ಗುರುವಾರ , ಜನವರಿ 23, 2020
27 °C

ಮನೆಗಾಗಿ ಅಲೆಮಾರಿಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಆಶ್ರಯ ಯೋಜನೆಯಡಿ ಮನೆ ನೀಡುವಂತೆ ಆಗ್ರಹಿಸಿ ನಗರದ ಸಹ್ಯಾದ್ರಿ ಕಾಲೇಜ್ ಬೈಪಾಸ್ ರಸ್ತೆಯ ಬಳಿಯ ಅಲೆಮಾರಿಗಳು ನಿರಂತರ ಸಂಘಟನೆಯ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಬೈಪಾಸ್ ರಸ್ತೆಯ ಖಾಲಿ ಜಾಗದಲ್ಲಿ ಸುಮಾರು 40 ವರ್ಷಗಳಿಂದ ಟೆಂಟ್, ಗುಡಿಸಲು ಹಾಕಿಕೊಂಡು ಬದುಕುತ್ತಿದ್ದು, ಇಲ್ಲಿರುವ ಬಹುತೇಕರು ಕಡುಬಡವರು, ಅನಕ್ಷರಸ್ಥರು, ಕೂಲಿ ಕಾರ್ಮಿಕರಾಗಿದ್ದಾರೆ. ಹಲವು ಹೋರಾಟದ ಫಲವಾಗಿ ಪಡಿತರ ಚೀಟಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಸ್ವಂತ ಸೂರು ಇಲ್ಲವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.ಪ್ರಸ್ತುತ ವಾಸಿಸುತ್ತಿರುವ ಸ್ಥಳವು ಕಾಲೇಜೊಂದಕ್ಕೆ ಸೇರಿದ್ದಾಗಿದ್ದು, ಗುಡಿಸಲು ತೆರವುಗೊಳಿಸಲು ಮುಂದಾಗಿದ್ದಾರೆ. ಒಂದು ವೇಳೆ ಗುಡಿಸಲುಗಳು ತೆರವುಗೊಳಿಸಿದರೆ ಅಕ್ಷರಶಃ ಬೀದಿ ಪಾಲಾಗುತ್ತೇವೆ ಎಂದು ಪ್ರತಿ ಭಟನಾಕಾರರು ಆರೋಪಿಸಿದರು.   ಈಗಾಗಲೇ ಆಶ್ರಯ ಯೋಜನೆಯಡಿ ಮನೆ ನೀಡುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ, ನಗರಸಭೆಗೆ ಮನವಿ ಸಲ್ಲಿಸಲಾಗಿದೆ.

ಆದರೆ ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಂಡಿಲ್ಲ.  ಶೀಘ್ರ ಜಿಲ್ಲಾಧಿಕಾರಿ ಆಶ್ರಯ ಯೋಜನೆಯಡಿ ಮನೆ ನೀಡಬೇಕು ಎಂದು

ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನಿರಂತರ ಸಂಘಟನೆಯ ಪ್ರಮುಖರಾದ ವಕೀಲ ಟಿ. ಅನಿಲ್ ಕುಮಾರ್, ಎಐಯು ಟಿಸಿಯ ಜಾರ್ಜ್ ಸಲ್ಡಾನ್, ಗಣೇಶ್ ಪ್ರಸಾದ್, ಗಂಗಣ್ಣಿ, ಸುಂಕಣ್ಣಿ ಮತ್ತಿತರರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)