ಮಂಗಳವಾರ, ಏಪ್ರಿಲ್ 20, 2021
27 °C
ನಮ್ಮೂರ ಊಟ

ಮನೆಯಲ್ಲೇ ಮಾಡಿ ಈ ಅಡುಗೆ ಮಿಶ್ರಣ

–ಪ್ರಕಾಶ್ ಕೆ.ನಾಡಿಗ್ Updated:

ಅಕ್ಷರ ಗಾತ್ರ : | |

ಉಪ್ಪಿಟ್ಟು ಮಿಕ್ಸ್

ಸಾಮಗ್ರಿ:
ಉಪ್ಪಿಟ್ಟುರವೆ 1 ಕೆಜಿ, ಹಸಿಮೆಣಸಿನಕಾಯಿ 10, ಹಸಿಶುಂಠಿ 10 ಗ್ರಾಂ, ಅರ್ಧ ಚಮಚ ಸಾಸಿವೆ, ಕಡಲೆ ಬೇಳೆ ಉದ್ದಿನಬೇಳೆ ಒಂದೊಂದು ಚಮಚ, ಕರಿಬೇವಿನ ಸೊಪ್ಪು ಸ್ವಲ್ಪ. ಅಡುಗೆ ಎಣ್ಣೆ 100ಗ್ರಾಂ. ಅರಿಶಿಣ ಅರ್ಧ ಚಮಚ.ವಿಧಾನ: ಒಂದು ದೊಡ್ಡ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಕಾದನಂತರ ಸಾಸಿವೆ ಉದ್ದಿನಬೇಳೆ, ಕಡಲೆಬೇಳೆ ಹಾಕಿ ಸ್ವಲ್ಪ ಕಂದುಬಣ್ಣಕ್ಕೆ ಬಂದನಂತರ ಸಣ್ಣಗೆ ಹೆಚ್ಚಿಟ್ಟುಕೊಂಡ ಹಸಿಮೆಣಸಿನಕಾಯಿ, ಹಸಿಶುಂಠಿ, ಹಾಕಿ ಸ್ವಲ್ಪ ಕೈಯಾಡಿಸುತ್ತಿರಿ. ಹಸಿಮೆಣಸಿನಕಾಯಿ ಸ್ವಲ್ಪ ಬಿಳಿ ಬಣ್ಣಕ್ಕೆ ತಿರುಗಿದ ಮೇಲೆ ಸಣ್ಣಗೆ ಹೆಚ್ಚಿದ ಕರಿಬೇವಿನ ಸೊಪ್ಪು ಹಾಗೂ ಅರಿಶಿನ ಹಾಕಿ ಕೈಯಾಡಿಸಿ ತಕ್ಷಣ ರವೆ ಹಾಕಿ ಸಣ್ಣ ಉರಿಯಲ್ಲಿ ಹುರಿಯುತ್ತಿರಿ. ರವೆ ಸ್ವಲ್ಪ ಕಂದುಬಣ್ಣಕ್ಕೆ ತಿರುಗಿದ ಮೇಲೆ ಒಲೆಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ, ಪೂರ್ತಿ ಆರಿದ ಮೇಲೆ ಡಬ್ಬದಲ್ಲಿ ತುಂಬಿಟ್ಟುಕೊಂಡರೆ ಉಪ್ಮ/ಉಪ್ಪಿಟ್ಟು ಮಿಕ್ಸ್ ರೆಡಿ. ಎರಡು ಲೋಟ ನೀರನ್ನು ಕುದಿಸಿ ಅದಕ್ಕೆ ಒಂದು ಲೋಟ ಈ ಮಿಶ್ರಣವನ್ನು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿದರೆ ಉಪ್ಪಿಟ್ಟು ರೆಡಿ, ಇದಕ್ಕೆ ಬೇಕಾದರೆ ಸಣ್ಣಗೆ ಈರುಳ್ಳಿ ಅಥವಾ ಹೆಚ್ಚಿದ ತರಕಾರಿಗಳನ್ನು ಹಾಕಬಹುದು.ಖಾರಾಭಾತ್ ಮಿಕ್ಸ್

