ಶುಕ್ರವಾರ, ಜುಲೈ 23, 2021
23 °C

ಮನೆಯಲ್ಲೇ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎ.ನಾರಾಯಣಪುರ ವಾರ್ಡ್‌ನ ಪಾಲಿಕೆಯ ಮಾಜಿ ಸದಸ್ಯ ಚಿನ್ನಪ್ಪ ಅವರ ಅಳಿಯ ಎಸ್. ಮಂಜುನಾಥ್ (45) ಭಾನುವಾರ ರಾತ್ರಿ ತಮ್ಮ ಮನೆಯಲ್ಲೇ ಕೊಲೆಯಾಗಿದ್ದಾರೆ. ಈ ಸಂಬಂಧ ಪೊಲೀಸರು ಮೃತರ ಪತ್ನಿ ಸೇರಿದಂತೆ ಐದು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಿದ್ದಾರೆ.ಭಾನುವಾರ ರಾತ್ರಿ ಮಂಜುನಾಥ್  ಮನೆಗೆ ನುಗ್ಗಿರುವ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಬಳಿಕ ಅವರದೇ ಇನ್ನೊವಾ ಕಾರಿನಲ್ಲಿ (ಕೆಎ 53 ಎನ್ 4770) ಶವ ಕೊಂಡೊಯ್ದು ಬೆಂಗಳೂರು ಸೇರಿದಂತೆ ಕೋಲಾರ, ಕೆಜೆಎಫ್‌ನಲ್ಲಿ ದಿನವಿಡೀ ಸುತ್ತಾಡಿದ್ದಾರೆ. ಸೋಮವಾರ ರಾತ್ರಿ ಜನರ ಓಡಾಟ ಕಡಿಮೆಯಾಗುತ್ತಿದ್ದಂತೆ ಶವವನ್ನು ಬಂಗಾರಪೇಟೆಯ ಅಜ್ಜಪ್ಪನಹಳ್ಳಿಗೆ ತಂದು ಸುಟ್ಟು ಹಾಕಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.`ಘಟನೆ ಸಂಬಂಧ ಮಂಜುನಾಥ್  ಅವರ ಪತ್ನಿ ಮಂಗಳಾ ಅಲಿಯಾಸ್ ಮೀನಾ (38), ಅವರ ಮನೆಯಲ್ಲಿ ಬಾಡಿಗೆ ಇದ್ದ ಕಿರಣ್ (26), ಆತನ ಸ್ನೇಹಿತರಾದ ಲೋಕೇಶ್ (26), ಮುರಳಿ (28) ಬಾಬು (27) ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮಂಗಳಾ ಹೊರತು ಪಡಿಸಿ ಉಳಿದೆಲ್ಲರೂ ಮೂಲತಃ ಬಂಗಾರಪೇಟೆಯವರು' ಎಂದು ಕೆಜಿಎಫ್ ಡಿವೈಎಸ್‌ಪಿ ಗುರುಸ್ವಾಮಿ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.ಎ.ನಾರಾಯಣಪುರ ನಿವಾಸಿಯಾದ ಮಂಜುನಾಥ್, ಪಾಲಿಕೆಯ ಮಾಜಿ ಸದಸ್ಯ ಚಿನ್ನಪ್ಪ ಅವರ ತಂಗಿಯ ಮಗ. ರಿಯಲ್ ಎಸ್ಟೆಟ್ ಉದ್ಯಮಿಯಾಗಿದ್ದ ಮಂಜುನಾಥ್, ಬಿಜೆಪಿ ಕಾರ್ಯಕರ್ತರೂ ಆಗಿದ್ದರು.ಅಜ್ಜಪ್ಪನಹಳ್ಳಿಯಲ್ಲಿ ಮಂಜುನಾಥ್ ಅವರ ಶವವನ್ನು ಸುಟ್ಟು ಹಾಕಿದ ದುಷ್ಕರ್ಮಿಗಳ ಪೈಕಿ ಕೆಲವರು, ಬಂಗಾರಪೇಟೆಯಲ್ಲೇ ಉಳಿದುಕೊಂಡಿದ್ದರು. ಒಬ್ಬ ಆರೋಪಿ ಮಾತ್ರ ಮಂಜುನಾಥ್ ಅವರ ಕಾರನ್ನು ಮನೆಗೆ ವಾಪಸ್ ತರಲು ಮುಂದಾಗಿದ್ದಾನೆ. ಈ ವೇಳೆ ಕಾರು ಹೊಸಕೋಟೆ ಮುಖ್ಯರಸ್ತೆಯ ಸೀಗೆಹಟ್ಟಿ ಬಳಿ ಅಪಘಾತಕ್ಕೀಡಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.