ಭಾನುವಾರ, ಮೇ 9, 2021
19 °C
`ಕಿರು ನಾಟಕ ವರ್ಷ'ಕ್ಕೆ ಬೆಂಬಲ: ಮುರುಘಾ ಶ್ರೀ

ಮದಕರಿ ಊರಲ್ಲಿ `ಪಂಪನ ತೇರು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ:  ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ತಮ್ಮ `ಹಂಸಲೇಖ ದೇಸಿ ಸಂಸ್ಥೆ'ಯೊಂದಿಗೆ ರಾಜ್ಯದ ಮೂಲೆ ಮೂಲೆಗಳಿಗೆ ಕನ್ನಡದ ಕಿರು ನಾಟಕಗಳನ್ನು ತಲುಪಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.ಇದರ ಅಂಗವಾಗಿ `ಕಿರು ನಾಟಕ ವರ್ಷ 2013-14' ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ. `ಪಂಪನ ತೇರು' ಎಂಬ ಹೆಸರಿನ ರಥದಲ್ಲಿ ಅಭಿಯಾನ ಆರಂಭವಾಗಿದೆ.ಹಂಸಲೇಖರ `ಪಂಪನ ತೇರು' ಶನಿವಾರ ಮುರುಘಾಮಠದಲ್ಲಿ ಬೀಡು ಬಿಟ್ಟಿತ್ತು. `ಕಿರುನಾಟಕ ವರ್ಷ'ದ ಅಂಗವಾಗಿ ಹಂಸಲೇಖ ದೇಸಿ ಸಂಸ್ಥೆಯ ವಿದ್ಯಾರ್ಥಿಗಳು ಮಠದ ಅಂಗಳದಲ್ಲಿ ಏಕಪಾತ್ರ ಅಭಿನಯ, ನಾಟಕ ಪ್ರದರ್ಶಿಸಿದರು. ರಂಗಗೀತೆಗಳನ್ನು ಹಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಹಂಸಲೇಖ, `ಕರ್ನಾಟಕ ಕಿರುನಾಟಕ' ಎಂಬ ಪರಿಕಲ್ಪನೆಯಲ್ಲಿ ಹೊರಟಿರುವ `ಕಿರುನಾಟಕ ವರ್ಷ 2013-14' ಅಭಿಯಾನ ಆದಿಕವಿ ಪಂಪನ ಹುಟ್ಟೂರಾದ ಅಣ್ಣಿಗೇರಿಯಲ್ಲಿ ಇದೇ 23ರಂದು ಉದ್ಘಾಟನೆಗೊಳ್ಳಲಿದೆ. ಕಿರುನಾಟಕಗಳನ್ನು ಮಕ್ಕಳಿಂದ ಆಡಿಸಬೇಕು. ಇದರೊಂದಿಗೆ  ಕರ್ನಾಟಕದ ಮೂಲೆ ಮೂಲೆಗೂ  ಕಿರುನಾಟಕಗಳನ್ನು ತಲುಪಿಸಬೇಕಿದೆ. ಚಿತ್ರದುರ್ಗದಲ್ಲಿ ಸುಮಾರು 500 ನಾಟಕಗಳನ್ನು ಆಡಿಸಬೇಕೆಂಬ ಹಂಬಲ ನಮ್ಮದು. ಇದಕ್ಕೆ ಮುರುಘಾ ಶರಣರ ಸಂಪೂರ್ಣ ಬೆಂಬಲ ಸಿಗುತ್ತದೆಂದು ನಂಬಿದ್ದೇನೆ' ಎಂದರು.`ಹಂಸಲೇಖ ದೇಸಿ ಸಂಸ್ಥೆ  ಕನ್ನಡ ರಂಗಭೂಮಿಯನ್ನು ಕಟ್ಟಲು ಪ್ರಯತ್ನಿಸುವುದರೊಂದಿಗೆ ಕನ್ನಡ ಸೇವೆ ಮಾಡುತ್ತಿದೆ. ಕನ್ನಡ ಕಟ್ಟುವ ಇಂಥ ಮಹತ್ತರ ಕಾರ್ಯಗಳು ನಮ್ಮಲ್ಲಿ ನಡೆಯಬೇಕಿದೆ. ಇಂಥ ಕೆಲಸಗಳಿಗೆ ಶ್ರಿಮಠ ಸಹಕಾರ ನೀಡುತ್ತದೆ' ಎಂದು ಶಿವಮೂರ್ತಿ ಮುರುಘಾ ಶರಣರು ಭರವಸೆ ನೀಡಿದರು.`ಇಂಥ ಕಾರ್ಯಕ್ರಮಗಳು ರಾಜಧಾನಿಗಷ್ಟೇ ಸೀಮಿತಗೊಳ್ಳದೆ, ಚಿತ್ರದುರ್ಗದಂತಹ ಮಧ್ಯ ಕರ್ನಾಟಕದಲ್ಲೂ ನಡೆಸಲು ವಿನಂತಿಸುತ್ತೇನೆ. ಶ್ರಿಮಠದಿಂದ 50 ಕಿರುನಾಟಕಗಳ ಪ್ರಾಯೋಜಕತ್ವವನ್ನು ವಹಿಸಲಾಗುವುದು' ಎಂದು ಶ್ರೀಗಳು ತಿಳಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಮಲ್ಲಿಕಾರ್ಜುನಯ್ಯ ಮಾತನಾಡಿ, ಹಂಸಲೇಖ ಅವರು ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದರೂ ರಂಗಭೂಮಿಯ ಉಳಿವಿಗಾಗಿ ದುಡಿಯುತ್ತಿರುವುದು ಶ್ಲಾಘನೀಯ ಎಂದರು.`ದೇಸಿಯೊಳ್ ಪೊಕ್ಕು ಮಾರ್ಗ ದೊಳ್ ತಳ್ಪುದು' ಎಂಬುದೇ ಆದಿಕವಿ ಪಂಪನ ಆಜ್ಞೆ. ಅದರಂತೆ ಕನ್ನಡವನ್ನು ನಿರಂತರವಾಗಿ ಕಲೆಗಳಲ್ಲಿ ಉಳಿಸಿ ಕೊಳ್ಳುವ, `ಕನ್ನಡಕ್ಕಾಗಿ ಕಲೆಗಳು' ಎಂಬ ಕಲಾ ಮಾರ್ಗವನ್ನು ವ್ಯವಸ್ಥಿತವಾಗಿ ಚಾಲನೆ ನೀಡುವ ಮೂಲಕ ಕಿರುನಾಟಕದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.ಚಿತ್ರದುರ್ಗದ ಮುರುಘಾಮಠ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಸಂಘ ಸಂಸ್ಥೆಗಳ ಹಂಸಲೇಖ ಅವರು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದವು. ಕಾರ್ಯಕ್ರಮದಲ್ಲಿ ಗದುಗಿನ ವೀರೇಶ್ವರ ಸ್ವಾಮೀಜಿ, ಲತಾಹಂಸಲೇಖ, ರಂಗಾಯಣ ನಿರ್ದೇಶಕರಾದ ಹೊ.ನ.ಸತ್ಯ, ಶ್ರೀಮಠದ ವ್ಯವಸ್ಥಾಪಕ ಪರಮಶಿವಯ್ಯ, ಷಡಕ್ಷರಯ್ಯ, ಎನ್.ತಿಪ್ಪಣ್ಣ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.