ಭಾನುವಾರ, ಮೇ 16, 2021
29 °C

ಮತ್ತಿಕಟ್ಟಿ-ಗೋ.ಮಧುಸೂದನ್ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕುರಿತು ಬಿಜೆಪಿಯ ಗೋ.ಮಧುಸೂದನ್ ಟೀಕಿಸಿದ್ದು ಮಂಗಳವಾರ ವಿಧಾನ ಪರಿಷತ್‌ನಲ್ಲಿ ಗದ್ದಲಕ್ಕೆ ಎಡೆಮಾಡಿತು. ಆವೇಶಭರಿತರಾಗಿ ಬಿಜೆಪಿ, ಸಂಘ ಪರಿವಾರದ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದ ಕಾಂಗ್ರೆಸ್‌ನ ವೀರಣ್ಣ ಮತ್ತಿಕಟ್ಟಿ ಅವರನ್ನು ವಿಪಕ್ಷ ನಾಯಕರೇ ಸಮಾಧಾನಪಡಿಸಬೇಕಾಯಿತು.ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕರಿಸುವ ಪ್ರಸ್ತಾವ ಮಂಡಿಸಿ ಮಾತನಾಡಿದ ಮತ್ತಿಕಟ್ಟಿ, ಇಂದಿರಾ ಗಾಂಧಿಯವರನ್ನು ಸ್ಮರಿಸಿ ದರು. ಆಗ ಇಂದಿರಾ ಹತ್ಯೆ ಕುರಿತು ಪ್ರಸ್ತಾಪಿಸಿದ ಮಧುಸೂದನ್, ಹತ್ಯೆಗೆ ಕಾರಣವಾದ ಅಂಶಗಳ ಕುರಿತು ತಮ್ಮದೇ ಧಾಟಿಯಲ್ಲಿ ವಾದಿಸಿದರು. ಇದು ಕೋಲಾಹಲಕ್ಕೆ ಕಾರಣವಾಯಿತು. ಆಕ್ರೋಶಭರಿತರಾದ ಮತ್ತಿಕಟ್ಟಿ, ದೀರ್ಘಕಾಲ ಬಿಜೆಪಿ ಹಾಗೂ ಸಂಘ ಪರಿವಾರದ ವಿರುದ್ಧ ವಾಗ್ದಾಳಿ ನಡೆಸಿದರು.ಸಭಾಪತಿಯವರ ಪೀಠದಲ್ಲಿದ್ದ ಉಪ ಸಭಾಪತಿ ವಿಮಲಾ ಗೌಡ ಅವರು ಇಬ್ಬರನ್ನೂ ಸಮಾಧಾನಪಡಿಸಲು ಹಲವು ಬಾರಿ ಪ್ರಯತ್ನಿಸಿದರು. ತೀವ್ರ ಭಾವೋದ್ವೇಗಕ್ಕೆ ಒಳಗಾದವರಂತೆ ಕಂಡುಬಂದ ಮತ್ತಿಕಟ್ಟಿ, ವಾಗ್ದಾಳಿ ಮುಂದುವರಿಸಿದರು. ಕಾಂಗ್ರೆಸ್‌ನ ಅಲ್ಲಮಪ್ರಭು ಪಾಟೀಲ, ಶ್ರೀನಿವಾಸ ಮಾನೆ,  ಆರ್.ವಿ.ವೆಂಕಟೇಶ್ ಮತ್ತಿತರರು ಅವರಿಗೆ ದನಿಗೂಡಿಸಿದರು.ವಾಕ್ಸಮರ ಮುಂದುವರಿದಾಗ ಮಧ್ಯ ಪ್ರವೇಶ ಮಾಡಿದ ವಿರೋಧ ಪಕ್ಷದ ನಾಯಕ ಡಿ.ವಿ.ಸದಾನಂದ ಗೌಡ, ಆವೇಶಭರಿತರಾಗದಂತೆ ಮತ್ತಿಕಟ್ಟಿ ಅವರಲ್ಲಿ ಮನವಿ ಮಾಡಿದರು. ಮಧುಸೂದನ್ ಅವರನ್ನು ನಿಯಂತ್ರಿಸುವ ಭರವಸೆಯನ್ನೂ ನೀಡಿದರು. ಇದೇ ವೇಳೆ ಪದೇ ಪದೇ ಮಾತಿನ ಮಧ್ಯೆ ಪ್ರವೇಶಿಸದಂತೆ ಮಧುಸೂದನ್ ಅವರಿಗೆ ಎಚ್ಚರಿಕೆ ನೀಡಿದ ವಿಮಲಾ ಗೌಡ, ಮಾತಿನ ಸಮರಕ್ಕೆ ತೆರೆ ಎಳೆದರು.ಜನರನ್ನು ಮರೆತರೆ ತಕ್ಕ ಶಾಸ್ತಿ

ರಾಜಕಾರಣದಲ್ಲಿ ಇರುವವರು ಜನರ ಭಾವನೆ ಮತ್ತು ಆಶಯಗಳಿಗೆ ತಕ್ಕಂತೆಯೇ ನಡೆದು ಕೊಳ್ಳಬೇಕು. ಸ್ವೇಚ್ಛೆ ಪ್ರದರ್ಶಿಸಿದರೆ ಬಿಜೆಪಿಗೆ ಆಗಿರುವ ಸ್ಥಿತಿಯೇ ಎಲ್ಲ ಪಕ್ಷಗಳಿಗೂ ಆಗುತ್ತದೆ ಎಂದು ಕಾಂಗ್ರೆಸ್‌ನ ಹಿರಿಯ ಸದಸ್ಯ ಎಂ.ವಿ.ರಾಜಶೇಖರನ್ ಎಚ್ಚರಿಸಿದರು.ವಂದನಾ ನಿರ್ಣಯ ಮಂಡನೆಯ ಚರ್ಚೆ ರಾಜಕೀಯದತ್ತ ತಿರುಗಿತು. ಆಗ ಮಾತನಾಡಿದ ಅವರು, `2004ರ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿಯ 110 ಅಭ್ಯರ್ಥಿಗಳನ್ನು ಗೆಲ್ಲಿ ಸಿದ್ದರು. 2013ರ ಚುನಾವಣೆಯಲ್ಲಿ ಅದೇ ಮತದಾರರು ಬಿಜೆಪಿಯ 110 ಅಭ್ಯರ್ಥಿಗಳ ಠೇವಣಿ ಕಳೆದಿದ್ದಾರೆ. ಇದು ರಾಜಕೀಯ ಪಕ್ಷಗಳಿಗೆ ಜನರು ನೀಡಿದ ಎಚ್ಚರಿಕೆ' ಎಂದು ಪ್ರತಿ ಪಾದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.