ಮತ್ತೆ ಮಳೆ ಬಂದಿದೆ. ಭುವಿಗೆ ಹೊಸ ಕಳೆಯ ತುಂಬುತ್ತಾ. ವರ್ಷೆ ಬೆಂಗಳೂರಿಗೆ ತನ್ನ ಮೊದಲ ಮುತ್ತನ್ನು ತುಸು ಢಾಳವಾಗೇ ಇಟ್ಟಿದ್ದಾಳೆ. ಉಸ್ಸೆನ್ನುವ ಮನಕ್ಕೆ ಹಾಯೆನಿಸುವ ತಂಪನ್ನೀಯುತ್ತಲೇ ಉದ್ಯಾನನಗರಿಗೆ ಇಳಿದಿದ್ದಾಳೆ; ಒಂದಿಷ್ಟು ನೆನಪುಗಳ ಮೂಟೆ ಹೊತ್ತು.

ವಾರದಿಂದ ಸುಮ್ಮನೇ ಅಲ್ಲಲ್ಲಿ ಮೊಗ ದೋರಿ ಓಡುತ್ತಿದ್ದ ವರ್ಷೆ ನಿನ್ನೆ ಮಾತ್ರ ಇಡಿಯ ಬೆಂಗಳೂರನ್ನು ನಿಧಾನಿಸಿ ನಿಧಾನಿಸಿ ಮತ್ತೆ ಮತ್ತೆ ತಬ್ಬಿಕೊಳ್ಳುತ್ತಿದ್ದಳು.
ಮೊದಲ ಮಳೆ ಎಂದರೆ ಹಾಗೇನೇ. ಘಮ್ಮೆನ್ನುವ ಮಣ್ಣಿನ ವಾಸನೆ. (ಆದರೆ ಬೆಂಗಳೂರಲ್ಲಿ ಮಣ್ಣಿನ ವಾಸನೆ ಜೊತೆಗೆ ಬೇರೆ ವಾಸನೆಗಳೂ ತಳಿಕೆ ಹಾಕಿರುತ್ತವೆ. ಆ ಸ್ವಾದ ಅನುಭವಿಸಲು ಹಳ್ಳಿಗೆ ಹೋಗಬೇಕಷ್ಟೆ)

ಮಳೆಯಲ್ಲಿ ತುಸು ನೆನೆದು ಬಸ್ಸು ಹತ್ತಿ ಕಿಟಕಿಯಾಚೆ ನೋಡುತ್ತಿದ್ದ ಯುವಕನಿಗೆ ಊರ ಕಡೆಯದ್ದೇ ಯೋಚನೆ. ಊರಲ್ಲಿ ಮಳೆ ಆಯಿತೋ ಇಲ್ಲವೋ, ಈ ಬಾರಿಯೂ ಎಲ್ಲಿ ಬರಗಾಲ ಮುತ್ತಿಕೊಳ್ಳುವುದೋ; ಈ ಸಲವಾದರೂ ಬೆಳೆ ಚೆನ್ನಾಗಿ ಬಂದು ಅಪ್ಪನ ಕೈಗೆ ನಾಲ್ಕು ಕಾಸು ಸಿಗುವಂತಾದರೆ ಸಾಕು ಎಂದು ಯೋಚಿಸುತ್ತಾ ಕುಳಿತ ಆತನಿಗೆ ಕಿಟಕಿಯ ತುದಿಯಿಂದ ಮಳೆ ಹನಿ ಕೈಯ ಮೇಲೆ ಜಿನುಗಿದಾಗಲೇ ಎಚ್ಚರವಾಗಿದ್ದು.

ಇನ್ನು ಮಗಳಿಗೆ ಹಿತ್ತಲಲ್ಲಿ ಅಮ್ಮ ಹಾಕಿದ್ದ ಮಲ್ಲಿಗೆ ಬಳ್ಳಿಯದೇ ಚಿಂತೆ. ಇಷ್ಟೊತ್ತಿಗಾಗಲೇ ಗಿಡ ಬಳ್ಳಿಯಾಗಿ ಹೂಬಿಡಲು ಶುರು ಮಾಡಿರಬಹುದೇ? ಈ ಮಳೆಗೆ ಇನ್ನಷ್ಟು ಚೆನ್ನಾಗುತ್ತದೆ ಎನ್ನುವ ಮನ ಒಂದು ಸುತ್ತು ಹಿತ್ತಲಿನ ಪ್ರದಕ್ಷಿಣೆ ಹಾಕಿಬಂದಿತು. ಈ ಹೊತ್ತಲ್ಲಿ ಅಮ್ಮನ ಜೊತೆಯಲ್ಲಿದ್ದಿದ್ದರೆ ಹಪ್ಪಳವೋ, ಚುರುಮುರಿಯೋ, ಬಿಸಿ ಬಿಸಿ ಕಾಫಿಯೋ ಹೀರಬಹುದಿತ್ತು ಎನ್ನುವ ಮನ.

