ಶುಕ್ರವಾರ, ಮೇ 27, 2022
28 °C

ಭ್ರಷ್ಟಾಚಾರ, ಭಯೋತ್ಪಾದನೆ ಎಂದೆಂದಿಗೂ ಅಸಮರ್ಥನೀಯ: ಆರೆಸ್ಸೆಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ‘ಭ್ರಷ್ಟಾಚಾರವನ್ನು ಯಾವತ್ತೂ ಸಮರ್ಥಿಸಲಾಗದು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಪಷ್ಟಪಡಿಸಿದೆ.ಇಲ್ಲಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ಪ್ರಾಂಗಣದಲ್ಲಿ ಶುಕ್ರವಾರ ಆರಂಭವಾದ ಆರ್‌ಎಸ್‌ಎಸ್‌ನ ಮೂರು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪ್ರಯುಕ್ತ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖ್ ಡಾ. ಮನಮೋಹನ ವೈದ್ಯ ಮಾತನಾಡಿ, ‘ಸಂಘವು ಈ ಬಾರಿಯ ಸಭಾದಲ್ಲಿ ದೇಶದ ಭ್ರಷ್ಟಾಚಾರ ಹಾಗೂ ನೆರೆಯ ಚೀನಾ ದೇಶದಿಂದ ಎದುರಾಗಬಹುದಾದ ಬೆದರಿಕೆ ಬಗ್ಗೆ ಪ್ರಮುಖವಾಗಿ ಚರ್ಚಿಸಲಿದೆ’ ಎಂದರು.ರಾಜ್ಯದ ಕೆಲವು ಬಿಜೆಪಿ ಮುಖಂಡರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಭ್ರಷ್ಟಾಚಾರ ವ್ಯಕ್ತಿ ಅಥವಾ ಪಕ್ಷಕ್ಕೆ ಸೀಮಿತವಾದುದಲ್ಲ. ಇದೊಂದು ಸಾಮಾಜಿಕ ಪಿಡುಗು. ಭ್ರಷ್ಟಾಚಾರಕ್ಕೆ ಸಂಬಂಧಿಸಿ ಯಾರನ್ನೂ ಪ್ರತ್ಯೇಕ ಪಡಿಸುವುದಾಗಲೀ, ನಿರ್ದಿಷ್ಟ ವ್ಯಕ್ತಿಯನ್ನು ಗುರಿ ಪಡಿಸುವುದಾಗಲೀ ಸೂಕ್ತವಲ್ಲ’ ಎಂದರು.‘ದೇಶದಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ಪ್ರಕರಣಗಳು ಹೊರಬರುತ್ತಿವೆ. ಕಾಮನ್ವೆಲ್ತ್ ಗೇಮ್ಸ್, ಸಿವಿಸಿ ಹಗರಣಗಳೆಲ್ಲ ಭ್ರಷ್ಟಾಚಾರದ ತುಣುಕು ಮಾತ್ರ. ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಸಮಾಜದ ಎಲ್ಲ ವರ್ಗದ ಜನರೂ ಈ ಬಗ್ಗೆ ಚಿಂತಿತರಾಗಿದ್ದಾರೆ. ಇದನ್ನು ತಡೆಗಟ್ಟುವ ಕಾರ್ಯಾಚರಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಭ್ರಷ್ಟಾಚಾರಕ್ಕೆ ಕಾರಣ ಬಡವರಾಗಲೀ, ಹಿಂದುಳಿದವರಾಗಲೀ ಅಥವಾ ಅಶಿಕ್ಷಿತರಾಗಲೀ ಅಲ್ಲ. ಶಿಕ್ಷಿತರು ಹಾಗೂ ಗಣ್ಯ ವ್ಯಕ್ತಿಗಳೇ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ವ್ಯಕ್ತಿ, ವ್ಯವಸ್ಥೆ ಅಥವಾ ಚುನಾವಣಾ ವ್ಯವಸ್ಥೆ ಕಾರಣವೇ ಎಂಬ ಬಗ್ಗೆ ವಿಚಾರ ಮಾಡಬೇಕು’ ಎಂದು ಅವರು ಖೇದ ವ್ಯಕ್ತಪಡಿಸಿದರು.