ಮಂಗಳವಾರ, ಏಪ್ರಿಲ್ 13, 2021
29 °C

ಮಗುವಿಗೆ ಬೊಕ್ಕ ತಲೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಗುವಿಗೆ ಬೊಕ್ಕ ತಲೆಯೇ?

`ಡಾಕ್ಟರ್, ನನ್ನ ಮಗುವಿನ ತಲೆ ಕೂದಲು ಉದುರುತ್ತಿದೆ, ಆತಂಕವಾಗುತ್ತಿದೆ, ಏನು ಮಾಡುವುದು?~- ಇದು ತಾಯಂದಿರು ಕೇಳುವ ಸಾಮಾನ್ಯ ಪ್ರಶ್ನೆ. ನವಜಾತ ಶಿಶುಗಳಿಂದ ಹಿಡಿದು ಶಾಲೆಗೆ ಹೋಗುವ ಮಕ್ಕಳವರೆಗೂ ಈ ಸಮಸ್ಯೆ ಇದ್ದದ್ದೇ. ಅನೇಕ ತಾಯಂದಿರು ಈ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ.ನವಜಾತ ಶಿಶುಗಳಲ್ಲಿ ಕೂದಲು ಉದುರುವುದು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ. ಆದರೆ ಒಂದು ಹಂತದಲ್ಲಿ ಇದು ಸಾಮಾನ್ಯ ಹಾಗೂ ಬಹು ನಿರೀಕ್ಷಿತ ಪ್ರಕ್ರಿಯೆ. ಪಕ್ವ ಕೂದಲು ಬೆಳೆಯುವ ಮೊದಲು ಬಾಲ ಕೂದಲು ಉದುರುವುದು ನೈಸರ್ಗಿಕ ಕ್ರಿಯೆ. ಆದ್ದರಿಂದ ಮೊದಲಿನ ಆರು ತಿಂಗಳಲ್ಲಿ ಕಂಡು ಬರುವ ಈ ಕೂದಲು ಉದುರುವಿಕೆಗೆ ತಾಯಂದಿರು ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ.

 

ಈ ಪ್ರಕಾರದ ಕೂದಲು ಉದುರುವಿಕೆಯನ್ನು `ತೆಲೊಗನ್ ಎಫ್ಲವಿಯಂ~ ಎಂದು ಕರೆಯಲಾಗುತ್ತದೆ. ಹಾರ್ಮೋನ್ ವ್ಯತ್ಯಾಸ ಇದಕ್ಕೆ ಒಂದು ಪ್ರಮುಖ ಕಾರಣ. ಇದೇ ಕಾರಣಕ್ಕೆ, ಹೆರಿಗೆಯಾದ ನಂತರ ತಾಯಂದಿರಲ್ಲೂ ತಲೆಕೂದಲು ಉದುರುವುದನ್ನು ಕಾಣಬಹುದು.ವಿವಿಧ ಕಾರಣ

ಮಕ್ಕಳಲ್ಲಿ ಕೂದಲು ಉದುರುವುದು ಸಾಮಾನ್ಯವಾದರೂ ಇದಕ್ಕೆ ಅನೇಕ ಕಾರಣಗಳನ್ನು ಗುರುತಿಸಬಹುದು. ಮುಖ್ಯವಾಗಿ ಕೂದಲನ್ನು ವಿರುದ್ಧ ದಿಕ್ಕಿನಲ್ಲಿ ತಿಕ್ಕುವುದರಿಂದ ಅಥವಾ ಹಿರಿಯರು ತಲೆಗೆ ಹೊಡೆಯುವ ಚಟದಿಂದಲೂ ಮಕ್ಕಳ ತಲೆಗೂದಲು ಉದುರುವ ಸಾಧ್ಯತೆ ಇರುತ್ತದೆ. ಆದರೆ ಅವರು ಬೆಳೆದು ಹೊರಗೆ ಹೋಗಲು ಆರಂಭಿಸಿದ ನಂತರ ಇದು ತಾನಾಗಿಯೇ ಕಡಿಮೆಯಾಗಬಹುದು.ಅನೇಕ ಮಕ್ಕಳಲ್ಲಿ ತಲೆಯ ಹಿಂಭಾಗದ ಕೂದಲು ನಾಲ್ಕನೇ ತಿಂಗಳಿನಲ್ಲಿ ಹೆಚ್ಚಾಗಿ ಉದುರುವುದನ್ನು ಕಾಣಬಹುದು. ಅಪರೂಪದ ಪ್ರಕರಣಗಳಲ್ಲಿ ಶಿಶುಗಳು ಬೋಳುತಲೆ ಸಮಸ್ಯೆಯೊಂದಿಗೆ ಹುಟ್ಟುತ್ತವೆ. ಇದು ಕೆಲವೊಮ್ಮೆ ತಾನಾಗಿಯೇ ಉಂಟಾಗುತ್ತದೆ ಅಥವಾ ಉಗುರು ಮತ್ತು ಹಲ್ಲಿನ ಸಮಸ್ಯೆಯಿಂದಲೂ ಕಾಣಿಸಿಕೊಳ್ಳಬಹುದು.ಬಾಲ್ಯ ನಂತರದ ಹಂತದಲ್ಲಿ ಕೂದಲು ಉದುರುವುದಕ್ಕೆ ವೈದ್ಯಕೀಯ ಕಾರಣಗಳು ಇರುತ್ತವೆ. ತಲೆಗೆ ಬೀಳುವ ಪೆಟ್ಟು, ಕಬ್ಬಿಣ, ಸತು, ವಿಟಮಿನ್ `ಬಿ~ಯಲ್ಲಿ ಒಂದಾದ ಬಯೋಟಿನ್, ಮೇದಾಮ್ಲ ಕೊರತೆಯಂತಹ ಪೌಷ್ಟಿಕಾಂಶದ ಕೊರತೆಯಿಂದಲೂ ಈ ಸಮಸ್ಯೆ ಬರಬಹುದು.ಬಲವಾಗಿ ಕೂದಲನ್ನು ಎಳೆದಾಡಿ ಪೋನಿ ಕಟ್ಟುವುದು ಅಥವಾ ಜಡೆ ಹಾಕುವುದರಿಂದಲೂ ಕೂದಲು ಉದುರಬಹುದು. ಕೂದಲನ್ನು ಎಷ್ಟು ಸೂಕ್ಷ್ಮವಾಗಿ ಮತ್ತು ಸೌಮ್ಯವಾಗಿ ನೋಡಿಕೊಳ್ಳುತ್ತೇವೋ ಅಷ್ಟು ಸೊಗಸಾಗಿ ಅದು ಬೆಳೆಯುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.ಬೊಕ್ಕತಲೆಯು ಮಕ್ಕಳು ಹಾಗೂ ಹದಿಹರೆಯದವರಲ್ಲಿ ಕಂಡುಬರುವ ಕೂದಲಿನ ಒಂದು ಸಾಮಾನ್ಯ `ಅಲರ್ಜಿಕ್~ ಪರಿಣಾಮ. ಈ ಕಾಯಿಲೆಯಲ್ಲಿ, ಮಕ್ಕಳ ತಲೆಯ ಒಂದು ವೃತ್ತಾಕಾರದ ಪ್ರದೇಶದಲ್ಲಿ ಕೂದಲು ಉದುರುವಿಕೆ ಕಂಡುಬಂದು ಬೋಳುತನ ಉಂಟಾಗುತ್ತದೆ.ಸಾಮಾನ್ಯವಾಗಿ, ಇದು ಕೆಲವೇ ಕಡೆ ಸೀಮಿತವಾಗದೆ ಪರಿಸ್ಥಿತಿ ಹದಗೆಡುತ್ತಾ ಹೋದರೆ ಸ್ಟೀರಾಯ್ಡ ಮುಲಾಮು, ಸ್ಟೀರಾಯ್ಡ ಇಂಜೆಕ್ಷನ್, ಕೂದಲು ಉದುರುವ ಪ್ರದೇಶಕ್ಕೆ ಚಿಕಿತ್ಸೆ ನೀಡಬೇಕಾಗುತ್ತದೆ.

