ಸೋಮವಾರ, ಮೇ 23, 2022
30 °C

ಮತದಾನ ಮುಕ್ತಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕದ ರಾಜಕೀಯವನ್ನು ನೋಡುತ್ತಾ ಬಂದವರಿಗೆ ವಿಧಾನಸಭೆಯಿಂದ ವಿಧಾನಪರಿಷತ್‌ ಗೆ ನಡೆದ ಚುನಾವಣೆಯಲ್ಲಿನ ಅಡ್ಡಮತದಾನಅಚ್ಚರಿ ಉಂಟು ಮಾಡಲಾರದು.ರಾಜ್ಯದ ಎರಡು ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಆಂತರಿಕ ಭಿನ್ನಮತ ಮತ್ತು ಗುಂಪುಗಾರಿಕೆಯಿಂದಾಗಿ ಒಡೆದ ಮನೆಗಳಾಗಿ ಹೋಗಿವೆ.ಈ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡಿದಾಗಲೇ ಎರಡೂ ಪಕ್ಷಗಳಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬಹಿರಂಗವಾಗಿಯೇ ಬಂಡಾಯದ ಬಾವುಟ ಹಾರಿಸಿ ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಬಿಜೆಪಿಯಲ್ಲಿ ರಾಜಿಪಂಚಾಯಿತಿ ನಡೆದು ಭಿನ್ನಮತದ ಬೆಂಕಿಯನ್ನು ಆರಿಸಲು ನಡೆದ ಪ್ರಯತ್ನದ ಹೊರತಾಗಿಯೂ ಅಂತರಂಗದಲ್ಲಿ ಅದು ಬೂದಿಮುಚ್ಚಿದ ಕೆಂಡದಂತೆ ಇತ್ತು. ಅವಕಾಶವನ್ನು ನೋಡಿ ಎರಡೂ ಕಡೆಯ ಭಿನ್ನಮತೀಯರು ಕೈಚಳಕ ತೋರಿಸಿದ್ದಾರೆ.ಬಿಜೆಪಿಯ ರಾಜ್ಯ ಅಧ್ಯಕ್ಷರಾದ ಕೆ.ಎಸ್.ಈಶ್ವರಪ್ಪ ಅವರು `ಶಾಸಕರು ಮಾರಾಟದ ವಸ್ತುವಾಗಿರುವುದು ರಾಷ್ಟ್ರೀಯ ಪಕ್ಷಗಳಿಗೆ  ಎಚ್ಚರಿಕೆಯ ಗಂಟೆ~ ಎಂದು ಮಹಾಮುತ್ಸದ್ದಿಯಂತೆ ಮಾತನಾಡಿದ್ದಾರೆ.

 

`ಆಪರೇಷನ್ ಕಮಲ~ ಎಂಬ ಅನೈತಿಕ ರಾಜಕಾರಣದ ಮೂಲಕ ಶಾಸಕರ ತಲೆಗೆ ಬೆಲೆಕಟ್ಟಿ ಖರೀದಿಸಿದ್ದು ತಮ್ಮ ಪಕ್ಷ ಎನ್ನುವುದನ್ನು ಅವರು ಮರೆತುಬಿಟ್ಟಂತಿದೆ. ಚುನಾವಣೆಯಲ್ಲಿ ನಡೆದ ಅಡ್ಡಮತದಾನ ಎನ್ನುವುದು ರಾಜಕೀಯಕ್ಕೆ ಹಿಡಿದ ರೋಗದ ಲಕ್ಷಣ ಅಷ್ಟೆ. ರೋಗದ ಮೂಲ ರಾಜಕೀಯ ಪಕ್ಷಗಳು ನಡೆಸುತ್ತಾ ಬಂದ ಅನೈತಿಕ ರಾಜಕಾರಣದಲ್ಲಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಕೂಡಾ ಹೊರತಲ್ಲ.ಮೂರು ಅಭ್ಯರ್ಥಿಗಳನ್ನಷ್ಟೇ ಗೆಲ್ಲಿಸುವ ಸಾಮರ್ಥ್ಯ ಇರುವಾಗ ಶ್ರಿಮಂತ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಿದ ಹಿಂದಿನ ಉದ್ದೇಶವೇನು? ಹಣದ ಬಲದಿಂದ ಮತಗಳನ್ನು ಖರೀದಿಸಿ ಗೆಲ್ಲಲಿ ಎಂದಲ್ಲವೇ? ಅವರು ಅದನ್ನೇ ಮಾಡಿ ತೋರಿಸಿದ್ದಾರೆ, ಅನುಭವಿಸಿ.ಮತಗಟ್ಟೆ ವಶೀಕರಣ, ನಕಲಿ ಮತದಾನ ಮೊದಲಾದ ಚುನಾವಣಾ ಅಕ್ರಮಗಳು ನಿಯಂತ್ರಣಕ್ಕೆ ಬಂದಿರುವುದಕ್ಕೆ ಸಜ್ಜನ ರಾಜಕಾರಣಿಗಳು ಇಲ್ಲವೇ ಜಾಗೃತ ಮತದಾರರು ಕಾರಣ ಅಲ್ಲ. ಇದು ಸಾಧ್ಯವಾಗಿದ್ದು ಬಿಗಿಯಾದ ಕಾನೂನು ಮತ್ತು ಆಧುನಿಕ ತಂತ್ರಜ್ಞಾನದ ಬಳಕೆಯಿಂದ. ಆರೇಳು ವರ್ಷಗಳ ಹಿಂದೆ ರಾಜ್ಯಸಭಾ ಚುನಾವಣೆ ಇಂತಹದ್ದೇ ಸವಾಲನ್ನು ಎದುರಿಸಿತ್ತು.ರಹಸ್ಯಮತದಾನದ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು  ಸಂಸದರು ಮತ್ತು ಶಾಸಕರನ್ನು  ಶ್ರಿಮಂತರು, ಉದ್ಯಮಿಗಳು ಖರೀದಿಸಿ ರಾಜ್ಯಸಭೆಗೆ ಪ್ರವೇಶ ಮಾಡತೊಡಗಿದ್ದರು. ಇದನ್ನು ತಡೆಯಲು ಪ್ರಜಾಪ್ರತಿನಿಧಿ ಕಾಯ್ದೆಗೆ 2004ರಲ್ಲಿ ತಿದ್ದುಪಡಿ ಮಾಡಿ ರಹಸ್ಯಮತದಾನದ ಬದಲಿಗೆ ಮುಕ್ತ ಮತದಾನದ ಪದ್ದತಿಯನ್ನು ಜಾರಿಗೆ ತರಲಾಯಿತು.ಇದರ ಅನ್ವಯ ಮತದಾರರು ಅವರದ್ದೇ ಪಕ್ಷ ನೇಮಿಸಿರುವ ಏಜೆಂಟ್‌ಗೆ ಮತಪತ್ರವನ್ನು ತೋರಿಸಿದ ನಂತರ ಮತಪೆಟ್ಟಿಗೆಗೆ ಹಾಕಬೇಕಾಗುತ್ತದೆ. ಇದರಿಂದ ಅಡ್ಡಮತದಾನಕ್ಕೆ ಅವಕಾಶವೇ ಇಲ್ಲ. ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ವಿಪ್ ಜಾರಿಗೊಳಿಸುವುದರಿಂದ ಅಡ್ಡಮತದಾನ ನಡೆಸಿದವರು ಸದಸ್ಯತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ.ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಪರೋಕ್ಷ ಚುನಾವಣೆಯಲ್ಲಿಯೂ ಈಗಿನ ರಹಸ್ಯಮತದಾನದ ಬದಲಿಗೆ ಮುಕ್ತ ಮತದಾನ ಪದ್ದತಿಯನ್ನು ಜಾರಿಗೆ ತರುವುದರಿಂದ ಮಾತ್ರ `ಶಾಸಕರ ಖರೀದಿ~ಯಂತಹ ನೀತಿಗೆಟ್ಟ ರಾಜಕಾರಣವನ್ನು ಕೊನೆಗೊಳಿಸಬಹುದು. ಚುನಾವಣಾ ಆಯೋಗ ಯೋಚಿಸಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.