ಬುಧವಾರ, ಮಾರ್ಚ್ 3, 2021
21 °C
ಹಿರಿಯ ಶಿಕ್ಷಣ ತಜ್ಞ ಎಲ್.ಶಿವಲಿಂಗಯ್ಯ

‘ಮತ್ತೊಬ್ಬ ಬುದ್ಧನನ್ನು ಕಂಡೆ’

ದಯಾನಂದ Updated:

ಅಕ್ಷರ ಗಾತ್ರ : | |

‘ಮತ್ತೊಬ್ಬ ಬುದ್ಧನನ್ನು ಕಂಡೆ’

ಬೆಂಗಳೂರು: ಬುದ್ಧ ಹಾಗೂ ಅಂಬೇಡ್ಕರ್ ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಆ ಚಿಂತನೆಗಳನ್ನು ಹಬ್ಬುತ್ತಾ ಬಂದವರು ದಲಿತ ಹೋರಾಟಗಾರ ಹಾಗೂ ನಾಡಿನ ಹಿರಿಯ ಶಿಕ್ಷಣ ತಜ್ಞ ಎಲ್.ಶಿವಲಿಂಗಯ್ಯ. ಅಂಬೇಡ್ಕರ್ ಅವರೊಂದಿಗೆ ಕೆಲ ಸಮಯವನ್ನು ಕಳೆದ ಅವರು, ದಲಿತ ಚಿಂತನೆಗಳ ಬೆಳಕಿನಿಂದ ದಲಿತರ ಉದ್ಧಾರದ ಹೊಸ ಮಾರ್ಗ ತೆರೆಯುತ್ತದೆ ಎಂದು ನಂಬಿರುವ ಅವರು ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಅಂಬೇಡ್ಕರ್ ಚಿಂತನೆಗಳ ಭವಿಷ್ಯದ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು...