`ಹೊಸಕೋಟೆ ಮುಖ್ಯರಸ್ತೆಯ ಸೀಗೆಹಳ್ಳಿಯಲ್ಲಿ ಇನ್ನೊವಾ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಬಗ್ಗೆ ಸೋಮವಾರ ರಾತ್ರಿ 11 ಗಂಟೆಗೆ ಮಾಹಿತಿ ಬಂತು. ಕೂಡಲೇ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಕಾರಿನಲ್ಲಿ ಎರಡು ಡ್ರ್ಯಾಗರ್‌ಗಳು, ಒಂದು ಬಿಯರ್ ಬಾಟಲಿ, ಸಿಗರೇಟ್ ಪ್ಯಾಕ್‌ಗಳು, ಒಂದು ಜತೆ ಬಟ್ಟೆ ಪತ್ತೆಯಾಯಿತು.ಅಲ್ಲದೇ, ಹಿಂದಿನ ಸೀಟಿನ ತುಂಬೆಲ್ಲಾ ರಕ್ತ ಚೆಲ್ಲಿತ್ತು. ವಾಹನದಲ್ಲಿದ್ದ ಚಾಲನಾ ಪರವಾನಗಿ, ಆರ್‌ಸಿ ಬುಕ್‌ನಲ್ಲಿ ದೊರೆತ ಮಾಹಿತಿಯಿಂದ ಕಾರಿನ ಮಾಲೀಕರು ಮಂಜುನಾಥ್ ಎಂದು ಗೊತ್ತಾಯಿತು. ಬಳಿಕ ಅವರ ಮನೆಗೆ ತೆರಳಿ ಕುಟುಂಬ ಸದಸ್ಯರನ್ನು ವಿಚಾರಿಸಿದಾಗ ಅವರು ಭಾನುವಾರ ರಾತ್ರಿಯೇ ಮನೆಯಿಂದ ಹೊರಗೆ ಹೋಗಿದ್ದರು ಎಂದು ಹೇಳಿದರು' ಎಂದು ಮಹದೇವಪುರ ಪೊಲೀಸರು ಮಾಹಿತಿ ನೀಡಿದರು.`ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಠಾಣೆಗೆ ಬಂದ ಮಂಜುನಾಥ್ ಕುಟುಂಬ ಸದಸ್ಯರು, ಅವರು ಕಾಣೆಯಾಗಿರುವ ಬಗ್ಗೆ ದೂರು ಕೊಟ್ಟರು. ಆದರೆ, ದೂರು ದಾಖಲಾದ ಒಂದೂವರೆ ತಾಸಿನಲ್ಲೇ ಅಜ್ಜಪ್ಪನಹಳ್ಳಿಯಲ್ಲಿ ಅರೆಸುಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವುದಾಗಿ ಅಲ್ಲಿನ ಪೊಲೀಸರಿಂದ ಮಾಹಿತಿ ಬಂತು. ಮೃತರ ಬೆರಳಿನಲ್ಲಿದ್ದ ಎರಡು ಉಂಗುರಗಳು ಹಾಗೂ ನಡುದಾರದ ಸಹಾಯದಿಂದ ಶವವನ್ನು ಗುರುತಿಸಲಾಯಿತು' ಎಂದು ಮಹದೇವಪುರ ಪೊಲೀಸರು ತಿಳಿಸಿದ್ದಾರೆ.`ಕೆಜಿಎಫ್‌ನಲ್ಲಿ ಮಂಜುನಾಥ್ ಅವರ ಫಾರ್ಮ್‌ಹೌಸ್ ಇದೆ. ಸಹಜವಾಗಿ ವಾರಕ್ಕೊಮ್ಮೆ ಅವರು ಅಲ್ಲಿಗೆ ಹೋಗಿ ಬರುತ್ತಿದ್ದರು. ಅಂತೆಯೇ ಭಾನುವಾರ  ಬೆಳಿಗ್ಗೆ ಫಾರ್ಮ್ ಹೌಸ್‌ಗೆ ಹೋಗಿರಬಹುದೆಂದು ಭಾವಿಸಿದ್ದೆವು. ಅವರ ಕಾರಿನಲ್ಲಿ ಮಾರಕಾಸ್ತ್ರಗಳು, ಬೀಯರ್ ಬಾಟಲ್‌ಗಳು ಸಿಕ್ಕಿರುವುದನ್ನು ಗಮನಿಸಿದರೆ ಅವರು ಕೊಲೆಯಾಗಿರುವುದರಲ್ಲಿ ಅನುಮಾನವಿಲ್ಲ' ಎಂದು ಕುಟುಂಬ ಸದಸ್ಯರು ಹೇಳಿದರು.ಅನೈತಿಕ ಸಂಬಂಧ ಶಂಕೆ

`ಪೊಲೀಸರ ವಶದಲ್ಲಿರುವ ಕಿರಣ್ ಮತ್ತು ಮಂಗಳಾ ನಡುವೆ ಅನೈತಿಕ ಸಂಬಂಧ ಇರುವ ಬಗ್ಗೆ ಅವರ ಕುಟುಂಬ ಸದಸ್ಯರೇ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಕಿರಣ್‌ನ ಮೊಬೈಲ್ ಕರೆಗಳನ್ನು ಪರಿಶೀಲಿಸಿ ಮಾಹಿತಿ ಕಲೆ ಹಾಕಲಾಗಿದೆ. ಮನೆಯಲ್ಲಿ ರಕ್ತದ ಕಲೆ ಇದ್ದುದನ್ನು ಪತ್ತೆ ಹಚ್ಚಿದ ಸಿಬ್ಬಂದಿ, ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ತಂಡದೊಂದಿಗೆ ಪರಿಶೀಲನೆ ನಡೆಸಿದ್ದಾರೆ.