ಗುರುವಾರ , ಆಗಸ್ಟ್ 6, 2020
24 °C

ಮಂಜೂರಾಗಿ ವರ್ಷ- ಬಸ್ ಡಿಪೊ ಮೀನಾ-ಮೇಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಸಾವಿರಾರು ಯಾತ್ರಿಕರು ನಿತ್ಯ ಭೇಟಿ ನೀಡುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಪೊ ಬೇಕೆಂಬ ಬೇಡಿಕೆ ಸದ್ಯಕ್ಕೆ ಪರಿಹಾರಗೊಳ್ಳುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಬೆಂಗಳೂರು, ಧರ್ಮಸ್ಥಳ, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯ ಮತ್ತು ಹೊರ ರಾಜ್ಯದಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಕೆಎಸ್‌ಆರ್‌ಟಿಸಿ ಬಸ್ಸನ್ನೇ ಅವಲಂಬಿಸಿದ್ದಾರೆ. ಆದರೆ ಕ್ಷೇತ್ರಕ್ಕೆ ಬಸ್ ಸೌಲಭ್ಯದ ಕೊರತೆಯಿದೆ.ಸುಬ್ರಹ್ಮಣ್ಯಕ್ಕೆ ಬಸ್ ಡಿಪೊ ಬೇಕೆಂಬ ದಶಕದ ಬೇಡಿಕೆಗೆ ಯಾರೂ ಸ್ಪಂದಿಸುತ್ತಿಲ್ಲ. ಡಿಪೊ ಮಂಜೂರಾದರೂ ನಿರ್ಮಾಣ ಕಾರ್ಯಕ್ಕೆ ಇನ್ನೂ ಮುಹೂರ್ತ ಕೂಡಿಬಂದಿಲ್ಲ. ಸುಬ್ರಹ್ಮಣ್ಯ ಬಸ್ ನಿಲ್ದಾಣದಿಂದ ನಿತ್ಯ ಧರ್ಮಸ್ಥಳಕ್ಕೆ 40 ಬಸ್ ಸಂಚರಿಸುತ್ತವೆ. ಬೆಂಗಳೂರಿಗೆ 15 ಬಸ್ ಇವೆ.ಅಗತ್ಯ ಬಿದ್ದಾಗ ಧರ್ಮಸ್ಥಳಕ್ಕೆ 16ರಿಂದ 18 ಹೆಚ್ಚುವರಿ ಬಸ್ ಸಂಚಾರವಿರುತ್ತದೆ. ದಿನಕ್ಕೆ ಒಟ್ಟು 150 ಬಸ್ ಸುಬ್ರಹ್ಮಣ್ಯಕ್ಕೆ ಬಂದು-ಹೋಗುತ್ತಿವೆ. ಅಲ್ಲದೇ ಸುಳ್ಯ ಮತ್ತು ಪುತ್ತೂರಿನ ಗ್ರಾಮೀಣ ಪ್ರದೇಶದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮಾತ್ರ ಸಂಚರಿಸುತ್ತಿದ್ದು, ಖಾಸಗಿ ಬಸ್ ಸೇವೆ ಇಲ್ಲವೇ ಇಲ್ಲ.ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಸಂದರ್ಭದಲ್ಲಿ ಸುಬ್ರಹ್ಮಣ್ಯದಿಂದ ವಿಶೇಷ ಬಸ್ ಬಿಡಬೇಕಾದಲ್ಲಿ ಪುತ್ತೂರು ಅಥವಾ ಧರ್ಮಸ್ಥಳ ಡಿಪೊದಿಂದ ಬಸ್ ತರಿಸಿಕೊಳ್ಳಬೇಕಾಗುತ್ತದೆ. ಪುತ್ತೂರು ಮತ್ತು ಧರ್ಮಸ್ಥಳದಿಂದ ಸುಬ್ರಹ್ಮಣ್ಯ ತಲುಪಲು ಕನಿಷ್ಠ ಒಂದೂವರೆ ಗಂಟೆ ಅವಶ್ಯ.ಅಷ್ಟು ಹೊತ್ತು ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕಾಯಬೇಕಿದೆ. ಸುಬ್ರಹ್ಮಣ್ಯಕ್ಕೆ ಬಸ್ ಡಿಪೊ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ದೊರೆತು ವರ್ಷವೇ ಕಳೆದಿದೆ. ಆದರೆ ಜಾಗದ ಸಮಸ್ಯೆಯಿಂದಾಗಿ ಡಿಪೊ ನಿರ್ಮಾಣ ಕಾರ್ಯ ವಿಳಂಬವಾಗಿದೆ ಎನ್ನುವುದು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಸಮಜಾಯಿಷಿ. ಜನತೆಯ ಆಶೋತ್ತರಗಳನ್ನು ಪೂರೈಸಬೇಕಾದ ಈ ಭಾಗದ ಜನಪ್ರತಿನಿಧಿಗಳು ಈ ಬಗ್ಗೆ ಯಾವುದೇ ಪ್ರಯತ್ನ ನಡೆಸಿಲ್ಲ.`ಕಷ್ಟ ಬಂದಾಗ ಕ್ಷೇತ್ರಕ್ಕೆ ಓಡೋಡಿ ಬರುವ ಮುಖ್ಯಮಂತ್ರಿ, ಕೇಂದ್ರ, ರಾಜ್ಯ ಸರ್ಕಾರದ ಮಂತ್ರಿಗಳು, ರಾಜಕಾರಣಿಗಳು ಕ್ಷೇತ್ರಕ್ಕೆ ಮೂಲ ಸೌಲಭ್ಯ ಒದಗಿಸುವತ್ತ ಗಮನ ಹರಿಸುತ್ತಿಲ್ಲ. ಕ್ಷೇತ್ರಕ್ಕೆ ಬಂದು ತಮ್ಮ ಕಷ್ಟ ನಿವಾರಣೆಯಾದ ನಂತರ ಇತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ~ ಎಂಬುದು ಸ್ಥಳೀಯರ ಆರೋಪ.ಸುಬ್ರಹ್ಮಣ್ಯದ ಸಮಗ್ರ ಅಭಿವೃದ್ಧಿಗೆ ರೂ. 180 ಕೋಟಿ ಮಾಸ್ಟರ್ ಪ್ಲಾನ್ ಯೋಜನೆಯ ಮೊದಲ ಹಂತದ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.