ಶನಿವಾರ, ಜನವರಿ 18, 2020
20 °C
ಪಂಚರಂಗಿ

ಮಂಡಳಿ ವಿರುದ್ಧ ಕೆಂಡಾಮಂಡಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಭ್ರಷ್ಟರ ಕೂಟ. ಚುನಾವಣೆ ಸಂದರ್ಭದಲ್ಲಿ ಮಾತ್ರ ಮತ ಕೇಳಲು ಬರುವ ಇವರು, ಆನಂತರ ಏನಾದರೂ ಕೆಲಸವಾಗಬೇಕು ಎಂದರೆ ಲಂಚಕೇಳುತ್ತಾರೆ. ಈ ಭ್ರಷ್ಟರ ಕೂಟದ ವಿರುದ್ಧ ಹೋರಾಟ ಮಾಡಬೇಕಾಗಿದೆ’ –ಹೀಗೆ ಚಲನಚಿತ್ರ ವಾಣಿಜ್ಯ ಮಂಡಳಿಯ ವಿರುದ್ಧ ಮುಗಿಬಿದ್ದಿದ್ದು ಲೇಖಕಿ ಬಿ.ಟಿ. ಲಲಿತಾ ನಾಯಕ್ ಹಾಗೂ ಅವರ ಪುತ್ರ ಓಂ ಪ್ರಕಾಶ್ ನಾಯಕ್‌.ಅದು ಓಂ ಪ್ರಕಾಶ್ ನಾಯಕ್‌ ನಿರ್ದೇಶನ ಮತ್ತು ನಿರ್ಮಾಣದ ‘ಕನಸೊಂದು ಶುರುವಾಯ್ತು’, ‘ಜೇಮ್ಸ್ ಪಾಂಡು’ ಮತ್ತು ‘ಅಶಾಂತಿ’ ಚಿತ್ರಗಳ ಡಿವಿಡಿ ಬಿಡುಗಡೆಯ ಕಾರ್ಯಕ್ರಮ.‘ಈ ಡಿವಿಡಿಗಳನ್ನು ನೋವಿನಿಂದಲೇ ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರಗಳನ್ನು ದೊಡ್ಡಪರದೆಯಲ್ಲಿ ಕಾಣಿಸಬೇಕಿತ್ತು. ಆದರೆ ಹಣದ ಅಭಾವ. ಎರಡು ಮೂರು ಲಕ್ಷ ರೂಪಾಯಿ ಖರ್ಚು ಮಾಡಿ ಚಿತ್ರಗಳನ್ನು ಬಿಡುಗಡೆ ಮಾಡುವುದು ಕಷ್ಟ. ಮೂರು ಚಿತ್ರಗಳಿಂದ ಸರಾಸರಿ 35 ಲಕ್ಷ ರೂಪಾಯಿ ವೆಚ್ಚವಾಗಿದೆ. ಇವು ಒಳ್ಳೆಯ ಚಿತ್ರಗಳು. ಒಂದು ಚಿತ್ರಕ್ಕಾದರೂ ಸಬ್ಸಿಡಿ ಸಿಕ್ಕಿದ್ದರೆ, ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ತೆರೆ ಕಾಣಿಸುತ್ತಿದ್ದೆವು. ಸೆನ್ಸಾರ್ ಮಂಡಳಿಯ ಪ್ರಮಾಣ ಪತ್ರ ಸಿಕ್ಕರೂ ಸಿನಿಮಾ ಬಿಡುಗಡೆಯಾಗದಿದ್ದಾಗ, ಆ ಸಿನಿಮಾಗಳ ಕಥೆ ಏನಾಯಿತು ಎಂದು ವಾಣಿಜ್ಯ ಮಂಡಳಿ ಪರಿಶೀಲಿಸಬೇಕು. ಆದರೆ ಈ ನಿಟ್ಟಿನಲ್ಲಿ ಮಂಡಳಿ ಏನೂ ಮಾಡುತ್ತಿಲ್ಲ. ಸದಸ್ಯತ್ವಕ್ಕೆ ಒಂದು ಲಕ್ಷ ರೂಪಾಯಿ ಶುಲ್ಕವನ್ನು ವಸೂಲಿ ಮಾಡುವ ಮಂಡಳಿ, ಆ ಹಣದಲ್ಲಿಯೇ ನಮ್ಮಂಥ ಸಣ್ಣ ನಿರ್ಮಾಪಕರಿಗೆ ನೆರವು ನೀಡಬಹುದು...’ ಎಂದು ಓಂ ಪ್ರಕಾಶ್ ನಾಯಕ್‌ ಹೇಳಿದರು.ಮಗನ ಮಾತುಗಳಿಗೆ ಸಹಮತ ವ್ಯಕ್ತಪಡಿಸಿದ ಲಲಿತಾ ನಾಯಕ್‌, ‘ಮಂಡಳಿಯಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಇದರ ವಿರುದ್ಧ ಹೋರಾಟ ಅನಿವಾರ್ಯ’. ‘ಹೊಟ್ಟೆಗೆ ಆಹಾರ ಎಷ್ಟು ಮುಖ್ಯವೊ, ಕಲೆ ಸಂಸ್ಕೃತಿಯೂ ಅಷ್ಟೇ ಅಗತ್ಯ ಎಂದರು. ಮೂರು ಡಿವಿಡಿಗಳ ಒಟ್ಟು ಬೆಲೆ 100 ರೂಪಾಯಿ. ಸಹ ನಿರ್ಮಾಪಕಿ ಕವಿತಾ, ನಟಿ ಶಶಿರೇಖಾ, ನಿರ್ದೇಶಕ ಅನಂತು ಹಾಜರಿದ್ದರು.

ಪ್ರತಿಕ್ರಿಯಿಸಿ (+)