ಉಪ್ಪಿಟ್ಟು ಮಿಶ್ರಣದಂತೆಯೆ ಇದನ್ನು ತಯಾರಿಸಬೇಕು, ಆದರೆ ರವೆಯನ್ನು ಹಾಕಿ ಹುರಿದಾದ ನಂತರ ಕೊನೆಯಲ್ಲಿ ನಾಲ್ಕು ಚಮಚ ವಾಂಗಿಭಾತ್ ಪುಡಿಯನ್ನು ಹಾಕಿ ಒಂದೆರಡು ನಿಮಿಷಗಳ ಕಾಲ ಹುರಿಯಬೇಕು. ಉಪ್ಪಿಟ್ಟು ಮಾಡುವ ರೀತಿಯಲ್ಲೆ ಇದನ್ನು ಬೇಯಿಸಬೇಕು ಅದರೆ ಈರುಳ್ಳಿ ತರಕಾರಿಗೆ ಬದಲಾಗಿ ಬದನೆಕಾಯಿ, ದಪ್ಪ ಮೆಣಸಿನಕಾಯಿ ಹಾಕಿದರೆ ಬಿಸಿಯಾದ ಖಾರಾಭಾತ್ ರೆಡಿ.

***

ಗುಲಾಬ್ ಜಾಮೂನ್ ಮಿಕ್ಸ್

ಸಾಮಗ್ರಿ: ಮೈದಾಹಿಟ್ಟು ಅರ್ಧ ಕೆಜಿ, ಹಾಲಿನ ಪುಡಿ ಒಂದು ಲೋಟ, ತುಪ್ಪ ಎರಡು ಚಮಚ. ಅಡುಗೆ ಸೋಡ ಅರ್ಧ ಚಮಚ, ಬ್ರೆಡ್ ಪೀಸ್ ಎರಡು, ಹಾಲು ಅರ್ಧ ಲೋಟ.

ವಿಧಾನ: ಮೊದಲು ಮೈದಾಹಿಟ್ಟನ್ನು ಎರಡು ಚಮಚ ತುಪ್ಪದೊಂದಿಗೆ ಸ್ವಲ್ಪ ಹುರಿದುಕೊಂಡು ಆರಲು ಬಿಡಿ, ಇದು ಆರಿದ ನಂತರ ಅದಕ್ಕೆ ಹಾಲಿನಪುಡಿ ಹಾಗೂ ಆಡುಗೆ ಸೋಡವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಡಬ್ಬದಲ್ಲಿ ಶೇಕರಿಸಿಡಬಹುದು.ಜಾಮೂನ್ ಮಾಡುವಾಗ ಒಂದುಲೋಟ ಈ ಮಿಶ್ರಣಕ್ಕೆ ಎರಡು ಬ್ರೆಡ್ ಪೀಸ್‌ಗಳನ್ನು  ಹಾಕಿ ಹಾಲನ್ನು ಹಾಕಿ ಗಂಟುಗಳಿಲ್ಲದಂತೆ ಹದವಾಗಿ ಕಲೆಸಿಕೊಂಡು ಐದುನಿಮಿಷಗಳ ಕಾಲ ಬಿಡಿ. ಇದನ್ನು ಸಣ್ಣಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಕಾದ ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೆ ಕರಿದು ಇದನ್ನು ಮೊದಲೇ ಮಾಡಿಟ್ಟುಕೊಂಡ ಸಕ್ಕರೆ ಪಾಕಕ್ಕೆ ಹಾಕಿ. ಅರ್ಧಗಂಟೆಗಳ ಕಾಲ ಬಿಟ್ಟರೆ ಮೃದುವಾದ ರುಚಿಕರ ಗುಲಾಬ್ ಜಾಮೂನ್‌ ತಯಾರು!. ನೆನಪಿಡಿ ಕರಿದ ಜಾಮೂನನ್ನು ಯಾವುದೇ ಕಾರಣಕ್ಕೂ ಬಿಸಿಯಾದ ಪಾಕಕ್ಕೆ ಹಾಕಬೇಡಿ, ಇದರಿಂದ ಜಾಮೂನ್ ಒಡೆದುಹೋಗುತ್ತದೆ.

