ಶುಕ್ರವಾರ, ಮಾರ್ಚ್ 5, 2021
26 °C
ಕ್ರಿಕೆಟ್‌: ಇಂದು ಬಾಂಗ್ಲಾ- ಭಾರತ ಪೈಪೋಟಿ; ಗೆದ್ದರೆ ಸೆಮಿಫೈನಲ್‌ ಹಾದಿ ಸುಗಮ

ಮತ್ತೊಂದು ಜಯದ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೊಂದು ಜಯದ ನಿರೀಕ್ಷೆ

ಮೀರ್‌ಪುರ: ಸತತ ಎರಡು ಗೆಲುವು ಗಳಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿ ರುವ ಭಾರತ ತಂಡದವರು ಟ್ವೆಂಟಿ-20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಶುಕ್ರವಾರ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದ್ದಾರೆ.ಷೇರ್‌ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಜಯ ಸಾಧಿಸಿದರೆ ಮಹೇಂದ್ರ ಸಿಂಗ್‌ ದೋನಿ ಬಳಗ ಸೆಮಿಫೈನಲ್‌ ಪ್ರವೇಶವನ್ನು ಹೆಚ್ಚುಕಡಿಮೆ ಖಚಿತಪಡಿಸಿಕೊಳ್ಳಲಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತ ಇದೀಗ ನಾಲ್ಕು ಪಾಯಿಂಟ್‌ಗಳೊಂದಿಗೆ ‘ಗುಂಪು 2’ ರಲ್ಲಿ ಅಗ್ರಸ್ಥಾನದಲ್ಲಿದೆ.‘ಮಹಿ’ ಬಳಗ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಹಾಗೂ ಹಾಲಿ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ವಿರುದ್ಧ ಜಯ ಪಡೆದಿತ್ತು. ಎರಡೂ ಪಂದ್ಯಗಳಲ್ಲಿ ಪೂರ್ಣ ಪ್ರಭುತ್ವ ಸಾಧಿಸಿ ಸುಲಭ ಗೆಲುವು ತನ್ನದಾಗಿಸಿಕೊಂಡಿತ್ತು. ಈ ಕಾರಣ ಇಂದಿನ ಪಂದ್ಯದಲ್ಲೂ ಭಾರತವೇ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ.ಐಪಿಎಲ್‌ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಭಾರತದ ಕ್ರಿಕೆಟ್‌ ವಲಯದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ. ಆದರೆ ಈ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಳ್ಳದೆ ಆಟದ ಮೇಲೆ ಮಾತ್ರ ಗಮನ ನೀಡುವುದು ಮಹೇಂದ್ರ ಸಿಂಗ್‌ ದೋನಿ ಬಳಗದ ಗುರಿ.ಆತ್ಮವಿಶ್ವಾಸದಲ್ಲಿ ಆಟಗಾರರು: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅಮೋಘ ಆಟ ತೋರಿರುವ ಭಾರತದ ಆಟಗಾರರು ಆತ್ಮವಿಶ್ವಾಸದಲ್ಲಿದ್ದಾರೆ.