ಪ್ರಜಾವಾಣಿ : ದಲಿತರ ಏಳಿಗೆಯ ಬಗ್ಗೆ ಅಂಬೇಡ್ಕರ್ ಅವರ ಚಿತ್ರಣವೇ ಇಂದಿಗೂ ಒಂದು ಆಶಾವಾದ. ಅವರ ಜೊತೆಗೆ ಸಮಯ ಕಳೆದ ಸಂದರ್ಭದ ಅನುಭವ ಹೇಗಿತ್ತು?ಎಲ್.ಶಿವಲಿಂಗಯ್ಯ : ಮತ್ತೊಬ್ಬ ಬುದ್ಧನನ್ನು ಕಂಡ ಅನುಭವ ಅದು. 1954 ಆಗಸ್ಟ್ ಎಂಟರಂದು ಬೆಂಗಳೂರಿನ ಲಾಲ್‌ಬಾಗ್ ಹಾಸ್ಟೆಲ್‌ಗೆ ಬಂದಿದ್ದ ಅವರೊಂದಿಗೆ ಕೆಲ ಕಾಲ ಕಳೆದ ಅದೃಷ್ಟ ನನ್ನದು. ನಾನು ಆಗಿನ್ನೂ ಬಿ.ಇ ಮುಗಿಸಿದ್ದ ಸಂದರ್ಭ ಅದು. ಅಂದು ಬಹಳಷ್ಟು ವಿಚಾರಗಳನ್ನು ಅಂಬೇಡ್ಕರ್ ಮಾತನಾಡಿದ್ದರು. ದಲಿತರ ಏಳಿಗೆಗಾಗಿ ದಲಿತರು ಶಿಕ್ಷಣ ಹೊಂದಿ, ಒಗ್ಗಟ್ಟಿನಿಂದ ಮುನ್ನುಗ್ಗಬೇಕು. ಇದಕ್ಕಾಗಿ ವಿದ್ಯಾವಂತ ದಲಿತರು ಹೆಚ್ಚು ತಮ್ಮನ್ನು ದಲಿತ ಹೋರಾಟಗಳಿಗೆ ತೊಡಗಿಸಿಕೊಳ್ಳಬೇಕು ಎಂದಿದ್ದರು. ಅಂದು ಅಂಬೇಡ್ಕರ್ ಹೇಳಿದ್ದ ಮಾತುಗಳು ನನ್ನಲ್ಲಿನ್ನೂ ಭರವಸೆಯಾಗಿ ಉಳಿದುಕೊಂಡಿವೆ.ಪ್ರ : ಅಂಬೇಡ್ಕರ್ ಚಿಂತನೆಗಳನ್ನು ಸರ್ಕಾರ ತನ್ನ ನೀತಿ ನಿರೂಪಣೆಯಲ್ಲಿ ಹಾಗೂ ಸಮಾಜ ತನ್ನ ನಿತ್ಯದ ಬದುಕಲ್ಲಿ ಅಳವಡಿಸಿಕೊಂಡಿದೆ ಎಂದು ನಿಮಗೆ ಅನ್ನಿಸಿದೆಯಾ?ಎಲ್.ಎಸ್ :
ಖಂಡಿತಾ ಇಲ್ಲ. ಜಯಂತಿಗಳ ಆಚರಣೆಗಳಿಗಷ್ಟೇ ಸರ್ಕಾರಗಳು ಅಂಬೇಡ್ಕರ್ ಹಾಗೂ ಬುದ್ಧರನ್ನು ಸೀಮಿತಗೊಳಿಸಿವೆ. ಅಂಬೇಡ್ಕರ್ ಕೇವಲ ಒಂದು ಸಮುದಾಯದ, ಹೆಚ್ಚಾಗಿ ದಲಿತರ ಸಂಕೇತ ಎಂದು ಬಿಂಬಿಸಿದವರೇ ಹೆಚ್ಚು. ಹೀಗಾಗಿ ಸರ್ಕಾರ ಹಾಗೂ ಸಮಾಜದಲ್ಲಿ ಇಂದಿಗೂ ಅಂಬೇಡ್ಕರ್ ಚಿಂತನೆಗಳೂ ದಲಿತರಂತೆ ಅಸ್ಪೃಶ್ಯವಾಗಿಯೇ ಉಳಿದಿವೆ. ಸರ್ಕಾರಗಳು ಅಂಬೇಡ್ಕರ್ ಅವರ ವಿಚಾರಗಳನ್ನು ಮುಟ್ಟಲೇ ಹೋಗುತ್ತಿಲ್ಲ. ರಾಜಕಾರಣಿಗಳು ದಲಿತರನ್ನು ಮತಬ್ಯಾಂಕ್‌ಗಾಗಿ ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ಸಮಾಜದ ಮಟ್ಟದಲ್ಲಿ ಇಂದಿಗೂ ಅಂಬೇಡ್ಕರ್ ಒಬ್ಬ ದಲಿತ, ಅಷ್ಟೇ.ಪ್ರ : ಇಂದಿನ ದಲಿತ ಹೋರಾಟಗಳು ಹೆಚ್ಚು ಸ್ವಾರ್ಥ ಹಾಗೂ ಅಪ್ರಾಮಾಣಿಕತೆಯಿಂದ ಕೂಡಿವೆ ಎಂಬ ಆರೋಪವಿದೆ. ದುಡ್ಡು ಮಾಡುವ ಸಲುವಾಗಿ ಸಂಘಟನೆಗಳು ಹುಟ್ಟಿಕೊಳ್ಳುತ್ತಿವೆ ಎಂಬ ಆರೋಪದ ಬಗ್ಗೆ ನಿಮ್ಮ ಅನಿಸಿಕೆ ಏನು?ಎಲ್.ಎಸ್ :