***

ರವೆ ಇಡ್ಲಿ ಮಿಕ್ಸ್

ಸಾಮಗ್ರಿ:
ಉಪ್ಪಿಟ್ಟು ರವೆ 1 ಕೆಜಿ, ಹಸಿಮೆಣಸಿನಕಾಯಿ 10 ರಿಂದ 15. ಹಸಿಶುಂಠಿ25ಗ್ರಾಂ, ಕರಿಬೇವಿನಸೊಪ್ಪು 30 ಎಲೆ, ಸಾಸಿವೆ ಒಂದು ಚಮಚ, ಕಡಲೆಬೇಳೆ ಉದ್ದಿನಬೇಳೆ ನಾಲ್ಕು ಚಮಚ, ಅಡುಗೆ ಸೋಡ 1 ಚಮಚ.

ವಿಧಾನ: ಒಂದು ದೊಡ್ಡ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಕಾದನಂತರ ಸಾಸಿವೆ ಉದ್ದಿನಬೇಳೆ, ಕಡಲೆಬೇಳೆ ಹಾಕಿ ಸ್ವಲ್ಪ ಕಂದುಬಣ್ಣಕ್ಕೆ ಬಂದನಂತರ ಸಣ್ಣಗೆ ಹೆಚ್ಚಿಟ್ಟುಕೊಂಡ ಹಸಿಮೆಣಸಿನಕಾಯಿ, ಹಸಿಶುಂಠಿ, ಹಾಕಿ ಸ್ವಲ್ಪ ಕೈಯಾಡಿಸುತ್ತಿರಿ. ಹಸಿಮೆಣಸಿನಕಾಯಿ ಸ್ವಲ್ಪ ಬಿಳಿ ಬಣ್ಣಕ್ಕೆ ತಿರುಗಿದ ಮೇಲೆ ಸಣ್ಣಗೆ ಹೆಚ್ಚಿದ ಕರಿಬೇವಿನ ಸೊಪ್ಪು ಹಾಕಿ ಕೈಯಾಡಿಸಿ ತಕ್ಷಣ ರವೆಯನ್ನು ಹಾಕಿ ಸಣ್ಣ ಉರಿಯಲ್ಲಿ ಹುರಿಯುತ್ತಿರಿ. ರವೆ ಸ್ವಲ್ಪ ಕಂದುಬಣ್ಣಕ್ಕೆ ತಿರುಗಿದ ಮೇಲೆ ಒಲೆಯಿಂದ ಕೆಳಗಿಳಿಸಿ ಆರಲು ಬಿಡಿ, ಆರಿದ ಮೇಲೆ ಅಡುಗೆ ಸೋಡ ಹಾಕಿ ಮಿಶ್ರಣವನ್ನು ಕಲೆಸಿ ಪೂರ್ತಿ ತಣ್ಣಗಾದ ಮೇಲೆ ಡಬ್ಬದಲ್ಲಿ ತುಂಬಿಟ್ಟುಕೊಂಡರೆ ರವೆಇಡ್ಲಿ ಮಿಕ್ಸ್ ರೆಡಿ.ಎರಡು ಲೋಟ ಮೇಲಿನ ಮಿಶ್ರಣಕ್ಕೆ ಒಂದು ಲೋಟ ಮೊಸರು ಹಾಗೂ ನೀರನ್ನು ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ಕಲೆಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ಹೊತ್ತು ನೆನೆಯಲು ಬಿಡಿ. ನಂತರ ಇದನ್ನು ಇಡ್ಲಿ ತಟ್ಟೆಯಲ್ಲಿ ಹಾಕಿ ಹಬೆಯಲ್ಲಿ ಸಣ್ಣಗೆ ಬೇಯಿಸಿದರೆ ರವೆ ಇಡ್ಲಿ ರೆಡಿ. ನೆನಪಿಡಿ ಇಡ್ಲಿ ಮಿಶ್ರಣವನ್ನು ಕಲೆಸಲು ಹುಳಿಮೊಸರನ್ನು ಬಳಸಬೇಡಿ ಇದರಿಂದ ಇಡ್ಲಿ ಕಂದು ಬಣ್ಣಕ್ಕೆ ತಿರುಗುತ್ತದೆ.

