ಗುರುವಾರ , ಜೂನ್ 24, 2021
23 °C

ಮಧ್ಯಾಹ್ನದವರೆಗೆ ಲೋಕಸಭೆ ಕಲಾಪ ಮುಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

ನವದಹೆಲಿ (ಪಿಟಿಐ): ತಮಗೆ ಲಂಚದ ಆಮಿಷ ಒಡ್ಡಲಾಯಿತು ಎಂಬ ಸೇನಾ ಮುಖ್ಯಾಧಿಕಾರಿಯ ಹೇಳಿಕೆಯನ್ನು ಪ್ರಸ್ತಾಪಿಸಿ ಬಿಜೆಪಿ ಸಂಸದರು ಗದ್ದಲವೆಬ್ಬಿಸಿದರೆ, ಕೆಲವು ಕಾಂಗೆಸ್ ಸದಸ್ಯರು ಪ್ರತ್ಯೇಕ ತೆಲಂಗಾಣ ವಿಷಯವನ್ನು ಪ್ರಸ್ತಾಪಿಸಿ ಗದ್ದಲ ಉಂಟು ಮಾಡಿದಾಗ ಸೋಮವಾರದ ಸಂಸತ್ತಿನ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.

ಲೋಕಸಭೆ ಆರಂಭವಾಗುತ್ತಿದ್ದಂತೆಯೇ ಸಭಾಧ್ಯಕ್ಷೆ ಮೀರಾ ಕುಮಾರಿ ಅವರು, ಅಗಲಿದ ಸದಸ್ಯರ ಶ್ರದ್ಧಾಂಜಲಿಯ ಹೇಳಿಕೆಗಳನ್ನು ಓದಲು ಆರಂಭಿಸಿದಾಗ, ಆಂಧ್ರದ ತೆಲಂಗಾಣ ಪ್ರದೇಶದಿಂದ ಆಯ್ಕೆಯಾಗಿ ಬಂದ ಕಾಂಗ್ರೆಸ್ ಸಂಸದರು ಮತ್ತು ಅವರೊಂದಿಗೆ ಸೇರಿದ ಟಿಆರ್ ಎಸ್ ಹಾಗೂ ಟಿಡಿಪಿ ಸಂಸದರು ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತಾ  ಸಭಾಧ್ಯಕ್ಷರ ಪೀಠದತ್ತ ಧಾವಿಸಿದರು. 

ತಮ್ಮ ಪೀಠಗಳಲ್ಲೇ ಕುಳಿತುಕೊಂಡಿದ್ದ ಬಿಜೆಪಿ ಸದಸ್ಯರು ತನಗೆ ಲಂಚದ ಆಮಿಷ ಒಡ್ಡಲಾಯಿತು ಎಂಬ ಸೇನಾ ಮುಖ್ಯಸ್ಥರ ಹೇಳಿಕೆಯನ್ನು ಪ್ರಸ್ತಾಪಿಸಿ ಗದ್ದಲವೆಬ್ಬಿಸಿದರು. ಅವರಲ್ಲಿ ಕೆಲವರು ತೆಲಂಗಾಣ ಬೇಡಿಕೆಗೆ ತಮ್ಮ ಬೆಂಬಲ ಸೂಚಿಸುತ್ತಿದ್ದುದು ಕಂಡುಬಂದಿತು. ಕೋಲಾಹಲದ ನಡುವೆ ಸಭಾಧ್ಯಕ್ಷೆ ಸದನದ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.

ಇತ್ತ ರಾಜ್ಯಸಭೆಯಲ್ಲೂ ಬಿಜೆಪಿ ಸಂಸದರು, ಪ್ರಶ್ನೋತ್ತರ ಸಮಯವನ್ನು ರದ್ದು ಪಡಿಸಿ, ಸೇನಾ ಮುಖ್ಯಸ್ಥರ ಹೇಳಿಕೆಯ ಕುರಿತು ಚರ್ಚೆ ನಡೆಸಬೇಕೆಂದು ಪಟ್ಟು ಹಿಡಿದರು. ಸಭಾಪತಿ ಹಮೀದ್ ಅನ್ಸಾರಿ ಅವರು ಒಪ್ಪದಿದ್ದಾಗ, ಬಿಜಿಪಿ ಸಂಸದರೊಂದಿಗೆ, ಎಐಎಡಿಎಂಕೆ ಮತ್ತು ಜೆಡಿ ಯು ಸಂಸದರು ಸೇನಾಧಿಕಾರಿಯ ಹೇಳಿಕೆ ಪ್ರಕಟಗೊಂಡಿದ್ದ ವೃತ್ತಪತ್ರಿಕೆಗಳನ್ನು ಹಿಡಿದು ತೋರಿಸುತ್ತಾ ಘೋಷಣೆ ಕೂಗಿ ಕಲಾಪಕ್ಕೆ ಅಡ್ಡಿಪಡಿಸತೊಡಗಿದರು.

ತಮ್ಮ ಮನವಿಯನ್ನು ಮನ್ನಿಸದೇ, ಶಾಂತಗೊಳ್ಳದ ಸದಸ್ಯರು ಕಲಾಪದ ಪಟ್ಟಿಯಂತೆ ಕಲಾಪ ನಡೆಸಲು ಅವಕಾಶ ನೀಡದಿದ್ದಾಗ ಸಭಾಪತಿ ಅನ್ಸಾರಿ ಅವರು ರಾಜ್ಯಸಭೆಯ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.