ಈವರೆಗಿನ ತನಿಖೆಯಿಂದ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಅನುಮಾನ ದಟ್ಟವಾಗಿದೆ. ಕಾರನ್ನು ಬಂಗಾರಪೇಟೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಶೀಘ್ರವೇ ಪ್ರಕರಣಕ್ಕೆ ಸ್ಪಷ್ಟ ಚಿತ್ರಣ ನೀಡಲಾಗುವುದು' ಎಂದು ಹಿರಿಯ ಅಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದರು.ಆರೋಪಿಯನ್ನು ನೋಡಿದ್ದ ಪರಮೇಶ್

ಸೋಮವಾರ ರಾತ್ರಿ ಮಂಜುನಾಥ್ ಅವರ ಕಾರನ್ನು ಚಾಲನೆ ಮಾಡಿಕೊಂಡು ನಗರದ ಕಡೆ ಬರುತ್ತಿದ್ದ ಆರೋಪಿಯನ್ನು ಕಾಡುಗೋಡಿ ಸಮೀಪದ ಬೆಳ್ತೂರು ನಿವಾಸಿ ಪರಮೇಶ್ ನೋಡಿದ್ದಾರೆ.ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ರಾತ್ರಿ 10.30ರ ಸುಮಾರಿಗೆ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿಕೊಂಡು ಬಂದ ವ್ಯಕ್ತಿಯೊಬ್ಬ ನನ್ನ ಕಾರಿಗೆ ವಾಹನ ಗುದ್ದಿಸಿದ. ಆದರೆ, ಆತನ ವಾಹನ ನಿಲ್ಲಿಸದೆ ಹೋಗಿದ್ದರಿಂದ ಕೋಪಗೊಂಡು ಅವನನ್ನು ಹಿಂಬಾಲಿಸಿದೆ. ಈ ವೇಳೆ ಸೀಗೆಹಳ್ಳಿಯಲ್ಲಿ ತಿರುವು ಪಡೆಯುವಾಗ ಆತ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಕಾರು ಗುದ್ದಿಸಿದ. ಆತನನ್ನು ಹಿಡಿದು ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಆದರೆ, ಕಾರಿನ ಒಳಭಾಗದಲ್ಲೆಲ್ಲಾ ರಕ್ತ ಚೆಲ್ಲಿದ್ದರಿಂದ ಗಾಬರಿಯಾಯಿತು. ಈ ಹಂತದಲ್ಲಿ ಆತ ತಪ್ಪಿಸಿಕೊಂಡು ಪರಾರಿಯಾದ' ಎಂದರು.ಪತ್ನಿಯದ್ದೇ ಕೈವಾಡ?

`ಮಂಗಳಾ ಅವರನ್ನು ವಿವಾಹವಾಗಿದ್ದ ಮಂಜುನಾಥ್‌ಗೆ ಬಿಂದು (15) ಮತ್ತು ಅಪ್ಪು(14) ಎಂಬ ಇಬ್ಬರು ಮಕ್ಕಳಿದ್ದಾರೆ. ಭಾನುವಾರ ಬಿಂದುವಿನ ಹುಟ್ಟುಹಬ್ಬವಿತ್ತು. ಹೀಗಾಗಿ ಮಂಜುನಾಥ್, ಕುಟುಂಬ ಸದಸ್ಯರು, ಸಂಬಂಧಿಕರು ಹಾಗೂ ಸ್ನೇಹಿತರೊಂದಿಗೆ ಹುಟ್ಟು ಹಬ್ಬ ಆಚರಿಸಿದ್ದರು.ಎಲ್ಲರೂ ಮಲಗಿದ ನಂತರ, ಮಗ ಅಪ್ಪು ಜತೆ ರಾತ್ರಿ 1.30ರವರೆಗೆ ಭಾರತ-ಇಂಗ್ಲೆಂಡ್ ನಡುವಿನ ಕ್ರಿಕೆಟ್ ಪಂದ್ಯ ವೀಕ್ಷಿಸಿದ್ದಾರೆ. ಪಂದ್ಯ ಮುಗಿದ ಬಳಿಕ ಅಪ್ಪು ಮಲಗುವುದಾಗಿ ಹೇಳಿ ಹೋಗಿದ್ದಾನೆ. ಆ ನಂತರ ಮಂಜುನಾಥ್ ಅವರ ಕೊಲೆಯಾಗಿದೆ. ಮಂಗಳಾ ಅವರೇ ಈ ಕೊಲೆ ಮಾಡಿಸಿರಬಹುದು' ಎಂದು ಮೃತರ ಸೋದರ ಸಂಬಂಧಿ ಲೋಕೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.