ಶನಿವಾರ, ಜೂಲೈ 11, 2020
27 °C

ಮಕ್ಕಳ ಕಲಿಕೆಗೆ ಸ್ಮಾರ್ಟ್ ಸ್ಪರ್ಶ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳ ಕಲಿಕೆಗೆ ಸ್ಮಾರ್ಟ್ ಸ್ಪರ್ಶ!

ರಾಮನಗರ: ಪೋಷಕರು ಹಾಗೂ ಶಿಕ್ಷಕರ ಒತ್ತಾಯಕ್ಕೆ ಮಣಿದು, ಪರೀಕ್ಷಾ ಭಯದಿಂದ ಓದಲೇ ಬೇಕು ಎಂಬ ಕಾರಣಕ್ಕೆ ಕಂಠಪಾಠ ಮಾಡುವ ವಿದ್ಯಾರ್ಥಿಗಳಲ್ಲಿ ವಿದ್ಯೆ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸುವುದು ಹೇಗೆ ?ಇದಕ್ಕಾಗಿ ಸರ್ವ ಶಿಕ್ಷ ಅಭಿಯಾನ ಹಾಗೂ ಹಲವು ಸಂಘ ಸಂಸ್ಥೆಗಳು ಆಟದೊಂದಿಗೆ ಮಕ್ಕಳಿಗೆ ವಿದ್ಯೆ ಕಲಿಸಿಕೊಡುವ ಮಾರ್ಗವನ್ನು ಕಂಡು ಕೊಂಡಿವೆ. ಹಾಗಾಗಿ ನಲಿ-ಕಲಿ ಸೇರಿದಂತೆ ಹಲವು ಕಾರ್ಯಕ್ರಮಗಳು ಸರ್ಕಾರಿ ಶಾಲೆಗಳಲ್ಲಿ ಜಾರಿಯಲ್ಲಿವೆ. ಮಾಂಟೆಸರಿ ಹಾಗು ಇತರ ಬಗೆಯ ಕಲಿಕಾ ವಿಧಾನಗಳನ್ನು ಖಾಸಗಿ ಶಾಲೆಗಳು ಮಾಡುತ್ತಿವೆ.ಆದರೆ ಶಾಲೆಯ ಕೊಠಡಿಯ ಒಳಗೆ ಶಿಕ್ಷಕರ ಜತೆ ಕುತೂಹಲ ಮತ್ತು ಆಸಕ್ತಿಯಿಂದ ಪಠ್ಯವನ್ನು ಕಲಿಸುವಂತೆ ಮಾಡಲು ಇನ್ನೂ ಒಂದು ತಂತ್ರ ಇದೆ. ಅದೇನೆಂದರೆ ಪಠ್ಯದಲ್ಲಿರುವ ಪಾಠಗಳನ್ನು ದೃಶ್ಯ ಅಥವಾ ಚಿತ್ರೀಕರಣದ ಮೂಲಕ ಮಕ್ಕಳಿಗೆ ಮನದಟ್ಟು ಮಾಡುವುದು.ಇಂತಹ ಪ್ರಯೋಗವನ್ನು ರಾಮನಗರದಲ್ಲಿ ಮೊತ್ತ ಮೊದಲ ಬಾರಿಗೆ ನಗರದ ಹೋಲಿ ಕ್ರೆಸೆಂಟ್ ಇಂಗ್ಲಿಷ್ ಶಾಲೆ ಮಾಡಿದೆ. ಒಂದನೇ ತರಗತಿಯಿಂದ 10ನೇ ತರಗತಿಯವರೆಗಿನ ಶಾಲಾ ಪಠ್ಯ ಪುಸ್ತಕವನ್ನು ಚಿತ್ರೀಕರಣದ ಮೂಲಕ ಮಕ್ಕಳಿಗೆ ಬೋಧಿಸುವ ವಿಧಾನ ಇದಾಗಿದೆ.ಹೋಲಿ ಕ್ರೆಸೆಂಟ್ ಇಂಗ್ಲಿಷ್ ಶಾಲೆ ಹಾಗೂ ಬೆಂಗಳೂರಿನ ಎಜುಕ್ಯಾಂಪ್ ಸಲ್ಯೂಷನ್ ಲಿಮಿಟೆಡ್ ಜಂಟಿಯಾಗಿ ಈ ಪ್ರಯೋಗವನ್ನು ಇಲ್ಲಿ ಮಾಡಿದೆ. ಇದಕ್ಕೆ ಶಾಲೆಯಲ್ಲಿ ‘ಸ್ಮಾರ್ಟ್‌ಕ್ಲಾಸ್’ ಎಂಬ ನಾಮಕರಣ ಮಾಡಲಾಗಿದೆ.