚುಟುಕು ಕವಿಗೋಷ್ಠಿ ಜರುಗಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.