ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ: ಎರಡು ವಾರಗಳಲ್ಲಿ ಸಮಿತಿ ರಚನೆ

7

ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ: ಎರಡು ವಾರಗಳಲ್ಲಿ ಸಮಿತಿ ರಚನೆ

Published:
Updated:

ಬೆಂಗಳೂರು: `ರಾಜ್ಯದಲ್ಲಿ ಲಕ್ಷಾಂತರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ 2 ವಾರಗಳಲ್ಲಿ ಸಮಿತಿಯನ್ನು ರಚಿಸಲಾಗುವುದು~ ಎಂದು ಸರ್ಕಾರ ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿದೆ.ಈ ಸಮಿತಿಯಲ್ಲಿ ಆಸಕ್ತ ಸರ್ಕಾರೇತರ ಸಂಸ್ಥೆಗಳನ್ನು ಸೇರಿಸಿಕೊಳ್ಳಲಾಗುವುದು. ಇದರಿಂದಾಗಿ ಸಮಸ್ಯೆಯು ಉಲ್ಬಣಗೊಳ್ಳದಂತೆ ಎಚ್ಚರಿಕೆ ವಹಿಸಲಾಗುವುದು. ಕೇಂದ್ರ ಸರ್ಕಾರದಿಂದ ಮಕ್ಕಳ ನೆರವಿಗೆ ಬರುವ ಅನುದಾನವು  ದುರುಪಯೋಗ ಆಗದಂತೆ ಎಚ್ಚರ ವಹಿಸಲಾಗುವುದು ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೆ.ಎಂ.ನಟರಾಜ ಅವರು ತಿಳಿಸಿದರು.ರಾಯಚೂರು ಜಿಲ್ಲೆಯಲ್ಲಿ 4 ಸಾವಿರಕ್ಕೂ ಅಧಿಕ ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಅವರು ಈ ಮಾಹಿತಿ ನೀಡಿದ್ದಾರೆ. ವಿಮೋಚನಾ ಸಂಸ್ಥೆ ಈ ಅರ್ಜಿ ಸಲ್ಲಿಸಿದೆ.`ಈ ಸಮಸ್ಯೆ ಗಂಭೀರ ಸ್ವರೂಪದ್ದಾಗಿದೆ. ಈ ಹಿನ್ನೆಲೆಯಲ್ಲಿ ವಿಳಂಬ ನೀತಿ ಅನುಸರಿಸುವುದು ಸರಿಯಲ್ಲ. ಸಂಬಂಧಿತ ಇಲಾಖೆಗಳು ಮೂರು ವಾರಗಳಲ್ಲಿ ಈ ಕುರಿತು ವರದಿ ನೀಡಬೇಕು~ ಎಂದು ಆದೇಶಿಸಿದ ಪೀಠ ವಿಚಾರಣೆ ಮುಂದೂಡಿತು.ಸಿಎಟಿ ಸ್ಥಳಾಂತರಕ್ಕೆ ತಡೆ

ಕೇಂದ್ರ ಆಡಳಿತ ನ್ಯಾಯಮಂಡಳಿಯ (ಸಿಎಟಿ) ಬೆಂಗಳೂರು ಶಾಖೆಯ ಪೈಕಿ ಒಂದನ್ನು ಕೋಲ್ಕತ್ತಕ್ಕೆ ಸ್ಥಳಾಂತರ ಮಾಡುವುದಕ್ಕೆ ತಡೆ ನೀಡಿರುವ ಹೈಕೋರ್ಟ್, ಸದ್ಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ.ಕಳೆದ ಮಾರ್ಚ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಣಯ ಪ್ರಶ್ನಿಸಿ ದೂರದರ್ಶನದ ಕಾರ್ಯಕ್ರಮ ನಿರ್ವಹಣಾ ಅಧಿಕಾರಿ ಕೆ.ಆರ್.ಹುಲಮನಿ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ  ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.ನಗರದಲ್ಲಿ ಸದ್ಯ ಎರಡು ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಅಲ್ಲಿ ಒಟ್ಟಾರೆ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಕೇವಲ 801. ಕೋಲ್ಕತ್ತದಲ್ಲಿ 2,850 ಪ್ರಕರಣಗಳು ಬಾಕಿ ಇರುವ ಕಾರಣ ಅಲ್ಲಿಗೆ ಒಂದು ಶಾಖೆ ಸ್ಥಳಾಂತರ ಮಾಡಲಾಗಲಾಗುವುದು ಎನ್ನುವುದು ಕೇಂದ್ರದ ವಾದ.`ಸಿಎಟಿಯಲ್ಲಿ ಯಾವುದೇ ಪ್ರಕರಣ ದಾಖಲಾದರೂ ಅದು ಆರು ತಿಂಗಳಿನಲ್ಲಿ ಇತ್ಯರ್ಥಗೊಳ್ಳಬೇಕು. ಆದರೆ ಈಗಿನ ಪರಿಸ್ಥಿತಿಯಲ್ಲಿ ಆ ರೀತಿ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಒಂದು ಶಾಖೆ ಸ್ಥಳಾಂತರಕ್ಕೆ ನಿರ್ಣಯ ತೆಗೆದುಕೊಂಡಿರುವುದು ಸರಿಯಲ್ಲ~ ಎನ್ನುವುದು ಅರ್ಜಿದಾರರ ವಾದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry