ಶುಕ್ರವಾರ, ಜೂನ್ 18, 2021
24 °C

ಮನೆಗೆ ನುಗ್ಗಿ ಮಹಿಳೆಯ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.  ವಿದ್ಯಾರಣ್ಯಪುರ ಬಳಿಯ ಎಂ.ಎಸ್.ಪಾಳ್ಯ ನಿವಾಸಿ ಮೀನಾಕ್ಷಿ (42) ಕೊಲೆಯಾದವರು. ಅವರ ಪತಿ ಶಂಕರ್ ಎಂಟು ವರ್ಷ ಹಿಂದೆ ಇವರನ್ನು ಬಿಟ್ಟು ಹೋಗಿದ್ದರು. ಮಧ್ಯಾಹ್ನ 12.30ರ ಸುಮಾರಿಗೆ ಮನೆಗೆ ನುಗ್ಗಿದ ಆರೋಪಿ, ಮೀನಾಕ್ಷಿ ಅವರ ಕೈ ಕಾಲುಗಳನ್ನು ಕಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದರು.ಮೀನಾಕ್ಷಿ ಅವರು ಜಾಲಹಳ್ಳಿಯಲ್ಲಿ ಟೈಲರಿಂಗ್ ಅಂಗಡಿ ಇಟ್ಟುಕೊಂಡಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು ಮಗಳು ರಮ್ಯ ಉಡುಪಿಯಲ್ಲಿ ಓದುತ್ತಿದ್ದಾಳೆ. ಮಗ ರಂಜಿತ್ ದ್ವಿತೀಯ ಪಿಯುಸಿ ಓದುತ್ತಿದ್ದು ತಾಯಿಯ ಜತೆ ಇದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಇಡಲಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವಿದ್ಯಾರಣ್ಯಪುರ ಪೊಲೀಸರು ಮಾಹಿತಿ ನೀಡಿದರು.ಇಬ್ಬರ ಆತ್ಯಹತ್ಯೆ

 ನಗರದ ಯಲಹಂಕ ಉಪನಗರ ಮತ್ತು ಹೆಬ್ಬಾಳದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಷೇರು ವಹಿವಾಟಿನಲ್ಲಿ ನಷ್ಟ ಅನುಭವಿಸಿದ್ದರಿಂದ ಮನನೊಂದು ವ್ಯಕ್ತಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.ಮೂಲತಃ ಮಂಗಳೂರಿನವರಾದ ಪ್ರಮೋದ್ (31) ಆತ್ಮಹತ್ಯೆ ಮಾಡಿಕೊಂಡವರು. ಒಂದು ವರ್ಷದ ಹಿಂದೆ ವಿವಾಹವಾಗಿದ್ದ ಅವರು ಪತ್ನಿಯೊಂದಿಗೆ ಸೋಮೇಶ್ವರ ಬಡಾವಣೆ, ಎರಡನೇ ಅಡ್ಡರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಷೇರು ವಹಿವಾಟಿನಲ್ಲಿ ಹಣ ಹೂಡಿ ನಷ್ಟ ಅನುಭವಿಸಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಡ್‌ಶೀಟ್‌ನಿಂದ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಕ್ಕೆ ಒಪ್ಪಿಸಲಾಯಿತೆಂದು ಪೊಲೀಸರು ಮಾಹಿತಿ ನೀಡಿದರು. ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣ: ಅಸ್ವಸ್ಥನಾಗಿದ್ದ ವ್ಯಕ್ತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.ಮೂಲತಃ ಕುಂದಾಪುರದವರಾದ ಗಣೇಶ್ ಮೆಂಡನ್(25) ಆತ್ಮಹತ್ಯೆ ಮಾಡಿಕೊಂಡವರು. ಕೋರಮಂಗಲದ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು, ಹೆಬ್ಬಾಳದ ಗುಡ್ಡದ ಹಳ್ಳಿ ವೃತ್ತದ ನಿವಾಸಿ. ಭಾನುವಾರ (ಮಾ.4) ಮನೆಯಲ್ಲಿಯೇ ನೇಣು ಹಾಕಿಕೊಂಡಿದ್ದಾರೆ. ಎರಡು ದಿನಗಳಿಂದ ಮನೆ ಬಾಗಿಲು ಹಾಕಿದ್ದರಿಂದ ಮಂಗಳವಾರ ಬೆಳಿಗ್ಗೆ ಸ್ಥಳೀಯರು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದರು.

ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜೇನು ಹುಳ ಕಡಿದು ಸಾವು

ಜೇನು ಹುಳು ಕಡಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.ನಾಗೇನಹಳ್ಳಿ ನಿವಾಸಿ ಮರ್ದನ್ ಇಮಾಮ್ (41) ಮೃತರು. ತೆಂಗಿನಕಾಯಿ ವ್ಯಾಪಾರ ಮಾಡುತ್ತಿದ್ದ ಅವರು, ತನ್ನ ಸ್ನೇಹಿತ ಮಹಮದ್ ಹತಾವುಲ್ಲಾ ಎಂಬುವರೊಡನೆ ರಾತ್ರಿ ಮನೆ ಸಮೀಪದ ಕಟ್ಟಡದಲ್ಲಿ ಕಟ್ಟಿದ್ದ ಜೇನು ಗೂಡು ಕೀಳಲು ಹೋಗಿದ್ದರು. ಆಗ ಜೇನು ಹುಳುಗಳು ಇವರ ಮೇಲೆ ದಾಳಿ ನಡೆಸಿವೆ. ಸ್ನೇಹಿತ ಮಹಮ್ಮದ್ ತಪ್ಪಿಸಿಕೊಂಡು ಮನೆಗೆ ಹೋಗಿದ್ದಾರೆ. ಆದರೆ ಮರ್ದನ್ ಕುಸಿದು ಬಿದ್ದಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.ಮಂಗಳವಾರ ನಸುಕಿನಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಪಾನಮತ್ತರಾಗಿದ್ದರಿಂದ ಈ ಘಟನೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದರು. ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.