ಶುಕ್ರವಾರ, ಫೆಬ್ರವರಿ 26, 2021
22 °C

ಮತದಾರ ಓಲೈಕೆಗೆ ಶಾಸಕ ಆಕಾಂಕ್ಷಿಗಳು...

ರಾಹುಲ ಬೆಳಗಲಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತದಾರ ಓಲೈಕೆಗೆ ಶಾಸಕ ಆಕಾಂಕ್ಷಿಗಳು...

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆ ಇನ್ನೂ ದೂರವಿದ್ದರೂ ಜಿಲ್ಲೆಯಲ್ಲಿ ಚುನಾವಣೆಯ ಕಾವು ಈಗಲೇ ಕಂಡುಬರುತ್ತಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳು ಬಗೆಬಗೆಯ ತಂತ್ರಗಳನ್ನು ಅನುಸರಿಸಿ ಮತದಾರರನ್ನು ಓಲೈಸುತ್ತಿದ್ದಾರೆ.ಉದ್ಯಮಿ ಮತ್ತು ಆಗರ್ಭ ಶ್ರೀಮಂತರಾಗಿದ್ದರೂ ಅದರಿಂದ ಗುರುತಿಸಿಕೊಳ್ಳಲು ಬಯಸದ ಅವರು ತಮ್ಮನ್ನು ತಾವು `ಸಮಾಜ ಸೇವಕರು~ ಎಂದು ಕರೆಸಿಕೊಂಡು ಸರ್ಕಾರ ಈವರೆಗೆ ಕೊಡದ ಸೌಕರ್ಯಗಳನ್ನು ಕೊಡುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ!ಶಾಶ್ವತ ಪರಿಹಾರಕ್ಕಿಂತ ತಾತ್ಕಾಲಿಕ ಸೌಲಭ್ಯಗಳಿಗೆ ಹೆಚ್ಚಿನ ಮಣೆ ಹಾಕುವ ಈ ರೀತಿಯ `ಸಮಾಜ ಸೇವಕರು~ ಜಿಲ್ಲೆಯ ಆರೂ ತಾಲ್ಲೂಕುಗಳಲ್ಲಿ ಇದ್ದು, ಹದಿನೈದು ದಿನಗಳು ಅಥವಾ ತಿಂಗಳಿಗೊಮ್ಮೆ ಕಾರ್ಯಕ್ರಮಗಳನ್ನು ಆಯೋಜಿಸಿ ತಮ್ಮ ಸಮಾಜ ಸೇವೆ ಪ್ರದರ್ಶಿಸುತ್ತಿದ್ದಾರೆ.ತಮ್ಮ ಭಾವಚಿತ್ರಗಳುಳ್ಳ ಬಸ್‌ಪಾಸ್ ಮತ್ತು ನೋಟ್‌ಪುಸ್ತಕಗಳನ್ನು ವಿತರಿಸುತ್ತಿದ್ದಾರೆ. ಒಬ್ಬರು ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವಿತರಿಸಿದರೆ, ಮತ್ತೊಬ್ಬರು ಉಚಿತ ನೋಟ್ ಪುಸ್ತಕಗಳನ್ನು ಪೂರೈಸುತ್ತಾರೆ. ಇನ್ನೂ ಕೆಲವರು ರಂಗೋಲಿ ಸ್ಪರ್ಧೆ, ಕ್ರೀಡಾಕೂಟ ಮತ್ತು ಆರೋಗ್ಯ ಶಿಬಿರಗಳನ್ನು ಏರ್ಪಡಿಸುತ್ತಾರೆ.ಬೀದಿ ವ್ಯಾಪಾರಸ್ಥರ ಮತ್ತು ಮಳಿಗೆದಾರರ ವಾರ್ಷಿಕ ತೆರಿಗೆ ಭರಿಸುತ್ತಿದ್ದಾರೆ. ಮದುವೆಗೆ ಮತ್ತು ಅಂತ್ಯಸಂಸ್ಕಾರಕ್ಕೂ ಹಣ ನೀಡುತ್ತಾರೆ. ಯುವಜನರಿಗೆ ಕ್ರಿಕೆಟ್‌ಬ್ಯಾಟು ಸೇರಿದಂತೆ ಇತರ ಕ್ರೀಡಾ ಸಾಮಗ್ರಿಗಳನ್ನು ಪೂರೈಸಿದರೆ, ವೃದ್ಧರಿಗೆ ತೀರ್ಥಕ್ಷೇತ್ರಗಳಿಗೆ ಪ್ರವಾಸ ಸೌಲಭ್ಯ ಏರ್ಪಡಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಹಲವು ಜಯಂತಿ ಆಚರಣೆಗೆ ಹಣದ ಸಹಾಯವನ್ನೂ ನೀಡುತ್ತಿದ್ದಾರೆ.ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ, ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳಲ್ಲಿ `ಸಮಾಜ ಸೇವಕರು~ ಒಂದಿಲ್ಲೊಂದು ರೀತಿಯಲ್ಲಿ ಜನರ ಮೇಲೆ ತಮ್ಮ ಪ್ರಭಾವ ಬೀರಲು ಯತ್ನಿಸುತ್ತಿದ್ದು, ಎಲ್ಲಿ ನೋಡಿದಲ್ಲಿ ಅವರ ಭಾವಚಿತ್ರ ಮತ್ತು ಹೆಸರುಗಳುಳ್ಳ ಬ್ಯಾನರ್, ಪೋಸ್ಟರ್‌ಗಳು ಕಣ್ಣಿಗೆ ರಾಚುತ್ತವೆ. ಮದುವೆಯೊಂದೇ ಮಾಡಿದರೆ ಸಾಲದೆಂದು ಹಸುಗಳನ್ನು ಸಹ ಉಚಿತವಾಗಿ ವಿತರಿಸುತ್ತಾರೆ.ಸಮಸ್ಯೆಗಳಿದ್ದರೆ ಸಂಸದರನ್ನು ಅಥವಾ ಶಾಸಕರನ್ನು ಬೇಡ, ನನ್ನ ಕೇಳಿ. ಕ್ಷಣಮಾತ್ರದಲ್ಲಿ ಬಗೆಹರಿಸುತ್ತೇನೆ~ ಎಂದು  ಆಶ್ವಾಸನೆಯನ್ನೂ ನೀಡುತ್ತಾರೆ.ವಿವಿಧ ಸ್ವರೂಪಗಳಲ್ಲಿ ಸೇವೆಗಳನ್ನು ಪಡೆದುಕೊಳ್ಳುವ ಜನರು, ಚುನಾವಣೆ ಸಂದರ್ಭದಲ್ಲಿ ತಮ್ಮನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಎಂದು ಸೂಚ್ಯವಾಗಿ ಹೇಳುತ್ತಾರೆ. ರಾಜ್ಯಮಟ್ಟದ ಮುಖಂಡರನ್ನು ತಾಲ್ಲೂಕಿಗೆ ಕರೆಸಿ ಅವರ ಮೂಲಕವೂ ಸಹ ಅದೇ ಮಾತನ್ನು ಹೇಳಿಸುತ್ತಾರೆ.ವಿಧಾನಪರಿಷತ್ತಿನ ಸದಸ್ಯರು ಸೇರಿದಂತೆ ಇತರ ಜನಪ್ರತಿನಿಧಿಗಳು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, `ನಿಮಗಾಗಿ ಕೋಟ್ಯಂತರ ರೂಪಾಯಿ ವ್ಯಯ ಮಾಡುತ್ತಿರುವ ಸಮಾಜ ಸೇವಕರನ್ನು ಗೌರವಿಸಿ. ಚುನಾವಣೆಯಲ್ಲಿ ಹೆಚ್ಚಿನ ಮತ ನೀಡಿ, ಅವರನ್ನು ಗೆಲ್ಲಿಸಿ. ಅವರ ಸೇವೆ ಪಡೆದಿರುವುದನ್ನು ಮರೆಯಬೇಡಿ~ ಎನ್ನುತ್ತಾರೆ.`ನೋಟ್ ಪುಸ್ತಕ ಮತ್ತು ಬಸ್‌ಪಾಸ್‌ಗಳನ್ನು ತಮ್ಮ ಭಾವಚಿತ್ರಗಳನ್ನು ಮುದ್ರಿಸಿ ನೀಡುವ ಸಮಾಜ ಸೇವಕರು ನಮ್ಮನ್ನು ಜೀವನ ಪೂರ್ತಿ ಸಾಕಿ ಸಲುಹುವರೇ~ ಎಂದು ಕಾಲೇಜು ವಿದ್ಯಾರ್ಥಿನಿ ಸೌಮ್ಯಾ ಪ್ರಶ್ನಿಸುತ್ತಾರೆ. `ಇನ್ನೂ ಅತಂತ್ರವಾಗಿಯೇ ಉಳಿದಿರುವ ಶಾಶ್ವತ ನೀರಾವರಿ ಯೋಜನೆ ಬಗ್ಗೆಯೂ ಅವರು ಏನನ್ನೂ ಹೇಳುವುದಿಲ್ಲ. ಬೆಂಗಳೂರು ಸೇರಿದಂತೆ ಬೇರೆ ಬೇರೆ ಊರುಗಳಲ್ಲಿ ವಾಸವಿರುವ ಅವರು ಕಾರ್ಯಕ್ರಮವನ್ನೇ ನೆಪವಾಗಿಸಿಕೊಂಡು ನಮ್ಮಲ್ಲಿಗೆ ಬರುತ್ತಾರೆ~ ಎಂದು ದೂರುತ್ತಾರೆ.`ಜನರ ಅಸಹಾಯಕತೆ, ಬಡತನ ಮತ್ತು ಸಂಕಷ್ಟಗಳನ್ನೇ ಬಂಡವಾಳ ಮಾಡಿಕೊಂಡಿರುವ ಸಮಾಜ ಸೇವಕರು, ತಮ್ಮ ಬಳಿ  ಇರುವ ಹಣದಿಂದ ಎಲ್ಲವನ್ನೂ ಖರೀದಿಸಬಹುದು ಎಂಬ ಭಾವನೆ ಹೊಂದಿದ್ದಾರೆ. ನೇರವಾಗಿ ಅಲ್ಲದಿದ್ದರೂ ವಾಮಮಾರ್ಗದ ಮೂಲಕ ಮತದಾರರನ್ನು ಖರೀದಿಸುತ್ತಿದ್ದಾರೆ~ ಎಂದು  ಸ್ಥಳೀಯರಾದ ನಾರಾಯಣಸ್ವಾಮಿ ದೂರುತ್ತಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.