ಶನಿವಾರ, ಆಗಸ್ಟ್ 8, 2020
23 °C
ವ್ಯಕ್ತಿ

ಮತ್ತೆ ‘ದಾಲ್ಮಿಯ ಯುಗ’

ಮಹಮ್ಮದ್‌ ನೂಮಾನ್‌ Updated:

ಅಕ್ಷರ ಗಾತ್ರ : | |

ಮತ್ತೆ ‘ದಾಲ್ಮಿಯ ಯುಗ’

‘ಕಮ್‌ಬ್ಯಾಕ್‌ ಮ್ಯಾನ್‌’ ಎಂಬುದು ಜಗಮೋಹನ್‌ ದಾಲ್ಮಿಯ ಅವರ ಮತ್ತೊಂದು ಹೆಸರು. ಹಿನ್ನಡೆ ಅನುಭವಿಸಿದಾಗ ಕುಗ್ಗದೆ, ಛಲದಿಂದ ಎದ್ದುನಿಲ್ಲುವ ಸಾಮರ್ಥ್ಯ ಹೊಂದಿರುವುದರಿಂದ ಅವರಿಗೆ ಈ ಹೆಸರು ಬಂದಿದೆ. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಚುಕ್ಕಾಣಿ 74ರ ಹರೆಯದ ಈ ಹಿರಿಯ ಆಡಳಿತಗಾರನ ಕೈಗೆ ಮತ್ತೆ ದೊರೆತಿದೆ.ಕ್ರಿಕೆಟ್ ವಲಯದಲ್ಲಿ ‘ಏಷ್ಯಾದ ಹುಲಿ’ ಎಂದೇ ಬಿಂಬಿತವಾಗಿರುವ ದಾಲ್ಮಿಯ ಒಂದೂವರೆ ದಶಕದ ಹಿಂದೆ ಈ ಹುದ್ದೆಯನ್ನು ಮೊದಲ ಬಾರಿ ಅಲಂಕರಿಸಿದ್ದರು. ಕ್ರಿಕೆಟ್‌ ಆಡಳಿತದಲ್ಲಿ 35 ವರ್ಷಗಳಿಗೂ ಅಧಿಕ ಅನುಭವ ಹೊಂದಿರುವ ಅವರು ಎರಡನೇ ಬಾರಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅನಿರೀಕ್ಷಿತವೇ ಸರಿ. 2001ರಿಂದ 2004ರವರೆಗೆ ಅಧ್ಯಕ್ಷ ಸ್ಥಾನದಲ್ಲಿದ್ದಾಗ ಅವರು ಕೈಗೊಂಡಿದ್ದ ಕೆಲವು ದಿಟ್ಟ ನಿರ್ಧಾರಗಳಿಂದಾಗಿ ಬಿಸಿಸಿಐ ಇಂದು ಕ್ರಿಕೆಟ್‌ ಜಗತ್ತಿನ ಬಲಾಢ್ಯ ಸಂಸ್ಥೆಯಾಗಿ ಬೆಳೆದು ನಿಂತಿದೆ. ಅವರ ದೂರದೃಷ್ಟಿ ಯೋಜನೆಗಳಿಂದ ಮಂಡಳಿಗೆ ಅಪಾರ ಲಾಭವಾಗಿದೆ.   ‘ಕ್ರಿಕೆಟ್‌ನ ಬೆಳವಣಿಗೆಗೆ ಸಂಬಂಧಿಸಿದಂತೆ ದಾಲ್ಮಿಯ ಹೊಂದಿದ್ದ ದೂರದೃಷ್ಟಿ ಹಾಗೂ ಕಾರ್ಯತತ್ಪರತೆಯನ್ನು ಇತರ ಯಾವುದೇ ಆಡಳಿತಗಾರರಲ್ಲೂ ನಾನು ಕಂಡಿಲ್ಲ’ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಇಯಾನ್‌ ಚಾಪೆಲ್‌ ಒಮ್ಮೆ ಹೇಳಿದ್ದರು. ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಹಗರಣದಿಂದಾಗಿ ಬಿಸಿಸಿಐ ಈಗ ಜನರ ನಂಬಿಕೆಯನ್ನು ಕಳೆದುಕೊಂಡಿದೆ. ಅದನ್ನು ಮರಳಿ ತಂದುಕೊಡುವ ಅವಕಾಶ ದಾಲ್ಮಿಯಗೆ ದೊರೆತಿದೆ.ಮಾರ್ವಾಡಿ ಕುಟುಂಬದಲ್ಲಿ ಜನಿಸಿದ ದಾಲ್ಮಿಯ ಕೋಲ್ಕತ್ತದ ಸ್ಕಾಟಿಷ್‌ ಚರ್ಚ್‌ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ್ದರು. ಅವರು ಕ್ರಿಕೆಟ್‌ ಅಂಗಳದಲ್ಲಿ ಹೆಚ್ಚಿನ ಸಾಧನೆ ಮಾಡಿಲ್ಲ. ಆದರೆ ಕ್ಲಬ್‌ ಮಟ್ಟದಲ್ಲಿ ಸಾಕಷ್ಟು ಆಡಿದ್ದರು. ಆರಂಭಿಕ ಬ್ಯಾಟ್ಸ್‌ಮನ್‌ ಮತ್ತು ವಿಕೆಟ್‌ ಕೀಪರ್‌ ಆಗಿದ್ದರಲ್ಲದೆ ಜೊರಾಬಾಗನ್‌ ಕ್ಲಬ್‌ (1957–60) ಮತ್ತು ರಾಜಸ್ತಾನ ಕ್ಲಬ್‌ಗಳನ್ನು (1960–62) ಕೆಲಕಾಲ ಪ್ರತಿನಿಧಿಸಿದ್ದರು. ಆಟಗಾರರಾಗಿ ಹೆಚ್ಚು ಮಿಂಚದಿದ್ದರೂ, ಆಡಳಿತಗಾರರಾಗಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆದರು.20ರ ಹರೆಯದಲ್ಲಿ ತಮ್ಮ ತಂದೆಯ ನಿರ್ಮಾಣ ವಲಯದ ಕಂಪೆನಿಯಲ್ಲಿ (ಎಂ.ಎಲ್‌.ದಾಲ್ಮಿಯ ಮತ್ತು ಕಂಪೆನಿ) ಸೇರಿಕೊಂಡರಲ್ಲದೆ, ಅದನ್ನು ಭಾರತದ ಪ್ರಮುಖ ಕಂಪೆನಿಗಳಲ್ಲಿ ಒಂದಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಕ್ರಿಕೆಟ್‌ ಆಡಳಿತದಲ್ಲಿ ತೋರಿದ ಸಾಧನೆಗಳಿಂದಾಗಿ ದಾಲ್ಮಿಯ ಪ್ರಸಿದ್ಧಿಗೆ ಬಂದರು. ಒಬ್ಬ ಯಶಸ್ವಿ ಉದ್ಯಮಿಯಲ್ಲಿರಬೇಕಾದ ಗುಣಗಳು ಅವರಿಗೆ ರಕ್ತಗತವಾಗಿ ಬಂದಿದ್ದವು.ತಂದೆಯ ಕಂಪೆನಿಯನ್ನು ಬೆಳೆಸಲು ಬಳಸಿದ್ದ ಅದೇ ವ್ಯಾವಹಾರಿಕ ಜ್ಞಾನವನ್ನು ಕ್ರಿಕೆಟ್‌ ಆಡಳಿತದಲ್ಲೂ ಬಳಸಿ ಯಶಸ್ಸು ಕಂಡರು. 1979ರಲ್ಲಿ ಮೊದಲ ಬಾರಿ ಬಿಸಿಸಿಐ ಆಡಳಿತದಲ್ಲಿ ಸೇರಿಕೊಂಡ ದಾಲ್ಮಿಯ, ಬಳಿಕ ಒಂದೊಂದೇ ಹೆಜ್ಜೆಗಳನ್ನು ಮುಂದಿಟ್ಟರು. 

