ಗುರುವಾರ , ಏಪ್ರಿಲ್ 22, 2021
29 °C

ಮತ್ತೆ ಶೆಟ್ಟರ-ಜೋಶಿ ಪ್ರಾಬಲ್ಯ ಸಾಬೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಶಾಸಕ ಚಂದ್ರಕಾಂತ ಬೆಲ್ಲದ ಅವರು ಕೊನೆಯ ಕ್ಷಣದಲ್ಲಿ ಪಟ್ಟು ಸಡಿಲಿಸಿದ್ದರಿಂದ ಶುಕ್ರವಾರ ನಡೆದ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಯಾವುದೇ ರೀತಿಯ ಭಿನ್ನಮತ ಬಿಜೆಪಿಯಲ್ಲಿ ಬಹಿರಂಗವಾಗಿ ಸ್ಫೋಟಗೊಳ್ಳಲಿಲ್ಲ. ಆ ಮೂಲಕ ಸುಸೂತ್ರದ ಆಯ್ಕೆಗೆ ದಾರಿಯೂ ತೆರೆಯಿತು. ಬೆಲ್ಲದ ಅವರ ಬಲವಂತದ ಮೌನ ಮತ್ತು ಭಾರತಿ ಪಾಟೀಲ ಅವರ ಸಪ್ಪೆಯಾದ ಮುಖ ಮಾತ್ರ ಅಂಕದ ಹಿಂದಿನ ‘ಕಥೆ’ಯನ್ನು ಅಲ್ಲಿ ಸೂಕ್ಷ್ಮವಾಗಿ ಹೇಳುತ್ತಿದ್ದವು.ಬೆಲ್ಲದ ಅವರನ್ನು ತಮ್ಮ ಕಾರಿನಲ್ಲೇ ಪಾಲಿಕೆಗೆ ಕರೆದುಕೊಂಡು ಬಂದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಮತ್ತೊಮ್ಮೆ ಪಕ್ಷದ ಮೇಲಿನ ತಮ್ಮ ಬಿಗಿ ಹಿಡಿತವನ್ನು ಸಾಬೀತುಗೊಳಿಸಿದರಲ್ಲದೆ ಎಲ್ಲ ಮುಖಂಡರು ಒಗ್ಗಟ್ಟಿನ ಮಂತ್ರವನ್ನು ಜಪಿಸುವಂತೆಯೂ ನೋಡಿಕೊಂಡರು. ನಗರದ ಹೋಟೆಲ್‌ನಲ್ಲಿ ಗುರುವಾರ ಮಧ್ಯರಾತ್ರಿವರೆಗೆ ನಡೆದ ಸಭೆಯಲ್ಲಿ ಪೂರ್ಣಾ ಪಾಟೀಲ ಅವರನ್ನೇ ಮೇಯರ್ ಸ್ಥಾನಕ್ಕೆ ಆಯ್ಕೆಮಾಡಲು ನಿರ್ಣಯ ಕೈಗೊಳ್ಳಲಾಗಿತ್ತು. ಅದಕ್ಕೆ ಶೆಟ್ಟರ-ಸಂಸದ ಪ್ರಹ್ಲಾದ ಜೋಶಿ ಅವರ ಶ್ರೀರಕ್ಷೆಯೂ ಇತ್ತು.

ಪಾಲಿಕೆ ಬಿಜೆಪಿ ಸದಸ್ಯರ ಪೈಕಿ ಹೆಚ್ಚಿನವರು ಭಾರತಿ ಪಾಟೀಲ ಅವರತ್ತ ಒಲವು ತೋರಲಿಲ್ಲ ಎನ್ನಲಾಗಿದೆ. ಜೋರು ಮಾಡುವ ವ್ಯಕ್ತಿತ್ವವೇ ಭಾರತಿ ಅವರನ್ನು ಮೇಯರ್ ಗೌನ್ ಧರಿಸದಂತೆ ತಡೆಯಿತು ಎಂದು ಮೂಲಗಳು ತಿಳಿಸಿವೆ. ಶತಾಯ-ಗತಾಯ ಭಾರತಿ ಅವರನ್ನು ಮೇಯರ್ ಮಾಡಲು ಕಳೆದ ಹಲವು ದಿನಗಳಿಂದ ತೀವ್ರವಾದ ಯತ್ನ ನಡೆಸಿದ್ದ ಬೆಲ್ಲದ, ಅದರಲ್ಲಿ ಯಶಸ್ವಿಯಾಗದೆ ತೀವ್ರವಾದ ಹಿನ್ನಡೆ ಅನುಭವಿಸುವಂತಾಯಿತು.ಬೆಲ್ಲದ ಅವರ ಯತ್ನಕ್ಕೆ ಪೂರ್ಣ ಬೆಂಬಲ ನೀಡಿದ್ದರೆನ್ನಲಾದ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಸಹ ಹಿನ್ನಡೆಗೆ ಒಳಗಾಗಿದ್ದಾರೆ. ಮೇಯರ್ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ತರುವಲ್ಲಿ ಲಿಂಬಿಕಾಯಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಪಕ್ಷದ ಮೂಲಗಳು ಹೇಳಿವೆ. ‘ಹುಬ್ಬಳ್ಳಿ ನಾಯಕರನ್ನು ಬೈಪಾಸ್ ಮಾಡಿ, ಅಗತ್ಯವಾದ ಮೀಸಲಾತಿಯನ್ನು ತರಲು ಯಶಸ್ವಿಯಾಗಿದ್ದ ಬೆಲ್ಲದ ಅವರ ಬಣ ಕೊನೆ ಹಂತದಲ್ಲಿ ಹೀಗೆ ಸೋತು ಕೈಚೆಲ್ಲಿದ್ದು ಏಕೆ ಮತ್ತು ಹೇಗೆ’ ಎಂಬುವ ಪ್ರಶ್ನೆ ಪಕ್ಷದ ಧಾರವಾಡ ಕಾರ್ಯಕರ್ತರನ್ನು ಗಾಢವಾಗಿ ಕಾಡುತ್ತಿದೆ.