ಬುದ್ಧ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳನ್ನು ಸರಿಯಾಗಿ ತಿಳಿದುಕೊಂಡಿಲ್ಲದವರು ಇಂದು ದಲಿತ ಹೋರಾಟದ ಹೆಸರಲ್ಲಿ ಏನೇನೋ ಮಾಡುತ್ತಿದ್ದಾರೆ. ಈ ಹೋರಾಟಗಳಲ್ಲಿ ಬುದ್ಧ ಹಾಗೂ ಅಂಬೇಡ್ಕರ್ ಕೇವಲ ಫೋಟೊ ಮತ್ತು ಫ್ಲೆಕ್ಸ್‌ಗಳಿಗೆ ಮಾತ್ರ ಸೀಮಿತರಾಗಿದ್ದಾರೆ. ಆದರೆ ಇದೆಲ್ಲ ಕೆಲವು ದಿನಗಳ ಮಟ್ಟಿಗೆ ಮಾತ್ರ. ಸಾವಿರಾರು ಸಂಘಟನೆಗಳು ಹುಟ್ಟಿಕೊಂಡರೂ ಅಂತಿಮವಾಗಿ ಪ್ರಾಮಾಣಿಕ ಹೋರಾಟಕ್ಕೆ ಮಾತ್ರ ಗೆಲುವು. ಆ ಬಗ್ಗೆ ಅನುಮಾನಗಳೇ ಬೇಡ.ಪ್ರ: ಬೌದ್ಧ ಧಮ್ಮ ಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗಾದರೂ ಅಸ್ಪೃಶ್ಯತೆಯನ್ನು ಮೀರುವ ಮಾರ್ಗವಾಗಿ ಅಂಬೇಡ್ಕರ್ ಅವರಿಗೆ ಕಂಡಿತ್ತು. ಆದರೆ ಇಂದು ಬೌದ್ಧ ಧಮ್ಮದ ಬಗ್ಗೆ ದಲಿತ ಚಿಂತಕರಲ್ಲಿಯೇ ಕೆಲವರಿಗೆ ನಂಬಿಕೆ ಇಲ್ಲ. ಇದರಿಂದ ಹಿಂದೂ ದಲಿತ ಬೌದ್ಧ ದಲಿತನಾಗಿ ಮಾತ್ರ ಬದಲಾಗಬಹುದು ಎಂಬ ನಿರಾಶಾವಾದ ನಿಮ್ಮಲ್ಲೂ ಇದೆಯೇ?ಎಲ್.ಎಸ್: ಎಲ್ಲಾ ಆಯಾಮಗಳಂತೆ ಧರ್ಮವೊಂದು ಬೆಳೆಯಲು ಕೂಡಾ ಹಣ, ಬುದ್ಧಿವಂತಿಕೆ ಹಾಗೂ ಜನಶಕ್ತಿ ಮುಖ್ಯವಾಗುತ್ತವೆ. ಆದರೆ ಬಹುಸಂಖ್ಯ ದಲಿತರು ಇಂದಿಗೂ ಹಣವಂತರೂ ಅಲ್ಲ, ಬುದ್ಧಿವಂತರೂ ಅಲ್ಲ ಮತ್ತು ಮುಖ್ಯವಾಗಿ ದಲಿತರಲ್ಲಿ ಒಗ್ಗಟ್ಟೂ ಇಲ್ಲ. ಆದರೆ ಬೌದ್ಧ ಧಮ್ಮದಿಂದ ದಲಿತರ ಏಳಿಗೆ ಹಾಗೂ ಸಾಮಾಜಿಕ ಬದಲಾವಣೆ ಸಾಧ್ಯ ಎಂಬ ಅಚಲ ನಂಬಿಕೆ ನನಗಂತೂ ಇದೆ.ಧಮ್ಮ ಗುರುಗಳು ಕೇವಲ ಕಾಲೋನಿಗಳನ್ನು ಸ್ಥಾಪಿಸಿಕೊಂಡು ಪ್ರತ್ಯೇಕವಾಗಿ ಉಳಿಯುವುದಕ್ಕಿಂತಾ ದಲಿತರ ಕೇರಿಗಳಲ್ಲಿ ಅಲೆದು ಧಮ್ಮ ಪ್ರಚಾರ ಮಾಡಬೇಕು. ಇದು ಮತಾಂತರದ ಆಯಾಮಗಳನ್ನು ಮೀರಿ ಆಗಬೇಕಾದ ಸಾಮಾಜಿಕ ಕ್ರಾಂತಿ. ನಾಳಿನ ಮೇಲಿನ ನಂಬಿಕೆಯಿಂದ ಇಂದಿನ ಹೋರಾಟಗಳು ರೂಪುಗೊಳ್ಳಬೇಕು.ಪ್ರ: ದಲಿತರ ಏಳಿಗೆ ಬಗ್ಗೆ ಮಾತನಾಡುವ ದಲಿತೇತರ `ಅಂಬೇಡ್ಕರ್ ಚಿಂತಕರು~ ಅವರ ಚಿಂತನೆಗಳನ್ನು ಮನೆಯಾಚೆ ಇಟ್ಟು ಬರುವ `ಮಡಿವಂತಿಕೆ~ಯ ಪ್ರವೃತ್ತಿ ಇದೆ. ಅಂಬೇಡ್ಕರ್ ಅವರ ಪೋಟೊ ಹಾಗೂ ಪುಸ್ತಕಗಳು ಮನೆಯ ಕಪಾಟಿನಲ್ಲಿದ್ದರೆ ಎಲ್ಲಿ ನಮ್ಮನ್ನೂ ದಲಿತರು ಎಂದು ತಿಳಿಯುತ್ತಾರೊ ಎಂಬ `ಸಾಮಾಜಿಕ ಭಯ~ ದಲಿತರಲ್ಲದ ವಿದ್ಯಾವಂತ ನಗರವಾಸಿಗಳಿಗಿದೆ. ಈ ಬಗ್ಗೆ ನಿಮಗೆ ಕಾಣುವ ಪರಿಹಾರವೇನು?