 

ಕೆಲವೊಮ್ಮೆ ಅದರ ಬೆಳವಣಿಗೆಯನ್ನು ಪುನರಾರಂಭಿಸುವುದು ಕಷ್ಟವಾಗಬಹುದು. ಅಲ್ಲದೇ, ಇದರಿಂದ ಹಾರ್ಮೋನ್ ಸಮಸ್ಯೆಗಳು ಸಹ ಉದ್ಭವಿಸಬಹುದು. ಇನ್ನು ಕೆಲವು ಮಕ್ಕಳಲ್ಲಿ ಹೈಪೊ ಥೈರಾಯ್ಡ ಕಾರಣ ಆಗಿರಬಹುದು. (ಅಂದರೆ, ಮೆಟಬಾಲಿಸಂ ಅನ್ನು ನಿಯಂತ್ರಿಸಲು ಸಾಕಾಗುವಷ್ಟು ಹಾರ್ಮೋನ್ ಬಿಡುಗಡೆ ಸಾಧ್ಯವಾಗದ ಸ್ಥಿತಿ)ಏನು ಪರಿಹಾರ?

ಕೂದಲ ಬೆಳವಣಿಗೆಯನ್ನು ಉತ್ತೇಜಿಸಲು ಮಕ್ಕಳ ಕೂದಲು ಹಾಗೂ ನೆತ್ತಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಬೇಕು. ಕೂದಲು ಶುಚಿಗೊಳಿಸಲು ಮಗುವಿಗಾಗಿಯೇ ಇರುವ ಪ್ರತ್ಯೇಕ ಹಾಗೂ ಸೌಮ್ಯ ಶಾಂಪೂ ಬಳಸುವುದು ಸೂಕ್ತ. ಆದರೆ ಮೇಲಿಂದ ಮೇಲೆ ಅತಿಯಾಗಿ ಶಾಂಪೂ ಬಳಸುವುದರಿಂದ ಕೂದಲು ತನ್ನ ನೈಸರ್ಗಿಕ ಗುಣವನ್ನು ಕಳೆದುಕೊಂಡು ಒಣಗಿದಂತೆ ಆಗುತ್ತದೆ.ಇದು ತೆಳು ಹಾಗೂ ಅನಾರೋಗ್ಯಕರ ಕೂದಲ ಬೆಳವಣಿಗೆಗೆ ಕಾರಣವಾಗಬಹುದು.ಇಂತಹ ಅನೇಕ ಕಾರಣಗಳಿಂದ ಮಕ್ಕಳಲ್ಲಿ ಕೂದಲು ಹೆಚ್ಚಾಗಿ ಉದುರುತ್ತದೆ. ಸಾಮಾನ್ಯವಾಗಿ ಮಕ್ಕಳಿಗೆ ಆರು ತಿಂಗಳಾದ ನಂತರ ಈ ಸಮಸ್ಯೆ ತಾನಾಗಿಯೇ ನಿಂತು ಹೋಗುತ್ತದೆ. ಆದರೆ ನಂತರವೂ ಕೂದಲು ಸರಿಯಾಗಿ ಬೆಳೆಯಲಿಲ್ಲವಾದರೆ ಮಾತ್ರ ತಪ್ಪದೇ ವೈದ್ಯರನ್ನು ಕಾಣಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.