ಶುಕ್ರವಾರ, ಮೇ 27, 2022
27 °C

ಮಣ್ಣೆತ್ತಿನ ಹಬ್ಬಕ್ಕೆ ಸಡಗರದ ಸಿದ್ಧತೆ

ಪ್ರಜಾವಾಣಿ ವಾರ್ತೆ/ ಚಂದ್ರಕಾಂತ ಬಾರಕೇರ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ಕೃಷಿ ವರ್ಷಾವಧಿಯಲ್ಲಿ ಬರುವ ಐದು ಬಗೆಯ ಮಣ್ಣಿನ ಪೂಜಾ ವಿಧಿಗಳಲ್ಲಿ `ಮಣ್ಣೆತ್ತಿನ ಪೂಜೆ' ಮೊದಲ ಇಂತಹ ಹಬ್ಬವಾಗಿದೆ. ಜ್ಯೇಷ್ಠ ವದ್ಯ (ಬಹುಳ) ಅಮವಾಸ್ಯೆಯ ದಿನ ಉತ್ತರ ಕರ್ನಾಟಕದಲ್ಲಿ ಶ್ರದ್ಧೆ-ಭಕ್ತಿ ಹಾಗೂ ಸಡಗರದಿಂದ ಆಚರಿಸಲಾಗುವ ಈ ಪೂಜೆ ಜನಪದರಲ್ಲಿ `ಮಣ್ಣೆತ್ತಿನ ಹಬ್ಬ' ಎಂದೇ ಪ್ರಸಿದ್ಧಿ. ಸಕಲ ಜೀವರಾಶಿಗೆ ಅನ್ನ ಹಾಕುವ ಸಲುವಾಗಿ ದುಡಿಯುವ ಬಸವಣ್ಣನಿಗೆ ತಮ್ಮ ಕೃತಜ್ಞತೆಯನ್ನು ಸೂಚಿಸಲು ರೈತರು ಮಣ್ಣಿನಿಂದ ತಯಾರಿಸಿದ `ಬಸವಣ್ಣ'ಗಳ ಪೂಜೆಯನ್ನು ನೆರವೇರಿಸುತ್ತಾರೆ.ಪೂಜಾ ಪದ್ಧತಿ: ಹಬ್ಬದ ದಿನ ಬೆಳಿಗ್ಗೆ ಊರ ಮುಂದಿನ ಹೊಲ ಇಲ್ಲವೇ ಕರೆ, ಹಳ್ಳ, ಹೊಳೆಯಿಂದ ಜಿಗುಟಾದ ಕರಿಯ ಮಣ್ಣು ತಂದು ಎರಡು ಎತ್ತುಗಳನ್ನು ತಯಾರಿಸುತ್ತಾರೆ. ಎತ್ತುಗಳನ್ನು ನಡು ಮನೆಯಲ್ಲಿ ಹಸಿ ಮಣೆಯ ಮೇಲಾಗಲಿ, ಎಲೆಯ ಮಂಟಪದಲ್ಲಾಗಲಿ ಅಥವಾ ದೇವರ ಜಗುಲಿಯ ಮೇಲಾಗಲಿ ಇರಿಸಿ ವಿಧಿವತ್ತಾಗಿ ಪೂಜೆ ಮಾಡುತ್ತಾರೆ.ಬೆಳವಲದ ಕೆಲವು ಊರುಗಳಲ್ಲಿ ಆಯಾ ಊರಿನ ಹಿರಿಯ ಮಠದಲ್ಲಿ ಮಣ್ಣಿನ ಬಸವಣ್ಣನನ್ನು ಇರಿಸುವ ಪದ್ಧತಿಯೂ ಇದೆ.