ಎಲ್.ಎಸ್ : ದಲಿತರಿಗೆ ತಮ್ಮನ್ನು ದಲಿತ ಎಂದು ಗುರುತಿಸಿಕೊಳ್ಳಲು ಯಾವುದೇ ಭಯವಿಲ್ಲ. ನಮ್ಮ ಸಮಾಜದಲ್ಲಿರುವ ಅಸಂಖ್ಯ ಜಾತಿಗಳ ಕಾರಣಕ್ಕೆ ಈ ರೀತಿಯ ವೈಚಿತ್ರ್ಯ ಅನೇಕರ ಯೋಚನಾ ಕ್ರಮದಲ್ಲೇ ಇದೆ. ಜಗತ್ತಿನ ಇತರೆ ಹೋರಾಟ, ಚಿಂತನೆಗಳನ್ನು ಒಪ್ಪಬಹುದಾದರೆ ಅಂಬೇಡ್ಕರ್ ಅವರನ್ನು, ಅವರ ಚಿಂತನೆಗಳನ್ನು ಒಪ್ಪಲು ಏಕೆ ಸಾಧ್ಯವಿಲ್ಲ. ನಮ್ಮ ಮನಸ್ಥಿತಿ ಬದಲಾಗುವವರೆಗೂ ಇಂತಹ ಸಮಸ್ಯೆಗಳು ಇದ್ದಿದ್ದೇ.ಪ್ರ : ದಲಿತರ ಶೋಷಣೆ ಕೇವಲ ಮೇಲು ಜಾತಿಯ ಜನರಿಂದ ಮಾತ್ರ ಆಗುತ್ತಿಲ್ಲ. ಸಣ್ಣ ಸಣ್ಣ ಜಾತಿಗಳು ಕೂಡಾ ದಲಿತರ ಶೋಷಣೆಯಲ್ಲಿ ತೊಡಗಿವೆ. ಆದರೆ ದಲಿತರ ಒಟ್ಟೂ ಸಿಟ್ಟು ಮೇಲು ಜಾತಿಗಳ ಕಡೆಗೇ ಇದೆ. ಇದು ಹೋರಾಟದ ವಿಫಲತೆ ಎನಿಸುವುದಿಲ್ಲವೇ?ಎಲ್.ಎಸ್ :
ಸಾಮಾಜಿಕ ಬದಲಾವಣೆಗಾಗಿ ಕೇವಲ ಸಿಟ್ಟು, ಕೆಚ್ಚುಗಳು ಸಾಲುವುದಿಲ್ಲ ಎಂಬುದು ಮೊದಲು ಅರಿವಿಗೆ ಬರಬೇಕು. ಸಮಾಜದ ಎಲ್ಲರೂ ಮನಸ್ಸು ಮಾಡಿದಾಗ ಮಾತ್ರ ಬದಲಾವಣೆ ಸಾಧ್ಯ ಎಂಬ ಅರಿವಿದ್ದೇ ಹೋರಾಟಗಳನ್ನು ರೂಪಿಸಬೇಕು. ಹೋರಾಟಗಳಲ್ಲಿ ಮುಕ್ತ ಚಿಂತನೆಯ ಸವರ್ಣೀಯರೂ ಪಾಲ್ಗೊಂಡಾಗ ಮಾತ್ರ ಹೋರಾಟ ಸಫಲವಾಗಲು ಸಾಧ್ಯ. ನನ್ನನ್ನು ಓದಿಸಿ, ಬೆಳೆಸಿದವರು ಸವರ್ಣೀಯರೇ. ಸಮಾಜದ ಅಂಕೆಯ ಅಡಿಯಲ್ಲೇ ಸಣ್ಣ ಸಣ್ಣ ಜಾತಿಗಳ ಜನರೂ ಬದುಕುತ್ತಿರುವುದರಿಂದ ಶೋಷಣೆ ವೃತ್ತ ತಿರುಗುತ್ತಲೇ ಇದೆ.ಪ್ರ : ಮುಂದಿನ ದಲಿತ ಹೋರಾಟದ ಸಾಧ್ಯತೆಗಳ ಬಗ್ಗೆ ನಿಮ್ಮ ಕನಸೇನಿದೆ?

ಎಲ್.ಎಸ್ : ದಲಿತರು ಭರವಸೆ ಕಳೆದುಕೊಳ್ಳಬೇಕಾಗಿಲ್ಲ. ಎಲ್ಲೇ ಹೋದರೂ ದಲಿತರು ತಮ್ಮ ಉದ್ಧಾರಕ್ಕಾಗಿ ಅಂಬೇಡ್ಕರ್ ಚಿಂತನೆಗಳ ಮೊರೆ ಹೋಗಲೇಬೇಕು. ಬೌದ್ಧ ಧಮ್ಮ ದಲಿತರ ಭರವಸೆಯಾಗಬೇಕು. ಹೋರಾಟದಲ್ಲಿ ಆಶಾವಾದದ ಜೊತೆಗೆ ಪ್ರಾಮಾಣಿಕ ಪ್ರಯತ್ನಗಳೂ ನಡೆದರೆ ಮುಂದೊಂದು ದಿನ ಸಾಮಾಜಿಕ ಬದಲಾವಣೆ ಸಾಧ್ಯ. ಭರವಸೆಯ ಬೆಳಕು ಇದ್ದಲ್ಲಿ ಜಯವೂ ಇದ್ದದ್ದೇ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.