ಬುಧವಾರ, ಜೂನ್ 23, 2021
22 °C

ಮದುವೆ ಮನೆಯಲ್ಲಿ ಸೂತಕದ ಛಾಯೆ:ಮೂವರ ಜಲಸಮಾಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಘಟಗಿ (ಧಾರವಾಡ ಜಿಲ್ಲೆ): ಸಹೋದರಿಯ ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕಾದ ಸಹೋದರ ಮತ್ತು ಸಂಬಂಧಿಗಳಿಬ್ಬರು ಕೆರೆಯಲ್ಲಿ ಸ್ನಾನ ಮಾಡಲು ಹೋಗಿ ಮಸಣ ಸೇರಿದ ದುರ್ಘಟನೆ ಗುರುವಾರ ಮಧ್ಯಾಹ್ನ ಇಲ್ಲಿ ಜರುಗಿದೆ.ಪಟ್ಟಣದ ತರಕಾರಿ ವ್ಯಾಪಾರಿಯಾದ ಸಾಹಿಲ್‌ಸಾಬ್ ಸೈಯದ್‌ಸಾಬ್ ಬಾಲಸಿಂಗ್(16), ಹಳಿಯಾಳ ತಾಲ್ಲೂಕಿನ ಕಾವಲವಾಡದ ರುಸ್ತುಂ ಗಫಾರಸಾಬ್ ಬೆಟಗೇರಿ (18), ಬೆಳಗಾವಿಯ ತಬ್ರೇಜ್ ಸನಾವುಲ್ಲಾ ಶೇಖ್(16) ಮೃತಪಟ್ಟಿದ್ದಾರೆ.ತನ್ನ ಅಕ್ಕನ ಮದುವೆಯಲ್ಲಿ ಅಕ್ಕಿಕಾಳು ಹಾಕಿ ಅವಳನ್ನು ಗಂಡನ ಮನೆಗೆ ಕಳಿಸಬೇಕಾಗಿದ್ದ ಸಾಹಿಲ್ ತನ್ನ ದೊಡ್ಡಪ್ಪನ ಮಗಳ ಮದುವೆಯ ಕಾರ್ಯದಲ್ಲಿ ತನ್ನ ಸಂಬಂಧಿಗಳಾದ ರುಸ್ತುಂ ಹಾಗೂ ತಬ್ರೇಜ್ ಅವರೊಂದಿಗೆ (ಹಲ್ದಿ) ಅರಿಸಿನ ಕಾರ್ಯದ ನಂತರ ಪಟ್ಟಣದ ಹೊರವಲಯದ ಮೃತ್ಯುಂಜಯ ಕೆರೆಗೆ ಸ್ನಾನಕ್ಕೆಂದು ಹೋದಾಗ ಆಯ ತಪ್ಪಿ ಕೆರೆಯಲ್ಲಿ ಬಿದ್ದು ಮೃತರಾದರು.ಕೆರೆಯಲ್ಲಿ ಸ್ನಾನಕ್ಕೆಂದು ಇಳಿದ ಸಂದರ್ಭದಲ್ಲಿ ಸಾಹಿಲ್ ಕಾಲುಜಾರಿ ನೀರಿಗೆ ಬಿದ್ದ. ಅವನನ್ನು ರಕ್ಷಿಸಲು ಹೋದ ರುಸ್ತುಂ ಹಾಗೂ ತಬ್ರೇಜ್ ಸಹ ನೀರಿನ ಮಡುವಿನಿಂದ ಹೊರಬರಲಾರದೆ ಅಸು ನೀಗಿದ್ದಾರೆ. ಸುದ್ದಿ ತಿಳಿದು ಮದುವೆ ಮನೆಯ ಮಂದಿಯೆಲ್ಲ ಕೆರೆಗೆ ಧಾವಿಸಿ ಬಂದು ರೋದಿಸುತ್ತಿದ್ದ ಘಟನೆ ಮನ ಕಲಕುವಂತಿತ್ತು.ಇಲ್ಲಿನ ಬಾಗವಾನ್ ಗಲ್ಲಿಯ ದರ್ಗಾದ ಪಕ್ಕದ ನಿವಾಸಿ ಮಲ್ಲಿಕ್‌ಜಾನ್ ಬಾಲಸಿಂಗ್ ಅವರ ಮಗಳ ಮದುವೆಯು ಗುರುವಾರ (ಮಾರ್ಚ್ 15) ನಡೆಯಬೇಕಿತ್ತು. ಮದುವೆ ಸಂಭ್ರಮವು ಮುಹೂರ್ತದ ಕೆಲವೇ ಕ್ಷಣಗಳ ಪೂರ್ವದಲ್ಲಿ ನಡೆದ ಈ ದುರ್ಘಟನೆಯಿಂದ ಮಾಯಾವಾಗಿ ಸೂತಕದ ಛಾಯೆ ಆವರಿಸಿತು.

 

ಮದುವೆಯನ್ನು ತಾತ್ಕಾಲಿಕವಾಗಿ ಮುಂದಕ್ಕೆ ಹಾಕಲಾಯಿತು. ಪಟ್ಟಣದ ಜನತೆಯೂ ಜಾತ್ರೋಪಾದಿಯಲ್ಲಿ ಕೆರೆಯ ಸುತ್ತಲೂ ಜಮಾಯಿಸಿದ್ದರು. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಮೂರು ತಾಸುಗಳ ಕಾರ್ಯಾಚರಣೆಯ ನಂತರ ಶವಗಳನ್ನು ಹೊರತೆಗೆದರು. ಶವಗಳನ್ನು ಮರಣೋತ್ತರ ಪರೀಕ್ಷೆ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈ.ಎಸ್.ರವಿಕುಮಾರ, ಅಗ್ನಿಶಾಮಕ ದಳದ ವಿನಾಯಕ ಕಲ್ಲಗುಟಕರ ಮಾರ್ಗದರ್ಶನದಲ್ಲಿ ಸೈಯದ್ ಖಾದರ್, ಸಿ.ಎಚ್. ಪೂಜಾರ, ಅರ್ಜುನ ಬಂಡಿವಡ್ಡರ, ಶಿವಾನಂದ ಶೋಧ ಕಾರ್ಯದಲ್ಲಿ ತೊಡಗಿ ಶವಗಳನ್ನು ಹೊರತೆಯುವಲ್ಲಿ ಯಶಸ್ವಿಯಾದರು.ಈ ಹಿಂದೆ ತಾಲೂಕಿನ ಕಂದ್ಲಿ ಹಾಗೂ ನೀರಸಾಗರ ಗ್ರಾಮಗಳಲ್ಲಿ ಜರುಗಿದ ಜಲ ದುರಂತಗಳು ಜನಮನದಲ್ಲಿ ಮಾಸುವ ಮುನ್ನವೇ ಪಟ್ಟಣದ ಈ ದುರ್ಘಟನೆ ಸಾರ್ವಜನಿಕರನ್ನು ಆತಂಕಕ್ಕೆ ಈಡು ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.