ಗುರುವಾರ , ಆಗಸ್ಟ್ 13, 2020
26 °C

ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಿ: ಕುಂಬ್ಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಿ: ಕುಂಬ್ಳೆ

ಚಿಕ್ಕೋಡಿ: `ದೇಶದ ಒಟ್ಟು ಜನಸಂಖ್ಯೆಯ ಶೇ. 60 ರಷ್ಟು ಯುವಕ, ಯುವತಿಯರಿದ್ದಾರೆ. ಅವರಿಗೆ ಕ್ರೀಡಾ ತರಬೇತಿ ನೀಡುವ ಸಂಸ್ಥೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಾಣ ಮಾಡಿದ್ದಾದರೆ ಭಾರತದ ಕ್ರೀಡೆ ಬಲಿಷ್ಠಗೊಳ್ಳುವುದರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಲು ಸರ್ಕಾರ ರಚನಾತ್ಮಕವಾದ ಕಾರ್ಯಕ್ರಮ ಜಾರಿಗೊಳಿಸಬೇಕು' ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಡಾ.ಅನೀಲ ಕುಂಬ್ಳೆ ಸಲಹೆ ನೀಡಿದರು.ತಾಲ್ಲೂಕಿನ ಅಂಕಲಿ ಗ್ರಾಮದಲ್ಲಿ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯು ರೂ 6.2 ಕೋಟಿ ವೆಚ್ಚದಲ್ಲಿ  ನಿರ್ಮಿಸಿರುವ ಸಿಬಿಎಸ್‌ಇ ಆಂಗ್ಲ ಮಾಧ್ಯಮ ಶಾಲೆ ಮತ್ತು ರೂ 1.20 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಶಾರದಾ ಕೋರೆ ಪ್ರೌಢಶಾಲೆಯ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.` ಪ್ರತಿಯೊಬ್ಬ ಕ್ರೀಡಾಪಟುವಿಗೂ ರಾಷ್ಟ್ರ, ರಾಜ್ಯವನ್ನು ಪ್ರತಿನಿಧಿಸುವ ಅವಕಾಶ ಸಿಗದೇ ಇರಬಹುದು. ಆದರೆ, ಆಟದಿಂದ ಶಿಸ್ತು ಬರುತ್ತದೆ. ಅದೇ ಶಿಸ್ತಿನಿಂದ ಅಧ್ಯಯನಗೈದರೆ ಜೀವನದಲ್ಲಿ ಒಳ್ಳೆಯದಾಗುತ್ತದೆ. ಕೆ.ಎಲ್.ಇ. ಸಂಸ್ಥೆ ಗ್ರಾಮೀಣ ಭಾಗದಲ್ಲಿ ಅತ್ಯದ್ಭುತ ಶಾಲೆಯನ್ನು ನಿರ್ಮಾಣ ಮಾಡುವುದರ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಅಪರೂಪದ ಕೊಡುಗೆ ನೀಡಿದೆ.

ಇಂದು ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ನೀಡುವುದೊಂದೇ ಮಾನದಂಡವಾಗಬಾರದು. ಇದರೊಂದಿಗೆ ಕ್ರೀಡಾ ಸ್ಪೂರ್ತಿಯನ್ನು ನೀಡುವುದು ಅಷ್ಟೇ ಮುಖ್ಯ.  ಕೆ.ಎಲ್.ಇ. ಸಂಸ್ಥೆಯು ಮುಂಬರುವ ದಿನಗಳಲ್ಲಿ ಕ್ರೀಡಾ ಶಾಲೆಯನ್ನು ಸ್ಥಾಪಿಸಲು ಮುಂದಾದರೆ ಅದಕ್ಕೆ ಬೇಕಾಗುವ ನೆರವನ್ನು ನೀಡುತ್ತೇನೆ' ಎಂದು ಡಾ.ಅನೀಲ ಕುಂಬ್ಳೆ ಹೇಳಿದರು.ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ವಿಜಾಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ  ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಶಿವಾನಂದ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ  ಪ್ರಾಸ್ತಾವಿಕವಾಗಿ ಮಾತನಾಡಿದರು.ಸಚಿವ ಪ್ರಕಾಶ ಹುಕ್ಕೇರಿ, ಸಂಸದ ಸುರೇಶ ಅಂಗಡಿ, ಸಂಸ್ಥೆ ಉಪಾಧ್ಯಕ್ಷ ಅಶೋಕ ಬಾಗೇವಾಡಿ, ಕಾರ್ಯದರ್ಶಿ ದೇಸಾಯಿ, ಸಿಬಿಎಸ್‌ಸಿ ಆಂಗ್ಲ ಮಾಧ್ಯಮ ಶಾಲೆ ಪ್ರಾಚಾರ್ಯ ಭಾರತಿ ಪಾಟೀಲ,  ಡಾ. ಶೃದ್ದಾನಂದ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಕೆಎಲ್‌ಇ ಆಡಳಿತ ಮಂಡಳಿಯ ಎಲ್ಲ ಸದಸ್ಯರು, ಡಿಕೆಎಸ್‌ಎಸ್‌ಕೆ ಅಧ್ಯಕ್ಷ ಅಮೀತ ಕೋರೆ, ಉಪಾಧ್ಯಕ್ಷ ಭರತೇಶ ಬನವಣೆ ಹಾಗೂ ಸಂಚಾಲಕರು, ಜಿ.ಪಂ. ಸದಸ್ಯ ಮಹೇಶ ಭಾತೆ, ಶಂಕರಣ್ಣ ಮುನವಳ್ಳಿ, ಬಿ.ಎಲ್.ಪಾಟೀಲ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.