‘ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಶಿಕ್ಷಣದಲ್ಲಿ ಹಾಗೂ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ತರಬೇಕಾದ ಮಾರ್ಪಾಡಿನ ಬಗ್ಗೆ ಹಾಗೂ ರಾಜಕೀಯ ಅಧಿಕಾರ ದುರ್ಬಳಕೆ ಬಗ್ಗೆ ಚಿಂತನೆ ನಡೆಯಬೇಕು. ತಕ್ಷಣ ಹಾಗೂ ದೂರಗಾಮಿ ಯೋಜನೆಗಳನ್ನು ರೂಪಿಸಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.‘ನೆರೆಯ ಚೀನಾದಿಂದ ದೇಶದ ಆಂತರಿಕ ಭದ್ರತೆಗೆ ಸವಾಲು ಎದುರಾಗಿದೆ. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಸರ್ಕಾರ ಈ ಬಗ್ಗೆ ಎಚ್ಚೆತ್ತು ಸೂಕ್ತ ನೀತಿ ರೂಪಿಸಬೇಕು’ ಎಂದು ಅವರು ಒತ್ತಾಯಿಸಿದರು.ಭಯೋತ್ಪಾದನಾ ಕೃತ್ಯದಲ್ಲಿ ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಸಹಪ್ರಚಾರ್ ಪ್ರಮುಖ್ ಇಂದ್ರೇಶ್ ಕುಮಾರ್ ಹೆಸರು ಕೇಳಿಬಂದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಭಯೋತ್ಪಾದನಾ ಕೃತ್ಯದಲ್ಲಿ ಸಂಘದ ಪಾತ್ರ’ ಇಲ್ಲ ಎಂದು ಸ್ಪಷ್ಟಪಡಿಸಿದರು.‘ಸಂಘವು ಯಾವುದೇ ಹಿಂಸಾಕೃತ್ಯವನ್ನು ಸಮರ್ಥಿಸದು. ಭಯೋತ್ಪಾದನಾ ಕೃತ್ಯದಲ್ಲಿ ಯಾರು ಭಾಗಿಯಾಗಿದ್ದರೂ, ಆ ಬಗ್ಗೆ ತನಿಖೆ ಆಗಬೇಕು. ನ್ಯಾಯಾಲಯದಲ್ಲಿ ಈ ಬಗ್ಗೆ ಆರೋಪಪಟ್ಟಿ ದಾಖಲಾಗುವುದಕ್ಕೆ ಮುನ್ನವೇ ಈ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಸಂಘವು ತನಿಖೆ ಸಂಪುರ್ಣ ಸಹಕಾರ ನೀಡುತ್ತಿದೆ. ಇಂದ್ರೇಶ್ ಕುಮಾರ್ ಕೂಡಾ ತಲೆಮರೆಸಿಕೊಂಡಿಲ್ಲ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಲಿ’ ಎಂದರು.ಅಯೋಧ್ಯೆ ವಿವಾದದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ‘ಈ ಬಗ್ಗೆ ಸರಸಂಘಚಾಲಕರು ಹೇಳಿಕೆ ನೀಡಿದ್ದಾರೆ. ವಿವಾದ ನ್ಯಾಯಾಲಯದಲ್ಲಿದೆ. ಇಲ್ಲಿ ಈ ಬಗ್ಗೆ ಚರ್ಚಿಸುವುದು ಸೂಕ್ತ ಅಲ್ಲ’ ಎಂದರು.ಕಾಲೇಜಿನ ಪ್ರಾಂಗಣದಲ್ಲಿ ಆರಂಭವಾದ ಆರ್‌ಎಸ್‌ಎಸ್‌ನ ಮೂರು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭಾವನ್ನು ಸರಸಂಘಚಾಲಕ್ ಮೋಹನ ಭಾಗವತ್ ಉದ್ಘಾಟಿಸಿದರು. ಸರಕಾರ್ಯವಾಹ ಸುರೇಶ್ ಜೋಷಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.