ಉತ್ತರ ಕರ್ನಾಟದಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಯುವಕ `ಈ ಸಲವಾದರೂ ನಮ್ಮ ಮೇಲಿನ ಮುನಿಸನ್ನು ಕಡಿಮೆ ಮಾಡಿಕೊ. ನಮ್ಮ ಮೇಲೆ ಕೃಪೆದೋರು ವರ್ಷೆ~ ಎಂದು ಮನದಲ್ಲೇ ಕೋರಿಕೆ ಸಲ್ಲಿಸುತ್ತಾನೆ.

ಮಳೆ ಬಂದಾಗಲೆಲ್ಲಾ ತಮ್ಮ ಮನೆ ಕೊಚ್ಚಿ ಹೋದ ನೆನಪೇ ಆತನ ಕಣ್ಣಮುಂದೆ ಎದುರಾಗುತ್ತದೆ.

ಮೊದಲ ಮಳೆಗೆ ಮೈಯೊಡ್ಡಿ ರಸ್ತೆಯಲ್ಲಿ ನೆನೆಯುತ್ತಾ ಹೆಜ್ಜೆ ಹಾಕುತ್ತಿದ್ದ ಹುಡುಗಿಗೆ `ಸಂಗಾತಿ ಜೊತೆಗಿದ್ದಿದ್ದರೆ...?~ ಎನ್ನುವ ಭಾವ. ಕಳೆದ ವರ್ಷ ಮೊದಲ ಮಳೆಯಲ್ಲಿ ಒಟ್ಟಿಗೆ ಮಿಂದೆದ್ದ ಸವಿ ನೆನಪ ನೆನೆಯುತ್ತಾ `ಮಳೆ ಬರುತಿದೆ; ಜೊತೆಗೆ ನೀನಿಲ್ಲ~ ಎಂದು ಎಸ್ಎಂಎಸ್ ಆಕೆಗರಿವಿಲ್ಲದಂತೆ ಕೈ ಬೆರಳುಗಳು ರವಾನೆ ಮಾಡಿರುತ್ತವೆ.

ಮಣ್ಣಿನಲ್ಲಿ ಆಡುತ್ತಿದ್ದ ಮಗು ಚಟಪಟ ಹನಿಗಳ ಸದ್ದು ಕಿವಿಗೆ ಬೀಳುತ್ತಲೇ ಓಡೋಡಿ ಅಮ್ಮನ ಕರೆದು ಮೊದಲ ಮಳೆಗೆ ತುಂಬು ನಗುವಿನ ಸ್ವಾಗತ ನೀಡುತ್ತದೆ. `ಶೀತ ಆಗುತ್ತೆ ಒಳಗೆ ಬಾ~ ಎನ್ನುವ ಅಮ್ಮನ ಮೇಲೆ ಮುನಿಸಿನ ಭಾವ.

ಸೂರಿಲ್ಲದ ಜೋಪಡಿಯಲ್ಲಿ ವಾಸಿಸುವ ಮಹಿಳೆಗೆ ದಿಢೀರನೆ ಎದುರಾದ ಮಳೆಯಿಂದ ಆತಂಕ. ತುಸು ಬೇಸರದಿಂದಲೇ ಶಪಿಸಿದರೂ, ಮೊದಲ ಮಳೆಗೆ ಆಕೆಯೂ ಪುಳಕಗೊಳ್ಳುತ್ತಲೇ ಈ ಬಾರಿ ಮಳೆಯಿಂದ ಮಕ್ಕಳನ್ನು ರಕ್ಷಿಸಿಕೊಳ್ಳಲು ಯಾವ ದೇವಸ್ಥಾನ ಹುಡುಕಬೇಕಪ್ಪಾ ಎಂದು ಮನದಲ್ಲೇ ಲೆಕ್ಕಾಚಾರ ಶುರುಮಾಡುತ್ತಾಳೆ.

ಇಳೆಗೆ ಬರುವ ಮಳೆ ಹೀಗೆ ಒಬ್ಬೊಬ್ಬರಲ್ಲೂ ಬಗೆಬಗೆಯ ಭಾವ ಹುಟ್ಟುಹಾಕುತ್ತದೆ. ಕೆಲವರಿಗೆ ಸಂತಸದ ಮಧುರ ಕ್ಷಣಗಳು ಹಾದುಹೋದರೆ, ಇನ್ನು ಕೆಲವರಿಗೆ ಬೇಸರದ ಸಂಗತಿಗಳು ನೆನಪಾಗುತ್ತವೆ. ಇವೆಲ್ಲದರ ನಡುವೆಯೂ ಜೀವಕಳೆ ತುಂಬಲು ವರ್ಷೆ ಧರೆಗಿಳಿದಿದ್ದಾಳೆ. ಈ ಬಾರಿ ಯಾವ ಮುನಿಸೂ ತೋರದೆ ಸಮಾನ ಚಿತ್ತೆಯಾಗಿ ಬಂದುಹೋಗುವಳೆಂಬ ನಿರೀಕ್ಷೆಯಲ್ಲಿರೋಣ.

