ಶುಕ್ರವಾರ, ಜೂನ್ 18, 2021
28 °C
‘ಏಕೀಕೃತ ಮೈಸೂರು ರಾಜ್ಯ’ದ ಮೊದಲ ಚುನಾವಣೆ

ಮಂಗಳೂರು : ಕಾಂಗ್ರೆಸ್‌ ಅಲೆಗೆ ಸೆಡ್ಡು ಹೊಡೆದ ಕಮ್ಯುನಿಸ್ಟರು!

ಪ್ರಜಾವಾಣಿ ವಾರ್ತೆ/ಪ್ರವೀಣ್‌ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಮಂಗಳೂರು: ದೇಶದ ಎರಡನೇ ಮಹಾ ಚುನಾವಣೆ ನಡೆಯುವಾಗ, ಮೊದಲ ಮಹಾ ಚುನಾವಣೆಯ ಸಂದರ್ಭದಲ್ಲಿದ್ದ ಕಾವು ಕಡಿಮೆ ಆಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ 1957ರ ಫೆ.25ರಂದು ನಡೆದ ಮತದಾನದ ಪ್ರಮಾಣದಲ್ಲೂ ಇದು ಗೋಚರವಾಗುತ್ತದೆ. ಮೊದಲ ಚುನಾವಣೆಯಲ್ಲಿ ಶೇ 64.15ರಷ್ಟು ಮತದಾನ ನಡೆದಿದ್ದರೆ, ಎರಡನೇ ಚುನಾವಣೆ ವೇಳೆಗೆ ಈ ಪ್ರಮಾಣ ಶೇ 57.43ಕ್ಕೆ ಕುಸಿದಿತ್ತು.1957ರ ವೇಳೆಗೆ ಚುನಾವಣೆಯ ಕಾವು ಕುಸಿದರೂ, ದೇಶದ ಸ್ವಾತಂತ್ರ್ಯ ಸಂಗ್ರಾಮವನ್ನು ಯಶಸ್ವಿಯಾಗಿ ದಡ ತಲುಪಿಸಿದ ಕಾಂಗ್ರೆಸ್‌ ಮೇಲಿನ ಪ್ರೀತಿ ಕರಾವಳಿಯ ಜನರಿಗಿನ್ನೂ ಕಡಿಮೆಯಾಗಿರಲಿಲ್ಲ. ಕಾಂಗ್ರೆಸ್‌ನಿಂದ ಯಾರನ್ನೇ  ಕಣಕ್ಕಿಳಿಸಿದರೂ ಜನ ಆ ಪಕ್ಷಕ್ಕೆ ಮತ ಹಾಕುತ್ತಾರೆ ಎಂಬ ಸ್ಥಿತಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲೂ ಇತ್ತು ಎಂಬುದನ್ನು ಆ ಚುನಾವಣೆಗಳನ್ನು ಕಣ್ಣಾರೆ ಕಂಡವರು ಈಗಲೂ ಸ್ಮರಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸ್ವಾತಂತ್ರ್ಯ ಸಂಗ್ರಾಮದ ಕೆಚ್ಚು ಜೋರಾಗಿಯೇ ಇದ್ದುದರಿಂದ, ಇಲ್ಲಿನವರಿಗೆ ಕಾಂಗ್ರೆಸ್‌ ಮೇಲೆ ಹೆಚ್ಚು ಪ್ರೀತಿ ಇದ್ದುದರಲ್ಲಿ ಅಚ್ಚರಿ ಏನೂ ಇಲ್ಲ. ಆದರೆ, ಕಾಂಗ್ರೆಸ್‌ನ ಏಕಚಕ್ರಾಧಿಪತ್ಯಕ್ಕೆ ಆಗ ಕರಾವಳಿಯಲ್ಲಿ ಸಮರ್ಥವಾಗಿ ಸೆಡ್ಡು ಹೊಡೆದಿದ್ದು ಕಮ್ಯುನಿಸ್ಟ್‌ ಪಕ್ಷ (ಆಗ ಸಿಪಿಐ ಮಾತ್ರ ಇತ್ತು). 1957ರ ಲೋಕಸಭಾ ಚುನಾವಣೆಯಲ್ಲಿ ನೇರ ಹಣಾಹಣಿ ಇದ್ದುದು ಕಾಂಗ್ರೆಸ್‌ ಮತ್ತು ಕಮ್ಯುನಿಸ್ಟ್‌ ಪಕ್ಷದ ನಡುವೆ. ಎಂ.