‘ಏನು ಬೆಲ್ಲದ ಅವ್ರೂ ಸಭೆಗೆ ಬಂದಾರ’ ಎಂದು ವೀರಣ್ಣ ಮತ್ತಿಕಟ್ಟಿ ಮತ್ತು ಬಸವರಾಜ ಹೊರಟ್ಟಿ ಎಷ್ಟೇ ಕೇಳಿದರೂ ಬೆಲ್ಲದ ಮಾತ್ರ ತುಟಿ ಬಿಚ್ಚಲಿಲ್ಲ. ಏನಾದರೂ ಹೇಳುವವರೆಗೆ ಹೊರಟ್ಟಿ ಬಿಡುವುದಿಲ್ಲ ಎನಿಸಿದಾಗ ‘ಎಲ್ಲರೂ ಬರಬೇಕಲ್ಲ’ ಎಂದಷ್ಟೇ ಉತ್ತರಿಸಿ ಹುಸಿನಗೆ ನಕ್ಕರು. ಭಾವೋದ್ವೇಗಕ್ಕೆ ಒಳಗಾದ ಭಾರತಿ ಮತ್ತೆ ಕಣ್ಣೀರು ಒರೆಸಿಕೊಂಡರು.ಚುನಾವಣೆ ಪ್ರಕ್ರಿಯೆ ಮುಗಿದ ಮೇಲೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಜಗದೀಶ ಶೆಟ್ಟರ, ‘ಮೇಯರ್ ಆಯ್ಕೆಗೆ ಸಂಬಂಧಿಸಿದಂತೆ ಪಕ್ಷದಲ್ಲಿ ಯಾವುದೇ ಭಿನ್ನಾ ಭಿಪ್ರಾಯ ಇಲ್ಲ. ಮಾಧ್ಯಮದ ವರದಿಗಳಿಂದ ಗೊಂದಲವಾಗಿದೆ ಅಷ್ಟೇ’ ಎಂದು ಹೇಳಿದರು. ಹಲವು ಪ್ರಶ್ನೆಗಳಿಗೆ ಅವರು ಮುಗುಳು ನಗೆಯನ್ನೇ ಉತ್ತರ ವಾಗಿ ನೀಡಿದ್ದು ಪಕ್ಷದಲ್ಲಿ ವ್ಯಕ್ತವಾದ ಭಿನ್ನಾಭಿಪ್ರಾಯಗಳಿಗೆ ಸಾಕ್ಷ್ಯ ಒದಗಿಸಿತ್ತು.‘ಪಕ್ಷದ ವೇದಿಕೆಯಲ್ಲಿ ಎಲ್ಲವೂ ಚರ್ಚೆಯಾಗಿದೆ. ಮುಖಂಡರು ಹಾಗೂ ಸದಸ್ಯರ ಅಭಿಪ್ರಾಯಗಳನ್ನು ಪಡೆದು ಸಹಮತದಿಂದ ಅಭ್ಯರ್ಥಿಯ ಆಯ್ಕೆ ಮಾಡಲಾಗಿದೆ’ ಎಂದು ಶೆಟ್ಟರ ತಿಳಿಸಿದರು. ‘ಬೇರೆ, ಬೇರೆ ರೀತಿಯ ಅಭಿಪ್ರಾಯಗಳು ಬಂದಿರಬಹುದು. ಆದರೆ, ಚರ್ಚೆಯ ವಿವರವನ್ನು ಬಹಿರಂಗಗೊಳಿಸುವುದಿಲ್ಲ. ಅದರ ಅಗತ್ಯವೂ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು. ಬೆಲ್ಲದ ಅವರಂತೂ ಏನೇ ಕೇಳಿದರೂ ಮಾತನಾಡಲಿಲ್ಲ.‘ಪಾಲಿಕೆಯಲ್ಲಿ ನಾನು ಪಕ್ಷದ ಹಿರಿಯ ಸದಸ್ಯೆಯಾಗಿದ್ದು, ಮೇಯರ್ ಸ್ಥಾನಕ್ಕೆ ನನ್ನನ್ನು ಪರಿಗಣಿಸುವಂತೆ ಕೇಳಿಕೊಂಡಿದ್ದು ನಿಜ. ಆದರೆ, ಪಕ್ಷದ ಹಿರಿಯರು ಎಲ್ಲರ ಅಭಿಪ್ರಾಯ ಪಡೆದು ಈ ನಿರ್ಣಯ ಮಾಡಿದ್ದಾರೆ. ಅವರ ನಿರ್ಧಾರಕ್ಕೆ ನಾನು ಬದ್ಧಳಾಗಿದ್ದೇನೆ’ ಎಂದು ಭಾರತಿ ವಿಷಾದದಿಂದಲೇ ಹೇಳಿದರು. ಜಿಲ್ಲೆಯ ಅದರಲ್ಲೂ ಪಾಲಿಕೆಗೆ ಸಂಬಂಧಿಸಿದ ಪಕ್ಷದ ವಿಷಯಗಳಲ್ಲಿ ಮೊದಲಿನಿಂದಲೂ ಸ್ಪಷ್ಟ ಮೇಲುಗೈ ಹೊಂದಿರುವ ಶೆಟ್ಟರ-ಜೋಶಿ ಜೋಡಿ, ಪಕ್ಷದ ಮೇಲಿನ ತಮ್ಮ ಬಿಗಿಹಿಡಿತವನ್ನು ಮತ್ತೆ ನಿರೂಪಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.