ಬದಲಾದ ನಗರ ಚಿತ್ರಣ...
ನೆತ್ತಿ ಸುಡುವ ಬಿಸಿಲು ಸರಿದು ತಣ್ಣನೆ ತಂಪೆರೆಯುವ ಮಳೆ ಇಳೆಗೆ ಆಗಮಿಸುತ್ತಿದ್ದಂತೆ ಬೆಂಗಳೂರಿನ ಚಿತ್ರಣವೇ ಬದಲಾಯಿತು. ಆಫೀಸಿನಿಂದ ದಾರೀಲಿ ಬರುವಾಗ ಎಳನೀರನ್ನೋ, ತಂಪು ಪಾನಿಯಾಗಳನ್ನೋ ಅರಸುತ್ತಿದ್ದ ಕಣ್ಣುಗಳು ಬಿಸಿಬಿಸಿ ಕಾಫಿ, ಪಾನಿಪೂರಿ, ಬೋಂಡಾದ ಕಡೆಗೆ ಹೊರಳಿದ್ದವು.

`ಬಿಸಿಲಿಗೆಂದು ತಂದಿದ್ದ ಛತ್ರಿ ಮಳೆಗಾಯಿತು~ ಎಂದು ಲಲನೆ ಮನದಲ್ಲೇ ತುಸು ನಕ್ಕು ಛತ್ರಿ ಇಳಿಸಿ ಬಸ್ಸು ಏರಿದಳು. ಮಳೆ ಬರುತ್ತದೆಂದು ಮೊದಲೇ ಗೊತ್ತಿದ್ದರೆ ಛತ್ರಿ ತರುತ್ತಿದ್ದೆ ಎಂದು ಗೊಣಗುತ್ತಾ ಮಾರ್ಕೆಟ್ಗೆ ಹೋದ ಗೃಹಿಣಿ ತಲೆ ನೆನೆಯದಿದ್ದರೆ ಸಾಕು ಎಂದು ಕೈ ಮೇಲಿಟ್ಟುಕೊಂಡು ರಸ್ತೆ ದಾಟುತ್ತಿದ್ದಳು. ಸೆಕೆ ಎಂದು ಸ್ಲೀವ್ ಲೆಸ್ ಉಡುಪು ತೊಟ್ಟಿದ್ದ ಬೆಡಗಿಗೆ ಒಮ್ಮೆಲೆ ಚಳಿಯ ಅನುಭವ.

ಬಿಸಿಯಿಂದ ಬೇಸತ್ತಿದ್ದ ಪಾದಗಳಿಗೆ ರಸ್ತೆಯ ಮಣ್ಣನ್ನು ಮೆತ್ತಿಕೊಳ್ಳುವ ಅದೃಷ್ಟ. ಚಪಚಪ ಬಡಿಯುವ ಚಪ್ಪಲಿಯಿಂದ ಹಿಂಬದಿಯ ಅಂಗಿಗೆ ಚಿತ್ತಾಕರ್ಷಕ ಚುಕ್ಕೆಗಳ ಉಡುಗೊರೆ. ಒಮ್ಮೆ ಹಿಂತಿರುಗಿ ನೋಡಿ ಚಪ್ಪಲಿಗೋ, ಮಳೆಗೋ, ಕೆಸರಿಗೋ ಬೈಗುಳಗಳ ಮಾಲೆ.

ಬಿಸಿಲ ಬೇಗೆ, ಮಳೆಯ ತಂಪು ಎರಡರ ಅನುಭವ ಒಟ್ಟೊಟ್ಟಿಗೆ ತಾಜಾ ಆಗಿರುವ ಸಂದರ್ಭವಿದು. ನಗರದ ಹವಾಮಾನದಲ್ಲಾದ ಸಣ್ಣ ಬದಲಾವಣೆಯಿಂದ ಮೂಡುವ ಚಿತ್ರಗಳು ಹಲವು. ಅಂತೆಯೇ ಮರಕಳಿಸುವ ಹಳೆಯ ನೆನಪುಗಳೂ ಅಸಂಖ್ಯ. ಅಂಥ ಎರಡು ಬಗೆಯ ಬರಹಗಳು ವಾರಾಂತ್ಯದ ಓದಿಗೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.