ಭಾನುವಾರ, ಏಪ್ರಿಲ್ 11, 2021
20 °C

ಮತ್ತೆ 2ಜಿ ಹರಾಜಿಗೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೆ 2ಜಿ ಹರಾಜಿಗೆ ಚಿಂತನೆ

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಅಂತ್ಯದೊಳಗೆ ಮತ್ತೊಮ್ಮೆ `2ಜಿ~ ತರಂಗಾಂತರ ಹಂಚಿಕೆ ಹರಾಜು ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.`2013ರ ಮಾರ್ಚ್ 31ರೊಳಗೆ ದೆಹಲಿ, ಮುಂಬೈ ಸೇರಿ ನಾಲ್ಕು ವೃತ್ತಗಳಲ್ಲಿ ಹರಾಜು ನಡೆಸಲು ಉದ್ದೇಶಿಸಲಾಗಿದೆ~ ಎಂದು ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.`ಸದ್ಯದ `2ಜಿ~ ಹರಾಜು ಯಶಸ್ವಿಯಾಗಿಲ್ಲ ಎಂದು ನಾವು ಸಂಭ್ರಮಿಸುತ್ತಿಲ್ಲ. ಈ ಪ್ರಕ್ರಿಯೆ ಮುಂದುವರಿಯುತ್ತದೆ. ಮುಂದಿನ ನಡೆ  ನಿರ್ಧರಿಸಲು ಸಚಿವರ ತಂಡ ಶೀಘ್ರವೇ ಸಭೆ ಸೇರಲಿದೆ~ಎಂದು ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದರು.ನಷ್ಟದ ಲೆಕ್ಕ ಹೇಗೆ?:  ಮಹಾಲೇಖಪಾಲರ (ಸಿಎಜಿ) ಮೇಲೆ ವಾಗ್ದಾಳಿ ಮುಂದುವರಿಸಿರುವ ಕೇಂದ್ರ ಸಚಿವ ವಿ.ನಾರಾಯಣ ಸ್ವಾಮಿ, `ಈ ಹಿಂದಿನ `2ಜಿ~ ಹರಾಜಿನಲ್ಲಿ ಅಂದಾಜು 1.76 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದಿದ್ದಕ್ಕೆ ಸಿಎಜಿ ವಿವರಣೆ ನೀಡಬೇಕು ಎಂದು ಶುಕ್ರವಾರ ಹೇಳಿದ್ದಾರೆ.

ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, `ಸಿಎಜಿ ಲೆಕ್ಕಾಚಾರ ಸರಿ ಇಲ್ಲ ಎಂದು ನಾವು ಹೇಳಿದ್ದೇವೆ. ಹರಾಜಿನಲ್ಲಿ ಇದು ಸಾಬೀತಾಗಿದೆ. ಇದಕ್ಕೆ ಸಿಎಜಿ ಸ್ಪಷ್ಟನೆ ಕೊಡಬೇಕು~ ಎಂದರು.ಈಗಿನ ಹರಾಜಿನಲ್ಲಿ ಕೇವಲ 9,409 ಕೋಟಿ ರೂಪಾಯಿ ಗಳಿಕೆ ಬಂದಿದೆ. ಹೀಗಿರುವಾಗ ಅಷ್ಟೊಂದು ಭಾರಿ ಮೊತ್ತದ ನಷ್ಟದ ಅಂದಾಜು ಮಾಡಿದ್ದು ಹೇಗೆ ಎಂದು  ಕಾಂಗ್ರೆಸ್ ಮುಖಂಡರು ಮಹಾಲೇಖಪಾಲರನ್ನು ಪ್ರಶ್ನಿಸುತ್ತಿದ್ದಾರೆ.ಪುನರ್‌ಪರಿಶೀಲನೆಗೆ ಅರ್ಜಿ ಸಲ್ಲಿಸುವುದು ಸೂಕ್ತ: `2ಜಿ~ ತರಂಗಾಂತರ ಹಂಚಿಕೆಗೆ ಸಂಬಂಧಿಸಿ 122 ಪರವಾನಗಿ ರದ್ದು ಮಾಡಿ ಫೆಬ್ರುವರಿಯಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ಪುನರ್‌ಪರಿಶೀಲನೆಗೆ ಸರ್ಕಾರ ಅರ್ಜಿ ಸಲ್ಲಿಸಬೇಕು ಎಂದು ಹಿರಿಯ ವಕೀಲ ಮುಕುಲ್ ರೋಹಟಗಿ ಸಲಹೆ ನೀಡಿದ್ದಾರೆ.`2ಜಿ~ ಹರಾಜಿನಲ್ಲಿ ಅಂದಾಜು 1.76 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸಿಎಜಿ ಹೇಳಿರುವುದು ಸುಳ್ಳಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗುವುದು ಸೂಕ್ತ ಎಂದು ಅವರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.