***

ದೋಸೆ ಮಿಕ್ಸ್

ಸಾಮಗ್ರಿ:
ದೋಸೆ ಅಕ್ಕಿ 1 ಕೆಜಿ, ಉದ್ದಿನಬೇಳೆ 300 ಗ್ರಾಂ, ಮೆಂತ್ಯೆ ಕಾಳು ಐವತ್ತು ಗ್ರಾಂ, ಕಡಲೆಬೇಳೆ ಐವತ್ತು ಗ್ರಾಂ.

ವಿಧಾನ: ಅಕ್ಕಿಯನ್ನು ಸ್ವಲ್ಪ ಹುರಿದು ಅದಕ್ಕೆ ಉದ್ದಿನಬೇಳೆ, ಮೆಂತ್ಯೆಕಾಳು, ಕಡಲೆಬೇಳೆ ಹಾಕಿ ಇದನ್ನು ಫ್ಲೋರ್ ಮಿಲ್‌ನಲ್ಲಿ ತುಂಬ ನುಣ್ಣಗಾಗದಂತೆ ಬೀಸಿಸಿಕೊಂಡು ಬರಬೇಕು,ಈ ಹಿಟ್ಟಿನ ಮಿಶ್ರಣವನ್ನು ರಾತ್ರಿ ಗಂಟುಗಳಿಲ್ಲದಂತೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಬರುವಂತೆ ಹದವಾಗಿ ಕಲೆಸಿಡಿ, ಒಂದು ಲೋಟ ನೀರಿಗೆ ಅರ್ಧ ಲೋಟ ಮೊಸರನ್ನು ಹಾಕಿದರೆ ಒಳ್ಳೆಯದು. ಈ ಮಿಶ್ರಣಕ್ಕೆ ಒಂದು ಚಮಚ ಸಕ್ಕರೆಯನ್ನು ಹಾಕಿದರೆ ಬೆಳಿಗ್ಗೆಯ ಹೊತ್ತಿಗೆ ಚೆನ್ನಾಗಿ ಹುದುಗು ಬಂದಿರುತ್ತದೆ ಹಾಗೂ ಗರಿಗರಿ ದೋಸೆ ಮಾಡಲು ದೋಸೆ ಹಿಟ್ಟು ರೆಡಿ!.

***

ಅಕ್ಕಿ ಇಡ್ಲಿ ಮಿಕ್ಸ್

ಸಾಮಗ್ರಿ:
ದೋಸೆ ಅಕ್ಕಿ 1 ಕೆಜಿ, ಉದ್ದಿನಬೇಳೆ ಒಂದು ಕೆಜಿ.

ವಿಧಾನ: ದೋಸೆ ಅಕ್ಕಿಯನ್ನು ಸ್ವಲ್ಪ ತರಿತರಿಯಾಗಿಯೂ ಹಾಗೂ ಉದ್ದಿನಬೇಳೆಯನ್ನು ಸಣ್ಣಗೆ ಫ್ಲೋರ್ ಮಿಲ್‌ನಲ್ಲಿ ಬೀಸಿಸಿಕೊಂಡು ಬರಬೇಕು. ಒಂದು ಲೋಟ ಉದ್ದಿನಹಿಟ್ಟಿಗೆ ನಾಲ್ಕು ಲೋಟ ಅಕ್ಕಿತರಿಯನ್ನು ಹಾಕಿ ಗಂಟುಗಳಿಲ್ಲದಂತೆ ನೀರು ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ರಾತ್ರಿಯೆ ಕಲಸಿಡಿ, ಇದಕ್ಕೆ ಒಂದು ಚಮಚ ಸಕ್ಕರೆಯನ್ನು ಹಾಕಿಟ್ಟರೆ  ಚೆನ್ನಾಗಿ ಹುದುಗು ಬರುತ್ತದೆ. ಮಾಮೂಲಿ ಇಡ್ಲಿ ಮಾಡುವ ವಿಧಾನದಲ್ಲೆ ಮಾರನೆದಿನ ಇದನ್ನು ಮಾಡಿದರೆ ಉದ್ದಿನಬೇಳೆ ನೆನಸಿ ತಿರುವಿ ಮಾಡಿದ ಇಡ್ಲಿ ರುಚಿಯೆ ಇರುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.