ಭಾನುವಾರ, ಫೆಬ್ರವರಿ 28, 2021
29 °C

ಮಂಗಳೂರು, ಶಾರ್ಜಾ ಮಧ್ಯೆ ವಿಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು, ಶಾರ್ಜಾ ಮಧ್ಯೆ ವಿಮಾನ

ಮಂಗಳೂರು: ಜೆಟ್‌ ಏರ್‌ವೇಸ್‌ ಗಲ್ಫ್‌ ರಾಷ್ಟ್ರಗಳ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿರುವ ಶಾರ್ಜಾ ಮತ್ತು ಮಂಗಳೂರು ನಡುವೆ ನೇರ ವಿಮಾನ ಸಂಚಾರ ಆರಂಭಿಸಿದೆ. ಭಾನುವಾರದಿಂದ ಈ ಹೊಸ ಸೇವೆಗೆ ಚಾಲನೆ ನೀಡಿದ್ದು, ನಿತ್ಯವೂ ಲಭ್ಯವಾಗಲಿದೆ.ಜೆಟ್‌ ಏರ್‌ವೇಸ್‌ 2013ರಲ್ಲಿ ದುಬೈಗೆ ಮಂಗಳೂರಿನಿಂದ ನೇರ ಹಾರಾಟ ಆರಂಭಿಸಿತ್ತು. 2015ರಲ್ಲಿ ಅಬುಧಾಬಿಗೆ ನೇರ ವಿಮಾನ ಸೌಲಭ್ಯಕ್ಕೆ ಚಾಲನೆ ನೀಡಲಾಗಿತ್ತು. ಈಗ ಶಾರ್ಜಾ ನಗರಕ್ಕೆ ನೇರ ವಿಮಾನ ಸೌಕರ್ಯ ಆರಂಭಿಸುವ ಮೂಲಕ ಮತ್ತೊಂದು ಹೆಜ್ಜೆ ಇರಿಸಿದೆ.ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎಂಐಎ) ಭಾನುವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅವರು ಮಂಗಳೂರು– ಶಾರ್ಜಾ ನಡುವಿನ ಮೊದಲ ನೇರ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರಿದರು.ಅರಣ್ಯ ಸಚಿವ ಬಿ.ರಮಾನಾಥ ರೈ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಸಂಸದ ನಳಿನ್‌ಕುಮಾರ್ ಕಟೀಲ್, ಎಂಐಎ ನಿರ್ದೇಶಕ ಜೆ.ಟಿ.ರಾಧಾಕೃಷ್ಣ, ಜೆಟ್ ಏರ್‌ವೇಸ್‌ನ ಪ್ರಧಾನ ವ್ಯವಸ್ಥಾಪಕ ಯು.ಹರೀಶ್‌ ಶೆಣೈ, ಪ್ರಾದೇಶಿಕ ವ್ಯವಸ್ಥಾಪಕ ಗಂಗಾಧರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.ಮೊದಲ ದಿನ 156 ಸಾಮಾನ್ಯ ಮತ್ತು ಇಬ್ಬರು ಎಕಾನಮಿ ಶ್ರೇಣಿಯ ಪ್ರಯಾಣಿಕರನ್ನು ಹೊತ್ತ ವಿಮಾನವು ಬೆಳಿಗ್ಗೆ 9.30ಕ್ಕೆ ಶಾರ್ಜಾದತ್ತ ಹೊರಟಿತು. ನಿತ್ಯವೂ ಈ ಸೇವೆ ಲಭ್ಯವಿದ್ದು, ಬೆಳಿಗ್ಗೆ 9.30ಕ್ಕೆ ಎಂಐಎನಿಂದ ಹೊರಡುವ ವಿಮಾನ 11.45ಕ್ಕೆ ಶಾರ್ಜಾ ತಲುಪಲಿದೆ. ಶಾರ್ಜಾದಿಂದ ಮಧ್ಯಾಹ್ನ 12.45ಕ್ಕೆ ಹೊರಡುವ ವಿಮಾನವು ಸಂಜೆ 5.55ಕ್ಕೆ ಎಂಐಎಗೆ ಬರಲಿದೆ ಎಂದು ಜೆಟ್‌ ಏರ್‌ವೇಸ್‌ ಪ್ರತಿನಿಧಿಗಳು ತಿಳಿಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಜೆಟ್‌ ಏರ್‌ವೇಸ್‌ನ ಪೂರ್ಣಾವಧಿ ನಿರ್ದೇಶಕ ಗೌರಂಗ್ ಶೆಟ್ಟಿ, ‘ಮಂಗಳೂರು– ಶಾರ್ಜಾ ನಗರಗಳ ನಡುವೆ ನೇರ ವಿಮಾನಯಾನ ಆರಂಭಿಸಿರುವುದು ಹೆಮ್ಮೆಯ ಸಂಗತಿ. ಈ ಎರಡೂ ನಗರಗಳ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಲು ಇದು ಕಾರಣವಾಗಲಿದೆ. ಗಲ್ಫ್‌ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯ ಉದ್ಯಮಿಗಳು ಮತ್ತು ಕಾರ್ಮಿಕರಿಗೆ ಈ ನೇರ ವಿಮಾನಯಾನದಿಂದ ಹೆಚ್ಚಿನ ಅನುಕೂಲವಾಗಲಿದೆ’ ಎಂದರು.ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿತ್ಯವೂ ಆರರಿಂದ ಎಂಟು ವಿಮಾನಗಳು ಗಲ್ಫ್‌ ರಾಷ್ಟ್ರಗಳಿಗೆ ಹಾರಾಟ ನಡೆಸುತ್ತಿವೆ. ಗಲ್ಫ್‌ನ ಪ್ರಮುಖ ನಗರಗಳಾದ ದುಬೈ, ಅಬುಧಾಬಿ, ಮಸ್ಕತ್, ಕುವೈಟ್, ದೋಹಾ, ಬಹರೈನ್, ದಮ್ಮಂಗಳಿಗೆ ಎಂಐಎನಿಂದ ನಿತ್ಯ ವಿಮಾನಯಾನ ಸೇವೆ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.