ಸೋಮವಾರ, ಮೇ 17, 2021
23 °C

ಮತ್ತೆ ಉಮೇಶ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೆ ಉಮೇಶ್!

ಒಂದೇ ಕಥೆ, ಒಂದೇ ಬಗೆಯ ಶೀರ್ಷಿಕೆ. ಎರಡು ಸಿನಿಮಾ!

ಒಂದು ಚಿತ್ರತಂಡ ಭರ್ಜರಿ ಪ್ರಚಾರ ಮಾಡಿ ನಂತರ ಚಿತ್ರೀಕರಣದಲ್ಲಿ ತೊಡಗಿದ್ದರೆ, ಮತ್ತೊಂದು ಚಿತ್ರತಂಡ ಸದ್ದಿಲ್ಲದೆ ಅದೇ ರೀತಿಯ ಕಥನವನ್ನು ಅದೇ ಶೀರ್ಷಿಕೆಯೊಂದಿಗೆ ಚಿತ್ರಿಸಿ ಬಿಡುಗಡೆಗೆ ದಿನಗಳನ್ನೆಣಿಸುತ್ತಿದೆ.



ಮಳವಳ್ಳಿ ಸಾಯಿಕೃಷ್ಣ ವಿಕೃತಕಾಮಿ ಉಮೇಶ್‌ರೆಡ್ಡಿಯ ಜೀವನಗಾಥೆ ಆಧರಿಸಿ `ಉಮೇಶ್ ರೆಡ್ಡಿ' ಎಂಬ ಸಿನಿಮಾ ಮಾಡುವುದನ್ನು ಸುದ್ದಿಗೋಷ್ಠಿಯಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಅದು ಉಮೇಶ್‌ರೆಡ್ಡಿಯ ಜೀವನವನ್ನಾಗಲೀ ವಿಕೃತಿಯನ್ನಾಗಲೀ ತೋರಿಸುವ ಚಿತ್ರವಲ್ಲ, ಬದಲಾಗಿ ಸಂದೇಶ ನೀಡುವ ಚಿತ್ರ ಎಂದಿದ್ದರು ಅವರು. ಇದೇ ಮಾತನ್ನು ಹೇಳುತ್ತಿದೆ `ಉಮೇಶ್' ಚಿತ್ರತಂಡ. `ಉಮೇಶ್ ರೆಡ್ಡಿ' ಇನ್ನೂ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರೆ, `ಉಮೇಶ್' ಸದ್ದುಗದ್ದಲವಿಲ್ಲದೆ ಮೂವತ್ತು ದಿನಗಳಲ್ಲೇ ಚಿತ್ರೀಕರಣ ಮುಗಿಸಿದ್ದಲ್ಲದೆ, ಸೆನ್ಸಾರ್‌ನಲ್ಲೂ ತೇರ್ಗಡೆಗೊಂಡು ಬಿಡುಗಡೆಗೆ ಸಿದ್ಧವಾಗಿದೆ.



ಅಶೋಕ್ ಕುಮಾರ್ ಎಂಬ ಹೊಸ ನಿರ್ದೇಶಕರ ಚಿತ್ರವಿದು. ತೆರೆ ಮೇಲೆ `ಉಮೇಶ್' ಆಗಿ ಕಾಣಿಸಿಕೊಳ್ಳುತ್ತಿರುವವರು ನಟ ಜೋಸೈಮನ್ ಅವರ ಮಗ ಜಿತೇಂದ್ರ. ಸಿನಿಮಾ ಉಮೇಶ್ ರೆಡ್ಡಿಯ ಜೀವನಚರಿತ್ರೆಯನ್ನು ಬಿಂಬಿಸುವುದಿಲ್ಲ. ಅಪರಾಧದ ವೈಭವೀಕರಣವಿಲ್ಲ. ಆತನ ವಿಲಕ್ಷಣ ಸ್ವಭಾವದ ಚಿತ್ರಣ ಮಾತ್ರ ಇಲ್ಲಿದೆ ಎಂಬ ಸ್ಪಷ್ಟನೆ ಚಿತ್ರತಂಡದ್ದು. ಆದರೆ ನಾಲ್ಕು ದೃಶ್ಯಗಳಿಗೆ ಕತ್ತರಿ ಮತ್ತು ಮೂರು ಕಡೆ ಸಂಭಾಷಣೆ ಧ್ವನಿ ಅಡಗಿಸುವಂತೆ ಸೂಚಿಸಿರುವ ಸೆನ್ಸಾರ್ ಮಂಡಳಿ `ಎ' ಪ್ರಮಾಣಪತ್ರ ನೀಡಿದೆ. ಈ ಚಿತ್ರಕ್ಕಾಗಿ ಆರನೇ ಶತಮಾನದ ಸರಣಿ ಹಂತಕರಿಂದ, ಉಮೇಶ್ ರೆಡ್ಡಿವರೆಗಿನ ವ್ಯಕ್ತಿಗಳ ಕಥೆಗಳನ್ನು ಉಮೇಶ್ ಅಧ್ಯಯನ ಮಾಡಿದ್ದಾರಂತೆ.



ಅಶೋಕ್ ಕುಮಾರ್ ಪ್ರಕಾರ ಅಪರಾಧ ಮತ್ತು ಕೊಲೆಗಳ ಚಿತ್ರಣ ಮನರಂಜನೆ. `ದಂಡುಪಾಳ್ಯ' ಚಿತ್ರ ನೋಡಿದ ನಂತರ ಅವರು ಮೊದಲು ರೂಪಿಸಿದ್ದ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಬದಲಾಯಿಸಿದರಂತೆ.



ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಜಿತೇಂದ್ರ ಸೈಮನ್‌ಗಿದು ಮೊದಲ ಚಿತ್ರ. ಇದಕ್ಕಾಗಿ ನಿರ್ದೇಶಕರಿಂದ ಮೂರು ತಿಂಗಳು ತರಬೇತಿಯನ್ನು ಅವರು ಪಡೆದಿದ್ದರಂತೆ. ನಿರ್ಮಾಪಕ ಪ್ರೇಮ್‌ಕುಮಾರ್ ಸಮಾಜಕ್ಕೆ ಸಂದೇಶ ನೀಡುವ ಚಿತ್ರವಿದು ಎಂದು ಹೇಳಿಕೊಂಡರು.ಹಿರಿಯ ನಟ ವಿಶ್ವನಾಥ್ ನಿರ್ದೇಶಕರ ಪ್ರತಿಭೆಯನ್ನು ಪ್ರಶಂಸಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.