ಮಕ್ಕಳು ಹೆಚ್ಚು ಆಸಕ್ತಿಯಿಂದ ಮನೆಗಳಲ್ಲಿ ನೋಡುವ ಕಾರ್ಟೂನ್ ರೀತಿಯಲ್ಲಿ ಅನಿಮೇಷನ್‌ಗಳ ಮಾದರಿಯಲ್ಲಿ ಪಠ್ಯದ ವಸ್ತುಗಳನ್ನು ಸಿದ್ಧಪಡಿಸಿ, ಮಕ್ಕಳಿಗೆ ಜ್ಞಾನದ ಬೋಜನ ಮಾಡಿಸುವುದೇ ಈ ಸ್ಮಾರ್ಟ್‌ಕ್ಲಾಸ್‌ನ ಉದ್ದೇಶ.ಈ ಸ್ಮಾರ್ಟ್‌ಕ್ಲಾಸ್ ತರಗತಿಗಳಿಗೆ ಶನಿವಾರ ಅಧಿಕೃತ ಚಾಲನೆಯನ್ನು ಶಾಸಕ ಕೆ.ರಾಜು ನೀಡಿದರು. ನಂತರ ಮಾತನಾಡಿದ ಅವರು, ಕಾಲ ಬದಲಾದಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಿತ ಬೋಧನಾ ಕೌಶಲ್ಯಗಳ ಅವಿಷ್ಕಾರ ಆಗುತ್ತಿದೆ. ವಿದ್ಯಾರ್ಥಿಗಳ ಆಸಕ್ತಿಯ ಕ್ಷೇತ್ರವನ್ನು ಪತ್ತೆಹಚ್ಚಿ ಅವರಿಗೆ ಪೂರಕವಾಗುವಂತೆ ಬೋಧನೆ ಮಾಡುವುದು ಉತ್ತಮವಾದ ಬೆಳವಣಿಗೆ. ಇದರಿಂದ ಮಕ್ಕಳು ಒತ್ತಡದ ಬದಲಿಗೆ ಆಸಕ್ತಿಯಿಂದ ಶಿಕ್ಷಣ ಕಲಿಯುತ್ತಾರೆ. ಮಕ್ಕಳ ಮುಖದಲ್ಲಿ ಸದಾ ಲವಲವಿಕೆ ತುಂಬಲು ಇದು ಪೂರಕವಾಗಿರುತ್ತದೆ ಎಂದರು.ದೃಶ್ಯ ಮಾಧ್ಯಮದ ಮೂಲಕ ನೋಡುವುದರಿಂದ ಗ್ರಹಿಕೆ ಚೆನ್ನಾಗಿರುತ್ತದೆ. ಹೆಚ್ಚುಕಾಲ ಅದರ ಮನನ ಇರುತ್ತದೆ. ಹಾಗಾಗಿ ಇದೊಂದು ಉತ್ತಮ ಪ್ರಯತ್ನ ಎಂದು ಶ್ಲಾಘಿಸಿದ ಅವರು, ಇಂತಹ ನೂತನ ಪ್ರಯತ್ನಗಳನ್ನು ನಗರದ ಇತರ ಶಾಲೆಗಳು ಅಳವಡಿಸಿಕೊಂಡು ವಿದ್ಯಾ ಕ್ಷೇತ್ರದಲ್ಲಿ ಜಿಲ್ಲೆಗೆ ಉತ್ತಮ ಸ್ಥಾನ ದೊರೆಯುವಂತೆ ಮಾಡಬೇಕು ಎಂದರು.ಎಜುಕ್ಯಾಂಪ್ ಸಲ್ಯೂಷನ್ ಲಿಮಿಟೆಡ್‌ನ ಪ್ರತಿನಿಧಿ ವಿನೋದ್, ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಮಹಮದ್ ಹನೀಫ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ.ಮಾದೇಗೌಡ, ಶಾಲೆಯ ಕಾರ್ಯದರ್ಶಿ ಅಲ್ತಫ್ ಅಹಮದ್, ಕ್ಷೇತ್ರ ಸಮನ್ವಯಾಧಿಕಾರಿ ಸೋಲಿಂಗಪ್ಪ ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.