ಬುಧವಾರ, ಜೂಲೈ 8, 2020
28 °C

ಮಕರಜ್ಯೋತಿ ಮನುಷ್ಯ ನಿರ್ಮಿತಿಯೇ? ಅಲ್ಲವೇ? ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಚ್ಚಿ (ಐಎಎನ್ಎಸ್): ಶಬರಿಮಲೆಯಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಕೇರಳ ಹೈಕೋರ್ಟ್ ದೇವಸ್ಥಾನದ ಆಡಳಿತ ಮಂಡಳಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಮಕರಜ್ಯೋತಿಯು ಮನುಷ್ಯ ನಿರ್ಮಿತಿಯೇ ? ಅಲ್ಲವೇ ? ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಕೇಳಿರುವ ಹೈಕೋರ್ಟ್ ನ ವಿಭಾಗೀಯ ಪೀಠ ಈ ಸಂಬಂಧ ಸತ್ಯ ಹೊರಬರಬೇಕು ಎಂದು ಹೇಳಿದೆ.

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿಗದಿಪಡಿಸಿದ ಗಡುವಿನೊಳಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯು ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ದೇವಸ್ಥಾನದ ಆಡಳಿತ ಮಂಡಳಿಗಳು ಸಲ್ಲಿಸಿದ ವರದಿಯಲ್ಲಿ ಪರಸ್ಪರ ದೋಷಾರೋಪಣೆ ಮಾಡಿದ್ದನ್ನು ಕಂಡು ಕೆಂಡಮಂಡಲವಾದ ವಿಭಾಗೀಯ ಪೀಠ ಮೇಲಿನಂತೆ ಪ್ರಶ್ನಿಸಿತಲ್ಲದೆ ಈ ಇಲಾಖೆಗಳ ಮಧ್ಯೆ ಸಹಕಾರದ ಕೊರತೆಯೇ ಕಾಲ್ತುಳಿತದಂತಹ ಘಟನೆ ಜರುಗಲು ಕಾರಣ ಎಂದು ಅಭಿಪ್ರಯಿಸಿತು.

ಮಕರಜ್ಯೋತಿಗೆ ಸಂಬಂಧಿಸಿದಂತೆ ಹೈಕೋರ್ಟ್ ಎತ್ತಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರು ಸರ್ಕಾರವು ಮಕರಜ್ಯೋತಿಗೆ ಸಂಬಂಧಿಸಿದಂತೆ ಯಾವುದೇ ತನಿಖೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೊಂದು ಸಾವಿರಾರು ಭಕ್ತರ ನಂಬಿಕೆಯ ವಿಷಯವಾಗಿದೆ. ಇದರಲ್ಲಿ ಸರ್ಕಾರವು ತನಿಖೆಯ ನೆಪದಲ್ಲಿ ಮೂಗು ತೂರಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.