ಎಸ್‌.ಎ. ಶರ್ಮ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ, ಅವರ ಸ್ಪರ್ಧೆ ನಾಮ್‌ಕೇವಾಸ್ತೆಗೆ ಸೀಮಿತವಾಗಿತ್ತು.‘ಕಾಂಗ್ರೆಸ್‌ ಪಕ್ಷವು ಮಂಗಳೂರಿನ ಪ್ರಸಿದ್ಧ ವಕೀಲ ಕೆ.ಆರ್‌.ಆಚಾರ್‌ ಅವರನ್ನು ಕಣಕ್ಕಿಳಿಸಿತ್ತು. ಕೆ.ಆರ್‌.ಪ್ರಾಮಾಣಿಕ ವ್ಯಕ್ತಿ ಆದರೆ, ರಾಜಕೀಯದಲ್ಲಿ ಪಳಗಿದವರಲ್ಲ. ಆದರೆ, ಯು.ಶ್ರೀನಿವಾಸ ಮಲ್ಯರಿಗೆ ನಿಕಟವರ್ತಿಯಾಗಿದ್ದರು. ಹಾಗಾಗಿ ಮಲ್ಯರೇ ಅವರ ಹೆಸರನ್ನು ಶಿಫಾರಸು ಮಾಡಿದ್ದರು’ ಎಂದು ಸ್ಮರಿಸುತ್ತಾರೆ ಬಸ್ತಿ ವಾಮನ ಶೆಣೈ.ಸಿಪಿಎಂನಿಂದ ಕಣಕ್ಕಿಳಿದದ್ದು ರಾಜ್ಯದಲ್ಲಿ ಕಮ್ಯುನಿಸ್ಟ್‌ ಚಳವಳಿಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೃಷ್ಣ ಶೆಟ್ಟಿ.

‘ಮಂಗಳೂರು ಕ್ಷೇತ್ರ ಈ ಹಿಂದೆ ಮದ್ರಾಸ್‌ ಪ್ರಾಂತ್ಯಕ್ಕೆ ಸೇರಿತ್ತು. ಮದ್ರಾಸಿನಲ್ಲಿ ಕಮ್ಯುನಿಸ್ಟ್‌ ಚಳವಳಿ ಜೋರಾಗಿದ್ದುದರಿಂದ ಅದರ ಪ್ರಭಾವ ಮಂಗಳೂರಿನಲ್ಲೂ ಇತ್ತು. ಆಗ ತಾನೆ ಮದ್ರಾಸ್‌ ರಾಜ್ಯದಿಂದ ಕಳಚಿಕೊಂಡು ಮೈಸೂರು ರಾಜ್ಯದ ವ್ಯಾಪ್ತಿಗೆ ಸೇರಿದ ಮಂಗಳೂರು ಕಮ್ಯುನಿಸ್ಟ್‌ ಸಿದ್ಧಾಂತಕ್ಕೆ ಅದಾಗಲೇ ಮನಸೋತಿತ್ತು.ಇಲ್ಲಿನ ಬೀಡಿ ಉದ್ಯಮದಲ್ಲಿ ಆಗ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರೆಲ್ಲ ಕಮ್ಯುನಿಸ್ಟ್‌ ಚಳವಳಿಯ ಸಕ್ರಿಯ ಕಾರ್ಯಕರ್ತರು. ಮಂಗಳೂರಿನ ಬೋಳಾರದಿಂದ ಮೋರ್ಗನ್ಸ್‌ಗೇಟ್‌ವರೆಗೆ 16ಕ್ಕೂ ಅಧಿಕ ಹೆಂಚಿನ ಕಾರ್ಖಾನೆಗಳಿದ್ದವು. ಹೆಂಚಿನ ಕಾರ್ಖಾನೆ ಕಾರ್ಮಿಕರೂ ಕಮ್ಯುನಿಸ್ಟ್‌ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು. ಗೇರು ಬೀಜದ ಕಾರ್ಖಾನೆಗಳ ಕಾರ್ಮಿಕರೂ ಹೆಚ್ಚಾಗಿ ಇದೇ ಚಳವಳಿಯಲ್ಲಿದ್ದರು. ಆಗ ಜಿಲ್ಲೆಯಲ್ಲಿ ಸಾಕಷ್ಟು ನೇಕಾರರ ಸಂಘಟನೆಗಳಿದ್ದವು. ಅವರಿಗೂ ನಮ್ಮ ಪಕ್ಷದ ಸಿದ್ಧಾಂತ ಹಿಡಿಸಿತ್ತು. ಅಲ್ಲದೇ ಆಗ ಜಿಲ್ಲೆಯ ಮೋಟಾರು ಬಸ್‌ಗಳಲ್ಲಿ ಹಾಗೂ ಎಂಜಿನಿಯರಿಂಗ್‌ ಉದ್ದಿಮೆಗಳ ಕಾರ್ಮಿಕರ ಬೆಂಬಲವೂ ನಮಗಿತ್ತು’ ಎಂದು ಸ್ಮರಿಸುತ್ತಾರೆ ಸಿಪಿಎಂನ ಹಿರಿಯ ಧುರೀಣ ಕೆ.ಆರ್‌.ಶ್ರಿಯಾನ್‌.ಈ ಚುನಾವಣೆಯಲ್ಲಿ 4,35,650 ಮತದಾರರ ಪೈಕಿ  2,50,185  (ಶೇ 57.43)ಮಂದಿ ಮತ ಚಲಾಯಿಸಿದ್ದರು. 1,43,599 ಮತಗಳನ್ನು ಪಡೆದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಆರ್.ಆಚಾರ್ ಅವರು ಸಿಪಿಎಂನ ಕೃಷ್ಣ ಶೆಟ್ಟಿ ಅವರನ್ನು 58,226 ಮತಗಳ ಅಂತರದಿಂದ ಸೋಲಿಸಿದ್ದರು. ಪಕ್ಷೇತರ ಅಭ್ಯರ್ಥಿ ಎಂಎಸ್‌ಎ ಶರ್ಮ ಅವರು 21,213 ಮತ ಗಳಿಸಿದ್ದರು.‘ಆಗ ಚಾಲಿ ಗೇಣಿ ಪದ್ಧತಿ ಜೀವಂತವಿದ್ದ ಕಾಲ. ಗೇಣಿಯ ಗದ್ದೆಗಳು ಕೈತಪ್ಪುವ ಹೆದರಿಕೆಯಲ್ಲಿ ಒಕ್ಕಲುಗಳು ಧಣಿಗಳಿಗೆ ಹೆದರುತ್ತಿದ್ದರು. ಸಿಪಿಎಂ ಸ್ವಾತಂತ್ರ್ಯ ಪೂರ್ವದಿಂದಲೇ, ಉಳುವವನಿಗೆ ಭೂಮಿ ಕೊಡಿ ಚಳವಳಿ ಆರಂಭಿಸಿತ್ತಾದರೂ ಆಗಿನ್ನೂ ಆ ಚಳವಳಿ ತಾರಕಕ್ಕೆ ಏರಿರಲಿಲ್ಲ. ಭೂಮಾಲೀಕರೆಲ್ಲರೂ ಆಗ ಕಾಂಗ್ರೆಸ್‌ ಪರವಾಗಿದ್ದರು. ಧಣಿಯ ಹೆದರಿಕೆಯಿಂದ ಸಹಜವಾಗಿಯೇ ಆ ಪಕ್ಷಕ್ಕೆ ಮತ ಹಾಕುತ್ತಿದ್ದರು. ಹಾಗಾಗಿ ಆ ಚುನಾವಣೆಯ ಫಲಿತಾಂಶ ನಿರೀಕ್ಷಿತ. ಆದರೂ ಎಲ್ಲವೂ ಕಾಂಗ್ರೆಸ್‌ ಮಯವಾಗಿದ್ದ ಕಾಲದಲ್ಲೂ ಸಿಪಿಎಂ ಅವರಿಗೆ ಸೆಡ್ಡು ಹೊಡೆಯುವಲ್ಲಿ ಯಶಸ್ವಿಯಾಗಿತ್ತು.ನಮ್ಮ ಪಕ್ಷದ ಅಭ್ಯರ್ಥಿ ಕೃಷ್ಣ ಶೆಟ್ಟಿ ಅವರು ಗೆಲ್ಲಲಿಲ್ಲ. ಆದರೆ, ಕಾಂಗ್ರೆಸ್ಸಿಗರು ಅಚ್ಚರಿ ಪಡುವಷ್ಟು ಮತವನ್ನು (85,373 ಮತ) ಗಳಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ಅವರು ಸ್ವತಃ ಭೂಮಾಲಿಕರಾಗಿದ್ದರೂ, ಉಳುವನಿಗೆ ಭೂಮಿ ಕೊಡಿ ಚಳವಳಿಯಲ್ಲಿ ಕೈಜೋಡಿಸಿ ಬಡವರ ವಿಶ್ವಾಸ ಗಳಿಸಿದ್ದರು. ಕಾಂಗ್ರೆಸ್‌ ಉಳ್ಳವರ ಪಕ್ಷ, ಕಮ್ಯುನಿಸ್ಟ್‌ ಬಡವರ ಪಕ್ಷ ಎಂಬ ಭಾವನೆ ಆಗ ಇತ್ತು. ಹಾಗಾಗಿ ಕಾರ್ಮಿಕ ವರ್ಗ ಸಹಜವಾಗಿಯೇ ನಮ್ಮನ್ನು ಬೆಂಬಲಿಸಿದ್ದರಿಂದ ನಾವು ಅಷ್ಟು ಮತ ಗಳಿಸುವುದು ಸಾಧ್ಯವಾಯಿತು’ ಎಂದು ಸ್ಮರಿಸುತ್ತಾರೆ ಶ್ರಿಯಾನ್‌.‘ಕಮ್ಯುನಿಸ್ಟ್‌ ಪಕ್ಷದ ಬೇರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಳಕ್ಕಿಳಿದಿರುವುದರಿಂದ ಕಾಂಗ್ರೆಸ್‌ ಹಾಗೂ ಬಿಜೆಪಿ ಪ್ರಾಬಲ್ಯದ ನಡುವೆಯೂ ಆ ಪಕ್ಷ ಈ ಜಿಲ್ಲೆಯಲ್ಲಿ ಇನ್ನೂ ನೆಲೆ ಉಳಿಸಿಕೊಂಡಿದೆ. ಉಳುವವನಿಗೆ ಭೂಮಿ ಕೊಡಿ ಚಳವಳಿಗೆ ಹೋರಾಡಿದ್ದು ಕಮ್ಯುನಿಸ್ಟ್‌ ಪಕ್ಷ. ಆದರೆ, ಅದನ್ನು ಜಾರಿಗೊಳಿಸಿದ ಕಾಂಗ್ರೆಸ್‌ ಅದರ ಎಲ್ಲಾ ಶ್ರೇಯವನ್ನು ಕಿತ್ತುಕೊಂಡು, ಅದರ ಬಲದಿಂದಲೇ ಮೂರು ದಶಕ ಜಿಲ್ಲೆಯನ್ನು ಆಳಿತು. ಈ ಭೂ ಮಸೂದೆಯ ಲಾಭ ಪಡೆದ ಕುಟುಂಬಗಳ ಹೊಸ ತಲೆಮಾರುಗಳೂ ಕ್ರಮೇಣ ಕಾಂಗ್ರೆಸ್‌ ಅನ್ನೂ ಮರೆತು ಧರ್ಮಕಾರಣದ ಬೆನ್ನು ಹತ್ತಿದವು. ಜಿಲ್ಲೆ ಅನೇಕ ರಾಜಕೀಯ ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿದೆ. ಹೊಸತನಕ್ಕೆ ತೆರೆದುಕೊಳ್ಳುವಾಗ ನಮ್ಮ ರಾಜಕೀಯದ ಅವಲೋಕನವೂ ಮುಖ್ಯ’ ಎನ್ನುತ್ತಾರೆ ಶ್ರೀಯಾನ್.ಈ ಬಾರಿ ಮತ್ತೊಂದು ಮಹಾ ಸಮರಕ್ಕೆ ಮಂಗಳೂರು ಲೋಕಸಭಾ ಕ್ಷೇತ್ರ ಸಜ್ಜಾಗಿದೆ. ಆಮ್‌ ಆದ್ಮಿ ಪಕ್ಷಗಳಂತಹ ‘ಹೊಸ ವಿಚಾರ’ಗಳೂ ಈ ಬಾರಿ ಸ್ಪರ್ಧೆಗೊಡ್ಡಿಕೊಂಡಿವೆ. ಭ್ರಷ್ಟಾಚಾರ ವಿರೋಧಿ ಹೋರಾಟ, ಪರಿಸರ ರಕ್ಷಣೆ ಹೋರಾಟ, ಅಭಿವೃದ್ಧಿಯ ವಿಚಾರ... ಹೀಗೆ ಹತ್ತು ಹಲವು ವಿಚಾರಗಳ ಸಂಘರ್ಷದಲ್ಲಿ ಈ ಚುನಾವಣೆಯ ವಾತಾವರಣ ಸಂಪೂರ್ಣ ಬದಲಾಗಿದೆ. ಈ ಚುನಾವಣೆ ಇನ್ಯಾವ ಸ್ಥಿತ್ಯಂತರಕ್ಕೆ ಕಾರಣವಾಗುತ್ತದೋ ಕಾದು ನೋಡಬೇಕು..

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.