ತಂಡದ ಬೌಲರ್‌ಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಟೀಕೆ ಎದುರಿಸಿದ್ದರು. ಆದರೆ ಪಾಕ್‌ ಮತ್ತು ವಿಂಡೀಸ್‌ ಎದುರು ತೋರಿದ ಪ್ರದರ್ಶನದಿಂದ ಟೀಕಾಕಾರರ ಬಾಯಿ ಮುಚ್ಚಿಸಲು ಯಶಸ್ವಿಯಾಗಿದ್ದಾರೆ.ಸ್‍ಪಿನ್ನರ್‌ಗಳಾದ ಅಮಿತ್‌ ಮಿಶ್ರಾ, ಆರ್‌. ಅಶ್ವಿನ್‌ ಮತ್ತು ರವೀಂದ್ರ ಜಡೇಜ ಪ್ರಭಾವಿ ಪ್ರದರ್ಶನ ತೋರಿದ್ದಾರೆ. ವೇಗಿಗಳಾದ ಭುವನೇಶ್ವರ್‌ ಕುಮಾರ್‌ ಮತ್ತು ಮೊಹಮ್ಮದ್‌ ಶಮಿ ಕೂಡಾ ನಿರಾಸೆ ಉಂಟುಮಾಡಿಲ್ಲ. ಎರಡು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ಮಿಶ್ರಾ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳನ್ನು ಕಾಡುವುದು ಖಚಿತ.ಬ್ಯಾಟಿಂಗ್‌ನಲ್ಲಿ ಯುವರಾಜ್‌ ಸಿಂಗ್‌ ಅವರನ್ನು ಹೊರತುಪಡಿಸಿ ಇತರ ಎಲ್ಲರೂ ಉತ್ತಮ ಪ್ರದರ್ಶನ ನೀಡಿದ್ದಾರೆ. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ ಮತ್ತು ಸುರೇಶ್‌ ರೈನಾ ಅಬ್ಬರಿಸಿದರೆ ಭಾರತಕ್ಕೆ ಬೃಹತ್‌ ಮೊತ್ತ ಪೇರಿಸುವುದು ಕಷ್ಟವಾಗದು.ಒತ್ತಡದಲ್ಲಿ ಬಾಂಗ್ಲಾ: ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಕೈಯಲ್ಲಿ ಸೋಲು ಅನುಭವಿಸಿರುವ ಬಾಂಗ್ಲಾದೇಶ ತಂಡ ಅತಿಯಾದ ಒತ್ತಡದಲ್ಲಿದೆ. ಇನ್ನೊಂದು ಸೋಲು ಎದುರಾದರೆ ಆತಿಥೇಯರ ಸೆಮಿಫೈನಲ್‌ ಪ್ರವೇಶದ ಹಾದಿ ಮತ್ತಷ್ಟು ದುರ್ಗಮವಾಗಲಿದೆ.ಆದ್ದರಿಂದ ಮುಷ್ಫಿಕರ್‌ ರಹೀಮ್‌ ಬಳಗ ಭಾರತದ ವಿರುದ್ಧ ಪೂರ್ಣ ಶಕ್ತಿಯೊಂದಿಗೆ ಹೋರಾಡಲು ಸಿದ್ಧತೆ ನಡೆಸಿದೆ. ‘ಪ್ರಮುಖ ತಂಡಗಳ ವಿರುದ್ಧ ಗೆಲುವು ಪಡೆಯಬೇಕಾದರೆ ಎಲ್ಲ ವಿಭಾಗಗಳಲ್ಲೂ ಚೇತರಿಕೆಯ ಪ್ರದರ್ಶನ ನೀಡಬೇಕು. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಆರಂಭ ಪಡೆಯುವುದು ಮುಖ್ಯ’ ಎಂದು ವಿಂಡೀಸ್‌ ವಿರುದ್ಧದ ಪಂದ್ಯದ ಬಳಿಕ ಮುಷ್ಫಿಕರ್‌ ರಹೀಮ್‌ ನುಡಿದಿದ್ದರು.ಈ ಹಿಂದೆ ಹಲವು ಅಚ್ಚರಿಯ ಫಲಿತಾಂಶಗಳನ್ನು ನೀಡಿರುವ ಬಾಂಗ್ಲಾ ತಂಡವನ್ನು ಕಡೆಗಣಿಸಲು ಭಾರತ ಸಿದ್ಧವಿಲ್ಲ.ತಂಡಗಳು ಇಂತಿವೆ

ಭಾರತ: ಮಹೇಂದ್ರ ಸಿಂಗ್‌ ದೋನಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಯುವರಾಜ್‌ ಸಿಂಗ್‌, ಸುರೇಶ್‌ ರೈನಾ, ರವೀಂದ್ರ ಜಡೇಜ, ಆರ್‌. ಅಶ್ವಿನ್‌, ಅಮಿತ್‌ ಮಿಶ್ರಾ, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ಮೋಹಿತ್‌ ಶರ್ಮ, ಸ್ಟುವರ್ಟ್‌ ಬಿನ್ನಿ, ಅಜಿಂಕ್ಯ ರಹಾನೆ, ವರುಣ್‌ ಆ್ಯರನ್‌

ಬಾಂಗ್ಲಾದೇಶ: ಮುಷ್ಫಿಕರ್‌ ರಹೀಮ್‌ (ನಾಯಕ), ತಮೀಮ್‌ ಇಕ್ಬಾಲ್‌, ಅನಾಮುಲ್‌ ಹಕ್‌, ಮೋಮಿನುಲ್ ಹಕ್‌, ಶಕೀಬ್‌ ಅಲ್‌ ಹಸನ್‌, ಶಬ್ಬೀರ್‌ ರಹಮಾನ್‌, ಮಹಮೂದುಲ್ಲಾ, ಜಿಯಾವರ್‌ ರಹಮಾನ್‌, ಸೊಹಾಗ್‌ ಗಾಜಿ, ಅಲ್‌ ಅಮೀನ್‌ ಹೊಸೇನ್‌, ಮಶ್ರಫೆ ಮೊರ್ತಜಾ, ಅಬ್ದುರ್‌ ರಜಾಕ್‌, ನಾಸಿರ್‌ ಹೊಸೇನ್‌, ಶಂಸುರ್ ರಹಮಾನ್‌, ಫರ್ಹಾದ್‌ ರೆಜಾಪಂದ್ಯದ ಆರಂಭ: ರಾತ್ರಿ 7.00ಕ್ಕೆ; ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.