ಶನಿವಾರ, ಮೇ 8, 2021
26 °C

ಭ್ರಷ್ಟಾಚಾರ ವಿರುದ್ಧ ರಾಷ್ಟ್ರವ್ಯಾಪಿ ರ‌್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಳೆಗಣಸಿದ್ದಿ (ಪಿಟಿಐ): ತಮ್ಮ ತಂಡ ರೂಪಿಸಿರುವ ಜನಲೋಕಪಾಲ ಮಸೂದೆ ಜಾರಿಗಾಗಿ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಹೇಳಿರುವ ಅಣ್ಣಾ ಹಜಾರೆ, ಇದಕ್ಕಾಗಿ ದೇಶಾದ್ಯಂತ ಪ್ರವಾಸ ಮಾಡಿ ಜನಜಾಗೃತಿ ಮೂಡಿಸಲಾಗುವುದು ಎಂದರು. ಜನ ಲೋಕಪಾಲ ಮಸೂದೆ ವಿರುದ್ಧ ಅಭಿಪ್ರಾಯ ಹೊಂದಿರುವ ಸಂಸದರ ನಿವಾಸದ ಮುಂದೆ ಶಾಂತಿಯುತ ಧರಣಿ ನಡೆಸುವಂತೆ ಇದೇ ಸಂದರ್ಭದಲ್ಲಿ ಅಣ್ಣಾ ಜನರಿಗೆ ಕರೆ ನೀಡಿದರು.

ಭ್ರಷ್ಟಾಚಾರದ ವಿರುದ್ಧ ಮುಂದೆ ನಡೆಸಬೇಕಾದ ಹೋರಾಟದ ಸ್ವರೂಪವನ್ನು ರೂಪಿಸಲು ಇಲ್ಲಿ ಸೇರಿದ್ದ ಅಣ್ಣಾ ತಂಡ ಭಾನುವಾರ ಸಂಜೆ ಸಮಾಲೋಚನೆ ಮುಕ್ತಾಯಗೊಳಿಸಿತು.ಸಂಸತ್‌ನಲ್ಲಿ ಜನಲೋಕಪಾಲ ಮಸೂದೆ ಚರ್ಚೆಗೆ ಬಂದ ಸಂದರ್ಭದಲ್ಲಿ ವಿರೋಧಿಸುವ ಎಲ್ಲಾ ಸಂಸದರ ಮನೆ ಮುಂದೆಯೂ ಧರಣಿ ನಡೆಸುವಂತೆ ಈ ಸಂದರ್ಭದಲ್ಲಿ ಅಣ್ಣಾ ಕರೆ ನೀಡಿದರು. ಹಾಗೆಯೇ ಜನಲೋಕಪಾಲ ಮಸೂದೆಯನ್ನು ವಿರೋಧಿಸುವ ಸಂಸದರನ್ನು ಮುಂದಿನ ಚುನಾವಣೆ ಸಂದರ್ಭದಲ್ಲಿ ಆಯ್ಕೆ ಮಾಡದಿರುವಂತೆ ಜನರಲ್ಲಿ ಮನವಿ ಮಾಡಿದರು.ಸಂಸತ್ ಅಧಿವೇಶವನ್ನು ದೂರದರ್ಶನದಲ್ಲಿ ವೀಕ್ಷಿಸಿ, ಯಾರು ಮಸೂದೆಯನ್ನು ವಿರೋಧಿಸುತ್ತಾರೆಯೋ ಅಂತಹವನ್ನು ಗುರುತಿಸಿ ಅವರನ್ನು ಘೇರಾವ್ ಮಾಡುವಂತೆಯೂ ಹೇಳಿದರು. ಸರ್ಕಾರದ ಲೋಕಪಾಲ ಮಸೂದೆ ಸಮರ್ಪಕವಾಗಿಲ್ಲ. ಈ ಮಸೂದೆಯಿಂದ ಭ್ರಷ್ಟಾಚಾರ ನಿರ್ಮೂಲನೆ ಆಗುವ ಬದಲು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಣ್ಣಾ ಆತಂಕ ವ್ಯಕ್ತಪಡಿಸಿದರು.ಮುಂದೆ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಅಣ್ಣಾ ಹಜಾರೆ ಯಾತ್ರೆ ಕೈಗೊಳ್ಳಲಿದ್ದು, ಭ್ರಷ್ಟಾಚಾರ ಎಷ್ಟು ವ್ಯಾಪಕವಾಗಿದೆ ಎಂದು ಜನರಿಗೆ ಮನವರಿಕೆ ಮಾಡಿಕೊಡುವರು ಎಂದು ಅಣ್ಣಾ ತಂಡದ ಸದಸ್ಯ ಅರವಿಂದ ಕೇಜ್ರಿವಾಲ ಎಂದರು.ಯಾವುದೇ ರಾಜಕೀಯ ಪಕ್ಷವನ್ನು ಅಣ್ಣಾ ತಂಡ ಬೆಂಬಲಿಸುವುದಿಲ್ಲ. ಬದಲಾಗಿ ಯಾವ ಯಾವ ಪಕ್ಷಗಳು ಯಾವ ರೀತಿಯ ನಿಲುವು ಹೊಂದಿವೆ ಎನ್ನುವುದನ್ನು ಬಹಿರಂಗ ಪಡಿಸಲಾಗುವುದು ಎಂದರು.ತಮ್ಮನ್ನೂ ಸೇರಿದಂತೆ ಅಣ್ಣಾ ತಂಡದ ಕೆಲವರಿಗೆ ಆರ್‌ಎಸ್‌ಎಸ್ ಸಂಪರ್ಕ ಇದೆ ಎನ್ನುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಅವರ ಹೇಳಿಕೆಯನ್ನು ಅವರು ಅಲ್ಲಗಳೆದರು. ದಿಗ್ವಿಜಯ ಸಿಂಗ್ ಅವರಿಗೆ ಆರ್‌ಎಸ್‌ಎಸ್ ಭೂತ ಹಿಡಿದಿದೆ. ಆದರೆ ನಾವು (ಅಣ್ಣಾ ತಂಡ) ಆರ್‌ಎಸ್‌ಎಸ್‌ಗೆ ಅಂಜುವುದಿಲ್ಲ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.