ಗುರುವಾರ , ಏಪ್ರಿಲ್ 15, 2021
24 °C

ಮನದುಂಬಿದ ವಚನಗಾಯನ ಸವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳೇಬೀಡು: ವಚನ ಗಾಯನದ ತಾಳ ಲಯಕ್ಕೆ ತಕ್ಕಂತೆ ಕಲಾವಿದರು ಹೆಜ್ಜೆ ಹಾಕಿದ್ದು ನೋಡುಗರನ್ನು ಚಕಿತಗೊಳಿಸಿದರೆ, ನಾಟಕದ ಪಾತ್ರಧಾರಿಗಳ ಆಕರ್ಷಕ ಸಂಭಾಷಣೆಗಳು ಪ್ರೇಕ್ಷಕರನ್ನು 12ನೆ ಶತಮಾನದ ಅನುಭವ ಮಂಟಪಕ್ಕೆ ಕರೆದೊಯ್ದವು. ವಚನ ಸಾಹಿತ್ಯದ ಶ್ರೀಮಂತ ಸಂಸ್ಕೃತಿ ಅಲ್ಲಿ ಮೇಳೈಸಿತ್ತು.ಸಾಣೇನಹಳ್ಳಿ ಶಿವಕುಮಾರ ಕಲಾಸಂಘ, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಸ್ಥಳೀಯ ವೀರಶೈವ ಸಮಾಜ , ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯ ಆಶ್ರಯದಲ್ಲಿ ಹಳೇಬೀಡಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ನಡೆದ ನಾಟಕೋತ್ಸವದಲ್ಲಿ ಬಸವ ಸಂಚಾರ ತಂಡದವರು ನಡೆಸಿಕೊಟ್ಟ ನಾಟಕ, ವಚನಗಾಯನ ನೃತ್ಯ ಪ್ರದರ್ಶನವು ಅನನ್ಯ ಅನುಭವ ನೀಡಿದವು.ಸುಯ್ಯೆಂದು ತಂಪಾಗಿ ಬೀಸುವ ಅಷಾಢದ ಗಾಳಿಯೊಂದಿಗೆ ಕಪ್ಪಾದ ಮೋಡಗಳೂ ಅಗಸದಲ್ಲಿ ದಟ್ಟೈಸಿದ್ದವು. ಮಳೆರಾಯ ಧರೆಗೆ ಸುರಿಯದಿದ್ದರೂ, ವಚನಗಾಯನ ಹಾಗೂ ನಾಟಕದ ಡೈಲಾಗ್‌ಗಳಿಗೆ ಮನಸೋತ ವಿದ್ಯಾರ್ಥಿ ಗಳು ಹಾಗೂ ಶಿಕ್ಷಕರು ಕರತಾಡನದ ಮಳೆ ಸುರಿಸಿದರು. ಸಂಗೀತದ ಮಾಧುರ್ಯ, ಸಾಂಸ್ಕೃತಿಕ ಸವಿಯನ್ನು ಮನದುಂಬಿಕೊಂಡರು.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ರಚಿಸಿದ ಈ ನಾಟಕವನ್ನು ಮಹಾದೇವ ಹಡಪದ ನಿರ್ದೇಶಿಸಿದ್ದರು. ಮಂಜುನಾಥ ಎಚ್.ಪಿ. ಸಂಗೀತ ಸಂಯೋಜನೆ, ರಾಜು.ಬಿ. ವಸ್ತ್ರ ವಿನ್ಯಾಸ ಮಾಡಿದ್ದರು.ವಚನಗಳು ದಾರಿದೀಪ: 12ನೇ ಶತಮಾನ ಸಾಮಾಜಿಕ ಕ್ರಾಂತಿ ನಡೆದ ಯುಗ. ಅಂದು ನಡೆದ ಘಟನೆಗಳು ವಿಶ್ವದ ಗಮನ ಸೆಳೆದವು. ವಚನಗಳು ಆಧುನಿಕ ಯುಗದ ಜನತೆಯ ಬದುಕಿನ ದಾರಿ ದೀಪದಂತಿವೆ ಎಂದು ಪುಷ್ಪ ಗಿರಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಬಸವ ಸಂಚಾರ ತಂಡ ನಾಟಕ ಕಲೆಯನ್ನು ಮಕ್ಕಳಿಗೆ ಪರಿಚಯಿಸು ವುದರೊಂದಿಗೆ ವಚನ ಸಾಹಿತ್ಯ ಹಾಗೂ ಶರಣರ ವಿಚಾರ ಧಾರೆಗಳನ್ನು ಜನರಿಗೆ ತಲುಪಿಸುತ್ತಿದೆ ಎಂದರು.ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಎಚ್.ಎಂ.ಮಂಜಪ್ಪ, ಸದಸ್ಯ ಬಿ.ಎಸ್.ಸೋಮಶೇಖರ್, ಉದ್ಯಮಿ ಎಚ್.ಆರ್.ಕಾಂತರಾಜು, ನ್ಯಾಯ ವಾದಿ ರಾಜಶೇಖರ್, ಮುಖಂಡ ಎಚ್.ಎಂ.ಕುಮಾರ್ ಇದ್ದರು. ಪ್ರಾಚಾರ್ಯ ನಾಗರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಪ್ರಾಂಶುಪಾಲ ಮುಳ್ಳಯ್ಯ ನಿರೂಪಿಸಿದರು. ಉಪನ್ಯಾ ಸಕ ನಾಗರಾಜು ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.