2001ರಲ್ಲಿ ಮೊದಲ ಬಾರಿಗೆ ಬಿಸಿಸಿಐ ಅಧ್ಯಕ್ಷರಾಗಿದ್ದ ವೇಳೆ ದಾಲ್ಮಿಯ ಹಾಗೂ ಶರದ್‌ ಪವಾರ್‌ ನಡುವೆ ವೈರತ್ವ ಬೆಳೆದಿತ್ತು.2005ರಲ್ಲಿ ಪವಾರ್‌ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ದಾಲ್ಮಿಯ ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನ ನಡೆಯಿತು.

ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆದ 1996ರ ವಿಶ್ವಕಪ್‌ ಟೂರ್ನಿಯ ವೇಳೆ ಹಣಕಾಸಿನ ದುರುಪಯೋಗ ನಡೆಸಿದ ಆರೋಪ ಹೊರಿಸಿ ದಾಲ್ಮಿಯ ಅವರನ್ನು ಮಂಡಳಿಯಿಂದ ಹೊರಹಾಕಲಾಯಿತು. ಬಂಗಾಳ ಕ್ರಿಕೆಟ್‌ ಸಂಸ್ಥೆಯಿಂದಲೂ ಅವರನ್ನು ದೂರ ಮಾಡಲಾಯಿತು.ದಾಲ್ಮಿಯ ಮತ್ತೆಂದೂ ಎದ್ದುಬರುವುದಿಲ್ಲ ಎಂದು ಹೆಚ್ಚಿನವರು ಭವಿಷ್ಯ ನುಡಿದಿದ್ದರು. ಆದರೆ ಬಿಸಿಸಿಐ ವಿರುದ್ಧ ಬಾಂಬೆ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಹೋರಾಡಿ ತಮ್ಮ ವಿರುದ್ಧದ ಎಲ್ಲ ಆರೋಪಗಳಿಂದ ಮುಕ್ತರಾದರು. ಬಂಗಾಳ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು 2007ರಲ್ಲಿ ಮರಳಿ ಪಡೆದರು. ಆ ಬಳಿಕ ಅವರು ಈ ಹುದ್ದೆಯಲ್ಲೇ ಮುಂದುವರಿದಿದ್ದಾರೆ.1997ರಲ್ಲಿ ಅಂತರ ರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ ಅಧ್ಯಕ್ಷ ಸ್ಥಾನಕ್ಕೇರಿದ್ದ ಅವರು ಈ ಹುದ್ದೆ ಅಲಂಕರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಬಿಸಿಸಿಐ ಕಾರ್ಯದರ್ಶಿಯಾಗಿಯೂ ದಾಲ್ಮಿಯ ತಮ್ಮ ‘ಜಾದೂ’ ತೋರಿದ್ದರು. 1990ರ ಆರಂಭದಲ್ಲಿ ಬಿಸಿಸಿಐ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದಾಗ ಮಂಡಳಿಯ ವಾರ್ಷಿಕ ಲೆಕ್ಕಪತ್ರದಲ್ಲಿ ₹ 81.60 ಲಕ್ಷ ನಷ್ಟ ತೋರಿಸುತ್ತಿತ್ತು. ಮುಂದಿನ ಒಂದು ವರ್ಷದ ಬಳಿಕ ಬಿಸಿಸಿಐ ವಾರ್ಷಿಕ ₹ 100 ಕೋಟಿಗೂ ಅಧಿಕ ವಹಿವಾಟು ನಡೆಸಿತಲ್ಲದೆ, ವಿಶ್ವದ ಶ್ರೀಮಂತ ಕ್ರಿಕೆಟ್‌ ಮಂಡಳಿಯಾಗಿ ಬದಲಾಯಿತು.1987 ಮತ್ತು 1996ರ ವಿಶ್ವಕಪ್‌ ಟೂರ್ನಿಯ ಆತಿಥ್ಯವನ್ನು ಉಪಭೂಖಂಡಕ್ಕೆ ತರುವಲ್ಲಿ ದಾಲ್ಮಿಯ ವಹಿಸಿದ ಪಾತ್ರ ಅಷ್ಟಿಷ್ಟಲ್ಲ. ಈ ಎರಡು ವಿಶ್ವಕಪ್‌ ಟೂರ್ನಿಗಳಿಂದ ಬಿಸಿಸಿಐ ಮತ್ತು ಐಸಿಸಿಗೆ ಭಾರಿ ಲಾಭ ಉಂಟಾಗಿತ್ತು. ಇದೇ ಕಾರಣಕ್ಕಾಗಿ ಬಿಬಿಸಿಯು 1996ರಲ್ಲಿ ‘ವಿಶ್ವದ ಅಗ್ರ ಆರು ಕ್ರೀಡಾ ಆಡಳಿತಗಾರರಲ್ಲಿ ದಾಲ್ಮಿಯ ಒಬ್ಬರು’ ಎಂದಿತ್ತು.‘ಬಿಸಿಸಿಐ ತನ್ನ ಘನತೆಯನ್ನು ಕಳೆದುಕೊಂಡಿದೆ. ಅದನ್ನು ಮರಳಿ ಪಡೆಯುವುದು ನನ್ನ ಆದ್ಯ ಕರ್ತವ್ಯ’ ಎಂದು ಅಧ್ಯಕ್ಷರಾಗಿ ಅಯ್ಕೆಯಾದ ಬಳಿಕ ಹೊರಡಿಸಿದ ಮೊದಲ ಅಧಿಕೃತ ಪ್ರಕಟಣೆಯಲ್ಲಿ ದಾಲ್ಮಿಯ ಹೇಳಿದ್ದಾರೆ. ಮಂಡಳಿಯ ಪದಚ್ಯುತ ಅಧ್ಯಕ್ಷ ಎನ್‌.ಶ್ರೀನಿವಾಸನ್‌ ಅವರ ವಿರುದ್ಧ ಸ್ಪಾಟ್‌ ಫಿಕ್ಸಿಂಗ್‌ ಆರೋಪ ಕೇಳಿಬಂದಾಗ ದಾಲ್ಮಿಯ ಮೌನ ವಹಿಸಿದ್ದರು. ಅದು ಈಗ ಅವರಿಗೆ ವರವಾಗಿ ಪರಿಣಮಿಸಿದೆ.ಶರದ್‌ ಪವಾರ್‌ ಮತ್ತು ಶ್ರೀನಿವಾಸನ್‌ ನಡುವಿನ ‘ಮುಸುಕಿನ ಗುದ್ದಾಟ’ ಅಂತಿಮವಾಗಿ ದಾಲ್ಮಿಯಗೆ ಅದೃಷ್ಟ ತಂದಿತ್ತಿದೆ. ಬಿಸಿಸಿಐನ ಆಡಳಿತವನ್ನು ಪಾರದರ್ಶಕಗೊಳಿಸಬೇಕೆಂಬುದು ದಾಲ್ಮಿಯಗೆ ತಿಳಿದಿದೆ. ಆ ನಿಟ್ಟಿನಲ್ಲಿ ಅವರು ಕೈಗೊಳ್ಳುವ ತೀರ್ಮಾನಗಳು ಕುತೂಹಲಕ್ಕೆ ಎಡೆಮಾಡಿಕೊಟ್ಟಿವೆ.ವಯಸ್ಸು ಹೆಚ್ಚಾಗಿದೆಯಾದರೂ ತನ್ನ ಉತ್ಸಾಹ ಕುಗ್ಗಿಲ್ಲ  ಎಂಬುದನ್ನು ತೋರಿಸಬೇಕಾದ ಸವಾಲು ಹಿರಿಯ ಆಡಳಿತಗಾರನ ಮುಂದಿದೆ. ಅವರು ಅದರಲ್ಲಿ ಯಶಸ್ವಿಯಾದರೆ, ಹಣ ಬಲದಿಂದ ಕ್ರಿಕೆಟ್‌ ಜಗತ್ತನ್ನು ನಿಯಂತ್ರಿಸುತ್ತಿರುವ ಬಿಸಿಸಿಐನಲ್ಲಿ  ಮುಂದಿನ ದಿನಗಳಲ್ಲಿ ಮಹತ್ತರ ಬದಲಾವಣೆಗಳನ್ನು ನಿರೀಕ್ಷಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.