ಈ ಬಸವಣ್ಣಗಳಿಗೆ ಕರಿಗಡಬಿನ ಎಡೆಯಾಗಬೇಕಾದದ್ದು ಕಡ್ಡಾಯ. ಕಾಯಿಪಲ್ಲೆ, ಅನ್ನ, ತುಪ್ಪ, ಹಪ್ಪಳ. ಸಂಡಿಗೆ ಮುಂತಾದ ಭಕ್ಷ್ಯಗಳನ್ನು ಎಡೆ ತೋರಿಸುವರು. ಊರಿನ ಹೆಣ್ಣುಮಕ್ಕಳೆಲ್ಲ ಒಂದೆಡೆ ಸೇರಿ ಬಸವಣ್ಣನಿಗೆ ಆರತಿ ಮಾಡುವುದು, ಬಸವಣ್ಣನ ಮೇಲೆ ಹಾಡುಗಳನ್ನು ಹೇಳುತ್ತ ಕೋಲಾಟವಾಡುವುದು ಸಹ ರೂಢಿಯಲ್ಲಿದೆ.ವಿಶೇಷ ಪೂಜೆ: ಕುಂಬಾರರು ಜಿಗುಟಾದ ಮಣ್ಣಿನಿಂದ ತಯಾರಿಸಿದ ಬಸವಣ್ಣನ ಮೂರ್ತಿಯನ್ನು ಪೂಜೆ ಮಾಡುವುದು ಮಣ್ಣಿನ ಮೊದಲ ಪೂಜೆ. ಈ ಬಸವಣ್ಣನನ್ನು ಅಮಾವಾಸ್ಯೆ ದಿನ ಕುಂಬಾರರು ಬುಟ್ಟಿಯಲ್ಲಿಟ್ಟುಕೊಂಡು  ಮಾರುತ್ತಾರೆ.ಕೆಲವರು ಜೋಳ, ಗೋಧಿಗೂ ಕೊಡುತ್ತಾರೆ. ಹೀಗೆ ತಂದ ಬಸವಣ್ಣನನ್ನು ಹಳ್ಳಿ ಹೆಣ್ಣು ಮಕ್ಕಳು ಎಲೆಯ ಮಂಟಪದಲ್ಲಿ ಸಿಂಗರಿಸಿ, ಪೂಜೆ ಮಾಡಿ ನೈವೇದ್ಯದ ಎಡೆ ಹಿಡಿದು ಹಾಡುತ್ತಾರೆ. ಬಳಿಕ ಬಸವಣ್ಣನ್ನು ಬುಟ್ಟಿಯಲ್ಲಿಟ್ಟುಕೊಂಡು ಮಕ್ಕಳೆಲ್ಲ ಕೊರಳಿಗೆ ಗೆಜ್ಜೆ, ಗುಮರಿಗಳ ಸರ ಹಾಕಿಕೊಂಡು ಮನೆ- ಮನೆಗೆ ತೆರಳಿ `ಕರಿ ಜ್ವಾಳಾ ನೀಡ್ರಿ...' ಎನ್ನುತಾ ಸಂಜೆ ವರೆಗೆ ತಿರುಗಿ ಜೋಳ, ಅಕ್ಕಿ, ಪುಡಿಗಾಸು ಸಂಗ್ರಹಿಸುತ್ತಾರೆ.ಹೀಗೆ ಸಂಗ್ರಹಿಸಿದ ದವಸ, ಧಾನ್ಯಗಳನ್ನು ಅಂಗಡಿಗೆ ಮಾರಿ ಆ ಹಣದಿಂದ ಮಂಡಕ್ಕಿ ತರುತ್ತಾರೆ. ಬಳಿಕ ಬಸವಣ್ಣನ ಮೂರ್ತಿಯನ್ನು ಗ್ರಾಮದ ಬಾವಿಕಟ್ಟಿ ಮೇಲಿಟ್ಟು ಪೂಜೆ ಸಲ್ಲಿಸಿ ಬಾವಿಯೊಳಗೆ ಹಾಕುತ್ತಾರೆ. ಆನಂತರ ಸಾರ್ವಜನಿಕರಿಗೆ ಮಂಡಕ್ಕಿ ಹಂಚಿ ಸಂಭ್ರಮಿಸುವ ಮೂಲಕ `ಮಣ್ಣೆತ್ತಿನ ಅಮಾವಾಸ್ಯೆ'ಗೆ ತೆರೆ ಎಳೆಯುವುದು ಸಂಪ್ರದಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.